Tuesday 23 April 2013

'ಅವಧಿ' ಯಲ್ಲಿ ಲೇಖನ :ರಾಜ್,ಧುತ್ತರಗಿ ಮತ್ತು ಸಂಪತ್ತಿಗೆ ಸವಾಲ್.


ಡಾ.ಪ್ರಕಾಶ ಗ.ಖಾಡೆ
ಡಾ.ರಾಜಕುಮಾರ ಅವರಿಗೆ ಹೆಸರು,ಕೀರ್ತಿ ಮತ್ತು ಹೊಸ ಇಮೇಜ್ ತಂದ ಚಲನಚಿತ್ರ ‘ಸಂಪತ್ತಿಗೆ ಸವಾಲು’. ಈ ‘ಸಂಪತ್ತಿಗೆ ಸವಾಲು’ ನಾಟಕ ಬರೆದವರು ಕನ್ನಡದ ಹೆಸರಾಂತ ನಾಟಕಕಾರರಾದ ಪಿ.ಬಿ.ಧುತ್ತರಗಿಯವರು. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಪಿ.ಬಿ.ಧುತ್ತರಗಿಯವರ ಊರು. ಐವತೆರಡಕ್ಕಿಂತಲೂ ಹೆಚ್ಚು ನಾಟಕಗಳನ್ನು ರಚಿಸಿ ಹೆಸರಾದವರು. ಸಂಪತ್ತಿಗೆ ಸವಾಲು ನಾಟಕವು ದುತ್ತರಗಿಯವರ ಹೆಸರು ನಾಡಿನ ಉದ್ದಗಲಕ್ಕೂ ಪಸರಿಸುವಂತೆ ಮಾಡಿ ಅವರಿಗೆ ಮಾನ ಸನ್ಮಾನ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟಿದೆ.
ಹಣವುಳ್ಳ ಶ್ರೀಮಂತರು ಬಡವರನ್ನು ಹೇಗೆ ಶೋಷಿಸುತ್ತಾರೆ ಎನ್ನುವ ವಾಸ್ತವಿಕ ಬದುಕಿನ ಚಿತ್ರಣವೇ ಈ ನಾಟಕದ ಮುಖ್ಯ ಕಥಾ ವಸ್ತು. ಗ್ರಾಮೀಣ ಪ್ರದೇಶದಲ್ಲಿ ಧನಿಕರ ಧನಮದ, ಅಧಿಕಾರದ, ಅಹಂಕಾರ, ಜಾತಿಯಪ್ರತಿಷ್ಠೆ, ದೌರ್ಜನ್ಯ, ಕ್ರೂರತನ,ಕಾಮುಕತನ,ಅನ್ಯಾಯ,ಅಧರ್ಮ,ಅನೀತಿ,ಹಿಂಸೆ,ಶೋಷಣೆ ಮೊದಲಾದವುಗಳನ್ನು ಈ ನಾಟಕದಲ್ಲಿ ಚಿತ್ರಿಸುವುದರೊಂದಿಗೆ ಇಂಥ ಸಿರಿವಂತರ ಸೊಕ್ಕು ಅಡಗಿಸುವಲ್ಲಿ ನಾಟಕದ ನಾಯಕ ತೋರುವ ದಿಟ್ಟತನ ಪ್ರೇಕ್ಷರನ್ನು ಹುಚ್ಚೆಬ್ಬಿಸುವಂತೆ ಮಾಡುತ್ತದೆ.ಸಂಪತ್ತಿಗೆ ಸವಾಲು ನಾಟಕವು ಮೊದಲು ಜಮಖಂಡಿ ತಾಲೂಕು ರಬಕವಿಯಲ್ಲಿ 1964-65 ರಲ್ಲಿ ಪ್ರಯೋಗ ವಾಯಿತು.ಅಲ್ಲಿ 60 ಪ್ರಯೋಗ ಕಂಡಿತು.
ಗೋಕಾಕದ ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ ಕಂಪನಿಯು ಹನ್ನೇರಡು ವರ್ಷಗಳ ಕಾಲ ಅತ್ಯಂತ ವೈಭವದಿಂದ ಈ ನಾಟಕವನ್ನು ನಾಡಿನಾದ್ಯಂತ ಪ್ರದರ್ಶಿಸಿತು.ಪ್ರತಿ ಊರಲ್ಲೂ ಈ ನಾಟಕ ರಜತೋತ್ಸವ,ಸುವರ್ಣ ಮಹೋತ್ಸವ,ಶತದಿನೋತ್ಸವವನ್ನೂ ಮೀರಿ ಪ್ರದರ್ಶಿತವಾಗುತ್ತಿತ್ತು. ನಾಟಕದ ನಾಯಕ ಕೃಷ್ಣಚಂದ್ರ ಬಳ್ಳಾರಿ ಮತ್ತು ನಾಯಕಿ ಅಂಬುಜಮ್ಮ ಹೊಸಮನಿ ಅವರ ಅಮೋಘ ಅಭಿನಯ ಅಂದಿನ ರಂಗಪ್ರೇಮಿಗಳ ಮನದಲ್ಲಿ ಅಚ್ಚಳಿಯದಂತೆ ಸ್ಥಿರವಾಗಿ ನೆಲೆಗೊಂಡಿತ್ತು. ಈ ನಾಟಕದ ಅಪಾರ ಜನಮನ್ನಣೆ ಅಂದಿನ ಕನ್ನಡ ಚಲನಚಿತ್ರರಂಗದ ಮೇರು ನಟ ರಾಜಕುಮಾರ ಅವರ ಗಮನ ಸೆಳೆಯಿತು.
1973 ರಲ್ಲಿ ಶಾರದಾ ಸಂಗೀತ ನಾಟಕ ಮಂಡಳಿಯು ಕನಕಪುರದಲ್ಲಿ ‘ಸಂಪತ್ತಿಗೆ ಸವಾಲು’ ನಾಟಕವನ್ನು ಆಡಲಾಗುತ್ತಿತ್ತು. ಅದರ ಜನಪ್ರಿಯತೆಯನ್ನು ಕೇಳಿದ್ದ ಡಾ.ರಾಜಕುಮಾರ ಅವರು ಕನಕಪುರಕ್ಕೆ ಬಂದು ನಾಟಕವನ್ನು ಕಣ್ತುಂಬ ನೋಡಿ ಮೆಚ್ಚಿ ಅದನ್ನು ಸಿನೇಮಾ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಈ ವಿಷಯವನ್ನು ಕಂಪನಿಯ ಮಾಲೀಕ ಬಸವರಾಜಪ್ಪನವರಿಗೆ ಮತ್ತು ನಾಟಕ ರಚನಾಕಾರ ಪಿ.ಬಿ.ಧುತ್ತರಗಿಯವರಿಗೆ ತಿಳಿಸಿ ಅವರನ್ನು ಒಪ್ಪಿಸುತ್ತಾರೆ. 1974 ರಲ್ಲಿ ಚಲನಚಿತ್ರವಾಗಿ ಅದು ಕನ್ನಡ ಸಿನಿಮಾ ಲೋಕದಲ್ಲಿ ಹೊಸ ಇತಿಹಾಸ ದಾಖಲಿಸುತ್ತದೆ. ಮುಂದೆ ತೆಲುಗು,ತಮಿಳು,ಹಾಗೂ ಹಿಂದಿ ಭಾಷೆಗಳಲ್ಲಿಯೂ ಚಿತ್ರೀಕರಣಗೊಂಡು ರಜತ ಪರದೆಯ ಮೇಲೆ ಮೆರೆಯುತ್ತದೆ.
