Monday, 29 July 2013

ಹನಿಗವಿತೆಗಳು : ಡಾ.ಪ್ರಕಾಶ ಗ.ಖಾಡೆ

                                                       ಹನಿಗವಿತೆಗಳು :

                                                                        ಡಾ.ಪ್ರಕಾಶ ಗ.ಖಾಡೆ

ಬಯಲಾದ ಭಾವಕೆ
ಕಣ್ಣ ಹನಿ
ಬಯಲಾದ ಜೀವಕೆ
ಕಣ್ವ ಮುನಿ.


***

ಮಾತು
ಕೃತಿ
ಮೌನ
ಆಕೃತಿ.


***

ಬೆಳ್ಳಗಿರುವುದೆಲ್ಲ ಹಾಲಲ್ಲ
ಎನ್ನುತ್ತಾರೆ ; ಅದು ಖರೇ
ಕಪ್ಪಗಿರುವುದೂ ಕತ್ತಲಲ್ಲ
ಬೆಳಕಿನ ಬಸಿರು.


***


ಕವಿತೆ 
------
ಭಾವನೆಗಳ
ಮೊಟ್ಟೆಗೆ
ಕಾವು ಕೊಟ್ಟ
ಮೌನ.

***

ಬೀದಿಯಲ್ಲಿ ಬಿದ್ದ ಮರ
ಬದಿಯಲ್ಲಿ ಎದ್ದ ಸಸಿ
ಎರಡಕ್ಕೂ ಒಂದೇ ಹೆಸರು
ಸಾರ್ಥಕತೆ.


***


ಹರಿವ ಮನಸ್ಸು 
ಕಟ್ಟಿಡಲು ಒಂದು ಸಣ್ಣ
ಎಳೆ ಸಾಕು.
ಈ ಎಳೆ ದಕ್ಕುವುದು
ಒಂದು ಏಕಾಂತದ
ಧ್ಯಾನದಲ್ಲಿ.


***
ಭಾವನೆಗಳು
ಬರೀ ಆಡಲು ಅಲ್ಲ ;
ಹಂಚಿಕೊಳ್ಳಲು ಮತ್ತು 
ಒಂದಿಷ್ಟು ಬೆಚ್ಚಗೆ
ಪುಟ್ಟ ಹೃದಯದಲ್ಲಿ
ಬಚ್ಚಿಟ್ಟುಕೊಳ್ಲಲು.


***


ಹೋರಾಟ
ಪ್ರತಿಭಟಣೆಗೆ ಒಂದು
ಸಣ್ಣ ಉದಾಹರಣೆ ;
ಕಾಗೆ ಗೂಡಲಿ ಬೆಳೆವ
ಮರಿ ಕೋಗಿಲೆಯ
ಬೆಳವಣಿಗೆ.


***ಕೊರಡಲ್ಲಿ
ಜೀವ ಪಡೆದ ಶಿಲ್ಪ
ಅದರ ಹುಟ್ಟಿನ
ಚಿಗುರ ಮರೆಸುತ್ತದೆ.

***

ಈ ಮುಂಜಾವು
ತೆರೆದುಕೊಳ್ಳುತ್ತದೆ.

ನಡು ಹಗಲು
ದೂರ ನಡೆಸುತ್ತದೆ.

ರಾತ್ರಿ ಬೆಚ್ಚಗೆ
ಅಪ್ಪಿಕೊಳ್ಳುತ್ತದೆ.

***


ನೆನಪುಗಳು
ಆಗೀಗ ಮರುಜನ್ಮ ಪಡೆದು
ಮತ್ತೆ ಮತ್ತೆ ಹುಟ್ಟುತ್ತವೆ
ಸಾವನ್ನು ಮರೆಸುತ್ತ
ಬದುಕನ್ನು ಬಯಲುಗೊಳಿಸುತ್ತ
ಇದ್ದಂತೆ ಇದ್ದು
ಇಲ್ಲದಾಗುತ್ತವೆ
- ಡಾ.ಪ್ರಕಾಶ ಗ. ಖಾಡೆ




No comments:

Post a Comment