Thursday, 18 April 2013


                                                       ಕನ್ನಡ ಹರಿದಾಸ ಕಾವ್ಯ ಪರಂಪರೆ
                                                          - ಡಾ.ಪ್ರಕಾಶ ಗ.ಖಾಡೆ , ಬಾಗಲಕೋಟ

       ಕಳೆದ ಹದಿನೇಳನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗಿನ ಕಾಲದಲ್ಲಿ ಉತ್ತರ ಕರ್ನಾಟಕ ಮತ್ತು ಹೈದಾರಾಬಾದ್ ಕರ್ನಾಟಕ ಭಾಗದಲ್ಲಿ ಮೂಡಿಬಂದ ಸ್ಥಳೀಯ ಕಾವ್ಯ ಸಂದರ್ಭಗಳನ್ನು ಪರಿಗಣಿಸಿ ನೋಡಿದಾಗ ಅದೊಂದು ‘ದೇಸೀ ಸಾಹಿತ್ಯದ ಸುವರ್ಣಯುಗ’ ಎಂದು ಕರೆಸಿಕೊಳ್ಳುವುದು ಖಚಿತವಾಗುತ್ತದೆ. ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ವಿಜಯನಗರದ ಪತನದ ಅನಂತರ ಕನ್ನಡ ಸಾಹಿತ್ಯ ಅe್ಞÁತವಾಸಕ್ಕೆ ಹೋಯಿತೆಂದು ಬಹುತೇಕ ಚರಿತ್ರೆಕಾರರು ಹೇಳಿದ್ದಾರೆ. ಈ ದಿನಗಳಲ್ಲಿ ಇಂದಿನ ಕರ್ನಾಟಕದಲ್ಲಿಯ ಬಹುತೇಕ ಪ್ರದೇಶಗಳು ವಿಜಾಪುರದ ಆದಿಲ್‍ಶಾಹಿಯ ರಾಜ್ಯಕ್ಕೆ ಒಳಪಟ್ಟಿದ್ದವು. ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆಕಾರರ ಊಹೆಯೂ ವಾಸ್ತವವಾಗಿತ್ತು, ಆದರೆ ವಸ್ತುಸ್ಥಿತಿ ಹಾಗಿರಲಿಲ್ಲ.ಕವಿ ರನ್ನ, ನಾಗಚಂದ್ರ, ಕುಮಾರ ವಾಲ್ಮೀಕಿ, ಬಸವಣ್ಣನವರನ್ನು ಕನ್ನಡಕ್ಕೆ ಕೊಟ್ಟ ಆದಿಲ್‍ಶಾಹಿ ಪ್ರಭುತ್ವಕ್ಕೊಳಗಾದ ವಿಜಾಪುರ ರಾಜ್ಯ ಈ ಕಾಲದಲ್ಲಿ ಹಲವು ಭಾಷೆಗಳ ಸಂಗಮವಾಗಿ ‘ಕನ್ನಡ’ವನ್ನು ಹುಡುಕುವಂತಾಯಿತು. ಆಳರಸರು ತಂದ ಪರ್ಶಿಯನ್ ಭಾಷೆ, ಸೈನ್ಯದಲ್ಲಿ ಬಳಕೆಯಾಗಿ ಅಬಿsವೃದ್ಧಿ ಹೊಂದಿದ ಉರ್ದು ಭಾಷೆ, ಮರಾಠಿಗರ ಶರೀರ ಸಂಬಂಧದಿಂದ ಬೆಳೆದು ಬಂದ ಮರಾಠಿ ಭಾಷೆ, ಇವೆಲ್ಲ ಭಾಷೆಗಳ ಮಿಶ್ರಣದಿಂದ ಹುಟ್ಟಿದ ಹೊಸ ಭಾಷೆ ಧಖಣಿ. ಇವೆಲ್ಲ ಕನ್ನಡವನ್ನು ಒಂದೆಡೆ ಪರಕೀಯಗೊಳಿಸಿದವು ಎನ್ನುವುದಾದರೆ ಮತ್ತೊಂದೆಡೆ ಈ ಭಾಷೆಗಳ ಕೊಳುಕೊಡುಗೆಗಳ ಸಮೃದ್ಧತೆ ಸಾಧ್ಯವಾಯಿತೆನ್ನಬಹುದು. ಈ ಸಾಧ್ಯತೆಯನ್ನು ದುಡಿಸಿಕೊಂಡ ಹರಿದಾಸರು, ಲಾವಣಿಕಾರರು, ತತ್ತ್ವಪದಕಾರರು ಕನ್ನಡವನ್ನು ಮುಕ್ಕಾಗದಂತೆ ಉಳಿಸಿಕೊಂಡು ಬಂದಿರುವುದು ಬಹುದೊಡ್ಡ ಸಾಧನೆಯಾಗಿದೆ. ಈ ಕಾಲದ ಕನ್ನಡ ಭಾಷೆಯ ಸಾಹಿತ್ಯ ಕೃತಿಗಳಲ್ಲಿಯ ಒಂದು ವೈಚಿತ್ರ್ಯವೆಂದರೆ, ಮಿಶ್ರ ಭಾಷಾ ಕೃತಿ ರಚನೆ. ಕಾಖಂಡಕಿ ಮಹಿಪತಿರಾಯರ ‘ಬಾಟ ಪಕಡೋ ಸೀದಾ’ ಎಂಬ ಕೃತಿಯಲ್ಲಿ ಮೂರು ಭಾಷೆಗಳಿದ್ದರೆ, ಅವರದೇ ಆದ ಇನ್ನೊಂದು ಕೃತಿಯಲ್ಲಿ ನಾಲ್ಕು ಭಾಷೆಗಳ ಮಿಶ್ರಣವಿದೆ.
ಸಮಜೋ ಭಾಯಿ ಸಕುನಾ ಚಾರೋ ಖುದಾಕಾ
ತೆಲುಗು ಕನ್ನಡ ತುರುಕಾರೆ ವಂದೇ ಸುಖ |
ಎಂಬ ಈ ಪದದಲ್ಲಿ ಮರಾಠಿ ಭಾಷೆಯ ಪ್ರಯೋಗವನ್ನು ಮಾಡಿದ್ದರೂ ಅದರ ಹೆಸರನ್ನು ಹೇಳದಿದ್ದದು ಗಮನಾರ್ಹವಾಗಿದೆ.
ದೇಖೊ ಭಾಯಿ ದಿಸತಾ ತುಮನಾ ನಜರೋಮೆ ನಜರೋ
ತನ್ನೊಳಗೆ ಅತಿ ಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆ |
ಸದ್ಗುರು ವಚನ ಶೋಧುನಿ ಪಾಹಾ ಸಪ್ರೇಮ ಸಪ್ರೇಮ
ಚುಡವಯ್ಯ ಉನ್ನಾದಿ ಪೂರ್ಣ ಘನ ಮಹಿಮೆ |
ರಾಜಕೀಯ ಸ್ಥಿತ್ಯಂತರಗಳಿಂದ ಭಾಷಿಕ ಸೌಲಭ್ಯಗಳು ಹುಟ್ಟು ಹಾಕಿದ ಇಂಥ ರಚನೆಗಳು ಆ ಕಾಲದ ಕನ್ನಡ ಸಂದರ್ಭಕ್ಕೆ ಉಂಟುಮಾಡಿದ ಸಂಘರ್ಷಗಳನ್ನು ಅರಿಯಬೇಕಾಗಿದೆ. ಸಿಂದಗಿಯ ಜಕ್ಕಪ್ಪಯ್ಯನವರಿಂದ ರಚಿತವಾದ ‘ಅಗ್ನಿ ಪರೀಕ್ಷೆ’ ಎಂಬ ಖಂಡಕಾವ್ಯವು ಕನ್ನಡ ಮರಾಠಿ ಭಾಷೆಯಲ್ಲಿ ಬರೆಯಲಾಗಿದೆ. ಒಂದು ಕೃತಿಯನ್ನು ಹೀಗೆ ದ್ವಿಭಾಷೆಯಲ್ಲಿ ರಚಿಸಿದ ಉದಾಹರಣೆಗಳು ಸಾಹಿತ್ಯ ಚರಿತ್ರೆಯಲ್ಲಿ ಸಿಕ್ಕುವುದು ಅಪರೂಪವೆಂದೇ ಹೇಳಬೇಕು. “ಇದು ಕೇವಲ ಕನ್ನಡ ಕೃತಿಕಾರರಿಗಷ್ಟೇ ಸೀಮಿತವಾಗಿದೆವೆಂಬುದು ಮಹತ್ವದ ಸಂಗತಿಯಾಗಿರದೆ, ಮುಸ್ಲಿಮರೂ ತಮ್ಮ ಕೃತಿಗಳಲ್ಲಿ ಸಂಸ್ಕøತ ಮರಾಠಿ ತೆಲುಗು ಭಾಷೆಗಳ ಪದಗಳನ್ನು ಧಾರಾಳವಾಗಿ ಬಳಸಿದ ನಿದರ್ಶನಗಳು ದೊರೆಯುತ್ತವೆ. ವಿಶೇಷತಃ ಕನ್ನಡದ ಜನಪದ ಕೃತಿಗಳಾದ ಬೀಸುವ ಕಲ್ಲಿನ ಪದ, ಸೋಬಾನೆ ಪದ, ಕುಟ್ಟುವ ಪದಗಳು ‘ಚಕ್ಕೀನಾಮಾ’, ಸುಹಾಗನಾಮಾ ಎಂಬಿತ್ಯಾದಿಯಾಗಿ ದಖಣಿಯಲ್ಲಿ ಉರ್ದುವಿನಲ್ಲಿ ನೇರವಾಗಿ ಅನುವಾದಗೊಂಡ ಉದಾಹರಣೆಗಳು ವಿಜಾಪುರದ ಸುತ್ತಮುತ್ತಲಿನ ಮುಸ್ಲಿಂ ಕುಟುಂಬಗಳಲ್ಲಿ ಇಂದಿಗೂ ದೊರೆಯುತ್ತವೆ ಎನ್ನುತ್ತಾರೆ ಕನ್ನಡದ ಹಿರಿಯ ವಿದ್ವಾಂಸರಾದ ಡಾ,ಕೃಷ್ಣ ಕೋಲ್ಹಾರ ಕುಲಕರ್ಣಿಯವರು.
ಈ ಕೊಳ್-ಕೊಡುಗೆ ಈ ಪ್ರದೇಶದಲ್ಲಿ ಒಂದು ಸಾಂಸ್ಕøತಿಕ ಬದುಕನ್ನೂ ರೂಪಿಸಿದ್ದು ಮುಖ್ಯವಾಗುತ್ತದೆ. ಈ ಕಾಲದ ದಾನ ಪರಂಪರೆಯಲ್ಲಿ ವಿಜಾಪುರದ ರುಕ್ಮಾಂಗದ ಪಂಡಿತರ ಸಾಧನೆ ಗಮನಾರ್ಹವಾದುದು. ವಿಜಯನಗರ ಪತನದಲ್ಲಿ ನಂದಿ ಹೋದ ಕನ್ನಡ ಸಂಸ್ಕøತಿಯನ್ನು ಪುನರುಜ್ಜೀವನಗೊಳಿಸಿದರು. ಹಂಪಿಯ ನೌರಾನಂದಯತಿಗಳಿಂದಲೇ ಪ್ರಭಾವಿತರಾದ ಅವರು ದಾಸ ಸಾಹಿತ್ಯ, ಕೀರ್ತನ ಪರಂಪರೆ ಮುಂದುವರೆಸಿದರು. ಸಿಂದಗಿಯ ಬಿsೀಮಾಶಂಕರರು ಹಾಗೂ ಅವರ ಮಕ್ಕಳಾದ ಜಕ್ಕಪ್ಪಯ್ಯ ಮತ್ತು ಶಿವರಾಮ ಪಂಥರು ಕನ್ನಡ ಭಾಷೆಯಲ್ಲಿ ಅನೇಕ ಪದ್ಯಗಳನ್ನು ರಚಿಸಿದ್ದಾರೆ. ವಿಶೇಷವಾಗಿ, ಆಧ್ಯಾತ್ಮಿಕ ಅನುಭವಗಳನ್ನು ಹೇಳಿದ ಪದಗಳು ಅಪರೂಪದ್ದಾಗಿವೆ. ಸಾಹಿತ್ಯ ದೃಷ್ಟಿಯಿಂದ ‘ಶಂಕರ’ ಅಂಕಿತದಲ್ಲಿ ಜಕಪ್ಪಯ್ಯ ಬರೆದ ‘ದತ್ತಾತ್ರೇಯ ಷಟ್ಪದಿ’ 75 ಷಟ್ಪದಿಗಳ ಖಂಡಕಾವ್ಯ ಗಮನಾರ್ಹವಾಗಿದೆ. ದತ್ತ ಸಾಹಿತ್ಯವನ್ನು ಪ್ರಥಮವಾಗಿ ಕನ್ನಡದಲ್ಲಿ ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
       ಗಲಗಲಿ ಅವ್ವ ಹಾಗೂ ಅವರ ಶಿಷ್ಯೆ ಪ್ರಿಯಾಗಬಾಯಿ ಅವರು ಸಂಸ್ಕøತ ಘನ ಪಂಡಿತರ ಮನೆತನದಲ್ಲಿ ಹುಟ್ಟಿ ಬೆಳೆದವರು. ಕನ್ನಡ ಭಾಷೆಯಲ್ಲಿ ಪಾಮರರಿಗೂ ತಿಳಿಯುವಂತೆ ಭಕ್ತಿ ಪರವಾದ ಗೀತೆಗಳನ್ನು ಬರೆದರು. ಗಲಗಲಿ ಅವ್ವನವರಿಗೆ ತರ್ಕ, ನ್ಯಾಯಶಾಸ್ತ್ರಗಳಲ್ಲಿಯೂ ಪಾಂಡಿತ್ಯವಿದ್ದಿತು. ಅವರು ಮುಯ್ಯದ ಹಾಡು, ಶೃಂಗಾರ ತಾರತಮ್ಯ, ಮೋರೆಗೆ ನೀರು ತರುವ ಹಾಡು ಮೊದಲಾದ ಆಧ್ಯಾತ್ಮಪರವಾದ ಗೀತ ಕಾವ್ಯಗಳನ್ನು ಬರೆದಿದ್ದಾರೆ. ಶ್ರೀ ರಾಮೇಶ ಅಂಕಿತದಲ್ಲಿ ಅವರು ಬರೆದರು.
ಭಾವಜ್ಞರ ಸಂಗ ಶಾವೀಗಿ ಉಂಡಂತೆ
ಭಾವವರಿಯದಾ ಪಾಮರರ
ಭಾವವರಿಯದಾ ಪಾಮರರ | ಸಹವಾಸ
ಬೇವಿನ ಹಾಲು ಕುಡಿದಂತೆ.
ಎಂಬಲ್ಲಿ ಗಲಗಲಿ ಅವ್ವನವರು ಆ ಕಾಲಕ್ಕೆ ಬಳಕೆಯಲ್ಲಿದ್ದ ತ್ರಿಪದಿ ಮಟ್ಟುಗಳನ್ನು ಬಳಸಿಕೊಂಡು ಈ ಬಗೆಯ ರಚನೆ ನೀಡಿದರು. ಪ್ರಯಾಗಬಾಯಿಯವರು ಕ್ಲಿಷ್ಟಕರವಾದ ಭಾಗವತ ಅದರಲ್ಲೂ ತತ್ವಗಳಿಂದ ಕೂಡಿದ ತೃತೀಯ ಸ್ಕಂದವನ್ನು ಸರಳಗನ್ನಡದಲ್ಲಿ ಅನುವಾದ ಮಾಡಿದರು. ಈ ಪರಂಪರೆಯಲ್ಲಿ ಮಹಿಪತಿರಾಯರ ಮಗ ಕೃಷ್ಣದಾಸರು ಸಾವಿರಾರು ಕೀರ್ತನೆಗಳಲ್ಲದೆ ‘ಭಾವಾರ್ಥ ರಾಮಾಯಣ’, ಪ್ರಲ್ಹಾದ ಚರಿತ್ರೆ, ಶ್ರವಣಕುಮಾರ ಚರಿತ್ರೆ, ವಾಮನ ಚರಿತ್ರೆ, ಕಾಳಿಯಾನಂದ ಚರಿತ್ರೆ, ಸುದಾಮ ಚರಿತ್ರೆ, ಗಜೇಂದ್ರ ಮೋಕ್ಷ ಆಖ್ಯಾನಗಳು, ‘ಆನಂದ ಲಹರಿ’ ಎಂಬ ಖಂಡಕಾವ್ಯ ಮೊದಲಾದ ಕೃತಿಗಳನ್ನು ರಚಿಸಿದರು. ಕೃಷ್ಣದಾಸರ ‘ಆನಂದಲಹರಿ’ ಜನಪದ ಸ್ವರೂಪ ಹೊಂದಿದ ಕೃತಿ, ಮುಯ್ಯುದ ಹಾಡುಗಳು ಇಲ್ಲಿವೆ. ಮದುವೆ ಸಮಾರಂಭದಲ್ಲಿ ಬೀಗರು ಒಬ್ಬರಿಗೊಬ್ಬರು ಮುಯ್ಯ ತರುವುದು(ಕಾಣಿಕೆ), ಒಬ್ಬರನ್ನೊಬ್ಬರು ಹಾಸ್ಯ ಮಾಡುವುದು ಒಂದು ಸಂಪ್ರದಾಯ. ಅದೊಂದು ರಸ ಪ್ರಸಂಗ. ಈ ಹಿನ್ನೆಲೆಯಲ್ಲಿ ಒಂದು ಸಾಂಕೇತಿಕ ರೂಪಕವನ್ನು ಕಲ್ಪಿಸಿ ಶ್ರೀ ಕೃಷ್ಣದಾಸರು ವಿವೇಕ ಮತ್ತು ಬೋದಿs ಎಂಬ ಅಕ್ಕ ತಂಗಿಯರು ‘ಅಬಿsಮಾನಿ’ ಸೋದರ ಮಾವ. ‘ವಿಷಮೆ’ ಅತ್ತೆ ಇವರಲ್ಲಿಗೆ ಮುಯ್ಯು ತರುವಂತೆ ಆರಂಬಿsಸಿ ಪರಮಾರ್ಥ ಸಾಧನೆಗೆ ಅವಶ್ಯವಿದ್ದುದನ್ನೆಲ್ಲಾ ಇದರಲ್ಲಿ ಹೇಳಿದ್ದಾರೆ.

