Friday, 23 August 2013

ಕನ್ನಡ ಸಾಹಿತ್ಯದ ಮೇಲೆ ಅನ್ಯ ಪ್ರಭುತ್ವ


ವಸಾಹತುಶಾಹಿಯ ಸಾಂಸ್ಕೃತಿಕ ಯಾಜಮಾನ್ಯ ಮತ್ತು ಕನ್ನಡ ಸಾಹಿತ್ಯ


                                                                     -ಡಾ.ಪ್ರಕಾಶ ಗ.ಖಾಡೆ
   
        ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿಯೇ ಕನ್ನಡ ಕಾವ್ಯದ ಜನಮುಖಿಮಾರ್ಗದ ವಿರುದ್ಧ ಪಯಣ ಕೆಲವು ಚಿಂತನೆಗಳಿಗೆ ಗ್ರಾಸವಾಯಿತು. ಸಂಸ್ಕøತ, ಇಂಗ್ಲಿಷ್ ಹಾಗೂ ಪ್ರಾಂತೀಯ ಭಾಷಾ ಸಾಹಿತ್ಯದ ಪ್ರಭಾವ ಹಾಗೂ ಸ್ಥಳೀಯವಾದ ಕವಿಗಳ ಕಾಣ್ಕೆಗಳು ಕನ್ನಡ ಕಾವ್ಯರಚನಾ ಸಂದರ್ಭವನ್ನು ಗೊಂದಲಕ್ಕೆ ದೂಡಿದ್ದವು. ಕನ್ನಡದ ಸಾಂಸ್ಕøತಿಕ ನೆಲಗಟ್ಟು ಹೊಸ ಕಾವ್ಯ ಪ್ರಕಾರಕ್ಕೆ ಸಜ್ಜುಗೊಳ್ಳುವ ಮುಂಚಿನ ದಿನಗಳು ಒಂದು ಬಗೆಯ ಅಸಾರತೆಯನ್ನು ಉಂಟುಮಾಡಿದ ವಿಷಾದ ಪ್ರಕಟವಾಯಿತು. ಇದನ್ನು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ 1911ರಲ್ಲಿ ಬಿ.ಎಂ.ಶ್ರೀ ಅವರು ನೀಡಿದ ಉಪನ್ಯಾಸದಲ್ಲಿ ತೋಡಿಕೊಂಡಿದ್ದಾರೆ. ‘ಮೇಲೆ ತೋಟ ಶೃಂಗಾರ. ಒಳಗೆ ಗೋಣಿಸೊಪುŒ ಯಾವ ಕವಿಯ ಕವನವೇ ತೆಗೆಯಿರಿ ಲೋಕ ಶ್ರೇಷ್ಟವಾದ ನೀತಿಗಳಾಗಲಿ, ದಿವ್ಯ ಜೀವನಕ್ಕೆ ಮೇಲುಪಂಕ್ತಿಯಾದ ಚರಿತ್ರೆಗಳಾಗಲಿ ಯಾವುದಾದರೂ ಒಂದು ನಮ್ಮ ಹೃದಯವನ್ನು ಆನಂದ ಪ್ರವಾಹದಲ್ಲಿ ತೊಳೆದು ದುಃಖಮಯವಾದ ಈ ಸಂಸಾರದಲ್ಲೇ ಸ್ವರ್ಗಸುಖವನ್ನು ತಂದುಕೊಡುವಂತಹದು ಇದೆಯೆ? ಹಿತವಾದ, ಸಾರ್ಥಕವಾಗಿ ಹೊತ್ತು ಕಳೆಯಬಹುದಾದ ವಚನ ಕಾವ್ಯಗಳುಂಟೇ’ ಶ್ರೀಯವರ ಈ ವಿಷಾದವು ಆ ಕಾಲದ ಕಾವ್ಯದ ರಾಚನಿಕ ಸಂದರ್ಭವನ್ನು ‘ವಸಾಹತುಶಾಹಿ’ ದೃಷ್ಟಿಕೋನ ಮನೋಭಾವವಿಟ್ಟುಕೊಂಡು ಕನಲಿದಂತಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.
