ನಗರಾಂಚಲ ಜಾನಪದ ಮತ್ತು ‘ರತ್ನನ ಪದಗಳು’
-ಡಾ.ಪ್ರಕಾಶ ಗ.ಖಾಡೆ
ಜನಪದ ಕಾವ್ಯದ ಪ್ರಭಾವದಿಂದ ಜೀವಂತವಾದ ಹೊಸಕಾವ್ಯ ಹುಟ್ಟಿ ಬರುವ ಸಂದರ್ಭದಲ್ಲಿ ಬೇಂದ್ರೆ, ಮಧುರಚೆನ್ನ, ಆನಂದಕಂದರಂತೆ ಮೈಸೂರು ಕೇಂದ್ರದ ಜಿ.ಪಿ. ರಾಜರತ್ನಂ ಅವರನ್ನು ಪ್ರಧಾನವಾಗಿ ಗುರುತಿಸಬೇಕು. 1932 ರಲ್ಲಿ ‘ಯೆಂಡ್ಕುಡ್ಕ ರತ್ನ’ ಎಂಬ ಹೆಸರಿನಲ್ಲಿ ಹದಿನಾಲ್ಕು ಪದ್ಯಗಳನ್ನು ಪ್ರಕಟಿಸಿದ ಅವರು ಇದೇ ಭಾವಲಹರಿಯಲ್ಲಿ ಬರೆದ ಪದ್ಯಗಳನ್ನು ಸೇರಿಸಿ 1934 ರಲ್ಲಿ ‘ರತ್ನನ ಪದಗಳು’ ಪ್ರಕಟಿಸಿದರು. ಅನನ್ಯವಾದ ತನ್ನ ಪ್ರದೇಶದ ಜನರಾಡುವ ಮಾತನ್ನು ಕಾವ್ಯಕ್ಕೆ ತಂದ ರಾಜರತ್ನಂ ಅವರು ಒಂದು ವಿಶಿಷ್ಟ ಪ್ರಯೋಗವನ್ನು ಕನ್ನಡಕ್ಕೆ ಪರಿಚಯಿಸಿದರು. ಸಂಪೂರ್ಣ ಗ್ರಾಮ್ಯವನ್ನೇ ಬಳಸಿಕೊಂಡು ಬರೆದ ‘ರತ್ನನ ಪದಗಳು’ ಶುದ್ಧವೆನ್ನಬಹುದಾದ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಇವುಗಳನ್ನು ಕೂಡಿಸುವ ಒಂದು ರಸ ಸೇತುವೆಯಾಯಿತು.
ಯೆಂಡ ಯೆಡ್ತಿ ಕನ್ನಡ ಪದ್ಗೊಳ್
ಅಂದ್ರೆ ರತ್ನಂಗ್ ಪ್ರಾಣ
ಬುಂಡೇನೆತ್ತಿ ಕುಡುದ್ಬುಟ್ಟಾಂದ್ರೆ
ತಕ್ಕೋ ಪದ್ಗೋಳ್ ಬಾಣ
ಕುಡುಕನ ಭಾಷೆಯ ಅನುಕರಣದಲ್ಲಿ ಕಾವ್ಯದ ಮಾಂತ್ರಿಕತೆಯನ್ನು ಸೃಜಿಸಿದ ಕವಿ ಗ್ರಾಮ್ಯ ಭಾಷೆಯಲ್ಲಿ ಇಷ್ಟು ಅಚ್ಚುಕಟ್ಟಾಗಿ ಕವಿತೆಗಳನ್ನು ಬರೆಯಲು ಸಾಧ್ಯವೆಂಬುದನ್ನು ತೋರಿಸಿ ಅಚ್ಚರಿ ಹುಟ್ಟಿಸಿದರು. ರಾಜರತ್ನಂ ಅವರದು ಅದ್ಭುತವಾದ ಕವನ ಶಕ್ತಿ. ಪ್ರಾಸವನ್ನು ಜೋಡಿಸುತ್ತ bsÀಂದೋಬದ್ಧವಾಗಿಯೇ ಕಾವ್ಯವನ್ನು ರೂಪಿಸುತ್ತಾರೆ.
