Wednesday, 10 July 2013


                  ಬಾಗಲಕೋಟೆ : ನವನವೀನ ನಗರ

                                       - ಡಾ.ಪ್ರಕಾಶ ಗ.ಖಾಡೆ
    ಬಾಗಲಕೋಟೆ ಊರು ಮುಳುಗಡೆ ಮತ್ತು ಸ್ಥಳಾಂತರದ ಕಾರಣವಾಗಿ ಇಡೀ ಏಶಿಯಾ ಖಂಡದಲ್ಲಿಯೇ ಬಹು ದೊಡ್ಡ ನಗರವೊಂದು ತಲ್ಲಣಕ್ಕೊಳಗಾಗಿ ಈಗ ಸುಂದರವಾಗಿ ರೂಪಿತವಾಗುತ್ತಿರುವುದು ಒಂದು ದಾಖಲೆಯೆ ಸರಿ. ಘಟಪ್ರಭಾ ನದಿಯ ದಡದಲ್ಲಿರುವ ಈ ನಗರವು ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಿಂದ ಕೃಷ್ಣೆವು ಸೇರಿಕೊಂಡು ಕೋಟೆಯ ಬಾಗಿಲಿಗೆ ಹಿರಿ ಹೊಳೆಯ ಬಾಗಿನ ಅರ್ಪಿಸಿದಂತಾಗಿದೆ.ಬಾಗಲಕೋಟೆಯು  ರಾಮಾಯಣ ಕಾಲದಿಂದಲೂ ಚಾಲ್ತಿಯಲ್ಲಿದ್ದ ಊರು.ಲಂಕಾಧಿಪತಿ ರಾವಣಾಸುರನು ಭಜಂತ್ರಿ ವಾದ್ಯಗಾರರಿಗೆ ದಾನವಾಗಿ ನೀಡಿದ ಊರು.ಅಂತೆಯೇ ಇಲ್ಲಿನ ಭಜಂತ್ರಿಯವರು ಶಹನಾಯಿ ವಾದನಕ್ಕೆ ಸವಣೂರು ನವಾಬನಿಂದ ಬೆಳ್ಳಿಯ ಶಹನಾಯಿಯನ್ನು ಬಹುಮಾನವಾಗಿ ಪಡೆದುಕೊಂಡಿದ್ದರು.
1664 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ಬೀಂಜಿ ಕೋಟೆಗೆ ಹೋಗುವಾಗ ಈ ನಗರಕ್ಕೆ ಭೇಟಿ ಕೊಟ್ಟಿದ್ದರೆಂದು ಇತಿಹಾಸ ಹೇಳುತ್ತದೆ.ವಿಜಾಪುರದ ಆದಿಲಶಾಹಿ ಅರಸರು ಈ ಊರನ್ನು ತಮ್ಮ ಮಗಳಿಗೆ ಬಳೆ ತೊಡಿಸುತ್ತಿದ್ದ ಬಳೆಗಾರನಿಗೆ ಉಂಬಳಿಯಾಗಿ ಕೊಟ್ಟಿದ್ದರಂತೆ,ಅದಕ್ಕಾಗಿ ಈ ಊರಿಗೆ ಬಾಂಗಡಿ ಕೋಟೆ ಎಂದೂ ಮುಂದೆ ಬಾಗಲಕೋಟೆಯೆಂದು ಹೆಸರಾಯಿತು ಎಂಬ ಪ್ರತೀತಿ ಇದೆ.

  ಬಾಗಲಕೋಟೆಯ ಇತಿಹಾಸ ಮತ್ತು ಸಂಸ್ಕೃತಿ ಅಭ್ಯಸಿಸಿದಾಗ ಇಲ್ಲಿ ಸರ್ವಧರ್ಮಿಯರು ಕೂಡಿ ಬಾಳಿ ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ ಕೀರ್ತಿ ಈ ನಗರಕ್ಕಿದೆ.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ಅಸಹಕಾರ ಚಳವಳಿ’ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಗಾಂಧೀಜಿಯವರು ಬಾಗಲಕೋಟೆಗೆ ಬಂದಿದ್ದರು.1921 ಮೇ 28 ರಂದು ಗಾಂಧೀಜಿಯವರು ಬಾಗಲಕೋಟೆಗೆ ಬಂದಾಗ ಆ ಕಾಲಕ್ಕೆ ಒಂದು ಸಾವಿರ ರೂ.ಗಳ ನಿಧಿಯನ್ನು ಅರ್ಪಿಸಲಾಗಿತ್ತು.
1931 ರಲ್ಲಿ ಪಂಡಿತ ಜವಾಹರಲಾಲ ನೆಹರೂ ಬಾಗಲಕೋಟೆಯ ಹಿಂದೂಸ್ಥಾನ ಸೇವಾದಳಕ್ಕೆ ಭೇಟಿಕೊಟ್ಟಿದ್ದರು.ಐತಿಹಾಸಿಕ ಸೇವಾದಳ ಕಟ್ಟಡ ಮುಳುಗಡೆಯಾಗಿ ಅದರ ಪ್ರತಿರೂಪ ನವನಗರದಲ್ಲಿ ನಿರ್ಮಿಸಲಾಗಿದೆ.ಸರ್ದಾರ್ ವಲ್ಲಭ ಬಾಯಿ ಪಟೇಲರು ಭಾಷಣ ಮಾಡಿದ ಜಾಗದಲ್ಲಿ ವಲ್ಲಭ ಬಾಯಿ ಚೌಕ ಕಟ್ಟಲಾಗಿದೆ,ಇದೂ ಎರಡನೆಯ ಹಂತದಲ್ಲಿ ಕೃಷ್ಣಾರ್ಪಣವಾಗಲಿದೆ.ಇವತ್ತು ಹಳೆ ಬಾಗಲಕೋಟ-ವಿದ್ಯಾಗಿರಿ-ನವನಗರವನ್ನು ಒಂದುಗೂಡಿಸುವ ಬೃಹತ್ತ ಸೇತುವೆ ಮತ್ತು  ರಸ್ತೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಸುಂದರಗೊಳಿಸಲಾಗಿದೆ.ಮರಾಠ ದೊರೆಗಳ ಕಾಲದಲ್ಲಿ ಕಟ್ಟಲಾಗಿದ್ದ ಶಿರೂರು ಅಗಸಿಯು ಮುಳುಗಡೆಯಾಗಲಿದ್ದು ,ಅದನ್ನು ಸಂಗಮ ಕ್ರಾಸ್ ಬಳಿ ಬೃಹತ್ತಾಗಿ ಕಟ್ಟಲಾಗುತ್ತಿದೆ.
ಮುಳುಗಡೆ ಊರಿನ ಹಿಂದಿನ ಸಂಸ್ಕೃತಿಯನ್ನು ಮರು ಸ್ಥಾಪಿಸಲು ಊರ ಜಾತ್ರೆ,ಹಬ್ಬ ಹರಿದಿನ,ಉರುಸು ,ಓಕಳಿ ,ಹೋಳಿ ಮೊದಲಾದವನ್ನು ನಗರದ ಯುವ ಜನಾಂಗ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ.

 –ಡಾ.ಪ್ರಕಾಶ ಗ.ಖಾಡೆ ,ಸೆಕ್ಟರ್ ನಂ.63,ನವನಗರ,ಬಾಗಲಕೋಟ -9845500890

No comments:

Post a Comment