     ಶ್ರೀಯವರು ಹೊಸತನವಿಲ್ಲದೆ ಹಳೆಯದನ್ನೇ ಮತ್ತೆ ಮತ್ತೆ ಹೊಸದಾಗಿ ಬರೆವ ಕವಿಗಳನ್ನು ‘ಸೂತ್ರಕ್ಕೆ ಮಾರಿಕೊಂಡ ಕವಿಗಳು’ ಎಂದು ಜರಿಯುತ್ತಾರೆ. ‘ಹಳೆಯ ಕಥೆಗಳೆ ಚರ್ವಿತ ಚರ್ವಣವಾಗಿ ಬರುತ್ತಿವೆ. ಕಾವ್ಯ ರೀತಿಯೂ ಒಂದೇ ಸೂತ್ರಕ್ಕೆ ಸ್ವತಂತ್ರವಾಗಿ ಮಾರಿಕೊಂಡ ಕವಿಗಳಿಗೆ ಒಂದರ ಪಡಿಯಚ್ಚು ಮತ್ತೊಂದು. ಹದಿನೆಂಟು ವರ್ಣನೆಗಳು! ಅದೂ ಒಬ್ಬನಂತೆಯೇ ಮತ್ತೊಬ್ಬನಲ್ಲಿಯೂ ಹೀಗೆ ಒಂದು ಕವಿತೆಯನ್ನೋದಿದ ಮೇಲೆ ಮತ್ತೆ ಬೇರೆಯದನ್ನು ಓದುವ ಅಗತ್ಯವಾದರೂ ಏನು? ಹೊಸ ಭಾವಗಳಂತೂ ಇಲ್ಲವೇ ಇಲ್ಲ. ಒಂದು ಭಾವವನ್ನೇ ಬೇರೆ ಮಾತಿನಲ್ಲಿ ಜೋಡಿಸಿದರಾಯಿತು’ ಎಂಬುದೂ ಶ್ರೀ ಅವರ ಆ ಕಾಲದ ಕಾವ್ಯವನ್ನು ಕಂಡ ಪರಿ ಆದರೆ ಇದು ಅಂದಿನ ಸಂಸ್ಕತ ಅಂಧಾನುಕರಣೆಯಿಂದ ನಮ್ಮ ಕವಿಗಳು ಬರೆಯುತ್ತಿದ್ದ ಈ ಬಗೆಯ ಕಾವ್ಯದ ಸೆಳೆತ ಇಂಥ ರಚನೆಗಳಿಗೆ ದಾರಿಮಾಡಿಕೊಟ್ಟಿತು ಎಂಬುದು ಸರ್ವವಿದಿತ. ಮೈಸೂರು ಅರಸರ ಆಶ್ರಯದ ಬಿಗಿತನ ಇಂಥ ರಚನೆಗಳಿಗೆ ಕಾರಣವಾದ ಸಂದರ್ಭವನ್ನು ಗಮನಿಸಬೇಕು. ‘ಮೈಸೂರಿನ ಅರಮನೆಯ ಸಂಪ್ರದಾಯದ ಕೋಟೆಯಾಗಿ ಅಲ್ಲಿ ನವೋದಯ ಬರಲು ನಿಧಾನವಾಯಿತು’ ಎನ್ನುತ್ತಾರೆ ಎಸ್. ಅನಂತನಾರಾಯಣ ಅವರು. ಮೈಸೂರಿನಲ್ಲಿ ರಾಜಾಶ್ರಯದ ಸುಭದ್ರತೆಯಿಂದ ಆಸ್ಥಾನದ ಗಾಂಬಿsೀರ್ಯ, ಘನತೆ, ಗೌರವ ಇವುಗಳ ಕಟ್ಟಿಗೆ ಸಿಕ್ಕಿ ಹಳೆಯದನ್ನೇ ಅನುಸರಿಸುವ ರೀತಿಯೆ ಹೆಚ್ಚು ಪಾಲು ಉಳಿದುಕೊಂಡು ಬಂದಿತು. ಹೀಗಾಗಿ ಮೈಸೂರು ಕರ್ನಾಟಕ ಭಾಗದಲ್ಲಿ ಈ ರೀತಿಯ ಏಕತಾನತೆಗೆ ಕಾರಣವಾದ ಸಂದರ್ಭದಲ್ಲಿ ಕನ್ನಡ ಕಾವ್ಯಕ್ಕೆ ಹೊಸತನ ತುಂಬಲು ಶ್ರೀ ಅವರು ಆರಿಸಿಕೊಂಡಿದ್ದು ಅನ್ಯ ಭಾಷಿಕ ಸೊಗಡನ್ನೇ ಎಂಬುದು ಗಮನಿಸಬೇಕು. ಶ್ರೀ ಅವರು ಆ ಕಾಲದ ಇಂಡಿಯಾದ ಒಗ್ಗಟ್ಟು ಮುಂದುಮಾಡಿ ಸಂಸ್ಕøತ, ಇಂಗ್ಲಿಷ್, ಹಿಂದಿ ಭಾಷೆಗಳ ಮಹತ್ತು ಸಾರಿದರು. ಮೈಸೂರು ಭಾಗದ ಆಳರಸರ ಪ್ರೋತ್ಸಾಹ, ವಸಾಹತುಶಾಹಿಯ ಹೇರಿಕೆ ಹಾಗೂ ಇಂಗ್ಲಿಷ್ ಶಿಕ್ಷಣ ಕ್ರಮದಿಂದಾಗಿ 1911ರ ಹೊತ್ತಿನಲ್ಲಿ ಜಾನಪದವೇ ಉಸಿರಾಡುತ್ತಿದ್ದ ಧಾರವಾಡ ನೆಲೆಯಲ್ಲಿ ಅವರು ನಿಂತು ಮಾತನಾಡಿದ್ದನ್ನು ಇಲ್ಲಿ ನಾವು ಕಾವ್ಯ ಸಂದರ್ಭದಲ್ಲಿ ಗಮನಿಸಬೇಕು:
‘... ಇವೆಲ್ಲಕ್ಕೂ ಮೊದಲು ಭಾಷೆ ಒಂದಾಗಬೇಕು. ಇಂಗ್ಲಿಷ್ ಇಲ್ಲವೆ ಹಿಂದಿ ಯಾವುದು ಒಂದು ಸಾಧ್ಯವಾದದ್ದು. ಮಿಕ್ಕ ಭಾಷೆಗಳು ಸತ್ತು ಹೋಗಲಿ, ಈಗ ತಾವಾಗಿಯೇ ಸಾಯುತ್ತಾ ಬಿದ್ದಿರುವವು; ಎರಡು ದಿನ ನಾವು ತಟಸ್ಥರಾಗಿದ್ದರೆ ಹೋಗಿ ಹಳ್ಳಿಗಳಲ್ಲಿ ಅಡಗಿಕೊಳ್ಳುವವು. ಆಗ ರಾಜಭಾಷೆಯೊಂದು ಹಿಮಾಲಯದಿಂದ ರಾಮೇಶ್ವರದವರೆಗೂ ಸ್ವೇಚ್ಫೆಯಾಗಿ ಓಡಾಡುವುದು. ಇದು ಬಿಟ್ಟು ನರಳುತ್ತಿರುವ ದೇಶ ಭಾಷೆಗಳನ್ನು ಗುಣಮಾಡಿ ತಲೆಯೆತ್ತಿಸಬೇಕು ಎನ್ನುವುದು ಇಂಡಿಯಾದ ಒಗ್ಗಟ್ಟಿಗೆ ಅಡ್ಡ ಬಂದು ನಿಲ್ಲುವುದು; ಅವು ರಾಜ್ಯದ ಹಿತಚಿಂತನೆಗೆ ಮೃತ್ಯುಗಳು”
     ಹೀಗೆ ಒಂದೆಡೆ ನರಳುತ್ತಿರುವ ದೇಶೀ ಭಾಷೆಗಳನ್ನು ರಾಜಭಾಷೆಯೊಂದು ದಾಪುಗಾಲನ್ನಿಟ್ಟು ನಡೆದಾಡಿ ಹಳ್ಳಿಯ ಮೂಲೆಯಲ್ಲಿ ಮುದುಡಿ ಬಿದ್ದುಕೊಂಡಿರಬೇಕಾದರೆ ಹೊಸ ಭಾಷೆಗೆ ರತ್ನಗಂಬಳಿಯ ಹಾಸಿ ಸ್ವಾಗತಿಸುವ ರೀತಿಯನ್ನು ಧ್ವನಿಸುವ ಸಂದರ್ಭವನ್ನು ಗಮನಿಸಬೇಕು. ‘ಈಚೀಚೆಗಂತೂ ಯಕ್ಷಗಾನ, ದೊಂಬಿದಾಸರ ಪದ, ಶುಕಸಪ್ತತಿ, ಹಲ್ಲಿಯ ಶಕುನ ಇವೇ ಜನಗಳಿಗೆ ಮಹಾಕಾವ್ಯಗಳು. ‘ಏನು ಇಕ್ಕಟ್ಟಿನಲ್ಲಿ ಸಿಕ್ಕಿದೆವು’ ಹಿಂದಿನ ಸಂಸ್ಕೃತ ಪ್ರಾಬಲ್ಯವು ಅವರ ಕಾವ್ಯ ಮಾರ್ಗವು ಕುಗ್ಗಿ ಹೋದವು. ಮುಂದೆ ಇಂಗ್ಲಿಷಿನ ಪ್ರಾಬಲ್ಯವೂ ಅದರ ಕಾವ್ಯ ಮಾರ್ಗವೂ ಹೆಚ್ಚುವಂತೆ ತೋರುತ್ತದೆ. ಇಂಗ್ಲಿಷ್ ಸಾಹಿತ್ಯವೇ ಜೀರ್ಣವಾದ ನಮ್ಮ ಕಾವ್ಯಮಾಲೆಯನ್ನು ಕೈಕೊಟ್ಟು ಎತ್ತಬೇಕು. ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ ಕಾವ್ಯಮಾಲೆಗೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು.ಹೀಗೆ ಶ್ರೀಯವರು ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್ ಸಾಹಿತ್ಯದ ಯಜಮಾನಿಕೆಯನ್ನು ಆರೋಪಿಸಿದರು. ಅಲ್ಲದೆ ಸಾಹಿತ್ಯಕ್ಕೆ ಬಳಸುವ ಭಾಷೆಯಲ್ಲೂ ಅವರ ದೃಷ್ಟಿ ಗ್ರಾಂಥಿಕವಾದುದು, ಗ್ರಾಮ್ಯವನ್ನು ನಿರ್ಲಕ್ಷಿಸಿರುವದು ಅವರ ಮಾತುಗಳಲ್ಲಿಯೇ ಸ್ಪಷ್ಟವಾಗಿದೆ. ‘ಗ್ರಾಮ್ಯವನ್ನು ಬಿಟ್ಟು ವಿದ್ಯಾವಂತರು, ಉತ್ತಮ ಜಾತಿಯವರೂ ಆಡತಕ್ಕ ಸ್ಪುಟವಾದ ಕನ್ನಡವನ್ನು ಗ್ರಂಥ ಭಾಷೆಯಾಗಿ ತಿರುಗಿಸಿ ಬಿಟ್ಟರೆ ಅಚ್ಚು ಹಾಕುವುದರಿಂದಲೂ, ಮಕ್ಕಳಿಗೆ ಕಲಿಸುವುದರಿಂದಲೂ ಇದೆ ನೆಲೆಯಾಗಿ  ನಿಂತು ಎತ್ತಲೂ ಹರಡುತ್ತದೆ. ಜನಗಳು ರೂಡಿsಗೆ ತಂದ ಮಾತುಗಳನ್ನು ಕಲ್ಪನೆ ಮಾಡಬಾರದು. ಹಾಗೆ ಮಾಡಿದರೂ ಕನ್ನಡ ಮಾತುಗಳನ್ನೇ ಬಳಸುತ್ತಿರುವ ಸಂಸ್ಕøತ ಪದಗಳನ್ನೇ ರೂಡಿsಸುವುದು ಅನುಕೂಲ ಎಂದರು. ಹೀಗೆ ಕನ್ನಡ ಪ್ರಾಂತೀಯ ಆಡುಮಾತಿಗೆ ಸಾಹಿತ್ಯಿಕ ಮಣೆ ಹಾಕದೆ, ಗ್ರಂಥಸ್ಥ ಭಾಷೆಗೆ ಒತ್ತುಕೊಟ್ಟ ಕಾರಣವಾಗಿ ಜನಸಾಮಾನ್ಯರ ನಿತ್ಯ ಬದುಕಿನೊಂದಿಗೆ ಜನಪದರು, ವಚನಕಾರರು, ದಾಸರು, ತತ್ವಪದಕಾರರು ಕಾದುಕೊಂಡು ಬಂದ ದೇಸೀಯತೆಯ ನಿರ್ಲಕ್ಷ ವ್ಯಕ್ತವಾಯಿತು. ಹೇಗೆ ಆದಿಯಿಂದಲೂ ಸಂಸ್ಕøತ ಶಿಕ್ಷಣದಿಂದಲೂ, ಸಂಸ್ಕøತ ಪೆÇೀಷಣೆಯಲ್ಲೂ ಕಾವ್ಯಮಾಲೆಯನ್ನು ಬೆಳೆಸಿದೆವೋ ಹಾಗೆ ದೈವಯತ್ನದಿಂದ ಲಬಿsಸಿರುವ ಇಂಗ್ಲಿಷಿನ ಶಿಕ್ಷಣದಲ್ಲೂ, ಇಂಗ್ಲಿಷಿನ ಪೆÇೀಷಣೆಯಲ್ಲೂ ಅದನ್ನು ಬೆಳೆಸಬೇಕು ಎಂದೂ ಕರೆಕೊಟ್ಟರು. ಇಲ್ಲಿ ಒಂದು ಬಿಡುಗಡೆ ಮತ್ತೊಂದರ ಬಿಗಿತನ ಕಾಣಬಹುದು. ಕುರ್ತುಕೋಟಿ ಅವರು ಹೇಳುವ ಹಾಗೆ ‘ಸಂಸ್ಕೃತ ಭಾರದಿಂದ ಬಿಡುಗಡೆಯನ್ನು ಪಡೆದು ಈಗ ಇಂಗ್ಲಿಷ್ ಭಾಷೆಯಿಂದ ಚೇತನವನ್ನು ಪಡೆಯಬೇಕು ಎಂದು ಅವರ ನಿರೀಕ್ಷೆಯಾಗಿತ್ತು’ ಎಂಬುದು ಕನ್ನಡ ಚೇತನಕ್ಕೆ ನಡೆದ ಹುಡುಕಾಟ ದೇಸೀ ಮೂಲವಾಗಿರದೆ ಅನ್ಯ ನೆಲೆಗಳನ್ನು ಅರಸಿದ್ದು ಸ್ಪಷ್ಟವಾಗುತ್ತದೆ.
       ‘ಮೈಸೂರು ಕೇಂದ್ರ ಭಾಗದಲ್ಲಿ ವಸಾಹತುಶಾಹಿ ಹಾಗೂ ಅರಸೊತ್ತಿಗೆ ಈ ಇಬ್ಬಗೆಯ ದಾಸ್ಯದ ನೆರಳಿನಲ್ಲೇ ಇಂಗ್ಲಿಷ್ ಶಿಕ್ಷಣ ಹಾಗೂ ಆಧುನಿಕ ವಿಚಾರಗಳ ಪ್ರವೇಶದಿಂದ ಹೊಸ ಮಧ್ಯಮ ವರ್ಗವೂ ಶಿಷ್ಟವಾದ ಒಂದು ಭಾಷಾ ಪ್ರಭೇದವೂ ಇಲ್ಲಿ ರೂಪುಗೊಂಡಿತು. ಅರಮನೆ ಹಾಗೂ ಹೊಸಕಾಲದ ಗುರುಮನೆಯ ನಡುವಿನ ಅಂಗಳದಲ್ಲಿ ಮಧ್ಯಮ ವರ್ಗದ ತಾತ್ತಿñ್ವಕತೆ ಹಾಗೂ ಶಿಷ್ಟ ಭಾಷಾ ಪ್ರಭೇದವನ್ನೂ ಬಳಸಿಕೊಂಡು ಅನುವಾದ ಅನುಕರಣಗಳ ಹಂತವನ್ನು ದಾಟಿ ಸ್ವತಂತ್ರವಾಗಿ ನೆಲೆನಿಂತ ಕಾವ್ಯದಲ್ಲೂ ಒಂದು ಬಗೆಯ ಶಿಷ್ಟತೆ ಹಾಗೂ ಗಾಂಬಿsರ್ಯ ಉಳಿದುಕೊಂಡಿತು. ಅದನ್ನು ಹಗುರಗೊಳಿಸಬಹುದಾಗಿದ್ದ ಜನಪದ ಸ್ಪರ್ಶವೂ ಅದಕ್ಕಾಗಲಿಲ್ಲ.’ ಎನ್ನುತ್ತಾರೆ ಎಂ.ಜಿ. ಹೆಗಡೆ ಅವರು. ಹೀಗೆ ಕಾವ್ಯದಲ್ಲಿ ಶಿಷ್ಟತೆ, ಬಿಗಿತನ, ಅನುವಾದ, ಅನುಕರಣೆಗಳು ಸ್ಥಳೀಯತೆಯನ್ನು ಬಿಟ್ಟು ರಚನೆಯಾದಂತೆಲ್ಲಾ ಇಂಥ ರಚನೆಗಳೇ ಸಾರ್ವತ್ರಿಕ ಮನ್ನಣೆಗೆ ನಿಲ್ಲಬೇಕಾಯಿತು. ಶ್ರೀಯವರ ‘ಪುನರುಜ್ಜೀವನ’ ಪರಿಕಲ್ಪನೆಯಲ್ಲಿ ದೊರೆತ ಮನ್ನಣೆಯೇ ಇದಕ್ಕೆ ಕಾರಣವಾಯಿತು.

