Wednesday 27 March 2013


- ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

ದೇಸಿ ಸಾಹಿತ್ಯವೇ ಶಿಷ್ಟ ಸಾಹಿತ್ಯ ರಚನೆಯ ಉದಯಕ್ಕೆ ಕಾರಣವಾಗಿದ್ದು ಸರ್ವವಿದಿತವಾಗಿದೆ. ಕನ್ನಡ ದೇಸೀ ಸಾಹಿತ್ಯವೂ ಶಿಷ್ಟ ಸಾಹಿತ್ಯಕ್ಕೆ ಸಮೃದ್ಧತೆಯನ್ನು ತರುವುದರ ಮೂಲಕ ಪ್ರಧಾನ ಅಬಿವ್ಯಕ್ತಿಯನ್ನು ಸಾಧ್ಯ ಮಾಡಿದೆ. ಕನ್ನಡ ದೇಸಿಗೆ ಪರಂಪರೆ ಇದೆ. ಕನ್ನಡ ಸಾಹಿತ್ಯ, ಭಾಷೆ ರೂಪುಗೊಂಡ ಸಂದರ್ಭದಿಂದ ದೇಸಿಯತೆಯ ಬೇರುಗಳನ್ನು ಗುರುತಿಸಬಹುದು. ‘ಗಾಥಾಸಪ್ತಶತಿ’ಯಲ್ಲಿ ‘ಪೊಟ್ಟ, ತೀರ, ತುಪ್ಪ, ಪಳ್ತಿ’ ಮೊದಲಾದ ಹಲವು ಅಚ್ಚಕನ್ನಡ ಪದಗಳು ಕಾಣಿಸಿಕೊಳ್ಳುವುದರಿಂದ ಅಲ್ಲಿ ಹಲವಾರು ದೇಸಿ ಹಾಡುಗಳು, ಕಬ್ಬಗಳು ಉಂಟಾಗಿರಬಹುದೆಂದು ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಗುರುತಿಸುತ್ತಾರೆ. ದೇಸಿಗಬ್ಬಿಗರ ನಾಡವರ ಸಂಸ್ಕೃತಿ ಎಂಥದೆಂದು ಕವಿರಾಜಮಾರ್ಗಕಾರನು ಮನಮುಟ್ಟುವಂತೆ ವಿವರಿಸಿದ್ದಾನೆ.
ಆ ನಾಡವರ್ಗಳ್ ಪದನರಿದು ನುಡಿಯಲುಂ, ನುಡಿದುದಂ ಅರಿದು ಆರಯಲುಂ ಆರ್ಪರ್, ನಿಜದಿಂ ಚದುರರ್, ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್…..ಕುರಿತವರಲ್ಲದೆ ಮತ್ತಂ ಪೆರರುಂ ತಂತಮ್ಮ ನುಡಿಯೊಳ್ ಎಲ್ಲರುಂ ಜಾಣರ್ …..ಜಾಣಕ್ರ್ಕಳಲ್ಲದವರುಂ ಪೂಣಿಗರ್ : ಅರಿಯದೆಯಂ ಅವಗುಣದಾ ತಾಣಮದು ಇನಿಸು ಎಡೆವೆತ್ತೊಡೆ ಮಾಣದೆ ಅದನೆ ಪಿಡಿದು ಅರಿವವೋಲ್ ಕೃತಿಗಳಂ ಕೆಡೆ ನುಡಿವರ್.
ಇದರಿಂದ ಕನ್ನಡ ದೇಸೀಯತೆಯನ್ನು ಅಂದಿನ ಸಂದರ್ಭದಿಂದ ಅರಿಯಲು ಸಾಧ್ಯ. ಆಗ ಸಂಸ್ಕೃತ ಪ್ರಾಕೃತಗಳು ಮಾತ್ರವೇ ಪ್ರಮುಖ ಸಾಹಿತ್ಯ ಭಾಷೆಗಳು. ಅವುಗಳೊಳಗೆ ಲಕ್ಷ್ಯ ಲಕ್ಷಣಗಳೆಂಬ ಎರಡೂ ಬಗೆಯ ಗ್ರಂಥಗಳು ದೊರೆಯುತ್ತಿದ್ದುದರಿಂದ ‘ಬಗೆದಂತೆ ಸಮರಿ ಪೇಳಲ್’ ಎಂದರೆ ಬೇರೆ ಯಾರ ಸಹಾಯಕ್ಕೂ ಎರವಾಗದೇ ಆ ಗ್ರಂಥಗಳಿಂದಲೇ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡು, ಹೊಸ ಪ್ರಬಂಧಗಳನ್ನು ನಿರ್ಮಿಸಬಹುದಾಗಿತ್ತು. ಕನ್ನಡದ ಪರಿಸ್ಥಿತಿ ಹಾಗಿದ್ದಿಲ್ಲ. ಕನ್ನಡಕ್ಕೆ ನಾಡವರೇ ಓವಜರಾಗಿದ್ದರು. ‘ತಿರಿಕೊರಿಗೊಂಡು’ (ಇತರ ಲಕ್ಷಣ ಗ್ರಂಥಗಳನ್ನೋದಿ ಅವಗಾಹಿಸಿಕೊಂಡು) ಕನ್ನಡ ಕವಿ ಲೇಖಕರಿಗೆ ಬೋದಿಸಲು ಅವರಿಗೆ ಅಸಾಧ್ಯವಾಗಿತ್ತು. ‘ಕನ್ನಡಕ್ಕೆ ನಾಡವರೊವಜರ್’ ಎಂಬುದು, ಮೇಲಿಂದ ಮೇಲೆ ನಾಡವರನ್ನು ಹೊಗಳಿದಂತೆ ಭಾಸವಾಗುತ್ತಿದೆ. ಆದರಿದು ಕನ್ನಡ ಸಾಹಿತ್ಯದೊಳಗಿದ್ದ ನ್ಯೂನತೆಯನ್ನೇ ಗ್ರಂಥಕಾರನು ಯಾರಿಗೂ ನೋವಾಗದಂತೆ ಬಣ್ಣಿಸಿದ ಬಗೆ ಎಂಬುದನ್ನು ಮರೆಯಲಾಗದು. ‘ಕನ್ನಡಕ್ಕೊವಜರಾದ ನಾಡವರು, ಪರಮಾಚಾರ್ಯರವೋಲ್ ಸೈತಿರಲರಿಯರ್’ ಎಂಬುದರಿಂದ ಆ ಭಾವನೆ ಸಿದ್ಧವಾಗುತ್ತಿದೆ ಎಂಬಲ್ಲಿ ಮುಳಿಯ ತಿಮ್ಮಪ್ಪಯ್ಯನವರು ‘ಕವಿರಾಜಮಾರ್ಗ’ ಕಾಲದ ದೇಸೀಯತೆಯನ್ನು ಬಣ್ಣಿಸುತ್ತಾರೆ.
