Monday 9 September 2013

ಗಣೇಶ ಎಲ್ಲ ದೇವತೆಗಳಿಗೂ ಒಡೆಯ..-ಡಾ.ಖಾಡೆ


ಗಣೇಶ ಹಬ್ಬ (9.9.2013) ಲೇಖನ..
                         ಗಣೇಶ ಎಲ್ಲ ದೇವತೆಗಳಿಗೂ ಒಡೆಯ 

                                                              -  ಡಾ.ಪ್ರಕಾಶ ಗ.ಖಾಡೆ
     ಗಣಪತಿಯು ವಿದ್ಯೆ, ಬುದ್ಧಿ ಮತ್ತು ವಿವೇಕಗಳ ದೇವತೆ. ಭಾರತದ ತುಂಬೆಲ್ಲ ಗಣಪತಿಯನ್ನು ಪೂಜಿಸುತ್ತಾರೆ. ಗಣೇಶನ ಆರಾಧನೆ ಕಾಲಾತೀತ, ದೇಶಾತೀತ. ವಸಾಹತುಶಾಹಿಯ ವಿರುದ್ಧ ಸಾಂಸ್ಕøತಿಕ ಜಾಗೃತಿ ಮೂಡಿಸುವ ಆಚರಣೆಯ ಮೂಲಕ ಗಣೇಶ ಉತ್ಸವವು ಸಾರ್ವಜನಿಕ ಹಬ್ಬವಾಗಿ ಚಾಲನೆಯಲ್ಲಿ ಬಂದಿತು. . ನೆರೆಯ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಸಾರ್ವಜನಿಕವಾಗಿ ಆರಂಭವಾಯಿತು. ಗಣೇಶ ಇಂದು ವಿಶ್ವ ಮಾನ್ಯ ದೇವತೆ.ನಮ್ಮ ದೇಶದಲ್ಲಷ್ಟೇ ಅಲ್ಲದೆ ಚೀನಾ, ಜಪಾನ್, ಮಲೇಶೀಯಾ, ಜಾವಾ, ಟಿಬೇಟ್ ಮೊದಲಾದ ರಾಷ್ಟ್ರಗಳಲ್ಲಿಯೂ ಗಣೇಶನಿಗೆ ಅಗ್ರ ಸ್ಥಾನಿತ್ತೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಬೌದ್ಧ ಧರ್ಮದ ಚಾರಿತ್ರಿಕ ಸ್ಥೂಪಗಳಲ್ಲಿ ವಿನಾಯಕನ ಚಿಹ್ನೆಗಳಿರುವ ನಿದರ್ಶನಗಳಿರುವುದು ಬಾಂಗ್ಲಾದಲ್ಲಿವೆ. ಗಾಂಧಾರ, ಮಧುರ, ಅಮರಾವತಿ, ಸಾರಾನಾಥ, ಟಿಬೆಟ್ ಮೊದಲಾದೆಡೆಗಳಲ್ಲಿಯೂ ಈ ದೇವತೆಯ ಕಲಾಕೃತಿಗಳನ್ನು ಕಾಣುತ್ತೇವೆ. ಬಾದಾಮಿಯ ಚಾಲುಕ್ಯರ ಕಾಲದ ವಾತಾಪಿ ಭಜೆ ಉಕ್ತಿ ಕರ್ನಾಟಕ ಸಂಗೀತದ ಆದ್ಯವೆನಿಸಿದೆ. 11ನೇ ಶತಮಾನದಲ್ಲಿ ಗುಜರಾತ್‍ನಲ್ಲಿದ್ದ ಗಣೇಶ ವಿಗ್ರಹ ಈಗ ಲಂಡನ್ನಿನ ವಿಕ್ಟೋರಿಯಾ ಆಂಡ್ ಅಲ್ಬರ್ಟ್ ವಸ್ತು ಸಂಗ್ರಹಾಲಯದಲ್ಲಿದೆ. ಭರ್ಮಾ, ಥೈಲ್ಯಾಂಡ, ಮಲೇಶಿಯಾ, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯಾ ಮೊದಲಾದ ಆಗ್ನೇಯ ಏಷಿಯಾಗಳಲ್ಲಿಯೂ ಗಣೇಶನ ಆರಾಧನೆಯ ಸಂಕೇತಗಳಾಗಿ ಕೆಲವು ಕಲಾಕೃತಿಗಳನ್ನು ಕಾಣುತ್ತೇವೆ. ಜಪಾನಿನಲ್ಲಿ ಸಾಹಿತ್ಯ, ಚಿತ್ರ, ಶಿಲ್ಪಕಲಾಕ್ಷೇತ್ರಗಳಲ್ಲಿಯೂ ಭಾರತೀಯ ಶೈಲಿಯ ಗಣೇಶನ ಬಿಂಬಗಳಿವೆ. ಒಟ್ಟಾರೆ ವಿಶ್ವ ಸಂಸ್ಕøತಿಯೊಳಗೆ ಗಣೇಶನ ಆರಾಧನೆ ಹಾಸುಹೊಕ್ಕಾಗಿರುವುದು ಹಿರಿಮೆಯ ಸಂಕೇತವಾಗಿದೆ. ವೇದಗಳಲ್ಲಿಯೂ ಗಣಪತಿ ಪೂಜೆಯ ನಿರೂಪಣೆ ಇದೆ. ಉಪನಿಷತ್ತುಗಳ ಕಾಲದಲ್ಲಿಯೂ ಗಣಪತಿ ಪೂಜೆ ಹೆಚ್ಚು ಮಹತ್ವ ಪಡೆಯಿತು. ಈಚೆಗೆ ತಿಲಕರ ಕಾಲದಲ್ಲಿ ಈ ಪೂಜೆಗೆ ರಾಷ್ಟ್ರೀಯ ಸ್ವರೂಪ ಬಂದಿತು. ಜನಪದರಂತೂ ತಮ್ಮ ಕಾವ್ಯ, ಆಟ, ಬಯಲಾಟಗಳಲ್ಲಿ ಮೊದಲಿಗೆ ಗಣಪತಿಯನ್ನು ನೆನೆಯುತ್ತಾರೆ.

  ಗಣೇಶ ಎಲ್ಲ ದೇವತೆಗಳಿಗೂ ಒಡೆಯ. ಅಗ್ರ ದೇವತೆ. ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ದೇವತಾಕಾರ್ಯ ಮೊದಲಾದ ಜೀವನದ ಪ್ರತಿಯೊಂದು ಶುಭ ಕಾರ್ಯಗಳಲ್ಲಿಯೂ ನಿರ್ವಿಘ್ನತೆಯ ಸಿದ್ಧಿಗಾಗಿ ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಗಣಪತಿಗಿರುವ ಒಂದೊಂದು ಹೆಸರೂ ಒಂದೊಂದು ಗುಣಲಕ್ಷಣ ಸೂಚಿಸುತ್ತದೆ. ಸುಮುಖ, ಪಂಚಾಸ್ಯ, ಗಜಾಸ್ಯ, ಧೀರ, ವೀರ, ಕಂದರ್ಪ, ಶಕ್ತಿ, ಆಮೋದ, ಪ್ರಮಥ, ರುದ್ರ, ವಿದ್ಯಾ, ವಿಘ್ನಹರ, ದುರಿತಹರ, ಭಕ್ತವತ್ಸಲ, ಕಾವಿತಾರ್ಥ, ಸಮೋಹನ ಹೀಗೆ ನಾನಾ ದೇವತೆಯ ಅವತಾರ ಕಲ್ಪನೆಗಳು, ಮಂತ್ರಗಳು, ಮಂತ್ರ ಶಾಸ್ತ್ರದಲ್ಲಿ ಹಾಗೂ ಗಣೇಶ ಪುರಾಣಗಳಲ್ಲಿ ವಿಫುಲವಾಗಿ ಸಿಕ್ಕುತ್ತವೆ.
   ಆರ್ಯರು ತಮ್ಮ ವೈದಿಕ ದೇವತೆಗಳ ಗುಣಗಳನ್ನು ,ದ್ರಾವಿಡರು ಶಿವಾಚಾರದ ಸೂಚನೆಗಳನ್ನು ಈ ಮಾಸನ ಪುತ್ರನಲ್ಲಿ ಸೇರಿಸಿ ಓಂಕಾರ ಸ್ವರೂಪಿಯನ್ನಾಗಿ ಮಾಡಿ ಎಲ್ಲ ಮಂಗಲ ಕಾರ್ಯಗಳ ಆರಂಭ ಪೂಜೆಯನ್ನು ಸಲ್ಲಿಸುವ ಗೌರವವನ್ನು ಗಣಪತಿಗೆ ಕೊಟ್ಟರು. ಮುಂದೆ ಆರ್ಯ ದ್ರಾವಿಡರ ಸಂಯೋಗವಾಗಲು ಅವರ ಸಂಸ್ಕøತಿಯು ಒಂದಾಗಿ ಈ ಭಾರತದ ಸಂಸ್ಕøತಿಯೆಂದು ಉಳಿದಿದೆ.