              ಹರಿದಾಸ ಸಾಹಿತ್ಯವು 12ನೆಯ ಶತಮಾನದಲ್ಲಿಯೇ ಆರಂಭವಾಗಿ 15-16ನೆಯ ಶತಮಾನದಲ್ಲಿ ಅತ್ಯಂತ ಉನ್ನತ ಸ್ಥಿತಿಯನ್ನು ಹೊಂದಿ ಮುಂದೆ 17ನೆಯ ಶತಮಾನದಲ್ಲಿ ನವ ಚೈತನ್ಯದಿಂದ ವಿಸ್ತಾರಗೊಂಡಿತು. ಕನ್ನಡ ಹರಿದಾಸ ಪರಂಪರೆಯನ್ನು ವಿಜಯನಗರ ಕಾಲದವರೆಗಿನ ಬೆಳೆದು ಬಂದ ದಾಸ ಸಾಹಿತ್ಯ, ವಿಜನಯಗರ ಪತನದ ಅನಂತರ ಬೆಳೆದು ಬಂದ ದಾಸ ಸಾಹಿತ್ಯವೆಂದು ಪ್ರೋ.ವಸಂತ ಕುಷ್ಟಗಿ ಅವರು ವಿಂಗಡಿಸಿದ್ದಾರೆ. ಪರಕೀಯ ದಾಳಿ, ಸ್ಥಳೀಯತೆಯ ನಾಶ, ಅನ್ಯ ಸಂಸ್ಕøತಿಯ ಹೇರಿಕೆ ಒತ್ತಡಗಳ ನಡುವೆ ನೆಮ್ಮದಿ ಕಳಕೊಂಡ ಸಾಮಾನ್ಯ ಜನರ ಬದುಕಿನಲ್ಲಿ ಆಶಾಕಿರಣವಾಗಿ ಬೆಳಕು ನೀಡಿ ಅವರ ಬದುಕು  ಹಸನುಗೊಳಿಸಿದ ಕೀರ್ತಿ ದಾಸ ಪರಂಪರೆಯ ಕೀರ್ತನಕಾರರಿಗೆ ಸಲ್ಲುತ್ತದೆ. ವಿಸ್ಮೃತಿಗೆ ಒಳಪಟ್ಟ ಕಾಲದಲ್ಲಿ ಕಾವ್ಯ ಕಟ್ಟಿ ಮೆರೆದ ದಾಸರ ಪರಂಪರೆಯ ನಮ್ಮ ರಚನಾಕಾರರ ಸಾಧನೆ ಅಪೂರ್ವವಾದುದು. ಹರಿದಾಸ ಸಾಹಿತ್ಯದ ಮೊದಲನೆಯ ಘಟ್ಟದಲ್ಲಿ ಪುರಂದರದಾಸರು ಕೇಂದ್ರಬಿಂದುವಾಗಿದ್ದಂತೆ ಎರಡನೆಯ ಘಟ್ಟದಲ್ಲಿ ವಿಜಯದಾಸರು ಕೇಂದ್ರಬಿಂದುವಾಗಿ ಅವರ ನೇತೃತ್ವದಲ್ಲಿ ಅನೇಕ ಹರಿದಾಸರು ದಾಸಕೂಟ ಪದ್ಧತಿಯನ್ನು ಮುಂದುವರೆಸಿದರು. ಅದರಿಂದ ‘ಅಸಾರತೆಯ ಕಾಲದಲ್ಲೂ’ ದಾಸ ಸಾಹಿತ್ಯವು ಚೇತೋಹಾರಿಯಾಗಿ ಬೆಳೆದು ಎಲ್ಲಿ ನೋಡಿದರಲ್ಲಿ ಹಸುರು ಕುಡಿಯೊಡೆದು ಬೆಳೆಯಿತು. ಇವರು ತಮ್ಮ ಒಂದು ಶಿಷ್ಯರ ದೊಡ್ಡ ಬಳಗವನ್ನೇ ಕಟ್ಟಿದರು. ಆ ಬಳಗದಲ್ಲಿ ಭಾಗಣ್ಣ ದಾಸರು, ಆನಂದ ದಾಸರು, ಶೀನಪ್ಪ ದಾಸರು, ರಾಮದಾಸರು, ಪಂಗನಾಮ ತಿಮ್ಮಣ್ಣದಾಸರು, ಕೊಂಡಲಿ ಮಧ್ವಾಚಾರ್ಯರು, ಮೋಹನದಾಸರು, ಮೊದಲಕಲ್  ಶೇಷಗಿರಿದಾಸರು ಹಾಗೂ ಶೇಷಗಿರಿದಾಸರು ಮೊದಲಾದವರು ಬರುತ್ತಾರೆ. ಇವರಲ್ಲಿಯೇ ಅನೇಕರು ತಮ್ಮ ಶಿಷ್ಯ ಪರಂಪರೆಯನ್ನು ಬೆಳೆಸಿ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.
                                                                       ಪುರಂದರ ದಾಸರು
ವಿಜಯದಾಸರು (1687-1755) ರಾಯಚೂರು ಜಿಲ್ಲೆ ಮಾನವಿ ತಾಲ್ಲೂಕಿನ ಚೀಕಲಪರವಿ ಗ್ರಾಮದವರು. ತಮ್ಮ ‘ವಿಜಯ ವಿಠ್ಠಲ’ ಅಂಕಿತದಿಂದ ವಿಚಾರಪೂರ್ಣ, ಆಲೋಚನಾ ಪರವಾದ ಪಾಂಡಿತ್ಯಪೂರ್ಣ ಕಾವ್ಯ ರಚಿಸಿ ಹಾಡಿದರು. ‘ಮಾನ ನಿನ್ನದು, ಅಬಿsಮಾನ ನಿನ್ನದು ದಾನವಾಂತಕ ರಂಗ ದಯಮಾಡಿ ಸಲಹೋ....’ ಎಂದು ಮೊರೆಯಿಟ್ಟ ಅವರು ‘ಅಂತರಂಗದ ಕದವು ತೆರೆಯಿತಿಂದು; ಎಂಥ ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ’ ಎಂದು ತನ್ಮಯರಾಗಿ ಹಾಡಿದರು.
                                                                        ವಿಜಯದಾಸರು
ವಿಜಯದಾಸರಿಗೆ ಸಮಕಾಲೀನರಾಗಿದ್ದ ಬಾಗಲಕೋಟೆಯ ಪ್ರಸನ್ನ ವೆಂಕಟದಾಸರು ಉತ್ತರ ಕರ್ನಾಟಕದ ಭಾಷಾ ವೈಖರಿಯಲ್ಲಿ ಜಾನಪದ ಶೈಲಿಯನ್ನು ಬಳಸಿಕೊಂಡು ಕೃತಿ ರಚಿಸಿದರು. ಇವರ ಸಾಹಿತ್ಯವು ‘ಕಾಕಂಬಿ’ ಸವಿಯಿಂದ ಕೂಡಿದೆಯೆಂದು ಅವರ ಸಮಕಾಲೀನ ದಾಸರು ಮೆಚ್ಚಿಕೊಂಡಿದ್ದಾರೆ. ಇವರು ಬದುಕಿದ್ದ ಕಾಲ ರಾಜಕ್ರಾಂತಿಯ ಕಾಲ. ಆ ಕ್ರಾಂತಿಯ ಭಾಷೆಯ ಸತ್ತ್ವವನ್ನು ಆರಿತು ಸಾಂಸ್ಕøತಿಕ ದುರಂತವನ್ನು ನಿವಾರಿಸಲು ತಮ್ಮ ಸಾಹಿತ್ಯದಲ್ಲಿ ಆ ಸತ್ವವನ್ನು ಬಳಿಸಿದ್ದಾರೆ. ಇದರಿಂದ ಹೊಸ ಮೆರಗು ದಾಸ ಸಾಹಿತ್ಯದ ಪ್ರವಾಹಕ್ಕೆ ಬಂದಿದೆ.