ಪುರಾತನ ಕನ್ನಡದ ಅಥವಾ ಉತ್ತರೋತ್ತರ ಕನ್ನಡ ನಾಡಿನ ವ್ಯಾಪ್ತಿ, ಜನ ಮನವನ್ನು ಸೂಚಿಸುವ ಈ ಕೃತಿ ಆ ಹಿಂದಿನ ಕಾಲದೊಳಗೆ ಕನ್ನಡ ಮಾರ್ಗ ಸಾಹಿತ್ಯದ ವೇಳೆ ಮೂಡಿರಬಹುದು. ಆದರೂ ಲಕ್ಷಣ ಗ್ರಂಥವು ಇರಲಿಲ್ಲವೆಂದು ಕವಿರಾಜಮಾರ್ಗಕಾರನು ಸ್ಪಷ್ಟವಾಗಿ ಸೂಚಿಸಿದ್ದಾರೆ. ಮಾತ್ರವಲ್ಲ ಅದರಿಂದಲೇ ಆ ಹಿಂದಿನ ಭಾಷೆ ‘ನುಡಿಗೆಲ್ಲಂ ಸಲ್ಲದ ಕನ್ನಡ’ವಾಗಿತ್ತೆಂದೂ ಹೇಳುತ್ತಾನೆ. ನುಡಿಗೆಲ್ಲವಿರಬೇಕಾದರೆ ಅಖಂಡ ಕನ್ನಡ ನಾಡಿನ ನುಡಿ, ಸಾಹಿತ್ಯದಲ್ಲಾದರೂ ಏಕರೂಪಗೊಳ್ಳಬೇಕು ವಾಸುಗಿಯುಮರಿಯಲಾರದೆ ಬೇಸರುಗುಂ ದೇಶೀ ಬೇರಿವೇರಪ್ಪುದರಿಂ ಇದರಿಂದ ಕವಿರಾಜಮಾರ್ಗದ ಪೂರ್ವಕಾಲಗಳಲ್ಲಿ ಕನ್ನಡದ ಬಹುರೂಪತೆ ವ್ಯಕ್ತವಾಗುತ್ತಿದೆ. ಈ ದೃಷ್ಟಾಂತ ಪದ್ಯದ ಪೂರ್ವ ಭಾಗದಲ್ಲಿ ಗ್ರಂಥಕಾರನೇ ‘ಕನ್ನಡದೊಳ್’ ಎನ್ನದೆ ‘ಕನ್ನಡಂಗಳೊಳ್’ ಎಂದು ಬಹುವಚನವನ್ನೇ ಪ್ರಯೋಗಿಸಿದುದನ್ನು ಕಾಣುತ್ತೇವೆ. ಹೀಗಾಗಿ ಉತ್ತರೋತ್ತರ ಕನ್ನಡ ನಾಡಿನಲ್ಲಿ ದೇಸಿಯಾಗಿದ್ದ ನುಡಿಯೆಂದರೆ ಕನ್ನಡವೇ ಎಂಬುದನ್ನು ಮುಳಿಯ ತಿಮ್ಮಪ್ಪಯ್ಯನವರು ಹೇಳುವ ಮೂಲಕ ಕನ್ನಡ ದೇಸಿಯತೆಯು ಮಾರ್ಗದ ಹೆಚ್ಚುಗಾರಿಕೆಗೆ ಪೂರಕವಾದುದನ್ನು ಸಾಂದಬರ್ಿಕರಿಸುತ್ತಾರೆ. ಕವಿರಾಜಮಾರ್ಗಕಾರನು ಆ ಹಿಂದಿನ ದೇಸಿ ಕಾವ್ಯಗಳನ್ನು ಎರಡಾಗಿ ವಿಗಂಡಿಸುತ್ತಾನೆ. ಆಗಿನ ಭಾಷೆಯೆಂದರೆ ‘ನುಡಿಗೆಲ್ಲಂ ಸಲ್ಲದ ಕನ್ನಡ’ವು ಅಥವಾ ಮಾರ್ಗ ಸಾಹಿತ್ಯದ ಬಳಕೆಯಿಂದಾಗಿ ನುರಿತು ನಾಲಗೆಗೈಗಳ ಹದಕ್ಕಿಳಿಯದ ಶೈಲಿಯದು. ಅದರಲ್ಲಾದರೂ ‘ಚತ್ತಾಣಮುಂ, ಬೆದಂಡೆಯುಂ ಎಂದು ಈಗಡಿನ ನೆಗರ್ತೆಯ ಕಬ್ಬದೊಳ್, ಪುರಾತನ ಕವಿಗಳ್ ಒಡಂಬಡಂ ಮಾಡಿದರ್’ ಎನ್ನುತ್ತಾನೆ. ಇದರಿಂದ ಈ ‘ಚತ್ತಾಣ, ಬೆದಂಡೆ’ ಎಂಬವುಗಳು ಈ ಕವಿರಾಜಮಾರ್ಗಕಾರನ ಕಾಲದಲ್ಲಿ ಈ ದೇಸೀಗಬ್ಬಗಳಿಗೆ ಪ್ರಸಿದ್ಧಿ ಪಡೆದ ಹೆಸರುಗಳೆಂದು ಗೊತ್ತಾಗುತ್ತಿದೆ. ಚತ್ತಾಣ ಬೆದಂಡೆ ಪ್ರಕಾರಗಳು ಕನ್ನಡ ದೇಸೀಯ ಮೂಲವಾಗಿರುವುದು ಒಪ್ಪಿತವಾಗಿದೆ. ಕ್ರಿ.ಶ. 1145 ರ ಕಾವ್ಯಾವಲೋಕನದಿಂದ ಈ ದೇಸೀ ಸ್ವರೂಪವು ಇನ್ನಷ್ಟು ವಿಸ್ತೃತವಾಗಿರು ವುದನ್ನು ಮುಳಿಯ ತಿಮ್ಮಪ್ಪಯ್ಯನವರು ದೇಸೀ ಕಾವ್ಯದ ವಂಶ ಶಾಖಾ ಚಿತ್ರವನ್ನು ಹೀಗೆ ನೀಡುತ್ತಾರೆ,
ದೇಸೀಗಬ್ಬ
1. ಪದಂ …… ಕಂದಮುಂ ಪೆರತೊಂದರಿಕೆಯ ವೃತ್ತ
ಜಾತಿಯಂ ಸಂದಿಸಿರಬೇಕು
2. ಮೆಲ್ವಾಡು …… ಆ ಪದಂಗಳ್ ಪನ್ನೆರಡುವರಂ ಸಂದಿಸಿರಬೇಕು
3. ಪಾಡು …… ಪ್ರಬಂಧದ ಮೆಯ್ಯೊಳ್ ಪದಿನಯ್ದುಂ ಇಪ್ಪತ್ತಯ್ದುಂ
ಪದಂ ಯಥಾ ಸಂಭವಂ ಪ್ರದಿದಿದ್ದರ್ು
ಸದಲಂಕಾರಾ ರಸಾಸ್ಪದಾ ಆಗಿರತಕ್ಕದ್ದು
4. ಪಾಡುಗಬ್ಬಂ …… ಹಿಂದೆದ ‘ಪಾಡು’ಗಳ ಕೂಟದಿಂದ
ರೂಪಿತವಾದುದಿದು.
5. ಮೇಲ್ವಾಡುಂ
ಬೆದಂಡೆಗಬ್ಬಮುಂ… ಅದುರಿಂ | ಆ ಪಾಡು ಗಬ್ಬದಿಂ
ಮೆಲ್ವಾಡು ಬೆದಂಡೆ ಗಬ್ಬಗಳು
ಕವಲೊಡೆದುವು.
ಈ ಬಗೆಯ ಕಬ್ಬಗಳನ್ನಲ್ಲದೆ ನಾಗವರ್ಮನು ಇನ್ನೂ ಒಂದು ಬಗೆಯ ‘ಬಾಜನೆಗಬ್ಬ’ ಎಂಬುದನ್ನೂ ವಿಸ್ತರಿಸಿದ್ದಾನೆ. ಅದು ಅಂದಿನ ದೇಸೀ ದೃಶ್ಯಕಾವ್ಯವೆಂದೂ, ಈ ವರೆಗೆ ವಿಸ್ತರಿಸಿದುದು ದೇಸೀ ಶ್ರಾವ್ಯ ಕಾವ್ಯವೆಂದೂ ಮುಳಿಯ ತಿಮ್ಮಪ್ಪಯ್ಯನವರು ಕರೆದಿದ್ದಾರೆ.
