Monday 30 September 2013

ಸಂಶೋಧನೆಯ ಸೋಪಾನಗಳು ಕೃತಿ ಬಿಡುಗಡೆ.

‘ಸಂಶೋಧನೆಯ ಸೋಪಾನಗಳು’

October 1, 2013
by Avadhikanna



ಕೃಪೆ : ಅವಧಿ

ಕೂಡಲಸಂಗಮದಲ್ಲಿ ಡಾ.ಖಾಡೆ ಸಂಪಾದಿತ ‘ಸಂಶೋಧನೆಯ ಸೋಪಾನಗಳು’ ಬಿಡುಗಡೆ

ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯು ಹಮ್ಮಿಕೊಂಡಿದ್ದ ‘ಸಂಶೋಧನಾ ಕಮ್ಮಟ’ದಲ್ಲಿ ಮಂಡಿಸಲಾದ ಉಪನ್ಯಾಸಗಳನ್ನು ಒಳಗೊಂಡ ‘ಸಂಶೋಧನಾ ಸೋಪಾನ’ ಕೃತಿಯ ಬಿಡುಗಡೆ ಸಮಾರಂಭವು ಕೂಡಲ ಸಂಗಮದ ಅತಿಥಿ ಗೃಹದಲ್ಲಿ ರವಿವಾರ 29 ರಂದು ಜರುಗಿತು. ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ.ಕೋಟಿ,ಗೌರವ ಕಾರ್ಯದರ್ಶಿಗಳಾಗಿರುವ ಡಾ.ಪ್ರಕಾಶ ಖಾಡೆ,ಡಾ.ಅಶೋಕ ನರೋಡೆ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಕೃತಿಯನ್ನು ಕಸಬಾ ಜಂಬಗಿಯ ನಿರ್ಮಲ ಪ್ರಕಾಶನ ಪ್ರಕಟಿಸಿದ್ದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಬಿಡುಗಡೆ ಮಾಡಿದರು.
ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರದಲ್ಲಿ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ,ಶ್ರೀಮತಿ ಹಾಲಂಬಿ,ಬಾಗಲಕೋಟ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕಟಗಿಹಳ್ಳಿಮಠ ,ಸಹಕಾರಿ ಧುರೀಣ ಎಲ್.ಎಂ.ಪಾಟೀಲ,ನ್ಯಾಯವಾದಿ ತಾತಾಸಾಹೇಬ ಬಾಂಗಿ ,ಬಿ.ಪಿ.ಹಿರೇಸೋಮಣ್ಣವರ ,ಕೃಷ್ಣಗೌಡರ,ಶರಣು ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.ಜಮಖಂಡಿಯ ಚಿಂತನ ವೇದಿಕೆ ಮತ್ತು ನಿರ್ಮಲ ಪ್ರಕಾಶನ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅರ್ಜುನ ಕೋರಟಕರ ಮತ್ತು ಪ್ರಕಾಶಕ ಸದಾಶಿವ ಮಾಳಿ ಸ್ವಾಗತ ಕೋರಿ ವಂದಿಸಿದರು.

