Wednesday 24 April 2013

ಪ್ರತಿಕ್ರಿಯೆ-ಶ್ರೀ ಗೋಪಾಲ ವಾಜಪೇಯಿ


  

ಡಾ.ರಾಜ್,ಧುತ್ತರಗಿ ಮತ್ತು ಸಂಪತ್ತಿಗೆ ಸವಾಲ್-
ಲೇಖನಕ್ಕೆ ಶ್ರೀ ಗೋಪಾಲ ವಾಜಪೇಯಿ ಅವರ ಆಪ್ತ ಪ್ರತಿಕ್ರಿಯೆ-
ಅವಧಿಯಲ್ಲಿ-24.04.2013
ಕನ್ನಡದ ಹೆಸರಾಂತ ನಾಟಕಕಾರರಾದ ಪಿ.ಬಿ.ಧುತ್ತರಗಿಯವರು ಅತ್ಯಂತ ಸರಳ ಸ್ವಭಾವದ ಸ್ನೇಹಶೀಲ ವ್ಯಕ್ತಿ. 1987-90ರ ಅವಧಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿದ್ದ ಅವರೊಂದಿಗೆ ನಾನೂ ಒಬ್ಬ ಕಿರಿವಯದ ಸದಸ್ಯ. ಅವರ ನಾಟಕಗಳನ್ನು ವೃತ್ತಿರಂಗಭೂಮಿಯ ಮೇಲೆ ನೋಡಿ ಪ್ರಭಾವಿತನಾಗಿದ್ದ ನಾನು ಆ ಮೂರು ವರ್ಷಗಳಲ್ಲಿ ಅವರಿಗಿದ್ದ ಸಾಮಾಜಿಕ ಕಳಕಳಿಯ ಅರಿವು ಮಾಡಿಕೊಂಡೆ.
ಅಕಾಡೆಮಿಯ ಮೀಟಿಂಗುಗಳಲ್ಲಿ ಅವರಿದ್ದರೆ ತಿಳಿಹಾಸ್ಯಕ್ಕೇನೂ ಕೊರತೆಯಿರುತ್ತಿರಲಿಲ್ಲ. ಒಂದು ಕಡೆ ಅವರು, ಮತ್ತೊಂದು ಕಡೆ ಯೋಗಣ್ಣ, ಇನ್ನೊಂದು ಕಡೆ ಪರ್ವತವಾಣಿ. ಮಜವಾಗಿರುತ್ತಿತ್ತು ಆ ಹಿರಿಯರೆಲ್ಲರ ಸಾಂಗತ್ಯ.
ನಾವು ಅಕಾಡೆಮಿಯಿಂದ ಬಾಗಲಕೋಟೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ನಾಟಕೋತ್ಸವವನ್ನು ಏರ್ಪಡಿಸಿದಾಗ ಧುತ್ತರಿಗಿಯವರು ಆ ಎಲ್ಲ ದಿನಗಳೂ ನಮ್ಮೊಂದಿಗಿದ್ದರು. ಹುಬ್ಬಳ್ಳಿಯಲ್ಲಿ ರಂಗತಂತ್ರಗಳ ತರಬೇತಿ ಶಿಬಿರ ‘ನೇಪಥ್ಯ ಶಿಲ್ಪ’ವನ್ನು ಹಮ್ಮಿಕೊಂಡಾಗ ಬಂದು ನೋಡಿ ಸಲಹೆ ಸೂಚನೆಗಳನ್ನು ಕೊಟ್ಟಿದ್ದರು. ಬೆಂಗಳೂರಿಗೆ ಕಾರ್ಯನಿಮಿತ್ತ ಬಂದರೆ ಅವರು ಉಳಿಯುತ್ತಿದ್ದದ್ದು ಚಿಕ್ಕಪೇಟೆ ರಸ್ತೆಯ ಒಂದು ವಸತಿಗೃಹದಲ್ಲಿ. ಅಲ್ಲಿದ್ದುಕೊಂಡೇ ರಾಜ್ ಅವರ ಮನೆಗೆ ಹೋಗಿ ಕಥೆ ಹೇಳಿ ಬಂದ ಒಂದೆರಡು ಸಂದರ್ಭಗಳಲ್ಲಿ ನಾನು ಅವರೊಂದಿಗೆ ಊಟ ಮಾಡಿದ್ದಿದೆ.