ಡಾ.ರಾಜಕುಮಾರ ಅವರು 12.ಎಪ್ರೀಲ್ 2006 ರಲ್ಲಿ ತೀರಿಕೊಂಡಾಗ ನಾವು ಗೆಳೆಯರು ಬಾಗಲಕೋಟೆಯಲ್ಲಿ ಡಾ.ರಾಜ್ ನೆನಪಿಗೆ ಕಾವ್ಯ ನಮನ ಕಾರ್ಯಕ್ರಮವನ್ನು 16 ಎಪ್ರಿಲ್ 2006 ರಲ್ಲಿ ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮಕ್ಕೆ ರಾಜ್ ಒಡನಾಡಿಯಾಗಿದ್ದ ಪಿ.ಬಿ.ಧುತ್ತರಗಿ ಅವರನ್ನು ಕರೆಸಿಕೊಳ್ಳಲು ಯೋಚಿಸಿ ರಂಗಮಿತ್ರ ಎಸ್ಕೆ ಕೊನೆಸಾಗರ ಅವರಲ್ಲಿ ಕೋರಿದೆವು. ಆಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಧುತ್ತರಗಿಯವರು ರಾಜ ನೆನಪಿನ ಕಾರ್ಯಕ್ರಮವೆಂದಾಗ ಬಾಗಲಕೋಟೆಗೆ ಬರಲು ಒಪ್ಪಿಕೊಂಡರು. ಕೊನೆಸಾಗರ ಮತ್ತು ಗೆಳೆಯ ಬಸವರಾಜ ಗವಿಮಠರು ನಮ್ಮ ಕಾರ್ಯಕ್ರಮಕ್ಕೆ ಅತ್ಯಂತ ಜಾಗರೂಕತೆಯಿಂದ ಕರೆದುಕೊಂಡು ಬಂದರು. ಬಾಗಲಕೋಟ ಬಸವೇಶ್ವರ ಡಿ.ಇಡಿ.ಕಾಲೇಜು ಸಭಾಂಗಣದಲ್ಲಿ ಎ,ಎಸ್,ಪಾವಟೆ ಅವರ ಉಸ್ತುವಾರಿಯಲ್ಲಿ ಕಾರ್ಯಕ್ರಮ ಜರುಗಿತು. ಆ ಹೊತ್ತಿಗೆ ಧುತ್ತರಗಿಯವರು ಡಾ.ರಾಜ್ ಮತ್ತು ಸಂಪತ್ತಿಗೆ ಸವಾಲು ಸಿನಿಮಾದ ನೆನಪುಗಳನ್ನು ಹಂಚಿಕೊಂಡರು.
ವರನಟ ರಾಜಕುಮಾರ ಅವರು ಸಂಪತ್ತಿಗೆ ಸವಾಲು ಸಿನೇಮಾದಲ್ಲಿ ನಟಿಸುವ ಕಲಾವಿದರಿಗೆ ಗೋಕಾಕ ಕಂಪನಿಯ ನಾಟಕವನ್ನು ನೋಡಿಕೊಂಡು ಬಂದೆ ನಟಿಸಬೇಕೆಂದು ಆಯಾ ಪಾತ್ರಧಾರಿಗಳಿಗೆ ನಿರ್ಬಂಧವಿಧಿಸಿದ್ದರಂತೆ, ಶಾರದಾ ಮಂಡಳಿಯ ಕಲಾವಿದರ ಅಭಿನಯವೆ ಅಷ್ಟೊಂದು ಅತ್ಯದ್ಭುತವಾಗಿತ್ತು.ಅವರು ಚಿತ್ರಕಲಾವಿರು ತಮ್ಮನ್ನು ಅನುಕರಿಸುವಷ್ಟರ ಮಟ್ಟಿಗೆ ನಟನೆಯಲ್ಲಿ ನೈಪುಣ್ಯತೆ ಹೊಂದಿದ್ದರು . ಅದಕ್ಕಾಗಿಯೇ ಡಾ.ರಾಜಕುಮಾರ ಅವರು ಚಿತ್ರನಟರಿಗೆ ಈ ಮಾತನ್ನು ಹೇಳಿದ್ದು.
‘ಡಾ.ರಾಜಕುಮಾರ ಅವರಿಗೆ ರಂಗಭೂಮಿಯ ಮೇಲೆ ಅಪಾರ ಅಭಿಮಾನ,ರಂಗಭೂಮಿಯ ಕಲಾವಿದರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು. ಸಂಪತ್ತಿಗೆ ಸವಾಲು ಎಮ್ಮೆ ಹಾಡು ರಾಜಕುಮಾರ ಅವರ ವೃತ್ತಿ ಬದುಕಿನಲ್ಲಿ ಹೊಸ ತಿರುವು ಕೊಟ್ಟಿತು. ರಾಜ್ ಮರೆಯಲಾಗದ ಕಲಾವಿರಾಗಿದ್ದರು. ಎಂದರು.ಮುಂದೆ ಕೆಲವೇ ತಿಂಗಳುಗಳಲ್ಲಿ 2007 ನವೆಂಬರ್ 1 ರಂದು ಪಿ.ಬಿ.ಧುತ್ತರಗಿಯವರೂ ತೀರಿಕೊಂಡರು. ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೇ ಡಾ.ರಾಜಕುಮಾರ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ನಮ್ಮ ಕಾರ್ಯಕ್ರಮಕ್ಕೆ ಬಂದು ಧುತ್ತರಗಿಯವರು ಗ್ರೇಟ್ ಎನ್ನಿಸಿಕೊಂಡರು. ಇದೇ ಅಲ್ಲವೇ ‘ಕಲಾವಿದರ ಕುಲಂ ತಾನೊಂದೆ ಒಲಂ’.

No comments:

Post a Comment