‘ಸಂಶೋಧನೆಯ ಸೋಪಾನಗಳು’ « ಅವಧಿ / avadhi

‘ಸಂಶೋಧನೆಯ ಸೋಪಾನಗಳು’ « ಅವಧಿ / avadhi

Wednesday 25 September 2013

ಕನ್ನಡ ನವೋದಯ ಸಾಹಿತ್ಯ -ಡಾ.ಪ್ರಕಾಶ ಖಾಡೆ

ಕನ್ನಡ ನವೋದಯ : ಶಿಷ್ಟತೆಯ ಕೋಟೆ ; ದೇಸಿಯತೆಯ ಬಯಲು

ಡಾ ಪ್ರಕಾಶ ಗ ಖಾಡೆ

ರಾಜಭಕ್ತಿ ಭದ್ರಕೋಟೆ ಕೊತ್ತಳದಾಚೆ ಸುತ್ತಲೂ
ನಿತ್ಯ ಮೊರೆಯುತ್ತಿದ್ದ ಸ್ವಾತಂತ್ರ್ಯ ಘೂಷ
ಮರೆಯೆ, ಮರಸಲು ನಿರಂತರವಾದ ಮಾತೇಸರಿ
ಎಂದು ಸುತ್ತಿದಿರಿ ಊರೂರು
ಮಾತಲ್ಲಿ ಸ್ವಾವಲಂಬನೆಯನರಸಿ
ವಾದ ಪರದೇಶೀ, ಅನುವಾದ ಶುದ್ದ ಸ್ವದೇಶೀ
ಇಂಗ್ಲಿಷ್ ಗೀತೆಗಳಿಗೆ ಹೊಸ ಹುಟ್ಟು
………..
ಅಪ್ಪಣೆ ಕೊಡಿಸಬೇಕು ಗುರುಗಳೆ ನಮಗೆ
ಇದು ನವೋದಯವೆ? ಅಥವಾ ಅದರ ಒಳಗುದಿಯೇ?
- ಗೋಪಾಲಕೃಷ್ಣ ಅಡಿಗ
(ಬಿ.ಎಂ.ಶ್ರೀ ಅವರಿಗೆ)
ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿಯೇ ಕನ್ನಡ ಕಾವ್ಯದ ಜನಮುಖಿಮಾರ್ಗದ ವಿರುದ್ಧ ಪಯಣ ಕೆಲವು ಚಿಂತನೆಗಳಿಗೆ ಗ್ರಾಸವಾಯಿತು. ಸಂಸ್ಕೃತ, ಇಂಗ್ಲಿಷ್ ಹಾಗೂ ಪ್ರಾಂತೀಯ ಭಾಷಾ ಸಾಹಿತ್ಯದ ಪ್ರಭಾವ ಹಾಗೂ ಸ್ಥಳೀಯವಾದ ಕವಿಗಳ ಕಾಣ್ಕೆಗಳು ಕನ್ನಡ ಕಾವ್ಯರಚನಾ ಸಂದರ್ಭವನ್ನು ಗೊಂದಲಕ್ಕೆ ದೂಡಿದ್ದವು. ಕನ್ನಡದ ಸಾಂಸ್ಕೃತಿಕ ನೆಲಗಟ್ಟು ಹೊಸ ಕಾವ್ಯ ಪ್ರಕಾರಕ್ಕೆ ಸಜ್ಜುಗೊಳ್ಳುವ ಮುಂಚಿನ ದಿನಗಳು ಒಂದು ಬಗೆಯ ಅಸಾರತೆಯನ್ನು ಉಂಟುಮಾಡಿದ ವಿಷಾದ ಪ್ರಕಟವಾಯಿತು. ಇದನ್ನು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ 1911ರಲ್ಲಿ ಬಿ.ಎಂ.ಶ್ರೀ ಅವರು ನೀಡಿದ ಉಪನ್ಯಾಸದಲ್ಲಿ ತೋಡಿಕೊಂಡಿದ್ದಾರೆ.
‘ಮೇಲೆ ತೋಟ ಶೃಂಗಾರ. ಒಳಗೆ ಗೋಣಿಸೊಪ್ಪು ಯಾವ ಕವಿಯ ಕವನವೇ ತೆಗೆಯಿರಿ ಲೋಕ ಶ್ರೇಷವಿವಾದ ನೀತಿಗಳಾಗಲಿ, ದಿವ್ಯ ಜೀವನಕ್ಕೆ ಮೇಲುಪಂಕ್ತಿಯಾದ ಚರಿತ್ರೆಗಳಾಗಲಿ ಯಾವುದಾದರೂ ಒಂದು ನಮ್ಮ ಹೃದಯವನ್ನು ಆನಂದ ಪ್ರವಾಹದಲ್ಲಿ ತೊಳೆದು ದುಃಖಮಯವಾದ ಈ ಸಂಸಾರದಲ್ಲೇ ಸ್ವರ್ಗಸುಖವನ್ನು ತಂದುಕೊಡುವಂತಹದು ಇದೆಯೆ? ಹಿತವಾದ, ಸಾರ್ಥಕವಾಗಿ ಹೊತ್ತು ಕಳೆಯಬಹುದಾದ ವಚನ ಕಾವ್ಯಗಳುಂಟೇ’
ಶ್ರೀಯವರ ಈ ವಿಷಾದವು ಆ ಕಾಲದ ಕಾವ್ಯದ ರಾಚನಿಕ ಸಂದರ್ಭವನ್ನು ‘ವಸಾಹತುಶಾಹಿ’ ದೃಷ್ಟಿಕೋನ ಮನೋಭಾವವಿಟ್ಟುಕೊಂಡು ಕನಲಿದಂತಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಶ್ರೀಯವರು ಹೊಸತನವಿಲ್ಲದೆ ಹಳೆಯದನ್ನೇ ಮತ್ತೆ ಮತ್ತೆ ಹೊಸದಾಗಿ ಬರೆವ ಕವಿಗಳನ್ನು ‘ಸೂತ್ರಕ್ಕೆ ಮಾರಿಕೊಂಡ ಕವಿಗಳು’ ಎಂದು ಜರಿಯುತ್ತಾರೆ. ‘ಹಳೆಯ ಕಥೆಗಳೆ ಚವರ್ಿತ ಚರ್ವಣವಾಗಿ ಬರುತ್ತಿವೆ. ಕಾವ್ಯ ರೀತಿಯೂ ಒಂದೇ ಸೂತ್ರಕ್ಕೆ ಸ್ವತಂತ್ರವಾಗಿ ಮಾರಿಕೊಂಡ ಕವಿಗಳಿಗೆ ಒಂದರ ಪಡಿಯಚ್ಚು ಮತ್ತೊಂದು. ಹದಿನೆಂಟು ವರ್ಣನೆಗಳು! ಅದೂ ಒಬ್ಬನಂತೆಯೇ ಮತ್ತೊಬ್ಬನಲ್ಲಿಯೂ ಹೀಗೆ ಒಂದು ಕವಿತೆಯನ್ನೋದಿದ ಮೇಲೆ ಮತ್ತೆ ಬೇರೆಯದನ್ನು ಓದುವ ಅಗತ್ಯವಾದರೂ ಏನು? ಹೊಸ ಭಾವಗಳಂತೂ ಇಲ್ಲವೇ ಇಲ್ಲ. ಒಂದು ಭಾವವನ್ನೇ ಬೇರೆ ಮಾತಿನಲ್ಲಿ ಜೋಡಿಸಿದರಾಯಿತು’ ಎಂಬುದೂ ಶ್ರೀ ಅವರ ಆ ಕಾಲದ ಕಾವ್ಯವನ್ನು ಕಂಡ ಪರಿ ಆದರೆ ಇದು ಅಂದಿನ ಸಂಸ್ಕೃತದ ಅಂಧಾನುಕರಣೆಯಿಂದ ನಮ್ಮ ಕವಿಗಳು ಬರೆಯುತ್ತಿದ್ದ ಈ ಬಗೆಯ ಕಾವ್ಯದ ಸೆಳೆತ ಇಂಥ ರಚನೆಗಳಿಗೆ ದಾರಿಮಾಡಿಕೊಟ್ಟಿತು ಎಂಬುದು ಸರ್ವವಿದಿತ. ಮೈಸೂರು ಅರಸರ ಆಶ್ರಯದ ಬಿಗಿತನ ಇಂಥ ರಚನೆಗಳಿಗೆ ಕಾರಣವಾದ ಸಂದರ್ಭವನ್ನು ಗಮನಿಸಬೇಕು.