ಜನಪದ ಮತ್ತು ಶಿಷ್ಟ ಎರಡು ಸೇರಬೇಕೆಂಬುದು ಪಂಪನ ಆಶಯವಾಗಿತ್ತು. ಮಹಾಕವಿ ಪಂಪ ತನ್ನ ಮಾಗರ್ಿಯ ಮಹಾಕಾವ್ಯಗಳಲ್ಲಿ ‘ದೇಸೀಯೊಳ್ ಪುಗುವುದು’ ಎಂದುದರಿಂದ ದೇಸೀಯ ಮಹತ್ವ ಸಾರಿದ್ದಾನೆ. ಮಾರ್ಗ ಕಾವ್ಯ ಪದ್ಧತಿ ಲಕ್ಷಣ ಗ್ರಂಥದ ಅತಿಬಂಧನದಿಂದ ವಿರಸವಾಗುವಂತೆ, ಅದರ ಗಂಧ ಗಾಳಿಗೂ ಎಡೆಗೊಡದಿದ್ದಲ್ಲಿ ದೇಸೀ ಮಾಸಿ ಹೋಗುವುದು.
ನಾಡಿನ ಸಾರ್ವಜನಿಕವಾದ ಸಂಸ್ಕೃತಿಯ ಸಾರವೆಂದರೆ ದೇಸೀ. ಅದನ್ನು ಯಾವ ಬಗೆಯಲ್ಲೂ ವಿಕೃತಗೊಳಿಸಬಾರದು. ಮಾರ್ಗ ಸಾಹಿತ್ಯವಾಗಲಿ, ಲಕ್ಷಣ ಪದ್ಧತಿಯಾಗಲಿ, ತಮ್ಮ ಹೊರೆಯನ್ನು ಅದರ ಮೇಲೆ ಬಾಗಿಸಿದಲ್ಲಿ ಹೊರಿಸಿದಲ್ಲಿ ಅದರ ತನ್ನತನ ಮಾಯವಾಗುವುದು. ನಾಗರಿಕರೆಂಬುವರಿದಿರಿನಲ್ಲಿ ಹೇಗೆ ಹಳ್ಳಿಗರು ಅಂಜಿ, ನಾಚಿ, ಮುಗ್ಗರಿಸಿದ ಮನಸ್ಸಿನಿಂದ ವತರ್ಿಸುತ್ತಾರೋ ಹಾಗೆ ಮಾರ್ಗ ಸಾಹಿತ್ಯದಿದಿರಿನಲ್ಲಿ ದೇಸೀ ತಳಮಳಿಸುತ್ತಿದೆ ಎನ್ನುವ ಮುಳಿಯ ಅವರು ಅಂಥ ಹಳ್ಳಿಗರಲ್ಲಿ ಆದರ್ಶ ಜೀವನದ ಸಾರಸತ್ಪವೇ ಇಲ್ಲ ಎಂಬ ತಾತ್ಪರ್ಯ ಅಲ್ಲ, ಅದನ್ನು ಕಾಪಾಡಿ ನಿಜವಾದ ದೇಸೀಯ ಉದ್ಧಾರಕ್ಕೆ ನೆರವಾಗುವುದು ಉತ್ತಮ ನಾಗರಿಕನ ಕರ್ತವ್ಯ ಎನ್ನುತ್ತಾರೆ. ಅದರಂತೆ ದೇಸೀಯನ್ನು ಬಳಸಿಕೊಳ್ಳುವುದು ಅಥವಾ ‘ದೇಸೀಯೊಳ್ ಪುಗುವುದು’ ಮಹಾಕವಿಗಳ ಧರ್ಮವೆಂಬುದನ್ನು ಪಂಪನು ಸಾರಿಹೇಳಿದ್ದು ಈ ಕಾರಣಕ್ಕಾಗಿಯೇ ಎಂಬುದಾಗಿದೆ.
ಶಿಷ್ಟ ಕಾವ್ಯದ ಉತ್ಕೃಷ್ಟ ಕೃತಿಗಳನ್ನು ಕನ್ನಡಕ್ಕೆಕೊಬ್ಬ ಮಹಾಕವಿ ಪಂಪ ಆ ಮೂಲಕ ದೇಸೀಯ ಮಹತ್ವ ಎತ್ತಿ ಹಿಡಿದಿರುವುದು ಆ ಕಾಲದ ದೇಸೀ ಸಾಂದರ್ಬಿಕತೆಯನ್ನು ಸ್ಪಷ್ಟಪಡಿಸುತ್ತದೆ. ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಬರುವ ಕೆಲವು ಪದ್ಯಗಳು ದೇಸೀಕಾವ್ಯದ ಶ್ರೇಷವಿ ಉದಾಹರಣೆಗಳಾಗಿವೆ.
ಲವಣಾಬ್ಧಿಯೆ ಬಳ-ಸಿದುದೆನಿಸುವಗವಿ |
ಬಳಸೆಸೆದಿರೆ ಕೋಂಟೆ-ಯ ಚೆಲ್ವು ಪೊಗವಿ ||
ಲರಿದೆನಿಸಿರೆ ನೆಗೆ-ದುದು ನಭವನೆಯ್ದೆ |
ಮಿಳಿರ್ವ ಪತಾಕೆ-ಏಳಿ ದಿವಮನೆಯ್ದೆ ||
ಬಳಸಿದ ಕೆಂಬೊ-ನ್ನಮದಿಲ್ಗಳೊಳಗೆ |
ಮಣಿಮಯ ಭವನಾ-ಏಳಿ ತೊಳಸಿ ಬೆಳಗೆ ||
ರಸರಸದ ಬಾವಿ-ಮನೆ ಮನೆಗೆ ಬೇÙರಿ
ಕಿಸುಗಲ್ಗಳ ರಜದ-ಕಣಿವೆರಸು ತೋÙರಿ ||
ಸುರಕುಜ ನೆವಿಲೊ-ಳಂಗಣದೊಳೇನು |
ಮಲಪಿಲ್ಲದೆ ಕ-ಟ್ಟಿದರೆ ಕಾಮಧೇನು ||
ಇಲ್ಲಿ ಪಂಪ ಪುಲಿಗೆರೆಯ ತಿರುಳಗನ್ನಡದ ದೇಸೀಯ ಸೊಬಗನ್ನು ಕಾಣಿಸುವ ಮೂಲಕ ‘ದೇಸೀಯೊಳ್ ಪುಗುವುದು’ ಎಂಬುದನ್ನು ಸಾದಿಸುವ ಮೂಲಕ ದೇಸೀಗಿರುವ ಆಕರ್ಷಕತೆಯನ್ನು ಸ್ಪಷ್ಟಪಡಿಸಿದ್ದಾನೆ. ಕನ್ನಡ ಕಾವ್ಯದ ಮೇಲೆ ಸಂಸ್ಕೃತದ ದಟ್ಟ ಪ್ರಭಾವವಿದ್ದ ಕಾಲದಲ್ಲಿ ಕನ್ನಡ-ಸಂಸ್ಕೃತ ಬೆರಕೆಯನ್ನು ಖಂಡಿಸುವ ಮೂಲಕ ಕನ್ನಡ ದೇಸೀಯತೆಯ ಶ್ರೇಷ್ಠತೆಯನ್ನು ಸಾರಲಾಯಿತು. ನಯಸೇನ ತನ್ನ ‘ಧಮರ್ಾಮೃತ’ದ ಕೊನೆಯಲ್ಲಿ ಬೆರೆಕೆಯನ್ನು ಕಟುವಾಗಿಯೇ ಟೀಕಿಸುತ್ತಾನೆ.