            ವಿದ್ಯಾಲಾಭ, ಧನಲಾಭ, ಸಕಲ ಇಷ್ಟಾರ್ಥ ಲಾಭಗಳು ಗಣಪತಿಯನ್ನು ಪೂಜಿಸುವುದರಿಂದ ದೊರೆಯುತ್ತವೆ ಎಂಬ ನಂಬುಗೆ ಜನಪದರಲ್ಲಿದೆ. ನಿರ್ವಿಘ್ನತೆಗೆ ಸಂಕೇತವಾಗಿ ಜನಪದರು ರೂಪಿಸಿಕೊಂಡ ದೈವ ಗಣೇಶ. ಹಿಡಿಗಾತ್ರದ ತೊಪ್ಪೆ ಸಗಣೆ ಉಂಡಿ ಮಾಡಿ ಅದರ ನೆತ್ತಿಯ ಮೇಲೆ ನಾಲ್ಕಾರು ಗರಿಕೆಗಳನ್ನು ಸಿಕ್ಕಿಸುತ್ತಾರೆ. ಅದೇ ಗಣೇಶ. ಅದನ್ನು ಜನಪದರು ಪಿಳ್ಳಪ್ಪ ಗೊಂಬೇವರು, ಬೆನಕ ಮುಂತಾದ ಹೆಸರುಗಳಿಂದ ಸಂಭೋಧಿಸುತ್ತಾರೆ. ಪ್ರತಿಯೊಂದು ಶುಭ ಕಾರ್ಯದ ಪ್ರಾರಂಭದಲ್ಲಿಯೂ ಈ ಪಿಳ್ಳಪ್ಪನನ್ನು ಮಾಡಿ ಮೊದಲು ಪೂಜೆ ಸಲ್ಲಿಸಿ ಮುಂದಿನ ಕಾರ್ಯಗಳಲ್ಲಿ ತೊಡಗುತ್ತಾರೆ. ಬೇಸಾಯದ ಸಂದರ್ಭಗಳಲ್ಲಿಯೂ ಇದರ ಬಳಕೆಯಿದೆ. ಕಣದ ನಡುವೆ ನೆಟ್ಟ ಮೇಟಿಯ ನೆತ್ತಿಯ ಮೇಲೆ ಇಟ್ಟ ಪಿಳ್ಳಪ್ಪ ಕಣದ ಕೆಲಸಗಳೆಲ್ಲ ಮುಗಿಯುವವರೆಗೂ ಇರುತ್ತದೆ.
          ಗಣೇಶನ ಮೂರ್ತಿ ಕಲ್ಪನೆಯು ಬಹಳ ವಿಶಿಷ್ಟ ಮತ್ತು ವಿಶೇಷವಾದುದಾಗಿದೆ.ಮಾನವ ದೇಹ ಆನೆಯ ಗಾತ್ರ ,ಆನೆಯ ಮುಖ ,ಸೊಂಡಿಲು,ಒಂದು ಮುರಿದ ಕೋರೆ,ಡೊಳ್ಲು ಹೊಟ್ಟೆ,ಹೊಟ್ಟೆಗೆ ಬಿಗಿದು ಕಟ್ಟಿದ ಹಾವು,ಓರೆ ನೋಟ, ಚಿಕ್ಕ ಚಿಕ್ಕ ಕಾಲುಗಳು,ನಾಲ್ಕು ಕೈಗಳು,ಮೂಷಿಕ ವಾಹನ ಇದು ಗಣೇಶನ ಮೂರ್ತಯ ಕಲ್ಪನೆ.ವಿಘ್ನ ವಿನಾಶಕ ಮಂಗಲ ಮೂರ್ತಿ ,ವಿದ್ಯಾ ದೇವತೆ ,ಸಾಹಿತ್ಯ ಸಂಗೀತ, ನೃತ್ಯ,ಭಾಷಣಗಳ ಪ್ರೇಮಿ ಎಂಬ ನಂಬಿಕೆ ಈ ದೇವತೆ ಮೇಲಿದೆ. ನವರಸಗಳಲ್ಲೊಂದಾದ ಹಾಸ್ಯಕ್ಕೆ ಗಣಪತಿಯು ಅಧಿಪತಿ. ಹಾಸ್ಯವನ್ನು ಬಿಳಿಬಣ್ಣಕ್ಕೆ ಹೋಲಿಸಲಾಗಿದೆ. ಕಟಕಿಯಿಲ್ಲದೆ ನಗೆ ಶುಭ್ರವಾಗಿ ಹಸನಾಗಿರುತ್ತದೆ. ಗಣೇಶನಿಗೆ ಪ್ರಿಯವಾದ ಬಣ್ಣ ಶ್ವೇತ. ಹಾಸ್ಯದ ಆತ್ಮಸ್ಥ, ಪರಸ್ಥ ಎಂಬ ಎರಡು ಬೇಧಗಳಲ್ಲಿ ಆತ್ಮಸ್ಥ ಹಾಸ್ಯವು ಗಣಪತಿಯದು ಎಂದರೆ ತನ್ನನ್ನೇ ನಗುವಿನ ವಸ್ತುವನ್ನಾಗಿಸಿಕೊಳ್ಳುವ ಔದಾರ್ಯ ಹೊಂದಿದ ವಿಶಾಲದೃಷ್ಟಿಯ ಸರಸ ಹಾಸ್ಯ ಈ ದೇವತೆಯದು.
   ಜನಪದ ಕಾವ್ಯ ಮತ್ತು ಪುರಾಣ ಕಥೆಗಳಲ್ಲಿ ಗಣಪತಿಗೆ ಸಂಬಂಧ ಪಟ್ಟ ಅನೇಕ ಕಥೆಗಳು, ದಂತಕಥೆಗಳಿವೆ. ಗಣೇಶನ ಜನನ, ತುಂಟತನ, ಬುದ್ಧಿಚಾತುರ್ಯ ಇತ್ಯಾದಿ ಕುರಿತ ಕಥೆಗಳು ಪ್ರಚಲಿತದಲ್ಲಿವೆ.
ಗಜವದನ:
   ಒಮ್ಮೆ ಪಾರ್ವತಿ ಸ್ನಾನದ ಮನೆಗೆ ಹೋದಾಗ ಯಾರಾದರೂ ಒಳನುಗ್ಗಿದರೆ ಗತಿಯೇನೆಂದು ಒಳನುಗ್ಗದಂತೆ ತನ್ನ ಮೈ ತಿಕ್ಕಿ ಅದರಿಂದ ಉಂಟಾದ ಮಣ್ಣಿನ ಕೊಳೆಯಿಂದ ಬಾಲಕನ ಮೂರ್ತಿ ಮಾಡಿ ಅದಕ್ಕೆ ಜೀವ ತುಂಬಿ ಕವಲು ನಿಲ್ಲಿಸಿದಳು. ಯಾರನ್ನೂ ಒಳಗೆ ಬಿಡಕೂಡದೆಂದು ಆ ಹುಡುಗನಿಗೆ ಕಟ್ಟಪ್ಪನೆ ಮಾಡಿ ಸ್ನಾನಕ್ಕೆ ಹೋದಳು. ಇತ್ತ ದೇಶ ಸಂಚಾರಕ್ಕೆ ಹೋದ ಶಿವ ಆ ಹುಡುಗನ ತಲೆಯನ್ನೇ ಕತ್ತರಿಸಿದ. ತನ್ನ ಮಗನಿಗಾದ ಗತಿಗೆ ಪಾರ್ವತಿ ಸಂಕಟಪಟ್ಟಳು. ಅತ್ತಳು, ಕರೆದಳು ಶಿವನಿಗೆ ಕರುಣೆ ಬಂದು ಅವಳನ್ನು ಸಮಾಧಾನಪಡಿಸಲು ಹುಡುಗನ ತಲೆ ಬರಿಸುವುದಾಗಿ ಭರವಸೆ ಕೊಡುತ್ತಾನೆ. ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದವರ ತಲೆ ಕತ್ತರಿಸಿ ತನ್ನಿ ಎಂದು ತನ್ನ ಸೇವಕರಿಗೆ ಶಿವ ಆಜ್ಞಾಪಿಸುತ್ತಾನೆ. ಆನೆಯ ಮರಿಯ ತಲೆಯನ್ನೇ ಕಡಿದು ತಂದು ಸೇವಕರು ಶಿವನಿಗೆ ಒಪ್ಪಿಸಿದರು. ಶಿವ ಹುಡುಗನ ಮುಂಡಕ್ಕೆ ರುಂಡವನ್ನು ಕಸಿ ಮಾಡಿ ಜೀವ ತುಂಬಿದ. ಆನೆಯ ತಲೆಯನ್ನು ಧರಿಸಿದ ದೇವತೆಯೇ ಗಜವದನಾದ.