ಬಿ.ಎಂ.ಶ್ರೀ
       ‘ಹೊಸ ಕಾವ್ಯದ ಹುಟ್ಟಿನ ಸಂದರ್ಭದಲ್ಲಿ ಶ್ರೀಯವರ ಬರಹಗಳಲ್ಲಿ ‘ಗ್ರಾಮ್ಯ’ ಭಾಷಾ ಪ್ರಭೇದಗಳ ಕುರಿತಾದ ಅನಾದರ ಸ್ಪಷ್ಟವಾಗಿದೆ. ಅವರು ಅರ್ಥವಾಗದ ಹಳಗನ್ನಡವನ್ನಾಗಲಿ, ಕನ್ನಡಕ್ಕೆ ಒಗ್ಗದ ರೂಡಿsಯಲ್ಲಿಲ್ಲದ ಶಬ್ದಗಳನ್ನಾಗಲಿ ಬಳಸಬಾರದು ಎಂಬುದು ಅವರ ನಿಲುವಾಗಿತ್ತು. ಇವು ಶ್ರೀಯವರ ವೈಯಕ್ತಿಕ ಅಬಿsಪ್ರಾಯಗಳು ಮಾತ್ರವಾಗಿರದೆ ಒಟ್ಟು ಮೈಸೂರು ಪ್ರಾಂತದ ಸುಶಿಕ್ಷಿತವರ್ಗದ ನಿಲುವು ಎಂದು ಗ್ರಹಿಸಬಹುದು. ಏಕೆಂದರೆ ಭಾಷೆಯ ಕುರಿತಾದ ಶ್ರೀಯವರ ವಿಚಾರಗಳು ಅವರು ಪ್ರತಿಪಾದಿಸಿದ ಪುನರುಜ್ಜೀವನದ ಪರಿಕಲ್ಪನೆಯ ಅಂಗವಾಗಿ ಬಂದಿದೆ. ಪುನರುಜ್ಜೀವನ ಪರಿಕಲ್ಪನೆಯನ್ನು ಶ್ರೀಯವರು ತಮ್ಮ ಕಾಲದ ಸಾಹಿತ್ಯ ಸಾಂಸ್ಕೃತಿಕ ವಿಚಾರಗಳನ್ನು ವ್ಯವಸ್ಥೀಕರಿಸಲು, ಅರ್ಥಮಾಡಿಕೊಳ್ಳಲು ಹಾಗೂ ಆನುಷಂಗಿಕವಾಗಿ ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನೂ ನಿರ್ದೇಶಿಸಲು ಬಳಸುತ್ತಾರೆ. ಹಾಗೆ ವ್ಯವಸ್ಥೀಕರಿಸಲು ಹಾಗೂ ನಿರ್ದೇಶಿಸಲು ಬೇಕಾದ ಶೈಕ್ಷಣಿಕ ಸಿದ್ಧತೆ ಹಾಗೂ ಅದಿsಕಾರ ಎರಡೂ ಅವರಿಗಿತ್ತು. ಈ ಭಾಗದ ಆ ಕಾಲದ ಲೇಖಕರೆಲ್ಲ ಹೆಚ್ಚಾಗಿ ಅವರ ಶಿಷ್ಯರೇ ಆಗಿದ್ದರೆಂಬುದನ್ನು ನೆನೆದಾಗ ಶ್ರೀ ಫ್ಯಾಕ್ಟರ್‍ನ ಮಹತ್ವ ಅರಿವಾಗುತ್ತದೆ. ಒಟ್ಟಿನಲ್ಲಿ ಇಲ್ಲಿಯ ಕಾವ್ಯಭಾಷೆ ದಕ್ಷಿಣ ಕನ್ನಡದ ಹಾಗೂ ಉತ್ತರ ಕರ್ನಾಟಕದ ಸಾಹಿತ್ಯ ಭಾಷೆಗಿಂತ ಬಿsನ್ನವಾಯಿತಲ್ಲದೆ ‘ನವಮಾರ್ಗ ಸಂಪ್ರದಾಯ’ವೊಂದು ಇಲ್ಲಿ ಹುಟ್ಟಿಕೊಂಡಿತು ಎಂಬುದೂ ಹೆಗಡೆ ಅವರ ಅಭಿಪ್ರಾಯವಾಗಿದೆ.