‘ಮೈಸೂರಿನ ಅರಮನೆಯ ಸಂಪ್ರದಾಯದ ಕೋಟೆಯಾಗಿ ಅಲ್ಲಿ ನವೋದಯ ಬರಲು ನಿಧಾನವಾಯಿತು’ ಎನ್ನುತ್ತಾರೆ ಎಸ್. ಅನಂತನಾರಾಯಣ ಅವರು. ಮೈಸೂರಿನಲ್ಲಿ ರಾಜಾಶ್ರಯದ ಸುಭದ್ರತೆಯಿಂದ ಆಸ್ಥಾನದ ಗಾಂಬಿರ್ಯ, ಘನತೆ, ಗೌರವ ಇವುಗಳ ಕಟ್ಟಿಗೆ ಸಿಕ್ಕಿ ಹಳೆಯದನ್ನೇ ಅನುಸರಿಸುವ ರೀತಿಯೆ ಹೆಚ್ಚು ಪಾಲು ಉಳಿದುಕೊಂಡು ಬಂದಿತು. ಹೀಗಾಗಿ ಮೈಸೂರು ಕನರ್ಾಟಕ ಭಾಗದಲ್ಲಿ ಈ ರೀತಿಯ ಏಕತಾನತೆಗೆ ಕಾರಣವಾದ ಸಂದರ್ಭದಲ್ಲಿ ಕನ್ನಡ ಕಾವ್ಯಕ್ಕೆ ಹೊಸತನ ತುಂಬಲು ಶ್ರೀ ಅವರು ಆರಿಸಿಕೊಂಡಿದ್ದು ಅನ್ಯ ಭಾಷಿಕ ಸೊಗಡನ್ನೇ ಎಂಬುದು ಗಮನಿಸಬೇಕು. ಶ್ರೀ ಅವರು ಆ ಕಾಲದ ಇಂಡಿಯಾದ ಒಗ್ಗಟ್ಟು ಮುಂದುಮಾಡಿ ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳ ಮಹತ್ತು ಸಾರಿದರು. ಮೈಸೂರು ಭಾಗದ ಆಳರಸರ ಪ್ರೋತ್ಸಾಹ, ವಸಾಹತುಶಾಹಿಯ ಹೇರಿಕೆ ಹಾಗೂ ಇಂಗ್ಲಿಷ್ ಶಿಕ್ಷಣ ಕ್ರಮದಿಂದಾಗಿ 1911ರ ಹೊತ್ತಿನಲ್ಲಿ ಜಾನಪದವೇ ಉಸಿರಾಡುತ್ತಿದ್ದ ಧಾರವಾಡ ನೆಲೆಯಲ್ಲಿ ಅವರು ನಿಂತು ಮಾತನಾಡಿದ್ದನ್ನು ಇಲ್ಲಿ ನಾವು ಕಾವ್ಯ ಸಂದರ್ಭದಲ್ಲಿ ಗಮನಿಸಬೇಕು:
‘… ಇವೆಲ್ಲಕ್ಕೂ ಮೊದಲು ಭಾಷೆ ಒಂದಾಗಬೇಕು. ಇಂಗ್ಲಿಷ್ ಇಲ್ಲವೆ ಹಿಂದಿ ಯಾವುದು ಒಂದು ಸಾಧ್ಯವಾದದ್ದು. ಮಿಕ್ಕ ಭಾಷೆಗಳು ಸತ್ತು ಹೋಗಲಿ, ಈಗ ತಾವಾಗಿಯೇ ಸಾಯುತ್ತಾ ಬಿದ್ದಿರುವವು; ಎರಡು ದಿನ ನಾವು ತಟಸ್ಥರಾಗಿದ್ದರೆ ಹೋಗಿ ಹಳ್ಳಿಗಳಲ್ಲಿ ಅಡಗಿಕೊಳ್ಳುವವು. ಆಗ ರಾಜಭಾಷೆಯೊಂದು ಹಿಮಾಲಯದಿಂದ ರಾಮೇಶ್ವರದವರೆಗೂ ಸ್ವೇಚ್ಫೆಯಾಗಿ ಓಡಾಡುವುದು. ಇದು ಬಿಟ್ಟು ನರಳುತ್ತಿರುವ ದೇಶ ಭಾಷೆಗಳನ್ನು ಗುಣಮಾಡಿ ತಲೆಯೆತ್ತಿಸಬೇಕು ಎನ್ನುವುದು ಇಂಡಿಯಾದ ಒಗ್ಗಟ್ಟಿಗೆ ಅಡ್ಡ ಬಂದು ನಿಲ್ಲುವುದು; ಅವು ರಾಜ್ಯದ ಹಿತಚಿಂತನೆಗೆ ಮೃತ್ಯುಗಳು
ಹೀಗೆ ಒಂದೆಡೆ ನರಳುತ್ತಿರುವ ದೇಶೀ ಭಾಷೆಗಳನ್ನು ರಾಜಭಾಷೆಯೊಂದು ದಾಪುಗಾಲನ್ನಿಟ್ಟು ನಡೆದಾಡಿ ಹಳ್ಳಿಯ ಮೂಲೆಯಲ್ಲಿ ಮುದುಡಿ ಬಿದ್ದುಕೊಂಡಿರಬೇಕಾದರೆ ಹೊಸ ಭಾಷೆಗೆ ರತ್ನಗಂಬಳಿಯ ಹಾಸಿ ಸ್ವಾಗತಿಸುವ ರೀತಿಯನ್ನು ಧ್ವನಿಸುವ ಸಂದರ್ಭವನ್ನು ಗಮನಿಸಬೇಕು. ‘ಈಚೀಚೆಗಂತೂ ಯಕ್ಷಗಾನ, ದೊಂಬಿದಾಸರ ಪದ, ಶುಕಸಪ್ತತಿ, ಹಲ್ಲಿಯ ಶಕುನ ಇವೇ ಜನಗಳಿಗೆ ಮಹಾಕಾವ್ಯಗಳು. ‘ಏನು ಇಕ್ಕಟ್ಟಿನಲ್ಲಿ ಸಿಕ್ಕಿದೆವು’ ಹಿಂದಿನ ಸಂಸ್ಕೃತ ಪ್ರಾಬಲ್ಯವು ಅವರ ಕಾವ್ಯ ಮಾರ್ಗವು ಕುಗ್ಗಿ ಹೋದವು. ಮುಂದೆ ಇಂಗ್ಲಿಷಿನ ಪ್ರಾಬಲ್ಯವೂ ಅದರ ಕಾವ್ಯ ಮಾರ್ಗವೂ ಹೆಚ್ಚುವಂತೆ ತೋರುತ್ತದೆ. ಆದರೆ ಇದು ಇನ್ನು ದೃಢವಾಗಿ ಎಲ್ಲರ ಮನಸ್ಸಿಗೂ ಹತ್ತಿಲ್ಲ. ನಮಗೇನೋ ಇದು … ಕಾಣುತ್ತದೆ. ಇಂಗ್ಲಿಷ್ ಸಾಹಿತ್ಯವೇ ಜೀರ್ಣವಾದ ನಮ್ಮ ಕಾವ್ಯಮಾಲೆಯನ್ನು ಕೈಕೊಟ್ಟು ಎತ್ತಬೇಕು. ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ ಕಾವ್ಯಮಾಲೆಗೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು.
ಹೀಗೆ ಶ್ರೀಯವರು ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್ ಸಾಹಿತ್ಯದ ಯಜಮಾನಿಕೆಯನ್ನು ಆರೋಪಿಸಿದರು. ಅಲ್ಲದೆ ಸಾಹಿತ್ಯಕ್ಕೆ ಬಳಸುವ ಭಾಷೆಯಲ್ಲೂ ಅವರ ದೃಷ್ಟಿ ಗ್ರಾಂಥಿಕವಾದುದು, ಗ್ರಾಮ್ಯವನ್ನು ನಿರ್ಲಕ್ಷಿಸಿರುವದು ಅವರ ಮಾತುಗಳಲ್ಲಿಯೇ ಸ್ಪಷ್ಟವಾಗಿದೆ. ‘ಗ್ರಾಮ್ಯವನ್ನು ಬಿಟ್ಟು ವಿದ್ಯಾವಂತರು, ಉತ್ತಮ ಜಾತಿಯವರೂ ಆಡತಕ್ಕ ಸ್ಪುಟವಾದ ಕನ್ನಡವನ್ನು ಗ್ರಂಥ ಭಾಷೆಯಾಗಿ ತಿರುಗಿಸಿ ಬಿಟ್ಟರೆ ಅಚ್ಚು ಹಾಕುವುದರಿಂದಲೂ, ಮಕ್ಕಳಿಗೆ ಕಲಿಸುವುದರಿಂದಲೂ ಇದೆ ನೆಲೆಯಾಗಿ ನಿಂತು ಎತ್ತಲೂ ಹರಡುತ್ತದೆ. ಜನಗಳು ರೂಡಿಗೆ ತಂದ ಮಾತುಗಳನ್ನು ಕಲ್ಪನೆ ಮಾಡಬಾರದು. ಹಾಗೆ ಮಾಡಿದರೂ ಕನ್ನಡ ಮಾತುಗಳನ್ನೇ ಬಳಸುತ್ತಿರುವ ಸಂಸ್ಕೃತ ಪದಗಳನ್ನೇ ರೂಡಿಸುವುದು ಅನುಕೂಲ ಎಂದರು. ಹೀಗೆ ಕನ್ನಡ ಪ್ರಾಂತೀಯ ಆಡುಮಾತಿಗೆ ಸಾಹಿತ್ಯಿಕ ಮಣೆ ಹಾಕದೆ, ಗ್ರಂಥಸ್ಥ ಭಾಷೆಗೆ ಒತ್ತುಕೊಟ್ಟ ಕಾರಣವಾಗಿ ಜನಸಾಮಾನ್ಯರ ನಿತ್ಯ ಬದುಕಿನೊಂದಿಗೆ ಜನಪದರು, ವಚನಕಾರರು, ದಾಸರು, ತತ್ವಪದಕಾರರು ಕಾದುಕೊಂಡು ಬಂದ ದೇಸೀಯತೆಯ ನಿರ್ಲಕ್ಷ ವ್ಯಕ್ತವಾಯಿತು. ಹೇಗೆ ಆದಿಯಿಂದಲೂ ಸಂಸ್ಕೃತ ಶಿಕ್ಷಣದಿಂದಲೂ, ಸಂಸ್ಕೃತ ಪೋಷಣೆಯಲ್ಲೂ ಕಾವ್ಯಮಾಲೆಯನ್ನು ಬೆಳೆಸಿದೆವೋ ಹಾಗೆ ದೈವಯತ್ನದಿಂದ ಲಬಿಸಿರುವ ಇಂಗ್ಲಿಷಿನ ಶಿಕ್ಷಣದಲ್ಲೂ, ಇಂಗ್ಲಿಷಿನ ಪೋಷಣೆಯಲ್ಲೂ ಅದನ್ನು ಬೆಳೆಸಬೇಕು ಎಂದೂ ಕರೆಕೊಟ್ಟರು. ಇಲ್ಲಿ ಒಂದು ಬಿಡುಗಡೆ ಮತ್ತೊಂದರ ಬಿಗಿತನ ಕಾಣಬಹುದು. ಕುತರ್ುಕೋಟಿ ಅವರು ಹೇಳುವ ಹಾಗೆ ‘ಸಂಸ್ಕೃತ ಭಾರದಿಂದ ಬಿಡುಗಡೆಯನ್ನು ಪಡೆದು ಈಗ ಇಂಗ್ಲಿಷ್ ಭಾಷೆಯಿಂದ ಚೇತನವನ್ನು ಪಡೆಯಬೇಕು ಎಂದು ಅವರ ನಿರೀಕ್ಷೆಯಾಗಿತ್ತು’44 ಎಂಬುದು ಕನ್ನಡ ಚೇತನಕ್ಕೆ ನಡೆದ ಹುಡುಕಾಟ ದೇಸೀ ಮೂಲವಾಗಿರದೆ ಅನ್ಯ ನೆಲೆಗಳನ್ನು ಅರಸಿದ್ದು ಸ್ಪಷ್ಟವಾಗುತ್ತದೆ. ಒಟ್ಟಾರೆ ನವೋದಯ ಕಾವ್ಯದ ಆರಂಭವನ್ನು ಮೈಸೂರು ಕೇಂದ್ರಕ್ಕೆ ಆರೋಹಣಗೊಳಿಸುವ ಸಂದರ್ಭದಲ್ಲಿ ‘ಅನ್ಯ ಮತ್ತು ದೇಸಿ ತಾಕಲಾಟವನ್ನು ಅಳಿಸಿಹಾಕಬೇಕಾಗಿದೆ. ಈ ಮಾತಿಗೆ ಪೂರಕವಾಗಿ ಇಲ್ಲಿ ಕೆಲವು ಅಂಶಗಳನ್ನೂ ಗಮನಿಸಲಾಗಿದೆ.
‘ಮೈಸೂರು ಕೇಂದ್ರ ಭಾಗದಲ್ಲಿ ವಸಾಹತುಶಾಹಿ ಹಾಗೂ ಅರಸೊತ್ತಿಗೆ ಈ ಇಬ್ಬಗೆಯ ದಾಸ್ಯದ ನೆರಳಿನಲ್ಲೇ ಇಂಗ್ಲಿಷ್ ಶಿಕ್ಷಣ ಹಾಗೂ ಆಧುನಿಕ ವಿಚಾರಗಳ ಪ್ರವೇಶದಿಂದ ಹೊಸ ಮಧ್ಯಮ ವರ್ಗವೂ ಶಿಷ್ಟವಾದ ಒಂದು ಭಾಷಾ ಪ್ರಭೇದವೂ ಇಲ್ಲಿ ರೂಪುಗೊಂಡಿತು. ಅರಮನೆ ಹಾಗೂ ಹೊಸಕಾಲದ ಗುರುಮನೆಯ ನಡುವಿನ ಅಂಗಳದಲ್ಲಿ ಮಧ್ಯಮ ವರ್ಗದ ತಾತ್ವಿಕತೆ ಹಾಗೂ ಶಿಷ್ಟ ಭಾಷಾ ಪ್ರಭೇದವನ್ನೂ ಬಳಸಿಕೊಂಡು ಅನುವಾದ ಅನುಕರಣಗಳ ಹಂತವನ್ನು ದಾಟಿ ಸ್ವತಂತ್ರವಾಗಿ ನೆಲೆನಿಂತ ಕಾವ್ಯದಲ್ಲೂ ಒಂದು ಬಗೆಯ ಶಿಷ್ಟತೆ ಹಾಗೂ ಗಾಂಬಿರ್ಯ ಉಳಿದುಕೊಂಡಿತು. ಅದನ್ನು ಹಗುರಗೊಳಿಸಬಹುದಾಗಿದ್ದ ಜನಪದ ಸ್ಪರ್ಶವೂ ಅದಕ್ಕಾಗಲಿಲ್ಲ.’ ಹೀಗೆ ಕಾವ್ಯದಲ್ಲಿ ಶಿಷ್ಟತೆ, ಬಿಗಿತನ, ಅನುವಾದ, ಅನುಕರಣೆಗಳು ಸ್ಥಳೀಯತೆಯನ್ನು ಬಿಟ್ಟು ರಚನೆಯಾದಂತೆಲ್ಲಾ ಇಂಥ ರಚನೆಗಳೇ ಸಾರ್ವತ್ರಿಕ ಮನ್ನಣೆಗೆ ನಿಲ್ಲಬೇಕಾಯಿತು. ಶ್ರೀಯವರ ‘ಪುನರುಜ್ಜೀವನ’ ಪರಿಕಲ್ಪನೆಯಲ್ಲಿ ದೊರೆತ ಮನ್ನಣೆಯೇ ಇದಕ್ಕೆ ಕಾರಣವಾಯಿತು.
‘ಹೊಸ ಕಾವ್ಯದ ಹುಟ್ಟಿನ ಸಂದರ್ಭದಲ್ಲಿ ಶ್ರೀಯವರ ಬರಹಗಳಲ್ಲಿ ‘ಗ್ರಾಮ್ಯ’ ಭಾಷಾ ಪ್ರಭೇದಗಳ ಕುರಿತಾದ ಅನಾದರ ಸ್ಪಷ್ಟವಾಗಿದೆ. ಅವರು ಅರ್ಥವಾಗದ ಹಳಗನ್ನಡವನ್ನಾಗಲಿ, ಕನ್ನಡಕ್ಕೆ ಒಗ್ಗದ ರೂಡಿಯಲ್ಲಿಲ್ಲದ ಶಬ್ದಗಳನ್ನಾಗಲಿ ಬಳಸಬಾರದು ಎಂಬುದು ಶ್ರೀಯವರ ನಿಲುವಾಗಿತ್ತು. ಇವು ಶ್ರೀಯವರ ವೈಯಕ್ತಿಕ ಅಬಿಪ್ರಾಯಗಳು ಮಾತ್ರವಾಗಿರದೆ ಒಟ್ಟು ಮೈಸೂರು ಪ್ರಾಂತದ ಸುಶಿಕ್ಷಿತವರ್ಗದ ನಿಲುವು ಎಂದು ಗ್ರಹಿಸಬಹುದು. ಏಕೆಂದರೆ ಭಾಷೆಯ ಕುರಿತಾದ ಶ್ರೀಯವರ ವಿಚಾರಗಳು ಅವರು ಪ್ರತಿಪಾದಿಸಿದ ಪುನರುಜ್ಜೀವನದ ಪರಿಕಲ್ಪನೆಯ ಅಂಗವಾಗಿ ಬಂದಿದೆ. ಪುನರುಜ್ಜೀವನ ಪರಿಕಲ್ಪನೆಯನ್ನು ಶ್ರೀಯವರು ತಮ್ಮ ಕಾಲದ ಸಾಹಿತ್ಯ ಸಾಂಸ್ಕೃತಿಕ ವಿಚಾರಗಳನ್ನು ವ್ಯವಸ್ಥೀಕರಿಸಲು, ಅರ್ಥಮಾಡಿಕೊಳ್ಳಲು ಹಾಗೂ ಆನುಷಂಗಿಕವಾಗಿ ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನೂ ನಿದರ್ೆಶಿಸಲು ಬಳಸುತ್ತಾರೆ. ಹಾಗೆ ವ್ಯವಸ್ಥೀಕರಿಸಲು ಹಾಗೂ ನಿದರ್ೆಶಿಸಲು ಬೇಕಾದ ಶೈಕ್ಷಣಿಕ ಸಿದ್ಧತೆ ಹಾಗೂ ಅದಿಕಾರ ಎರಡೂ ಅವರಿಗಿತ್ತು. ಈ ಭಾಗದ ಆ ಕಾಲದ ಲೇಖಕರೆಲ್ಲ ಹೆಚ್ಚಾಗಿ ಅವರ ಶಿಷ್ಯರೇ ಆಗಿದ್ದರೆಂಬುದನ್ನು ನೆನೆದಾಗ ಶ್ರೀ ಫ್ಯಾಕ್ಟರ್ನ ಮಹತ್ವ ಅರಿವಾಗುತ್ತದೆ. ಒಟ್ಟಿನಲ್ಲಿ ಇಲ್ಲಿಯ ಕಾವ್ಯಭಾಷೆ ದಕ್ಷಿಣ ಕನ್ನಡದ ಹಾಗೂ ಉತ್ತರ ಕನರ್ಾಟಕದ ಸಾಹಿತ್ಯ ಭಾಷೆಗಿಂದ ಬಿನ್ನವಾಯಿತಲ್ಲದೆ ‘ನವಮಾರ್ಗ ಸಂಪ್ರದಾಯ’ವೊಂದು ಇಲ್ಲಿ ಹುಟ್ಟಿಕೊಂಡಿತು.