‘ಯಶೋದೆಯಮ್ಮಾ ನಂಗನ್ನೆತ್ತಿಕೊ ಅಮ್ಮಾ... ವತ್ತಿ ಬಲು ಅತ್ತು ಬಂದೀನೆ ನಾ ಇತ್ತೇ ಅಮ್ಮಿತಿಂದೆನೇ ಹೊಟ್ಟೆ ಹಸ್ತು....ತುತಿ ಬಾಯಿ ದಂಗ್ಯಾವೆ ಬಿಚಿವಾವು ವಾಕತ್ತಿ ಬತ್ತಾವೆ.... ಅತ್ತಿದಾವು ಪಪ್ಪುಕಾಯಿ ಅಮ್ಮಮ ಮ್ಮೊಲ್ಲೆ ಉತ್ತತ್ತಿ’ ....ಹೀಗೆ  ಬಾಗಲಕೋಟೆ ಪರಿಸರದ ಗ್ರಾಮ್ಯ ಭಾಷೆಯನ್ನು ಜನಪದರ ಬಾಯಿಂದಲೇ ನೇರ ಎತ್ತಿಕೊಂಡು ಬರದಂತೆ ಪ್ರಸನ್ನ ವೆಂಕಟದಾಸರು ತಮ್ಮ ಕೃತಿಗಳನ್ನು ರಚಿಸಿದರು.ಹೆಳವನಕಟ್ಟೆ ಗಿರಿಯಮ್ಮ (1750) ಅವರದು ಹರಿದಾಸ ಸಾಹಿತ್ಯದಲ್ಲಿ ಸ್ತ್ರೀಪರ ನೆಲೆಯ ಚಿಂತನೆಯಲ್ಲಿ ಗಮನಾರ್ಹ ಹೆಸರು. ಚಂದ್ರಹಾಸನ ಕಥೆ, ಸೀತಾಕಲ್ಯಾಣ, ಬ್ರಹ್ಮಕೊರವಂಜಿ ಮೊದಲಾದ ಕೃತಿಗಳನ್ನು ಅನೇಕ ಕೀರ್ತನೆಗಳನ್ನು ರಚನೆ ಮಾಡಿದರು. ಜಗನ್ನಾಥದಾಸರು (1782) ಸಾಹಿತ್ಯಿಕ ಕಾರ್ಯವನ್ನು ವಿಸ್ತಾರಗೊಳಿಸಿದರು. ಎಲ್ಲ ಹರಿದಾಸರಂತೆ ಕೀರ್ತನೆ, ಸುಳಾದಿ, ಉಗಾಭೋಗಗಳನ್ನು ರಚಿಸುವುದರೊಂದಿಗೆ ‘ಹರಿಕಥಾಮೃತಸಾರ’ ಎಂಬ ಹರಿದಾಸ ಭಕ್ತಿ ತತ್ತ್ವ ಪ್ರಚೋದಕ ಮಹಾಪದ್ಯ ಪ್ರಬಂಧವನ್ನು, ‘ತತ್ತ್ವಸುವಾಲಿ’ ಎಂಬ ಲಘು ಪ್ರಬಂಧವನ್ನು ನಿರ್ಮಿಸಿದರು. ಸಂಸ್ಕøತ ಅರಿಯದ ಜನರಿಗೆ ದ್ವೈತ ಮತ ತತ್ವಗಳನ್ನು ಮಾನವನ ನಡವಳಿಕೆಗಳನ್ನು ಇತರ ಅನೇಕ ನೀತಿ ವಿಷಯಗಳನ್ನು ತಿಳಿಯಲು ಪರಮ ಪ್ರಯೋಜನವಾಗುವ ಹಿರಿಯ ಗ್ರಂಥ ‘ಹರಿಕಥಾಮೃತಸಾರ’ವಾಗಿದೆ.ಜಗನ್ನಾಥದಾಸರ ‘ಸುವಾಲಿ’ಗಳು ಸುಂದರವಾದ, ತ್ರಿಕಾಲ ಸತ್ಯವನ್ನು ಹೇಳುವ ಸಿದ್ಧಾಂತ ವಚನಗಳ ಸಮೂಹವಾಗಿವೆ. ಇದರ bsÀಂದಸ್ಸಿನ ರೀತಿಯು ತ್ರಿಪದಿಯ ಪ್ರಕಾರಕ್ಕೆ ಸೇರಿದೆ. ಇಲ್ಲಿ ಪಾಂಡಿತ್ಯದ ವೈಖರಿ ಇಲ್ಲ. ನೇರವಾಗಿ ಹೃದಯದಿಂದ ಹರಿದು ಬಂದ ಅನುಭವದ ಸಂಪತ್ತಿನ ಸಾರ ಸವಿಯೇ ಈ ಸುವಾಲಿಗಳು