   ಹೀಗೆ ವಸಾಹತುಶಾಹಿ ಸಂದರ್ಭ, ಇಂಗ್ಲಿಷ್ ಶಿಕ್ಷಣ ಕ್ರಮ, ಸಂಸ್ಕೃತ ಪ್ರಭಾವ, ಶಿಷ್ಟತೆಯ ಅನಿವಾರ್ಯತೆ ಕಾರಣವಾಗಿ ‘ಇಂಗ್ಲಿಷ್ ಮಾತ್ರ ಕನ್ನಡ ಕಾವ್ಯಕ್ಕೆ ಹೊಸತನ ತರಬಲ್ಲದೆಂದು’ ನಂಬಿದ್ದ ಶ್ರೀಯವರು ಅದನ್ನೇ ನಂಬಿಸಿದರು. ಹೀಗಾಗಿ 19ನೆಯ ಶತಮಾನದ ಉತ್ತರಾರ್ಧದಿಂದ ಪ್ರಾರಂಭವಾದ ಆಧುನಿಕ ಕನ್ನಡ ಸಾಹಿತ್ಯ ಒಂದು ನೆಲೆಯಲ್ಲಿ ವಸಾಹತುಶಾಹಿ ಅನುಭವದಿಂದ ರೂಪಿಸಲ್ಪಟ್ಟಿರುವುದು ಕಾಣುತ್ತೇವೆ. ಇಂದು ಸರ್ವವೇದ್ಯವಾಗಿರುವಂತೆ ತನ್ನ ಪ್ರಭುತ್ವವನ್ನು ಉಳಿಸಿ ಬೆಳೆಸಲು ಬ್ರಿಟಿಷ್ ವಸಾಹತುಶಾಹಿಯು ತನ್ನದೇ ಆದ ಸಾಂಸ್ಕøತಿಕ ಯಾಜಮಾನ್ಯವನ್ನು ಕರ್ನಾಟಕದ ಆ ಮೂಲಕ ಭಾರತದ ಮೇಲೆ ಹೇರುವುದರಲ್ಲಿ ಯಶಸ್ವಿಯಾಯಿತು. ಎಂದರೆ ವಸಾಹತುಶಾಹಿ ವೈಚಾರಿಕತೆ, ಇಂಗ್ಲಿಷ್ ಶಿಕ್ಷಣ ಪ್ರಗತಿ ಎಂಬ ಸರಳ ಸಮೀಕರಣವನ್ನು ಭಾರತೀಯರೆ ಒಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಬ್ರಿಟಿಷ್ ಸಾಂಸ್ಕøತಿಕ ವೈಚಾರಿಕ ಯಾಜಮಾನ್ಯವನ್ನು ಆಧುನಿಕ ಕನ್ನಡ ಸಾಹಿತಿಗಳು ಹಾಗೂ ಚಿಂತಕರು ಪ್ರಜ್ಞಾಪೂರ್ವಕವಾಗಿ  ಮಾನ್ಯ ಮಾಡಿದ್ದರು ಎಂಬುದಕ್ಕೆ ಸಮರ್ಥನೆಯಾಗಿ ಈ ಪ್ರಾತಿನಿದಿsಕ ಸಾಲುಗಳನ್ನು ಉದಾಹರಿಸಬಹುದು. ತಮ್ಮ ‘ಭರತಮಾತೆಯ ವಾಕ್ಯ’ ಕವನದಲ್ಲಿ ಬ್ರಿಟನ್ನಿನ ರಾಣಿಯನ್ನುದ್ದೇಶಿಸಿ ಬಿ.ಎಂ.ಶ್ರೀ ಅವರು ಹೀಗೆ ಹೇಳುತ್ತಾರೆ.

ಸಕಲ ಧರ್ಮದ ತಿರುಳ ಹೊರೆದಳು
ಸಕಲ ಜ್ಞಾನವ ತೆರೆದಳು;
ಸಕಲ ಸೀಮೆಯ ಬಯಕೆಗಳೆದಳು
ಸಕಲ ಕುಶಲವನೊರೆದಳು.
ಎಂದು ಶ್ರೀಯವರು ಹೀಗೆ ಸಾರಿದರೆ, ಕುವೆಂಪುರವರು
ಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸಗಾಳಿ
ಭಾರತದ ಒಣಗು ಬಾಳ್ಮರವನಲುಗಾಡಿ
ಎಂದು ಘೂೀಷಿಸಿದರು. ಈ ರೀತಿ ಬ್ರಿಟಿಷ್ ಸಾಂಸ್ಕೃತಿಕ ಯಾಜಮಾನ್ಯವನ್ನು ಇತರ ಭಾರತೀಯರಂತೆ ಕನ್ನಡ ಲೇಖಕರು ಹಾಗೂ ಚಿಂತಕರು ಸಂಪೂರ್ಣವಾಗಿ ಮಾನ್ಯ ಮಾಡಿದುದಕ್ಕೆ ಕೇವಲ ಬ್ರಿಟಿಷರ ರಾಜಕೀಯ ಸತ್ತೆ ಮತ್ತು ಪಾಶ್ಚಿಮಾತ್ಯರ ವೈಜ್ಞಾನಿಕ ತಾಂತ್ರಿಕ ಪ್ರಗತಿಗಳೇ ಕಾರಣವಲ್ಲ. 250 ವರ್ಷಗಳ ಬ್ರಿಟಿಷ್ ಪ್ರಭುತ್ವದೊಡನೆಯೇ ಸಾವಿರ ವರ್ಷಗಳ ದೇಶೀ ಪ್ರಭುತ್ವವೂ ಭಾರತದಲ್ಲಿ ಅಸ್ತಿತ್ವದಲ್ಲಿತ್ತು.
                                                                    ಕುವೆಂಪು -ಮಾಸ್ತಿ
  ಹೀಗೆ ಮೇಲಸ್ತರದ ಪಂಡಿತರು ಕನ್ನಡ ಪುನರುಜ್ಜೀವನ ಬಯಸಿದ ವಿದ್ವಾಂಸರು ಇಂತಹ ಪರಿಚಲನೆಯ ಮುಂಚೂಣಿಯಲ್ಲಿದ್ದದರಿಂದ ಅವರು ತರಬಯಸಿದ ಬದಲಾವಣೆಗಳು ಸುಧಾರಣಾತ್ಮಕವಾಗಿದ್ದವೇ ಹೊರತು ಸಮಗ್ರ ಪರಿವರ್ತನೆಯ ಕಡೆಗೆ ಒಲವನ್ನು ಹೊಂದಿರಲಿಲ್ಲ ಎಂಬುದು ವಿದಿತವಾಗುತ್ತದೆ. ಈ ಪರಿವರ್ತನೆಯ ಗರ್ಭದೊಳಗೆ ಕನ್ನಡ ಸಂದರ್ಭದಲ್ಲಿ ಅಡಗಿ ಕುಳಿತಿದ್ದ ದೇಸೀಯ ಮೌಖಿಕ ಕಾವ್ಯ ಪರಂಪರೆಗಳು ಉತ್ತರ ಕರ್ನಾಟಕದ ‘ಹಲಸಂಗಿ ಗೆಳೆಯರು’ ಮೊಳಗಿಸಿದ ಜಾನಪದ ಕಹಳೆಯಿಂದ ಕನ್ನಡ ಕಾವ್ಯಲೋಕ ಸೂರ್ಯ ಉದಯಿಸುವ ಮೊದಲು ಮೂಡುವ ಬೆಳ್ಳಿಚುಕ್ಕಿಯಂತೆ ಮೊಳಗಿ ನಾಡವರ ಕಣ್ಣನ್ನು ತನ್ನಡೆಗೆ ಆಕರ್ಷಿಸಿತು. ಈ ಆಕರ್ಷಣೆಗೆ ಶ್ರೀಯವರೂ ಹೊರತಾಗಲಿಲ್ಲ. ಮುಂದೆ ಅವರೇ ಸಾರಿದರು ‘ಜನವಾಣಿ ಬೇರು ಕವಿವಾಣಿ ಹೂವು’ ಎಂದು .
=================================================================
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಮನೆ ನಂ. ಎಸ್.135,ಸೆಕ್ಟರ್ ನಂ.63,
ನವನಗರ,ಬಾಗಲಕೋಟ-587103. ಮೊ.-9845500890

No comments:

Post a Comment