ಹೀಗೆ ವಸಾಹತುಶಾಹಿ ಸಂದರ್ಭ, ಇಂಗ್ಲಿಷ್ ಶಿಕ್ಷಣ ಕ್ರಮ, ಸಂಸ್ಕೃತ ಪ್ರಭಾವ, ಶಿಷ್ಟತೆಯ ಅನಿವಾರ್ಯತೆ ಕಾರಣವಾಗಿ ‘ಇಂಗ್ಲಿಷ್ ಮಾತ್ರ ಕನ್ನಡ ಕಾವ್ಯಕ್ಕೆ ಹೊಸತನ ತರಬಲ್ಲದೆಂದು’ ನಂಬಿದ್ದ ಶ್ರೀಯವರು ಅದನ್ನೇ ನಂಬಿಸಿದರು. ಹೀಗಾಗಿ 19ನೆಯ ಶತಮಾನದ ಉತ್ತರಾರ್ಧದಿಂದ ಪ್ರಾರಂಭವಾದ ಆಧುನಿಕ ಕನ್ನಡ ಸಾಹಿತ್ಯ ಒಂದು ನೆಲೆಯಲ್ಲಿ ವಸಾಹತುಶಾಹಿ ಅನುಭವದಿಂದ ರೂಪಿಸಲ್ಪಟ್ಟಿರುವುದು ಕಾಣುತ್ತೇವೆ. ಇಂದು ಸರ್ವವೇದ್ಯವಾಗಿರುವಂತೆ ತನ್ನ ಪ್ರಭುತ್ವವನ್ನು ಉಳಿಸಿ ಬೆಳೆಸಲು ಬ್ರಿಟಿಷ್ ವಸಾಹತುಶಾಹಿಯು ತನ್ನದೇ ಆದ ಸಾಂಸ್ಕೃತಿಕ ಯಾಜಮಾನ್ಯವನ್ನು ಕನರ್ಾಟಕದ ಆ ಮೂಲಕ ಭಾರತದ ಮೇಲೆ ಹೇರುವುದರಲ್ಲಿ ಯಶಸ್ವಿಯಾಯಿತು. ಎಂದರೆ ವಸಾಹತುಶಾಹಿ ವೈಚಾರಿಕತೆ, ಇಂಗ್ಲಿಷ್ ಶಿಕ್ಷಣ ಪ್ರಗತಿ ಎಂಬ ಸರಳ ಸಮೀಕರಣವನ್ನು ಭಾರತೀಯರೆ ಒಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಬ್ರಿಟಿಷ್ ಸಾಂಸ್ಕೃತಿಕ ವೈಚಾರಿಕ ಯಾಜಮಾನ್ಯವನ್ನು ಆಧುನಿಕ ಕನ್ನಡ ಸಾಹಿತಿಗಳು ಹಾಗೂ ಚಿಂತಕರು ಪ್ರಜ್ಞಾಪೂರ್ವಕವಾಗಿ ಮಾನ್ಯ ಮಾಡಿದ್ದರು ಎಂಬುದಕ್ಕೆ ಸಮರ್ಥನೆಯಾಗಿ ಈ ಪ್ರಾತಿನಿದಿಕ ಸಾಲುಗಳನ್ನು ಉದಾಹರಿಸಬಹುದು. ತಮ್ಮ ‘ಭರತಮಾತೆಯ ವಾಕ್ಯ’ ಕವನದಲ್ಲಿ ಬ್ರಿಟನ್ನಿನ ರಾಣಿಯನ್ನುದ್ದೇಶಿಸಿ ಬಿ.ಎಂ.ಶ್ರೀ ಅವರು ಹೀಗೆ ಹೇಳುತ್ತಾರೆ.
ಸಕಲ ಧರ್ಮದ ತಿರುಳ ಹೊರೆದಳು
ಸಕಲ ಜ್ಞಾನವ ತೆರೆದಳು;
ಸಕಲ ಸೀಮೆಯ ಬಯಕೆಗಳೆದಳು
ಸಕಲ ಕುಶಲವನೊರೆದಳು
ಎಂದು ಶ್ರೀಯವರು ಹೀಗೆ ಸಾರಿದರೆ, ಕುವೆಂಪುರವರು
ಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸಗಾಳಿ
ಭಾರತದ ಒಣಗು ಬಾಳ್ಮರವನಲುಗಾಡಿ
ಎಂದು ಘೂಷಿಸಿದರು. ಈ ರೀತಿ ಬ್ರಿಟಿಷ್ ಸಾಂಸ್ಕೃತಿಕ ಯಾಜಮಾನ್ಯವನ್ನು ಇತರ ಭಾರತೀಯರಂತೆ ಕನ್ನಡ ಲೇಖಕರು ಹಾಗೂ ಚಿಂತಕರು ಸಂಪೂರ್ಣವಾಗಿ ಮಾನ್ಯ ಮಾಡಿದುದಕ್ಕೆ ಕೇವಲ ಬ್ರಿಟಿಷರ ರಾಜಕೀಯ ಸತ್ತೆ ಮತ್ತು ಪಾಶ್ಚಿಮಾತ್ಯರ ವೈಜ್ಞಾನಿಕ ತಾಂತ್ರಿಕ ಪ್ರಗತಿಗಳೇ ಕಾರಣವಲ್ಲ. 250 ವರ್ಷಗಳ ಬ್ರಿಟಿಷ್ ಪ್ರಭುತ್ವದೊಡನೆಯೇ ಸಾವಿರ ವರ್ಷಗಳ ದೇಶೀ ಪ್ರಭುತ್ವವೂ ಭಾರತದಲ್ಲಿ ಅಸ್ತಿತ್ವದಲ್ಲಿತ್ತು.
ಹೀಗೆ ಮೇಲಸ್ತರದ ಪಂಡಿತರು ಕನ್ನಡ ಪುನರುಜ್ಜೀವನ ಬಯಸಿದ ವಿದ್ವಾಂಸರು ಇಂತಹ ಪರಿಚಲನೆಯ ಮುಂಚೂಣಿಯಲ್ಲಿದ್ದದರಿಂದ ಅವರು ತರಬಯಸಿದ ಬದಲಾವಣೆಗಳು ಸುಧಾರಣಾತ್ಮಕವಾಗಿದ್ದವೇ ಹೊರತು ಸಮಗ್ರ ಪರಿವರ್ತನೆಯ ಕಡೆಗೆ ಒಲವನ್ನು ಹೊಂದಿರಲಿಲ್ಲ ಎಂಬುದು ವಿದಿತವಾಗುತ್ತದೆ. ಈ ಪರಿವರ್ತನೆಯ ಗರ್ಭದೊಳಗೆ ಕನ್ನಡ ಸಂದರ್ಭದಲ್ಲಿ ಅಡಗಿ ಕುಳಿತಿದ್ದ ದೇಸೀಯ ಮೌಖಿಕ ಕಾವ್ಯ ಪರಂಪರೆಗಳು ಉತ್ತರ ಕನರ್ಾಟಕದ ‘ಹಲಸಂಗಿ ಗೆಳೆಯರು’ ಮೊಳಗಿಸಿದ ಜಾನಪದ ಕಹಳೆಯಿಂದ ಕನ್ನಡ ಕಾವ್ಯಲೋಕ ಸೂರ್ಯ ಉದಯಿಸುವ ಮೊದಲು ಮೂಡುವ ಬೆಳ್ಳಿಚುಕ್ಕಿಯಂತೆ ಮೊಳಗಿ ನಾಡವರ ಕಣ್ಣನ್ನು ತನ್ನಡೆಗೆ ಆಕಷರ್ಿಸಿತು. ಈ ಆಕರ್ಷಣೆಗೆ ಶ್ರೀಯವರೂ ಹೊರತಾಗಲಿಲ್ಲ. ಮುಂದೆ ಅವರೇ ಸಾರಿದರು ‘ಜನವಾಣಿ ಬೇರು ಕವಿವಾಣಿ ಹೂವು’ ಎಂದು .

Monday 9 September 2013

ಗಣೇಶ ಎಲ್ಲ ದೇವತೆಗಳಿಗೂ ಒಡೆಯ..-ಡಾ.ಖಾಡೆ


ಗಣೇಶ ಹಬ್ಬ (9.9.2013) ಲೇಖನ..
                         ಗಣೇಶ ಎಲ್ಲ ದೇವತೆಗಳಿಗೂ ಒಡೆಯ 

                                                              -  ಡಾ.ಪ್ರಕಾಶ ಗ.ಖಾಡೆ
     ಗಣಪತಿಯು ವಿದ್ಯೆ, ಬುದ್ಧಿ ಮತ್ತು ವಿವೇಕಗಳ ದೇವತೆ. ಭಾರತದ ತುಂಬೆಲ್ಲ ಗಣಪತಿಯನ್ನು ಪೂಜಿಸುತ್ತಾರೆ. ಗಣೇಶನ ಆರಾಧನೆ ಕಾಲಾತೀತ, ದೇಶಾತೀತ. ವಸಾಹತುಶಾಹಿಯ ವಿರುದ್ಧ ಸಾಂಸ್ಕøತಿಕ ಜಾಗೃತಿ ಮೂಡಿಸುವ ಆಚರಣೆಯ ಮೂಲಕ ಗಣೇಶ ಉತ್ಸವವು ಸಾರ್ವಜನಿಕ ಹಬ್ಬವಾಗಿ ಚಾಲನೆಯಲ್ಲಿ ಬಂದಿತು. . ನೆರೆಯ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಸಾರ್ವಜನಿಕವಾಗಿ ಆರಂಭವಾಯಿತು. ಗಣೇಶ ಇಂದು ವಿಶ್ವ ಮಾನ್ಯ ದೇವತೆ.ನಮ್ಮ ದೇಶದಲ್ಲಷ್ಟೇ ಅಲ್ಲದೆ ಚೀನಾ, ಜಪಾನ್, ಮಲೇಶೀಯಾ, ಜಾವಾ, ಟಿಬೇಟ್ ಮೊದಲಾದ ರಾಷ್ಟ್ರಗಳಲ್ಲಿಯೂ ಗಣೇಶನಿಗೆ ಅಗ್ರ ಸ್ಥಾನಿತ್ತೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಬೌದ್ಧ ಧರ್ಮದ ಚಾರಿತ್ರಿಕ ಸ್ಥೂಪಗಳಲ್ಲಿ ವಿನಾಯಕನ ಚಿಹ್ನೆಗಳಿರುವ ನಿದರ್ಶನಗಳಿರುವುದು ಬಾಂಗ್ಲಾದಲ್ಲಿವೆ. ಗಾಂಧಾರ, ಮಧುರ, ಅಮರಾವತಿ, ಸಾರಾನಾಥ, ಟಿಬೆಟ್ ಮೊದಲಾದೆಡೆಗಳಲ್ಲಿಯೂ ಈ ದೇವತೆಯ ಕಲಾಕೃತಿಗಳನ್ನು ಕಾಣುತ್ತೇವೆ. ಬಾದಾಮಿಯ ಚಾಲುಕ್ಯರ ಕಾಲದ ವಾತಾಪಿ ಭಜೆ ಉಕ್ತಿ ಕರ್ನಾಟಕ ಸಂಗೀತದ ಆದ್ಯವೆನಿಸಿದೆ. 11ನೇ ಶತಮಾನದಲ್ಲಿ ಗುಜರಾತ್‍ನಲ್ಲಿದ್ದ ಗಣೇಶ ವಿಗ್ರಹ ಈಗ ಲಂಡನ್ನಿನ ವಿಕ್ಟೋರಿಯಾ ಆಂಡ್ ಅಲ್ಬರ್ಟ್ ವಸ್ತು ಸಂಗ್ರಹಾಲಯದಲ್ಲಿದೆ. ಭರ್ಮಾ, ಥೈಲ್ಯಾಂಡ, ಮಲೇಶಿಯಾ, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯಾ ಮೊದಲಾದ ಆಗ್ನೇಯ ಏಷಿಯಾಗಳಲ್ಲಿಯೂ ಗಣೇಶನ ಆರಾಧನೆಯ ಸಂಕೇತಗಳಾಗಿ ಕೆಲವು ಕಲಾಕೃತಿಗಳನ್ನು ಕಾಣುತ್ತೇವೆ. ಜಪಾನಿನಲ್ಲಿ ಸಾಹಿತ್ಯ, ಚಿತ್ರ, ಶಿಲ್ಪಕಲಾಕ್ಷೇತ್ರಗಳಲ್ಲಿಯೂ ಭಾರತೀಯ ಶೈಲಿಯ ಗಣೇಶನ ಬಿಂಬಗಳಿವೆ. ಒಟ್ಟಾರೆ ವಿಶ್ವ ಸಂಸ್ಕøತಿಯೊಳಗೆ ಗಣೇಶನ ಆರಾಧನೆ ಹಾಸುಹೊಕ್ಕಾಗಿರುವುದು ಹಿರಿಮೆಯ ಸಂಕೇತವಾಗಿದೆ. ವೇದಗಳಲ್ಲಿಯೂ ಗಣಪತಿ ಪೂಜೆಯ ನಿರೂಪಣೆ ಇದೆ. ಉಪನಿಷತ್ತುಗಳ ಕಾಲದಲ್ಲಿಯೂ ಗಣಪತಿ ಪೂಜೆ ಹೆಚ್ಚು ಮಹತ್ವ ಪಡೆಯಿತು. ಈಚೆಗೆ ತಿಲಕರ ಕಾಲದಲ್ಲಿ ಈ ಪೂಜೆಗೆ ರಾಷ್ಟ್ರೀಯ ಸ್ವರೂಪ ಬಂದಿತು. ಜನಪದರಂತೂ ತಮ್ಮ ಕಾವ್ಯ, ಆಟ, ಬಯಲಾಟಗಳಲ್ಲಿ ಮೊದಲಿಗೆ ಗಣಪತಿಯನ್ನು ನೆನೆಯುತ್ತಾರೆ.