ಸಕ್ಕದಮಂ ಪೇರ್ವೊಡೆ ಸಲೆ |
ಸಕ್ಕದಮಂ ಪೇರ್ಗಿ ಸುದ್ದಗನ್ನಡದೊಳ್ ತಂ ||
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ ||
ಇಲ್ಲಿ ಕವಿ ನಯಸೇನ ಅಚ್ಚ ದೇಸಿಗೆ ಮಾನ್ಯತೆ ನೀಡುವುದರೊಂದಿಗೆ ಆ ಕಾಲದ ಸಂಸ್ಕೃತಾತಿಕ್ರಮಣವನ್ನು ಖಂಡಿಸಿದ್ದಾನೆ. ಸಂಸ್ಕೃತದಲ್ಲಿ ಹೇಳಬೇಕಾದಲ್ಲಿ ಸಂಸ್ಕೃತದಲ್ಲಿಯೇ ಹೇಳಿ, ಶುದ್ಧ ಕನ್ನಡದಲ್ಲಿ ಸಂಸ್ಕೃತ ಬೆರೆಸಿ ಹೇಳುವುದು ತುಪ್ಪದಲ್ಲಿ ಎಣ್ಣೆಯನ್ನು ಬೆರೆಸಿ ಹೇಳಿದಂತೆ ಎಂದು ಹೇಳಿ ಕನ್ನಡದ ಆ ಮೂಲಕ ದೇಸಿಯತೆಯ ಹಿರಿಮೆ ಸಾರಿದ್ದಾನೆ. ‘ಭರತೇಶ ವೈಭವ’ದಲ್ಲಿ ರತ್ನಾಕರವರ್ಣಿಯು ದೇಸಿಯ ಬಳಕೆ ಕುರಿತು ಹೀಗೆ ಹೇಳುತ್ತಾನೆ:
ಸಕಲ ಲಕ್ಷಣವು ವ-ಸ್ತುಕಕೆ ವರ್ಣಕಕಿಷ್ಟು |
ವಿಕಲವಾದರು ದೋಷವಿಲ್ಲ ||
ಸಕಲ ಲಕ್ಷಣಕಾಗಿ – ಬಿರುಸು ಮಾಡಿದರೆ ಪು -
ಸ್ತಕದ ಬದನೆಕಾಯಂತಹುದು ||
‘ಆಡುವುದೊಂದು ಮಾಡುವುದಿನ್ನೊಂದು’ ಎಂಬಂತೆ ವರ್ಣಕವಾದ ದೇಸೀಯು ‘ಪುಸ್ತಕ ಬದನೆಕಾಯಿ’ ಯಾಗಲಾರದೆಂಬುದನ್ನು ಸ್ಪಷ್ಟಪಡಿಸುತ್ತಾನೆ. ಹೀಗೆ ಕನ್ನಡದ ಆರಂಭ ಕಾಲದಿಂದಲೂ ದೇಸಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತ ಬಂದು ಜನಪದ ಗೀತೆ, ಲಾವಣಿ, ಭಜನೆ, ತತ್ವಪದ, ವಚನಕಾರರ ರಚನೆಯಲ್ಲಿ, ದಾಸರ ಕೀರ್ತನೆಯಲ್ಲಿ ತನ್ನ ವ್ಯಾಪಕ ಬಾಹುಗಳನ್ನು ಚಾಚಿಕೊಳ್ಳುತ್ತ ಆಧುನಿಕ ಕಾಲಕ್ಕೆ ಬಂದ ವಸಾಹತು ಪ್ರಜ್ಞೆಯಲ್ಲೂ ತನ್ನದೇ ಅಸ್ತಿತ್ವವನ್ನು ಗುರುತಿಸಿಕೊಂಡು ಉಳಿದು ಬಂದಿರುವುದು ‘ಕನ್ನಡತನದ’ ಆ ಮೂಲಕ ‘ಕನ್ನಡ ಜನಪದ’ದ ಹೆಗ್ಗಳಿಕೆಯಾಗಿದೆ.
