Sunday 1 September 2013

ಕವಿತೆ : ವಯಸ್ಸು ಮತ್ತು ಏಕಾಂತ-ಡಾ.ಖಾಡೆ



                                     ವಯಸ್ಸು ಮತ್ತು ಏಕಾಂತ
                                                           ಡಾ.ಪ್ರಕಾಶ  ಗ.ಖಾಡೆ
ಅವಳಿಗೆ ಒಂದೇ ಕಡೆ
ನಿಲ್ಲಲಾಗಲಿಲ್ಲ
ಹಾಗೆ ನಿಂತುಕೊಳ್ಳುವುದು ಅಂದರೆ
ಅವಳಿಗೆ ನಿಜವಾಗಿಯೂ ನಿಂತಂತೆ
ಅನಿಸಲಿಲ್ಲ.

ಕುಡಿತದ ಅಪ್ಪ ಆಸ್ಪತ್ರೆ ಸೇರಿದ್ದು
ನೋಡಿಕೊಳ್ಳಲು ಅವ್ವ 
ಅಲ್ಲೇ ಉಳಿದದ್ದು 
ಮನೆಯಲ್ಲಿ ಅವಳೊಬ್ಬಳೆ
ಗಾಳಿಯಲ್ಲಿ ತೇಲಿಹೋದ
ಅನುಭವದಂತಾಗಿತ್ತು.

ಸುಮ್ಮನೆ ಕೂಡಲಾಗಲಿಲ್ಲ
ಒಂದೆರಡು ಬಾರಿ ಕನ್ನಡಿಯ ಬಳಿ
ಹೋಗಿ ಬಂದಳು
ತನ್ನ ಕಣ್ಣ ಮೂಗಿನ ಸೊಗಸಿಗೆ
ತಾನೇ ಮೋಹಿತಳಾದಳು

ಕನ್ನಡಿಯ ಬಳಿ
ಹೋಗಿ ಬರುವುದು  
ಮಾಡುವುದಕ್ಕಿಂತ ಕನ್ನಡಿಯನ್ನೇ
ಕಿತ್ತು ತಂದಳು 

ಬಹಳ ಹೊತ್ತಿನವರೆಗೆ
ಮುಖದ ಮುಂದೆ ಹಿಡಿದಳು
ನೋಡ ನೋಡುತ್ತ 
ಅರಮನೆ ಕಟ್ಟಿದಳು
ಯುವರಾಜನೊಂದಿಗೆ ರಾಣಿಯಾದಳು
ಮಲಗಿದಳು ,ಮಕ್ಕಳಾದವು
ಬಣ್ಣದ ಕಾರು ತರಿಸಿದಳು
ಗಂಡ ಮಕ್ಕಳೊಂದಿಗೆ
ಕುಳಿತು ಹೊರಟಳು

ಹೀಗೆ ದೇಶ ದೇಶ ಸುತ್ತಿ
ಬರುತ್ತಿರಬೇಕಾದರೆ
ಕುಡಿದು ತೂರಾಡುತ್ತ ಅಪ್ಪ
ಎದುರಿಗೆ ಬಂದ.

ಗಕ್ಕನೆ ಗಾಡಿ ನಿಲ್ಲಿಸಿದಳು
ಕನಸುಗಳ ಮುರಿದು.

===================================================================
ವಿಳಾಸ ;ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.9845500890

No comments:

Post a Comment