  ಗಣೇಶ ಎಲ್ಲ ದೇವತೆಗಳಿಗೂ ಒಡೆಯ. ಅಗ್ರ ದೇವತೆ. ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ದೇವತಾಕಾರ್ಯ ಮೊದಲಾದ ಜೀವನದ ಪ್ರತಿಯೊಂದು ಶುಭ ಕಾರ್ಯಗಳಲ್ಲಿಯೂ ನಿರ್ವಿಘ್ನತೆಯ ಸಿದ್ಧಿಗಾಗಿ ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಗಣಪತಿಗಿರುವ ಒಂದೊಂದು ಹೆಸರೂ ಒಂದೊಂದು ಗುಣಲಕ್ಷಣ ಸೂಚಿಸುತ್ತದೆ. ಸುಮುಖ, ಪಂಚಾಸ್ಯ, ಗಜಾಸ್ಯ, ಧೀರ, ವೀರ, ಕಂದರ್ಪ, ಶಕ್ತಿ, ಆಮೋದ, ಪ್ರಮಥ, ರುದ್ರ, ವಿದ್ಯಾ, ವಿಘ್ನಹರ, ದುರಿತಹರ, ಭಕ್ತವತ್ಸಲ, ಕಾವಿತಾರ್ಥ, ಸಮೋಹನ ಹೀಗೆ ನಾನಾ ದೇವತೆಯ ಅವತಾರ ಕಲ್ಪನೆಗಳು, ಮಂತ್ರಗಳು, ಮಂತ್ರ ಶಾಸ್ತ್ರದಲ್ಲಿ ಹಾಗೂ ಗಣೇಶ ಪುರಾಣಗಳಲ್ಲಿ ವಿಫುಲವಾಗಿ ಸಿಕ್ಕುತ್ತವೆ.
   ಆರ್ಯರು ತಮ್ಮ ವೈದಿಕ ದೇವತೆಗಳ ಗುಣಗಳನ್ನು ,ದ್ರಾವಿಡರು ಶಿವಾಚಾರದ ಸೂಚನೆಗಳನ್ನು ಈ ಮಾಸನ ಪುತ್ರನಲ್ಲಿ ಸೇರಿಸಿ ಓಂಕಾರ ಸ್ವರೂಪಿಯನ್ನಾಗಿ ಮಾಡಿ ಎಲ್ಲ ಮಂಗಲ ಕಾರ್ಯಗಳ ಆರಂಭ ಪೂಜೆಯನ್ನು ಸಲ್ಲಿಸುವ ಗೌರವವನ್ನು ಗಣಪತಿಗೆ ಕೊಟ್ಟರು. ಮುಂದೆ ಆರ್ಯ ದ್ರಾವಿಡರ ಸಂಯೋಗವಾಗಲು ಅವರ ಸಂಸ್ಕøತಿಯು ಒಂದಾಗಿ ಈ ಭಾರತದ ಸಂಸ್ಕøತಿಯೆಂದು ಉಳಿದಿದೆ.
            ವಿದ್ಯಾಲಾಭ, ಧನಲಾಭ, ಸಕಲ ಇಷ್ಟಾರ್ಥ ಲಾಭಗಳು ಗಣಪತಿಯನ್ನು ಪೂಜಿಸುವುದರಿಂದ ದೊರೆಯುತ್ತವೆ ಎಂಬ ನಂಬುಗೆ ಜನಪದರಲ್ಲಿದೆ. ನಿರ್ವಿಘ್ನತೆಗೆ ಸಂಕೇತವಾಗಿ ಜನಪದರು ರೂಪಿಸಿಕೊಂಡ ದೈವ ಗಣೇಶ. ಹಿಡಿಗಾತ್ರದ ತೊಪ್ಪೆ ಸಗಣೆ ಉಂಡಿ ಮಾಡಿ ಅದರ ನೆತ್ತಿಯ ಮೇಲೆ ನಾಲ್ಕಾರು ಗರಿಕೆಗಳನ್ನು ಸಿಕ್ಕಿಸುತ್ತಾರೆ. ಅದೇ ಗಣೇಶ. ಅದನ್ನು ಜನಪದರು ಪಿಳ್ಳಪ್ಪ ಗೊಂಬೇವರು, ಬೆನಕ ಮುಂತಾದ ಹೆಸರುಗಳಿಂದ ಸಂಭೋಧಿಸುತ್ತಾರೆ. ಪ್ರತಿಯೊಂದು ಶುಭ ಕಾರ್ಯದ ಪ್ರಾರಂಭದಲ್ಲಿಯೂ ಈ ಪಿಳ್ಳಪ್ಪನನ್ನು ಮಾಡಿ ಮೊದಲು ಪೂಜೆ ಸಲ್ಲಿಸಿ ಮುಂದಿನ ಕಾರ್ಯಗಳಲ್ಲಿ ತೊಡಗುತ್ತಾರೆ. ಬೇಸಾಯದ ಸಂದರ್ಭಗಳಲ್ಲಿಯೂ ಇದರ ಬಳಕೆಯಿದೆ. ಕಣದ ನಡುವೆ ನೆಟ್ಟ ಮೇಟಿಯ ನೆತ್ತಿಯ ಮೇಲೆ ಇಟ್ಟ ಪಿಳ್ಳಪ್ಪ ಕಣದ ಕೆಲಸಗಳೆಲ್ಲ ಮುಗಿಯುವವರೆಗೂ ಇರುತ್ತದೆ.
          ಗಣೇಶನ ಮೂರ್ತಿ ಕಲ್ಪನೆಯು ಬಹಳ ವಿಶಿಷ್ಟ ಮತ್ತು ವಿಶೇಷವಾದುದಾಗಿದೆ.ಮಾನವ ದೇಹ ಆನೆಯ ಗಾತ್ರ ,ಆನೆಯ ಮುಖ ,ಸೊಂಡಿಲು,ಒಂದು ಮುರಿದ ಕೋರೆ,ಡೊಳ್ಲು ಹೊಟ್ಟೆ,ಹೊಟ್ಟೆಗೆ ಬಿಗಿದು ಕಟ್ಟಿದ ಹಾವು,ಓರೆ ನೋಟ, ಚಿಕ್ಕ ಚಿಕ್ಕ ಕಾಲುಗಳು,ನಾಲ್ಕು ಕೈಗಳು,ಮೂಷಿಕ ವಾಹನ ಇದು ಗಣೇಶನ ಮೂರ್ತಯ ಕಲ್ಪನೆ.ವಿಘ್ನ ವಿನಾಶಕ ಮಂಗಲ ಮೂರ್ತಿ ,ವಿದ್ಯಾ ದೇವತೆ ,ಸಾಹಿತ್ಯ ಸಂಗೀತ, ನೃತ್ಯ,ಭಾಷಣಗಳ ಪ್ರೇಮಿ ಎಂಬ ನಂಬಿಕೆ ಈ ದೇವತೆ ಮೇಲಿದೆ. ನವರಸಗಳಲ್ಲೊಂದಾದ ಹಾಸ್ಯಕ್ಕೆ ಗಣಪತಿಯು ಅಧಿಪತಿ. ಹಾಸ್ಯವನ್ನು ಬಿಳಿಬಣ್ಣಕ್ಕೆ ಹೋಲಿಸಲಾಗಿದೆ. ಕಟಕಿಯಿಲ್ಲದೆ ನಗೆ ಶುಭ್ರವಾಗಿ ಹಸನಾಗಿರುತ್ತದೆ. ಗಣೇಶನಿಗೆ ಪ್ರಿಯವಾದ ಬಣ್ಣ ಶ್ವೇತ. ಹಾಸ್ಯದ ಆತ್ಮಸ್ಥ, ಪರಸ್ಥ ಎಂಬ ಎರಡು ಬೇಧಗಳಲ್ಲಿ ಆತ್ಮಸ್ಥ ಹಾಸ್ಯವು ಗಣಪತಿಯದು ಎಂದರೆ ತನ್ನನ್ನೇ ನಗುವಿನ ವಸ್ತುವನ್ನಾಗಿಸಿಕೊಳ್ಳುವ ಔದಾರ್ಯ ಹೊಂದಿದ ವಿಶಾಲದೃಷ್ಟಿಯ ಸರಸ ಹಾಸ್ಯ ಈ ದೇವತೆಯದು.
   ಜನಪದ ಕಾವ್ಯ ಮತ್ತು ಪುರಾಣ ಕಥೆಗಳಲ್ಲಿ ಗಣಪತಿಗೆ ಸಂಬಂಧ ಪಟ್ಟ ಅನೇಕ ಕಥೆಗಳು, ದಂತಕಥೆಗಳಿವೆ. ಗಣೇಶನ ಜನನ, ತುಂಟತನ, ಬುದ್ಧಿಚಾತುರ್ಯ ಇತ್ಯಾದಿ ಕುರಿತ ಕಥೆಗಳು ಪ್ರಚಲಿತದಲ್ಲಿವೆ.
ಗಜವದನ:
   ಒಮ್ಮೆ ಪಾರ್ವತಿ ಸ್ನಾನದ ಮನೆಗೆ ಹೋದಾಗ ಯಾರಾದರೂ ಒಳನುಗ್ಗಿದರೆ ಗತಿಯೇನೆಂದು ಒಳನುಗ್ಗದಂತೆ ತನ್ನ ಮೈ ತಿಕ್ಕಿ ಅದರಿಂದ ಉಂಟಾದ ಮಣ್ಣಿನ ಕೊಳೆಯಿಂದ ಬಾಲಕನ ಮೂರ್ತಿ ಮಾಡಿ ಅದಕ್ಕೆ ಜೀವ ತುಂಬಿ ಕವಲು ನಿಲ್ಲಿಸಿದಳು. ಯಾರನ್ನೂ ಒಳಗೆ ಬಿಡಕೂಡದೆಂದು ಆ ಹುಡುಗನಿಗೆ ಕಟ್ಟಪ್ಪನೆ ಮಾಡಿ ಸ್ನಾನಕ್ಕೆ ಹೋದಳು. ಇತ್ತ ದೇಶ ಸಂಚಾರಕ್ಕೆ ಹೋದ ಶಿವ ಆ ಹುಡುಗನ ತಲೆಯನ್ನೇ ಕತ್ತರಿಸಿದ. ತನ್ನ ಮಗನಿಗಾದ ಗತಿಗೆ ಪಾರ್ವತಿ ಸಂಕಟಪಟ್ಟಳು. ಅತ್ತಳು, ಕರೆದಳು ಶಿವನಿಗೆ ಕರುಣೆ ಬಂದು ಅವಳನ್ನು ಸಮಾಧಾನಪಡಿಸಲು ಹುಡುಗನ ತಲೆ ಬರಿಸುವುದಾಗಿ ಭರವಸೆ ಕೊಡುತ್ತಾನೆ. ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದವರ ತಲೆ ಕತ್ತರಿಸಿ ತನ್ನಿ ಎಂದು ತನ್ನ ಸೇವಕರಿಗೆ ಶಿವ ಆಜ್ಞಾಪಿಸುತ್ತಾನೆ. ಆನೆಯ ಮರಿಯ ತಲೆಯನ್ನೇ ಕಡಿದು ತಂದು ಸೇವಕರು ಶಿವನಿಗೆ ಒಪ್ಪಿಸಿದರು. ಶಿವ ಹುಡುಗನ ಮುಂಡಕ್ಕೆ ರುಂಡವನ್ನು ಕಸಿ ಮಾಡಿ ಜೀವ ತುಂಬಿದ. ಆನೆಯ ತಲೆಯನ್ನು ಧರಿಸಿದ ದೇವತೆಯೇ ಗಜವದನಾದ.
ಏಕದಂತ:
ಭೋಜನ ಪ್ರಿಯನಾದ ಗಣೇಶ ಒಂದು ದಿನ ಭಕ್ತರ ಮನೆ ಮನೆಗೆ ತಿರುಗಾಡಿ ರುಚಿರುಚಿಯಾದ ಕಡಬು, ಕರಿಗಡಬು, ಕಾಯಿಗಡಬು, ಉದ್ದಿನಕಡಬು ಮೊದಲಾದವನ್ನು ಹೊಟ್ಟೆಬಿಗಿಯುವವರೆಗೆ ಸೇವಿಸಿ, ಇಲಿಯ ಮೇಲೆ ಹತ್ತಿ ನಡೆದಿದ್ದನಂತೆ. ಈತನ ಭಾರ ತಾಳದೆ ಮೂಷಿಕ ಕಲ್ಲಿಗೆ ಎಡವಿ ಬಿದ್ದಿತು. ಗಣೇಶ ಕೆಳಗೆ ಬಿದ್ದ ಹೊಟ್ಟೆ ಹರಿದು ತಿಂದ ತಿಂಡಿಯೆಲ್ಲ ನದಿಯ ಪಾಲಾಯಿತು. ಯಾರಾದರೂ ನೋಡಿಯಾರೆಂದು ಅತ್ತ ಇತ್ತ ನೋಡುತ್ತ, ಬಿದ್ದುದನ್ನು ಮತ್ತೆ ಹೊಟ್ಟೆಯಲ್ಲಿ ಹಾಕಿಕೊಂಡು, ಅಲ್ಲಿಯೇ ಹರಿದು ಹೋಗುತ್ತಿದ್ದ ಹಾವನ್ನು ಹೊಟ್ಟೆಗೆ ಗಟ್ಟಿಯಾಗಿ ಕಟ್ಟಿಕೊಂಡನಂತೆ. ಇವನ ಈ ನಗೆಪಾಟಲು ದೃಶ್ಯವನ್ನು ಕಂಡು ಆಕಾಶದಲ್ಲಿ ಚಂದ್ರ ಗಹಗಹಿಸಿ ನಕ್ಕ. ಬಿದ್ದವನ ಬಗ್ಗೆ ಕನಿಕರ ಪಡದೇ ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು. ಗಣೇಶನಿಗೆ ಅಸಹ್ಯವೆನಿಸಿ, ಕೋಪವುಂಟಾಗಿ ಪ್ರತಿ ಭಾದ್ರಪದ ಚೌತಿಯ ದಿನ ನನ್ನನ್ನು ನೋಡದೆ ಯಾರೂ ನಿನ್ನನ್ನು ನೋಡಬಾರದು ಹಾಗೇನಾದರೂ ತಪ್ಪಿ ನಿನ್ನನ್ನು ಮೊದಲು ನೋಡಿದರೆ ಅವರ ಮೇಲೆ ಆಪಾದನೆ ಬರಲಿ ಎಂದು ಚಂದ್ರನಿಗೆ ಶಾಪವನ್ನಿತ್ತ. ತನ್ನನ್ನು ನೋಡಿ ನೋಯಿಸಿ ಗೇಲಿ ಮಾಡಿದ ಚಂದ್ರನಿಗೆ ತನ್ನ ಒಂದು ದಂತವನ್ನು ಸಿಟ್ಟಿನ ಭರದಲ್ಲಿ ಎಸೆದನಂತೆ. ಆಗಿನಿಂದ ಏಕದಂತನಾದ.
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಮನೆ ನಂ. ಎಸ್.135, ಸೆಕ್ಟರ್ ನಂ.63,ನವನಗರ,ಬಾಗಲಕೋಟ.-587103.ಮೊ.9845500890