ಬಾದಾಮಿ ಶಾಸನದಲ್ಲಿ (ಕ್ರಿ.ಶ. 750) ಕಾಣಿಸಿಕೊಂಡ ತ್ರಿಪದಿಗಳು ಕನ್ನಡ ದೇಸೀಯ ಮೊದಲ ಹೆಗ್ಗುರುತುಗಳಾಗಿವೆ. ‘ಸಾಧುಗೆ ಸಾಧು…. ಮಾಧ್ಯುರಂಗೆ ಮಾಧುರ್ಯ…..’ ಎನ್ನುವಲ್ಲಿ ಭಾಷೆ ಶಿಷ್ಟವಾದರೂ ವಿಚಾರ ಮಾತ್ರ ಜನಪದವೇ ಆಗಿದೆ. ಕನ್ನಡದ ಅನೇಕ ಶಾಸನಗಳ ಸಾಹಿತ್ಯ ರಾಜರ ಆಡಳಿತ, ಶೌರ್ಯ, ಸಾಹಸ, ದಾನದತ್ತಿಗಳನ್ನು ಪ್ರಕಟಿಸಿದರೂ ಇಲ್ಲಿ ನಾವು ಜನಪದ ಭಾಷೆ, ಭಾವ, ಛಂದಸ್ಸು, ಅಲಂಕಾರ ಕಾಣುತ್ತೇವೆ. ಬಾದಾಮಿ ಶಾಸನದ ತ್ರಿಪದಿಯಿಂದ ಗರತಿಯರ ಹಾಡಿನ ತ್ರಿಪದಿಯವರೆಗೆ ಕನ್ನಡ ದೇಸಿ ಜನಪದದ ತ್ರಿವಿಕ್ರಮ ಸಾಧನೆ ನಮ್ಮ ಕಣ್ಣೆದುರಿಗೇ ಇದೆ. ಅದು ನಮ್ಮ ಕಾವ್ಯದಲ್ಲಿ ಬೇರೆ ಬೇರೆ ನೆಲೆಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಾ ಗುರುತಿಸಿಕೊಂಡು ಬಂದಿರುವುದು ಅದರ ಹಿರಿಮೆಯನ್ನೇ ಸಾರುತ್ತದೆ. ಪಂಪನ ಮಾರ್ಗದಲ್ಲಿ ಬಂದ ಪೊನ್ನ, ರನ್ನ, ಜನ್ನ, ನಾಗಚಂದ್ರದ ಕಾವ್ಯಗಳಲ್ಲಿ ಬಂದಿರುವ ದೇಸೀಯ ಜೊತೆಗೆ ಅಲ್ಲಿ ವ್ಯಕ್ತವಾಗಿರುವ ಜನಜೀವನದ ಚಿತ್ರಣ ಜಾನಪದವೇ ಆಗಿದೆ. ಶಿವಕೋಟಾಚಾರ್ಯರನ ‘ವಡ್ಡಾರಾಧನೆ’ ದುರ್ಗಸಿಂಹನ ‘ಪಂಚತಂತ್ರ’ ಜನಪದ ಕೃತಿಗಳೇ ಎನ್ನುವಷ್ಟು ಬಳಕೆಗೊಂಡಿವೆ. ಈ ಮೂಲಕ ಮುಂಚಿನಿಂದಲೂ ಪ್ರವಹಿಸಿಕೊಂಡು ಬಂದ ದೇಸಿಯ ಸಂಭ್ರಮ ಸಿದ್ದಿಗಳು ವಚನಕಾರರು, ದಾಸರು ಜನಪದರ ಮೂಲಕ ಮುನ್ನಡೆಸುತ್ತಾ ಬಂದು ಕನ್ನಡ ನವೋದಯ ಕಾವ್ಯ ಹುಟ್ಟಿಗೆ ಕಾರಣವಾದದ್ದು ಆಧುನಿಕೋತ್ತರ ಕನ್ನಡ ಕಾವ್ಯಚರಿತೆಯ ಮಹತ್ವ ಸಾಧನೆಯಾಗಿದೆ.

No comments:

Post a Comment