ಜನರಾಡುವ ಪದ ಬಳಕೆಯ ಸಾಲುಗಳು ಇಲ್ಲಿ ಕಂಡರೂ ಒಂದು ವಿಶಿಷ್ಟವಾದ ಶಿಷ್ಟ ಇಲ್ಲಿ ಕೆಲಸ ಮಾಡುತ್ತದೆ. ಅಂದರೆ ಕವಿಯ ಸುಶಿಕ್ಷಿತ ಶಿಷ್ಟ ಪ್ರಜ್ಞೆ ತನಗೆ ಬಿsನ್ನವಾದ ಜನಪದ ಭಾಷೆಯ ಮೂಲಕ ಅಬಿsವ್ಯಕ್ತಗೊಳ್ಳುವ ಪ್ರಯತ್ನದಲ್ಲಿ ಆ ಭಾಷೆಯ ಸಾಧ್ಯತೆಗಳ ಜೊತೆ ಸೆಣಸಾಡಿತಾದರೂ ತನ್ನ ಶಿಷ್ಟ ಪ್ರಜ್ಞೆ ಯನ್ನು ಪ್ರಾಪ್ತಗೊಳಿಸಿಕೊಟ್ಟ ಶಿಷ್ಟ ಭಾಷೆಯನ್ನೂ ಅದರೊಟ್ಟಿಗೇ ಒಂದು ವಿಶಿಷ್ಟ ಹದ ಮತ್ತು ಅನನ್ಯತೆಯಲ್ಲಿ ಬೆಸೆಯಲು ಪ್ರಯತ್ನಿಸಲಿಲ್ಲ. ಇದರಿಂದಾಗಿ ಜನಪದ ಅಥವಾ ಗ್ರಾಮ್ಯ ಭಾಷೆಯನ್ನು ಅದರ ವೈವಿಧ್ಯ ರಮ್ಯತೆಗಾಗಿಯೋ ಅನೇಕ ಕಡೆಗಳಲ್ಲಿ ಪ್ರಯೋಗಿಸಿದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ರಾಜರತ್ನಂ ಅವರು ಗ್ರಾಮ್ಯ ಭಾಷೆಯಲ್ಲಿ ಇಲ್ಲಿ ಕವಿತೆಗಳನ್ನು ರಚಿಸಿದರೂ ಕೊನೆಯಲ್ಲಿ ‘ರತ್ನನ ಪದಕ್ಕೆ ಕನ್ನಡಿ’ ಎಂಬ ಅನುಬಂಧದಲ್ಲಿ ಪ್ರತಿಯೊಂದು ಕವನದ ವಾಕ್ಯವನ್ನು ಬಿಡಿಸಿ ಬರೆದು ಅರ್ಥ ವಿಸ್ತರಿಸಿದ್ದನ್ನು ಗಮನಿಸಬೇಕು. ಇದನ್ನು ಕುರ್ತಕೋಟಿಯವರು ‘ಭಾಷಾಂತರ ವ್ಯಾಪಾರ’ವೆನ್ನುತ್ತಾರೆ. “ಇಲ್ಲಿ ಉಪಯೋಗಿಸುವ ಪ್ರತಿಯೊಂದು ಶಬ್ದಕ್ಕೂ ಸಂವಾದಿಯಾಗಿ ಒಂದು ಶಿಷ್ಟ ಪದವಿದೆ. ಅದೇ ರೀತಿಯಲ್ಲಿ ಶಿಷ್ಟವಾದ ಭಾಷೆ ಗ್ರಾಮ್ಯ ರೀತಿಯಲ್ಲಿ ಅನುವಾದಗೊಳ್ಳುತ್ತದೆ. ಹೀಗೆ ಹೊಸ ಪ್ರಪಂಚದ ನಾಮರೂಪಗಳು ಬದಲಾದರೂ ಅವುಗಳ ವಾಸ್ತವತೆ ಬದಲಾಗುವುದಿಲ್ಲ. ಇಲ್ಲಿ ಭಾಷೆ ತನಗೆ ಸಹಜವಾದ ಆವರಣದ ಮತ್ತು ಮನಸ್ಸಿನ ಹಲವು ಅವಸ್ಥೆಗಳನ್ನು ಸಮರ್ಪಕವಾಗಿ ಭರಿಸಿದೆ. ಬೆಂಗಳೂರಿನ ಶಿಷ್ಟ ಭಾಷೆಗೆ ಹಾಗೂ ‘ರತ್ನನ ಪದಗಳ’ ನಗರಾಂತರ್ಗತ ಅಥವಾ ಜಿ.ಎಸ್.ಎಸ್. ಅವರು ಕರೆದಂತೆ ‘ನಗರಾಂಚಲ ಜನಪದ’ ಭಾಷೆಗೆ ಪರಸ್ಪರ ಇರುವಷ್ಟು ಅಂತರ ಧಾರವಾಡದ ಶಿಷ್ಟ ಹಾಗೂ ಜನಪದ ಭಾಷೆಗೆ ಇಲ್ಲ. ಹಾಗಾಗಿ ಕನ್ನಡ ನುಡಿಯ ಅಬಿsಮಾನ. ಬದುಕಿನ ಬಗೆಗೆ ರತ್ನ ಮಾಡುವ ತತ್ವ ಮೀಮಾಂಸೆಗಳು ಬಳಕೆಯಾದ ಭಾಷೆ ಹಾಗೂ ಆವರಣದ ಸಂವೇದನಾ ಕ್ಷೇತ್ರಕ್ಕೆ ಹೊರಗಿನಿಂದ ಆಮದಾದವುಗಳಂತೆ ಅನ್ನಿಸುತ್ತದೆ. –ಡಾ.ಪ್ರಕಾಶ ಗ.ಖಾಡೆ
============================== = *
ವಿಳಾಸ ;ಡಾ.ಪ್ರಕಾಶ ಗ.ಖಾಡೆ ,ಶ್ರೀ ಗುರು ,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ.
ಮೊ.-9845500890
No comments:
Post a Comment