Sunday 1 September 2013

ಕವಿತೆ : ವಯಸ್ಸು ಮತ್ತು ಏಕಾಂತ-ಡಾ.ಖಾಡೆ



                                     ವಯಸ್ಸು ಮತ್ತು ಏಕಾಂತ
                                                           ಡಾ.ಪ್ರಕಾಶ  ಗ.ಖಾಡೆ
ಅವಳಿಗೆ ಒಂದೇ ಕಡೆ
ನಿಲ್ಲಲಾಗಲಿಲ್ಲ
ಹಾಗೆ ನಿಂತುಕೊಳ್ಳುವುದು ಅಂದರೆ
ಅವಳಿಗೆ ನಿಜವಾಗಿಯೂ ನಿಂತಂತೆ
ಅನಿಸಲಿಲ್ಲ.

ಕುಡಿತದ ಅಪ್ಪ ಆಸ್ಪತ್ರೆ ಸೇರಿದ್ದು
ನೋಡಿಕೊಳ್ಳಲು ಅವ್ವ 
ಅಲ್ಲೇ ಉಳಿದದ್ದು 
ಮನೆಯಲ್ಲಿ ಅವಳೊಬ್ಬಳೆ
ಗಾಳಿಯಲ್ಲಿ ತೇಲಿಹೋದ
ಅನುಭವದಂತಾಗಿತ್ತು.

ಸುಮ್ಮನೆ ಕೂಡಲಾಗಲಿಲ್ಲ
ಒಂದೆರಡು ಬಾರಿ ಕನ್ನಡಿಯ ಬಳಿ
ಹೋಗಿ ಬಂದಳು
ತನ್ನ ಕಣ್ಣ ಮೂಗಿನ ಸೊಗಸಿಗೆ
ತಾನೇ ಮೋಹಿತಳಾದಳು

ಕನ್ನಡಿಯ ಬಳಿ
ಹೋಗಿ ಬರುವುದು  
ಮಾಡುವುದಕ್ಕಿಂತ ಕನ್ನಡಿಯನ್ನೇ
ಕಿತ್ತು ತಂದಳು 

ಬಹಳ ಹೊತ್ತಿನವರೆಗೆ
ಮುಖದ ಮುಂದೆ ಹಿಡಿದಳು
ನೋಡ ನೋಡುತ್ತ 
ಅರಮನೆ ಕಟ್ಟಿದಳು
ಯುವರಾಜನೊಂದಿಗೆ ರಾಣಿಯಾದಳು
ಮಲಗಿದಳು ,ಮಕ್ಕಳಾದವು
ಬಣ್ಣದ ಕಾರು ತರಿಸಿದಳು
ಗಂಡ ಮಕ್ಕಳೊಂದಿಗೆ
ಕುಳಿತು ಹೊರಟಳು

ಹೀಗೆ ದೇಶ ದೇಶ ಸುತ್ತಿ
ಬರುತ್ತಿರಬೇಕಾದರೆ
ಕುಡಿದು ತೂರಾಡುತ್ತ ಅಪ್ಪ
ಎದುರಿಗೆ ಬಂದ.

ಗಕ್ಕನೆ ಗಾಡಿ ನಿಲ್ಲಿಸಿದಳು
ಕನಸುಗಳ ಮುರಿದು.

===================================================================
ವಿಳಾಸ ;ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.9845500890