ನಿಂದಿಸುವವರೆಲ್ಲ ನಿಂದ್ಯರಾಗುವರು, ಅಬಿs
ವಂದಿಸುವ ಜನರು ಜಗದೊಳು | ಜಗದೊಳು ಜನರಿಂದ
ವಂದ್ಯರಾಗುವರು ಎಂದೆಂದು ||
ನಿಂದಕರು ಮತ್ತು ಸಜ್ಜನರು ಸಮಾಜದಲ್ಲಿ ಉಳಿಸಿಕೊಳ್ಳುವ ಮೌಲ್ಯವನ್ನು ಜಗನ್ನಾಥದಾಸರು ತಮ್ಮ ಸುವಾಲಿಗಳ ಮೂಲಕ ಸಾರಿದರು. ಜಗನ್ನಾಥದಾಸರ ನಂತರ ಈ ಪರಂಪರೆಯಲ್ಲಿ ಗುರುತಿಸಿಕೊಂಡವರು ಕರ್ಜಗಿ ದಾಸಪ್ಪನವರು, ಲಿಂಗಸೂಗೂರಿನ ಯೋಗೀಂದ್ರ ದಾಸರು, ಹುಂಡೇಕಾರ ದಾಸರು, ಅಬಿsನವ ಜನಾರ್ದನ ವಿಠ್ಠಲ, ಬಿsೀಮೇಶ ವಿಠ್ಠಲ , ಲಿಂಗಸೂರು ವೆಂಕಟದಾಸರು, ರಾಮದಾಸರು, ಗುರುಪ್ರಾಣೇಶ ವಿಠ್ಠಲ, ಶ್ರೀಶ ಪ್ರಾಣೇಶ ವಿಠ್ಠಲ, ಸುಖನಿದಿs ವಿಠ್ಠಲ, ಕಂಪ್ಲಿ ನರಸಿಂಹದಾಸರು, ಕುಂಟೋಜಿದಾಸರು... ಹೀಗೆ ಪಟ್ಟಿ ಬೆಳೆಯುತ್ತದೆ.
. ಒಟ್ಟಾರೆ ಕನ್ನಡ ಜಾನಪದ ಪರಂಪರೆಯನ್ನು ಬಳಿಸಿಕೊಂಡು ಬಂದ ದಾಸ ಸಾಹಿತ್ಯ ಪರಂಪರೆಯು ಜನಮುಖಿಯಾದ ರಚನೆಗಳನ್ನು ಕೊಡುತ್ತ ಕನ್ನಡ ನವೋದಯಕ್ಕೆ ಭೂಮಿಕೆ ಸಜ್ಜುಗೊಳಿಸಿರುವ ಪ್ರಕ್ರಿಯೆಗೆ ಚಾಲನೆ ನೀಡಿತು.
====================================================================  
                                                             -ಡಾ.ಪ್ರಕಾಶ ಗ.ಖಾಡೆ ,ಬಾಗಲಕೋಟ
ವಿಳಾಸ : ಡಾ.ಪ್ರಕಾಶ ಗ.ಖಾಡೆ, ಶ್ರೀ ಗುರು, ಸರಸ್ವತಿ ಬಡಾವಣೆ,ಸಂಖ್ಯೆ-63,ನವನಗರ,ಬಾಗಲಕೋಟ.ಮೊ.-9845500890

No comments:

Post a Comment