ನಾನು ‘ನಾಗಮಂಡಲ’ ನಾಟಕ ಪ್ರಯೋಗಕ್ಕೆ ಬರೆದ ಹಾಡುಗಳ ಬಗ್ಗೆ ಅವರು ತುಂಬ ಸಂತಸ ವ್ಯಕ್ತಪಡಿಸಿದ್ದರು. ಮುಂದೆ ಅವು ಕ್ಯಾಸೆಟ್ ರೂಪದಲ್ಲಿ ಬಂದಾಗ ನಮ್ಮ ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ಒಂದು ಕ್ಯಾಸೆಟ್ಟನ್ನು ಅವರಿಗೆ ಕೊಟ್ಟರಂತೆ. ಅದರಲ್ಲಿಯ ಒಂದರೆಡು ಹಾಡುಗಳನ್ನು ಅವರ ಪತ್ನಿ ಶ್ರೀಮತಿ ಸರೋಜಮ್ಮ ಧುತ್ತರಗಿ ಮತ್ತು ಅವರ ಪುತ್ರಿ ತಮ್ಮ ನಾಟಕಗಳಲ್ಲಿ ಬಳಸಿಕೊಳ್ಳುತ್ತಿದ್ದರಂತೆ. ಆ ಕುರಿತು ಸಿ. ಅಶ್ವಥ್ ಅವರ ಅರವತ್ತರ ಸನ್ಮಾನ ಗ್ರಂಥ ‘ತಂಬೂರಿ’ಯಲ್ಲಿ ಸರೋಜಮ್ಮ ನೆನಪಿಸಿಕೊಂಡಿದ್ದಾರೆ.
ಈಗ ಆರೇಳು ವರ್ಷಗಳ ಹಿಂದೆ ಪಿ.ಬಿ.ಧುತ್ತರಗಿಯವರ ಸ್ವಾಸ್ಥ್ಯ ಬಹಳಷ್ಟು ಕೆಟ್ಟಿತು. ಅವರು ಆಸ್ಪತ್ರೆಯೊಂದರಲ್ಲಿ ನಿರಂತರ ಚಿಕಿತ್ಸೆಗೆ ಒಳಗಾಗಬೇಕಾಯಿತು. 2007 ನವೆಂಬರ್ 1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದ ನೇರ ಪ್ರಸಾರವನ್ನು ನಾನು ದೂರದ ಹೈದರಾಬಾದಿನಲ್ಲಿ ಕೂತುಕೊಂಡೇ ನೋಡುತ್ತಿದ್ದೆ. ವೇದಿಕೆಯಲ್ಲಿ ಪಾರ್ವತಮ್ಮ ರಾಜ್ ಕುಮಾರ ಅವರ ಜತೆ ಸರೋಜಮ್ಮ ಧುತ್ತರಗಿಯವರು ಕುಳಿತು ಸಂಭ್ರಮಿಸುತ್ತಿರುವ ಚಿತ್ರವನ್ನು ನಾನು ನೊಡುತ್ತಿದ ಹಾಗೆಯೇ ಕೆಳಗೆ ‘ಸ್ಕ್ರಾಲ್’ನಲ್ಲಿ ”ಕನ್ನಡದ ಖ್ಯಾತ ವೃತ್ತಿರಂಗಭೂಮಿ ನಾಟಕಕಾರ ಪಿ.ಬಿ. ಧುತ್ತರಗಿ ಇನ್ನಿಲ್ಲ” ಎಂಬ ವಾರ್ತೆ ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು.

No comments:

Post a Comment