ಏಕದಂತ:
ಭೋಜನ ಪ್ರಿಯನಾದ ಗಣೇಶ ಒಂದು ದಿನ ಭಕ್ತರ ಮನೆ ಮನೆಗೆ ತಿರುಗಾಡಿ ರುಚಿರುಚಿಯಾದ ಕಡಬು, ಕರಿಗಡಬು, ಕಾಯಿಗಡಬು, ಉದ್ದಿನಕಡಬು ಮೊದಲಾದವನ್ನು ಹೊಟ್ಟೆಬಿಗಿಯುವವರೆಗೆ ಸೇವಿಸಿ, ಇಲಿಯ ಮೇಲೆ ಹತ್ತಿ ನಡೆದಿದ್ದನಂತೆ. ಈತನ ಭಾರ ತಾಳದೆ ಮೂಷಿಕ ಕಲ್ಲಿಗೆ ಎಡವಿ ಬಿದ್ದಿತು. ಗಣೇಶ ಕೆಳಗೆ ಬಿದ್ದ ಹೊಟ್ಟೆ ಹರಿದು ತಿಂದ ತಿಂಡಿಯೆಲ್ಲ ನದಿಯ ಪಾಲಾಯಿತು. ಯಾರಾದರೂ ನೋಡಿಯಾರೆಂದು ಅತ್ತ ಇತ್ತ ನೋಡುತ್ತ, ಬಿದ್ದುದನ್ನು ಮತ್ತೆ ಹೊಟ್ಟೆಯಲ್ಲಿ ಹಾಕಿಕೊಂಡು, ಅಲ್ಲಿಯೇ ಹರಿದು ಹೋಗುತ್ತಿದ್ದ ಹಾವನ್ನು ಹೊಟ್ಟೆಗೆ ಗಟ್ಟಿಯಾಗಿ ಕಟ್ಟಿಕೊಂಡನಂತೆ. ಇವನ ಈ ನಗೆಪಾಟಲು ದೃಶ್ಯವನ್ನು ಕಂಡು ಆಕಾಶದಲ್ಲಿ ಚಂದ್ರ ಗಹಗಹಿಸಿ ನಕ್ಕ. ಬಿದ್ದವನ ಬಗ್ಗೆ ಕನಿಕರ ಪಡದೇ ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು. ಗಣೇಶನಿಗೆ ಅಸಹ್ಯವೆನಿಸಿ, ಕೋಪವುಂಟಾಗಿ ಪ್ರತಿ ಭಾದ್ರಪದ ಚೌತಿಯ ದಿನ ನನ್ನನ್ನು ನೋಡದೆ ಯಾರೂ ನಿನ್ನನ್ನು ನೋಡಬಾರದು ಹಾಗೇನಾದರೂ ತಪ್ಪಿ ನಿನ್ನನ್ನು ಮೊದಲು ನೋಡಿದರೆ ಅವರ ಮೇಲೆ ಆಪಾದನೆ ಬರಲಿ ಎಂದು ಚಂದ್ರನಿಗೆ ಶಾಪವನ್ನಿತ್ತ. ತನ್ನನ್ನು ನೋಡಿ ನೋಯಿಸಿ ಗೇಲಿ ಮಾಡಿದ ಚಂದ್ರನಿಗೆ ತನ್ನ ಒಂದು ದಂತವನ್ನು ಸಿಟ್ಟಿನ ಭರದಲ್ಲಿ ಎಸೆದನಂತೆ. ಆಗಿನಿಂದ ಏಕದಂತನಾದ.
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಮನೆ ನಂ. ಎಸ್.135, ಸೆಕ್ಟರ್ ನಂ.63,ನವನಗರ,ಬಾಗಲಕೋಟ.-587103.ಮೊ.9845500890

5 comments: