Monday, 21 October 2013

ಡಾ.ಕಾಟ್ಕರ್ ಕೃತಿ ಸಿನಿಮಾ..

ಡಾ ಸರಜೂ ಕಾಟ್ಕರ್ ಕಾದಂಬರಿ ಆಧಾರಿತ ‘ಇಂಗಳೆ ಮಾರ್ಗ’ ಚಲನ ಚಿತ್ರ ಚಿತ್ರೀಕರಣ ಆರಂಭ

ಡಾ ಪ್ರಕಾಶ ಗ ಖಾಡೆ
ಕನ್ನಡದ ಹೆಸರಾಂತ ಬರಹಗಾರ ಡಾ.ಸರಜೂ ಕಾಟ್ಕರ್ ಅವರ ‘ದೇವರಾಯ’ ಕಾದಂಬರಿ ‘ಇಂಗಳೆ ಮಾರ್ಗ’ ಹೆಸರಿನಲ್ಲಿ ಚಲನಚಿತ್ರವಾಗಿ ಮೂಡಿ ಬರಲಿದೆ. ಚಿತ್ರೀಕರಣವು ಬೆಳಗಾವಿಯಲ್ಲಿ ಅಕ್ಟೋಬರ್ 10 ರಂದು ಆರಂಭವಾಯಿತು.ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ದೇವರಾಯ ಇಂಗಳೆಯವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲಿ ದಲಿತ ಕ್ರಾಂತಿಯ ನೇತಾರರಾಗಿ ಗುರುತಿಸಿಕೊಂಡವರು.ಸುಮಾರು 20 ವರ್ಷಗಳ ಹಿಂದೆ ಡಾ.ಸರಜೂ ಅವರು ಬರೆದ ಈ ಕಾದಂಬರಿಯಲ್ಲಿ ದೇವರಾಯ ಇಂಗಳೆ ಅವರು ಅಸ್ಪೃಶ್ಯತೆ,ದೇವದಾಸಿ ಅನಿಷ್ಟ ಪದ್ದತಿ,ದೀನ ದಲಿತರ ಮೇಲಾಗುತ್ತಿರುವ ಅನ್ಯಾಯ ವಿರುದ್ದ ಹೋರಾಡಿದ ಕಥನವನ್ನು ಕಂಡರಿಸಿದ್ದಾರೆ.ದಲಿತರ ಪರ ಹೋರಾಟ ಮಾಡಿದ ದೇವರಾಯ ಅವರ ಬದುಕು ಇತಿಹಾಸದಲ್ಲಿ ದಾಖಲಾಗಬೇಕು ಎಂಬ ಉತ್ಕಟ ಕಳಕಳಿಯಿಂದ ಬಾಗಲಕೋಟೆಯ ವಿಕಲಚೇತನ ಮುಖಂಡ ಘನಶ್ಯಾಮ ಭಾಂಡಗೆ ಅವರು ತಮ್ಮ ವೈಷ್ಣೋದೇವಿ ಕ್ರಿಯೇಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ.
ಘನಶ್ಯಾಮ ಭಾಂಡಗೆ ಅವರು ಸಾಹಸಿ ಯುವಕ.ತಮ್ಮ ಅಂಗವೈಕಲ್ಯವನ್ನು ಮಟ್ಟಿ ನಿಂತವರು.ಹೋರಾಟ ಪ್ರಜ್ಞೆಯ ಮೂಲಕ ಬದುಕು ಕಟ್ಟಿಕೊಂಡವರು. ವಿದ್ಯಾರ್ಥಿ ದೆಸೆಯಲ್ಲಿಯೇ ಕೈಯಿಂದ ತಿರುಗುವ ಸೈಕಲ್ಲ ಮೇಲೆ ದೇಶ ಸುತ್ತಿ ಬಂದವರು.ಅಂತರಾಷ್ಟ್ರೀಯ ಕ್ರೀಡಾ ಪಟುವಾಗಿ ಗುರುತಿಸಿಕೊಂಡು ವಿದೇಶಗಳಿಗೆ ತೆರಳಿ ಪದಕ ತಂದವರು.ಸಾವಿರಾರು ವಿಕಲಚೇತನರಿಗೆ ಅನ್ನಕ್ಕೆ ಹಚ್ಚಿದವರು. ಈಗ ಚಿತ್ರ ನಿರ್ಮಾಣಕ್ಕೆ ಕೈ ಹಾಕಿರುವ ಭಾಂಡಗೆ ಅವರು ‘ಹಣ ಮಾಡಲು ಸಿನಿಮಾ ಮಾಡುತ್ತಿಲ್ಲ ,ದಲಿತ ಹೋರಾಟಗಾರನ ಬದುಕು ಸಮಾಜಕ್ಕೆ ಸಂದೇಶವಾಗಬೇಕೆಂದು ಚಿತ್ರ ನಿರ್ಮಿಸುತ್ತಿದ್ದೇನೆ’ ಎನ್ನುತ್ತಾರೆ.
ವಿಶಾಲರಾಜ ಅವರ ನಿರ್ದೇಶನದ ಚಿತ್ರದಲ್ಲಿ ಸುಚೀಂದ್ರ ಪ್ರಸಾದ ನಾಯಕರಾಗಿದ್ದಾರೆ. ಸಾಯಿಬಾಬಾ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ ಬಾಗಲಕೋಟೆಯ ಶಿವಾನಿ ಭೋಸಲೆ ಮೊದಲಬಾರಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಶಂಕರ ಅಶ್ವಥ್,ಕೆ.ಎಸ್.ಶ್ರೀಧರ,ರಮೇಶ ಪಂಡಿತ ತಾರಾಗಣದಲ್ಲಿದ್ದಾರೆ.ಹಳೆಯ ಕಾಲದ ವಾದ್ಯಗಳನ್ನು ಬಳಸಿ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ ನಾಲ್ಕು ಹಾಡುಗಳನ್ನು ರೂಪಿಸಿದ್ದಾರೆ. ಸಾಹಿತಿಗಳಾದ ಸುರೇಶ ಕುಲಕರ್ಣಿ ಅವರು ಸಾಹಿತ್ಯ, ಶಿರೀಷ ಜೋಶಿ ಸಂಭಾಷಣೆ ರಚಿಸಿದ್ದಾರೆ. ಬೆಳಗಾವಿ, ಚಿಕ್ಕಮಗಳೂರು, ಬಾಗಲಕೋಟೆ, ಪುಣೆ ಮೊದಲಾದ ಕಡೆಗೆ ಚಿತ್ರೀಕರಣ ನಡೆಯಲಿದೆ ಎಂದು ತಂಡ ತಿಳಿಸಿದೆ. ತುಂಬಾ ಕುತೂಹಲ ಮೂಡಿಸಿರುವ ಡಾ.ಕಾಟ್ಕರ್ ಅವರ ಕಾದಂಬರಿ ಆಧಾರಿತ ‘ಇಂಗಳೆ ಮಾರ್ಗ’ ಬೇಗ ಬೆಳ್ಳಿ ತೆರೆಗೆ ಮೂಡಿಬರಲಿ .
ಚಿತ್ರದ ಕೆಲವು ದೃಶ್ಯಗಳು :

Saturday, 19 October 2013

ಮದುವೆ ಮನೆಯಲ್ಲಿ ಕಾವ್ಯದ ಹೂರಣ-ಡಾ.ಖಾಡೆ

ಹೊಸದಿಗಂತ 16.10.2013, ಲೇಖನ : ಮದುವೆ ಮನೆಯಲ್ಲಿ ಕಾವ್ಯದ ಹೂರಣ
ಡಾ.ಪ್ರಕಾಶ ಗ.ಖಾಡೆ

Monday, 14 October 2013

ಕನ್ನಡ ಕಾವ್ಯ ಭಾಷೆ ಮತ್ತು ಜಾನಪದ-ಡಾ.ಖಾಡೆ.

ವಿಜಯವಾಣಿ 13.10.2013 ರ ವಿಜಯ ವಿಹಾರ ರವಿವಾರದ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.



Saturday, 12 October 2013

ಬನ್ನಿ ಮುಡಿಯೋಣು..-ಡಾ.ಖಾಡೆ


ವಿಜಯ ಕರ್ನಾಟಕ 12.10.2013 ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ.

Tuesday, 8 October 2013

ಕನ್ನಡ ಪರಿಸರ ಕಾವ್ಯ



                                    ಕನ್ನಡ ಪರಿಸರ ಕಾವ್ಯ


                                                            * ಡಾ. ಪ್ರಕಾಶ ಗ. ಖಾಡೆ
                  ನಾವು ಆಧುನಿಕ ಯಂತ್ರ ನಾಗರಿಕತೆಯ ಈ ಕಾಲದಲ್ಲಿ ನಾವು ಅಪಾಯಗಳನ್ನು ಆಹ್ವಾನಿಸಿಕೊಂಡು ಬದುಕುತ್ತಿದ್ದೇವೆ.ನಾಳಿಗಾಗಿ ಒಂದು ಸುಂದರ ಪರಿಸರ ಉಳಿಸುವ ನಮ್ಮ ಕನಸುಗಳಗೆ ಕಪ್ಪು ಮೆತ್ತಿಕೊಳ್ಳುತ್ತಿದೆ.ಇಂಥ ಅಪಾಯದ ಹೊತ್ತಿನಲ್ಲಿ ನಮ್ಮ ಕಾಲದ ಯುವ ಕವಿಗಳು ತಮ್ಮ ಕವಿತೆಗಳ ಮೂಲಕ ಗೆಳೆಯ ಪರಿಸರ ಪ್ರೇಮಿ ಪಿ.ಡಿ.ವಾಲೀಕಾರ ಅವರ ಸಂಪಾದನೆಯ ‘ಪರಿಸರ ಕಾವ್ಯ’ ಸಂಕಲನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಾಡಿನ ಹಿರಿಯ ಮತ್ತು ಉದಯೋನ್ಮುಖ ಕವಿಗಳು ರಚಿಸಿಕೊಟ್ಟ ಪರಿಸರ ಪರಿಸರ ಮಾಲಿನ್ಯ ಮತ್ತು ಜಲಸಂಬಂಧಿಯ ಕವಿತೆಗಳಿವೆ. ಪರಿಸರವನ್ನು ವ್ಯಾಪಕವಾಗಿ ಮಲೀನಗೊಳಿಸಿ ಅನಾರೋಗ್ಯಕ್ಕೆ ಪ್ರಾಣಿ,ಪಕ್ಷಿ, ಕೀಟಗಳನ್ನು ದೂಡಿ ಜಾಗತೀಕರಣದ ಆಧ್ವಾನಗಳು ರಾಕ್ಷಸರೂಪ ತಾಳಿ ಮಾನವನ ಆಮೂಲಕ ಭಾರತೀಯ ಪಾರಂಪರಿಕ ಮನಸ್ಸುಗಳನ್ನು ಘಾಸಿಗೊಳಿಸಿವೆ. ಪರಿಸರವಿಲ್ಲದೆ ಬದುಕಿಲ್ಲ. ಹಸಿರುವನ, ಪಕ್ಷಿ, ಪ್ರಾಣಿಗಳ ಒಡನಾಟ ಅದೊಂದು ನೆಮ್ಮದಿಯ ಸಂಕೇತ. ಅದೆಲ್ಲಾ ಇಂದು ಕಾಣದಾಗಿ ಅನೇಕ ಅಮೂಲ್ಯ ಸಸ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಪತ್ತು ಅಳಿದು ಹೋಗಿವೆ,  ಮತ್ತು ಅಳಿಗಾಲದ ಅಂಚಿನಲ್ಲಿವೆ.
ತೀರಾ ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳ ಕೊಳ್ಳ, ಕೆರೆ, ಬಾವಿಗಳು ಮಳೆಗಾಲದಲ್ಲಿ ಮಾತ್ರ ಅಲ್ಲ ಬೇಸಿಗೆಯಲ್ಲೂ ಸದಾ ತುಂಬಿರುತ್ತಿದ್ದ ಸಂದರ್ಭಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಮ್ಮ ನೀರು ಯಾರೊಬ್ಬರ ಆಸ್ತಿಯಾಗಿರಲಿಲ್ಲ. ಆದರಿಂದು ಆಧುನಿಕತೆಯ ಯಂತ್ರ ನಾಗರಿಕತೆ ಪ್ರಾಕೃತಿಕ ಸಂಪತ್ತನ್ನೂ ಕೇಂದ್ರೀಕರಿಸಿಕೊಂಡು ಸಾರ್ವತ್ರಿಕತೆಯ ಹಕ್ಕನ್ನೂ ಮೊಟಕುಗೊಳಿಸಿ ಭೋಗ ಸಂಸ್ಕøತಿಯ ವಸ್ತುವಾಗಿ ಸಂಪತ್ತನ್ನು ಬಾಚಿಕೊಳ್ಳುವ ದುರುಳ ಕ್ರಿಯೆ ಅವ್ಯಾಹತವಾಗಿ ನಡೆದಿದೆ. ಹೀಗಾಗಿ ತನ್ನ ಪಾಡಿಗೆ ತಾನು ಹಳ್ಳ ಬಾವಿ ಕೆರೆ ಕಟ್ಟೆಗಳಿಗೆ ಹೋಗಿ ನಿರ್ಮಲವಾದ ತಿಳಿನೀರು ತುಂಬಿಕೊಂಡು ಬರುತ್ತಿದ್ದ ನಮ್ಮ ಗ್ರಾಮೀಣರು ಇವತ್ತು ಬೋರವೆಲ್ಲು ಹೊಂದಿದ ಧನಿಕರ ಮುಂದೆ ಒಂದು ಕೊಡ ನೀರಿಗಾಗಿ ಭಿಕ್ಷೆಗೆ ನಿಲ್ಲಬೇಕಾದ ಸ್ಥಿತಿ ಬಹುಭಾಗದ ಹಳ್ಳಿಗಳಲ್ಲಿ ಕಾಣುತ್ತೇವೆ.
ಬೋರವೆಲ್ಲುಗಳು ಒಂದು ಕೃಷಿ ಉತ್ಪನ್ನಗಳನ್ನು ಹೆಚ್ಚಿಸುತ್ತಿರುವ ಸಂಗತಿ ಒಂದೆಡೆಯಾದರೂ, ಅಗತ್ಯಕ್ಕಿಂತ ಹೆಚ್ಚಿನ ನೀರಿನ ಬಳಕೆಯಾಗಿ ಅನೇಕ ಜಲಮೂಲಗಳು ಇಂದು ಹೇಳ ಹೆಸರಿಲ್ಲದಂತೆ ನಾಶವಾಗಿ ಹೋಗಿವೆ. ನಾನು ಕಳೆದ 20  ವರ್ಷಗಳ ಹಿಂದೆ  ಮುಧೋಳ ತಾಲೂಕು ಲೋಕಾಪುರದಲ್ಲಿ ನೆಲೆಸಿದ್ದಾಗ ಅಲ್ಲಿನ ಊರ ಬದಿಯ ಹಳ್ಳದ ಸೊಗಸು ನೋಡಬೇಕಿತ್ತು. ಸುಂದರ ಪ್ರಾಕೃತಿಕ ವೈಭವದಿಂದ ಮೆರೆಯುತ್ತಿದ್ದ ಹಳ್ಳ ಸದಾ ಪ್ರವಹಿಸುತ್ತಿತ್ತು. ಮಗ್ಗುಲಲ್ಲಿ ಹಸಿರು ತುಂಬಿದ ಗಿಡ ಮರಗಳು, ಬಾಳೆ, ತೆಂಗು, ಪೇರಲ, ಚಿಕ್ಕು, ದಾಳಿಂಬೆ ಗಿಡಗಳು, ಈ ಹಣ್ಣಸವಿ ಹುಡುಕಿ ಬರುತ್ತಿದ್ದ ಪಕ್ಷಿ ಸಂಕುಲ ಅದೊಂದು ಧರೆಯ ಸ್ವರ್ಗವಾಗಿತ್ತು. ‘ಆ ಹಳ್ಳ ಎಂದಿಗೂ ಬತ್ತಿದ್ದು ನಾವು ಕೇಳಿಯೇ ಇಲ್ಲ’ ಎಂದು ಹಿರಿಯರು ಹೇಳುತ್ತಿದ್ದರು. ಇದಕ್ಕೆ ಕಾರಣ ಅಲ್ಲಿರುವ `ಗುಪ್ತಗಂಗೆ' .ಹೌದು, ಲೋಕಾಪುರದ ಹಳ್ಳದ ಗುಡ್ಡದಲ್ಲಿ  ಸದಾ ಜಿನುಗುತ್ತಿದ್ದ ದೊಡ್ಡದಾದ ಸೆಲೆ ಒಂದು ಇತ್ತು. ಇದಕ್ಕೆ `ಗುಪ್ತಗಂಗೆ' ಎಂದು ಕರೆಯುತ್ತಿದ್ದರು. ಆ ಗುಪ್ತ ಗಂಗೆಯ ತಿಳಿನೀರ ಝರಿ ಕಣ್ಣಾರೆ ಕಂಡು ಆ ಕಾಲಕ್ಕೆ ಎಷ್ಟೊಂದು ಖುಷಿಗೊಂಡಿದ್ದೆವು ಎಂದು ನೆನೆದಾಗ ಈ ದಿನವೂ ರೋಮಾಂಚನವಾಗುತ್ತದೆ. ಆದರಿಂದು  ಲೋಕಾಪುರದ ಹಳ್ಳಕ್ಕೆ ಸ್ಮಶಾನಮೌನ ಆವರಿಸಿದೆ. ಆ ಕಾಲದ ಗಿಡಮರಗಳು ಗುರುತಿಗೂ ಸಿಕ್ಕದಂತೆ ಯಾರು ಯಾರದೊ ಒಲೆ ಸೇರಿ ಸುಟ್ಟು ಬೂದಿಯಾಗಿವೆ. ಅಲ್ಲೀಗ ಹಕ್ಕಿ ಪಕ್ಕಿಗಳ ಕಲರವ ಇಲ್ಲ. ಗುಪ್ತಗಂಗೆ ಒಂದು ಹನಿ ನೀರನ್ನೂ ತೊಟ್ಟಿಕ್ಕದ ಸ್ಥಿತಿಯಲ್ಲಿ ಬತ್ತಿ ಬಾಡಿ ನಿಸ್ತೇಜಗೊಂಡಿದ್ದಾಳೆ. ಹಳ್ಳದ ವೈಭವ ಈಗ ಇತಿಹಾಸ ಮಾತ್ರ. ಭೂಗೋಲವಂತೂ ಭಣಭಣ. ಈ ಹಳ್ಳಕ್ಕೆ ಬ್ರಿಟಿಷರ ಕಾಲಕ್ಕೆ ಗಟ್ಟಿಮುಟ್ಟಾಗಿ ಕಟ್ಟಿದ ದೊಡ್ಡದೊಂದು ಸೇತುವೆ ಇತ್ತು. ಅದು ತೀರಾ ಇತ್ತೀಚಿಗೆ ರಸ್ತೆ ಅಗಲೀಕರಣಮಾಡಿ ಹೊಸ ಸೇತುವೆ ನಿರ್ಮಾಣ ಮಾಡುವ ನೆಪದಲ್ಲಿ ನಿರ್ನಾಮಮಾಡಿ ಒಗೆದರು. ಇಂಥ ಸಂದರ್ಭಗಳು ನಿಮ್ಮ ಊರಲ್ಲೂ ಕಂಡಿದ್ದೀರಿ. ಇದೆಲ್ಲಾ ಆಧುನಿಕತೆಯ ಅವಾಂತರಗಳು. ಆಧುನಿಕತೆಯ ಅವಾಂತರಗಳು ಸೃಷ್ಟಿಸುತ್ತಿರುವ ಇಂಥ ಅಪಾಯಕಾರಿ ಅವಘಡಗಳಿಗೆ ಕೊನೆ ಎಂಬುದಿಲ್ಲ. ಜಾಗತೀಕರಣ ಹಾಗೂ ಯಂತ್ರ ನಾಗರಿಕತೆಯ ರಾಕ್ಷಸಿ ಬಾಹುಗಳ ಅಪ್ಪುಗೆಯಲ್ಲಿ ನಮ್ಮ ನೀರು, ನೆಲ, ಗಿಡ, ಮರ, ಪ್ರಾಣಿ, ಪಕ್ಷಿ ಸಂಕುಲ, ಪ್ರಕೃತಿ ಸಂಪತ್ತು ದೀಪಕ್ಕೆ ಸಿಕ್ಕ ಹುಳಗಳಂತೆ ಪಟಪಟನೆ ಮುರಿದು ಬೀಳುವ ಮುನ್ನ ಜಾಗೃತರಾಗಬೇಕಿದೆ.
ಮನುಕುಲವೆಲ್ಲ ಬೀದಿ ಶವವಾದೀತು.....
‘ಪರಿಸರ ಕಾವ್ಯ’ದ ಕವಿಗಳು ನಾವು ನಮ್ಮ ಪರಿಸರವನ್ನು ಪ್ರಾಕೃತಿಕ, ಜೀವ ವೈವಿಧ್ಯದ ಸಂಪತ್ತಿನೊಂದಿಗೆ ಉಳಿಸಿಕೊಳ್ಳದಿದ್ದರೆ ಆಗುವ ಅಪಾಯದ ಮುನ್ನೆಚ್ಚರಿಕೆ ನೀಡಿದ್ದಾರೆ. ಮನುಷ್ಯನ ಸ್ವಾರ್ಥ ಲಾಲಸೆಯ ಕಾರಣವಾಗಿ ಆಧುನಿಕ ಜಗತ್ತು ತನ್ನ ಅವಸಾನವನ್ನು ತಾನೇ ಕಂಡುಕೊಳ್ಳುವ ಕಾಲ ದೂರವಿಲ್ಲ ಎನ್ನುತ್ತಾರೆ. ಜಗದ, ಜನರ ನೆಮ್ಮದಿಗಾಗಿ ಕಾಡು ಉಳಿಯಬೇಕು. `ಕಾಡು ಅಳಿದರೆ ನಾಡು ಮುಳುಗೀತು' , ನೀರು ಬರೀ ನೀರಲ್ಲ ಜೀವ ಕೋಟಿಗದು ಅಮೃತ  ಎಂಬ ಸತ್ಯವನ್ನು ಸಾರಿದ್ದಾರೆ.
ಹಿರಿಯ ಕವಿ ಬಿ. ಆರ್. ನಾಡಗೌಡ ಅವರು ಹೇಳುವ ಹಾಗೆ-
ಕಾಡಿನಿಂದ ಇಳೆಗೆ ಮಳೆಯು
ಸೃಷ್ಟಿ ಸೊಬಗು ಚೇತನ
ಹಸಿರು ನಮ್ಮ ಜೀವದುಸಿರು
ನಿತ್ಯ ಬದುಕು ನೂತನ
ದಿನವೂ ಬದುಕು ಹೊಸತನದಿಂದ ಕೂಡಿರಬೇಕಾದರೆ ಪ್ರಕೃತಿಯ ಸೊಬಗು ಒಂದು ಕಾರಣ. ಈ ಪ್ರಕೃತಿಯನ್ನು ಕಾಯ್ದುಕೊಳ್ಳೆಬೇಕಾಗಿದೆ. ಪ್ರಕೃತಿ ಎಲ್ಲರ ನೆಮ್ಮದಿಯ ಸಂಕೇತ. ಮಾನವ ಬದುಕಿನ ಪ್ರಾಣಗಂಗೆ. ಜೀವದುಸಿರು, ಅದೇ ಇಲ್ಲದಿದ್ದರೆ ಈ ಜಗಕೆ ಏನು ಅರ್ಥ? ಕವಿ ವೀರೇಶ ಎಂ. ರುದ್ರಸ್ವಾಮಿ ಸಾರುತ್ತಾರೆ-
ಮದುಮಗಳಂತೆ ಕಂಗೊಳಿಸುವ
ಹಚ್ಚಹಸುರಿನಿಂದ ನಿನ್ನ ಮೈ ತೋರು
ನೀ ಸ್ವಾರ್ಥವನು ಬಯಸಿದರೆ
ಮನುಕುಲವೆಲ್ಲ ಬೀದಿ ಶವವಾಗಿ
ಜಗವೆಲ್ಲ ಮೌನ ಆವರಿಸುವುದು
ಪೃಕೃತಿಯ ತರುಲತೆಗಳ ದಟ್ಟೈಸಿರಿಯ ಬದಲಿಗೆ ಇಂದು ಬೃಹತ್ ಕಾರ್ಖಾನೆಗಳು ಉಗುಳುವ, ಸೃಷ್ಟಿಸುವ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಮನುಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮತ್ತದೇ ನೆನಪು ಇಳಕಲ್ಲಿಗೆ ಜಾರುತ್ತಿದೆ. 1980 ರಿಂದ 1988 ರ ವರೆಗೆ ನಾನು  ಬಾಗಲಕೋಟೆ ಜಿಲ್ಲೆಯ ಇಳಕಲ್ಲದಲ್ಲಿ ನೆಲೆಸಿದ್ದೆ. ಅಲ್ಲಿಯ ಸದಾ ಝಳು ಝಳು ಹರಿಯುತ್ತಿದ್ದ ಹಳ್ಳ. ಹಳ್ಳದ ಬದಿಗೆ ಎದ್ದು ನಿಂತಿದ್ದ ಎತ್ತರದ ತೆಂಗಿನ ಮರಗಳು, ಶ್ರೀ ವಿಜಯ ಮಹಾಂತ ಶ್ರೀಗಳ ಗದ್ದುಗೆ, ಗದ್ದುಗೆ ಕಾಣದ ಹಾಗೆ ತಣ್ಣೆಳಲು ನೀಡಿದ್ದ ಎತ್ತರದ ಮರಗಳು... ಇವೆಲ್ಲಾ ಈಗ ನೆನಪಿಸಿಕೊಳ್ಳಲು ಮಾತ್ರ. ಈಗ ಹಳ್ಳದಲ್ಲಿ ತಿಳಿನೀರಿಲ್ಲ. ಕೊಳಚೆ ನೀರು ಹಳ್ಳಕ್ಕೆ ತಂದು ಕಲ್ಲಿನ ಪಾಲೀಶುಮಾಡುವ ಫ್ಯಾಕ್ಟರಿಗಳ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಭೂಮಿಯ ಫಲವತ್ತತೆ ಎಂಬುದು ಬಂಜೆಯಾಗಿ ಈಗ ಅಲ್ಲಿಯ ಭೂಗೋಲವು ರಣರಣವೆನಿಸುತ್ತಿದೆ. ಇಂಥದೇ ಪರಿಸರ ಈಗ ಎಲ್ಲೆಲ್ಲೂ. ಅದಕ್ಕಾಗಿ ಈ ಸಂಕಲನದ ಕವಿ ಲಕ್ಕಸಕೊಪ್ಪದ ಹುಲ್ಯಾಳ ಮಲ್ಲು ಹೇಳುತ್ತಾರೆ-
ಎಲ್ಲೆಂದರಲ್ಲಿ ಕಾಣುತ್ತಿವೆ ಪ್ಲಾಸ್ಟಿಕ್ ಯುಗದ ವಸ್ತುಗಳು
ತಯಾರಾಗುತ್ತಿವೆ ಇದರಿಂದ ವಿಷಪೂರಿತ ಪ್ರದೇಶಗಳು
ಬಾವಿ ಕೆರೆಗಳಲ್ಲಿ ತುಂಬಿಕೊಂಡಿವೆ ವಿಷಪೂರಿತ  ಕಲ್ಮಶಗಳು
ಪರಿಣಾಮದಿಂದ ಸಾಯುತ್ತಿವೆ ಮೀನಿನಂತಹ ಜಲಚರಗಳು
ಮಾನವನ ಜಾಣ್ಮೆ, ಕುಶಲತೆ, ಬುದ್ಧಿಶಕ್ತಿ ಈಗ ಮುಗಿಲು ಮುಟ್ಟಿದೆ. ಆದರೆ ಇದರ ಸದ್ಬಳಕೆಯಾಗಬೇಕಾದುದು ಈಗ ಜಲಮೂಲ ಗಳನ್ನು ಉಳಿಸಿಕೊಳ್ಳುವಲ್ಲಿ. ವಿಪರ್ಯಾಸವೆಂದರೆ ಈ ಬಗೆಯ ಚಿಂತನೆ ಗೌಣವಾಗಿ ಪರಿಸರದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಸರೋಜ ಎನ್. ಪಾಟೀಲ ಅವರ ಸಾಲುಗಳು ಹೇಳುವಂತೆ-
ನಾಗರಿಕ ಮಾನವನ ಪಯಣ
ಮುಟ್ಟಿದೆ ಚಂದ್ರನವರೆಗೂ ಯಾನ
ಎಲ್ಲೆಂದರಲ್ಲಿ ನೀರಿನ ಆಹಾಕಾರ
ತಿಳಿಯದೆ ಮಾನವನಿಗೆ ಇದರ ಸಾರ
ವೈಜ್ಞಾನಿಕವಾಗಿರುವ ಜಾಣ್ಮೆಯನ್ನು ಬಳಸಿ ನೀರಿನ ಈ ಕಾಲದ ಆಹಾಕಾರವನ್ನು ತೊಲಗಿಸಬೇಕೆಂಬುದು ಅವರ ಕಳಕಳಿ. ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಭೂತಾಯಿಯ ಒಡಲು ಸದಾ ಹಸಿರಾಗಿರಲಿ ಎಂಬುದೇ ಎಲ್ಲರ ಹಾರೈಕೆ. ಆದರೆ ಭೂತಾಯಿಯ ಒಡಲು ಬರಿದುಮಾಡುವ ರಾಕ್ಷಸಿ ಕಾರ್ಯಕ್ಕೆ ಭೂಮಿಯೇ ಪ್ರತಿರೋಧ ಒಡ್ಡಿದರೆ ಹೇಗಾದೀತು? ಅದರ ಒಂದು ರುದ್ರನರ್ತನ  ಡಿಸೆಂಬರ್ 2004 ರಲ್ಲಿ ನಡೆದ `ಸುನಾಮಿ' ಯೇ ಸಾಕ್ಷಿ. ಪೂರ್ಣಿಮಾ ಮ. ಪತ್ತಾರ ಅವರ ಕವಿತೆಯಲ್ಲಿ ಭೂತಾಯಿಯು ತನ್ನ ಕರುಳ ಕುಡಿಗಳಿಗೆ ಹೀಗೆ ಹೇಳುತ್ತಾಳೆ-
ನಾನು ನಿಮ್ಮ ತಾಯಿ ಪೃಥ್ವಿ
ಹೆತ್ತವಳನ್ನೆ ಹಿಂಸಿಸುವ
ಹೀನ ಮನುಜರು ನೀವು
ನನ್ನನ್ನೂ ಬಿಡಲಿಲ್ಲವಲ್ಲ
ನನ್ನ ಸಹನೆ ಕಂಡು ನನ್ನನ್ನೂ
ಶಕ್ತಿ ಇಲ್ಲದವಳೆಂದು ಭಾವಿಸಿದಿರಿ
ನಾನು ಮುನಿದರೆ ಸುನಾಮಿ
ಭೂತಾಯಿಯು ಮತ್ತೆ ಮತ್ತೆ ಮುನಿಸಿಕೊಳ್ಳುವ ಮೊದಲು, ಪ್ರಕೃತಿಯ ಮೇಲಿನ ದೌರ್ಜನ್ಯ ನಿಲ್ಲಬೇಕು. ಈ ಆಶಯವೇ ಇಲ್ಲಿನ ಬಹುತೇಕ ಕವಿತೆಗಳಲ್ಲಿದೆ.
ಭುಗಿಲೆದ್ದು ಉರಿಯುತಿದೆ
ಆಂತರಿಕ ದ್ವೇಷಾಸೂಯೆಯ ಜ್ವಾಲೆ
ನಶಿಸಬೇಕು ಬೀಸುತ್ತಿರುವ
ನರಪಾತಕಿ ದುಷ್ಟಶಕ್ತಿಗಳ ಬಲೆ
(ವಾಯ್. ಎಂ. ಜೋಶಿ)
ಗಾಳಿ ಇರಲಿ ಶುಚಿಯಾಗಿ
ನೀರು ಹರಿಯಲಿ ತಿಳಿಯಾಗಿ
(ಶ್ರೀದೇವಿ ಸಿಂಗಾಡಿ)
ನೀರಿಗಾಗಿ ಸಾಲು ಸಾಲು ಪಾಳಿ
ಹರುಕು ಮುರುಕು ಕೊಡಪಾನಗಳು
(ಪಿ.ಡಿ.ವಾಲೀಕಾರ)
ಹರಿದು ಕಡಲ ಸೇರದಂಗೆ
ಜಲಕೊಯಿಲು ಮಾಡುವೆ ಬಾರೇ....
(ಮಂಜುನಾಥ ಹೊಂಬುಜ)
ಎಂಥ ಪಾಪವೇ ಇರಲಿ ಕಪಟವೆ ತೊಳೆದು
ಮತ್ತೆ ಮಡಿಲಿಗೆ ಕರೆವಳು ಈ ತಾಯಿಯು
(ಕಾವೇರಿ ವಿವೇಕಾನಂದ ಗರಸಂಗಿ)
ನಾಕ ಹೋಗಿ ನರಕವಾಯ್ತು
ಪರಿಸರಕೆ ಗಲ್ಲು
(ಕಲ್ಯಾಣರಾವ ದೇಶಪಾಂಡೆ)
ಹೀಗೆ ಇಲ್ಲಿನ ಕವಿತೆಗಳು ಒಂದೊಂದು ಬಗೆಯಲ್ಲಿ ನಮ್ಮ ಪರಿಸರದ ಕಾಳಜಿಯನ್ನು ವ್ಯಕ್ತಪಡಿಸುವುದರ ಜೊತೆಗೆ ಎಚ್ಚರಿಕೆಯನ್ನೂ ಮೂಡಿಸುತ್ತವೆ..  ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ ನಾನು ಹುಟ್ಟಿ ಬೆಳೆದ ನನ್ನೂರು ಜಮಖಂಡಿ ತಾಲೂಕಿನ ತೊದಲಬಾಗಿ. ಇಲ್ಲಿ 1965 ರಿಂದ 1975 ರ ವರೆಗೆ ನೆಲೆಸಿದ್ದೆ. ಇಲ್ಲಿನ ಹಳ್ಳ, ಹಳ್ಳದ ಬದಿಯ ಹಸಿರು, ಮಳೆಗಾಲದಲ್ಲಿ ತುಂಬಿ ಧುಮುಕುತ್ತಿದ್ದ ದಬೆ ದಬೆ ಈಗ ನೋಡಲೂ ಸಿಗುತ್ತಿಲ್ಲ. ಸಮಾಧಾನವೆಂದರೆ ಈ ಹೊತ್ತಿಗೆ ನಮ್ಮೂರ ಹಳ್ಳಕ್ಕೆ ಜೀವ ಬಂದಿದೆ. ಆಲಮಟ್ಟಿ ಆಣೆಕಟ್ಟೆಯ ಹಿನ್ನೀರಿನ ಕೃಷ್ಣಾ ನದಿ ತಟಾಕದಲ್ಲಿ ಪಡಸಲಗಿ ಬಳಿ ನಿರ್ಮಾಣಮಾಡಿದ ಏತ ನೀರಾವರಿಯಿಂದ ಹೊಲಗಳಿಗೆ ನೀರು ಬಿಡುವ ಮೂಲಕ ನನ್ನೂರ ಹಳ್ಳದಿಂದ ಹಾಯ್ದು ಕೆರೆಗೆ ನೀರು ಬಿಡುತ್ತಿದ್ದಾರೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ವೈಭವ ಕಳೆದುಕೊಂಡಿದ್ದ ಹಳ್ಳ ಈಗಷ್ಟೇ ಚಿಗುರಾಗುತ್ತ್ತಿದೆ. ನೈಸರ್ಗಿಕ ಮಳೆಯಿಂದ ಹಸಿರಾಗಿದ್ದ ನನ್ನೂರ ಹಳ್ಳ ಇಂದು ಯಾಂತ್ರಿಕ ಉಪಭೋಗದಿಂದ ಮೈದಡವಿಕೊಂಡು ಏಳುತ್ತಿದೆ. ಈ ಮಾತು ನಾನಿಲ್ಲಿ ಹೇಳುವ ಕಾರಣ ಪ್ರತಿ ಊರಿನ ಕೆರೆಗಳನ್ನು ತುಂಬಿಸಬೇಕಾಗಿದೆ. ಇದಕ್ಕಾಗಿ ವಿಜಾಪುರ,ಬಾಗಲಕೋಟೆ,ದಾವಣಗೆರೆ ಮೊದಲಾದ ಕಡೆಗಳಲ್ಲಿ ಕೆರೆ ತುಂಬಿಸುವ ಕಲಸಗಳು ನಡೆಯುತ್ತಿವೆ .ಇದೊಂದು ಸಮಾಧಾನಕರ ಸಂಗತಿ. ಹೌದು ವ್ಯರ್ಥವಾಗಿ ಹರಿದು ಹೋಗುವ ನದಿಯ ನೀರನ್ನು ಬೃಹತ್ ಆಣೆಕಟ್ಟುಗಳ ಮೂಲಕ ತಡೆದು ನಿಲ್ಲಿಸಿದರಷ್ಟೇ ಸಾಲದು. ಪ್ರತಿ ಹಳ್ಳಿಯ ಕೆರೆಯನ್ನು ತುಂಬಿಸಬೇಕು. ಜೊತೆಗೆ ಅಳಿದು ಹೋಗಿರುವ ಅದೆಷ್ಟೊ ಕೆರೆಗಳಿಗೆ ಮರು ಜೀವ ನೀಡಬೇಕು. ಮತ್ತೆ ನಮ್ಮ ಭೂತಾಯಿ ಹಸಿರ ಉಡುಗೆಯಲ್ಲಿ ನಳ ನಳಿಸುವಂತಾಗಲಿ, ಅವಳ ಒಡಲಲ್ಲಿ ಹಾಡಿ ನಲಿಯುವ ಪ್ರಾಣಿ ಪಕ್ಷಿಗಳು ಒಕ್ಕೊರಲಿನಿಂದ ಪರಿಸರ ಪ್ರೀತಿ ಹೊಂದಿದ ಮಾನವರಿಗೆ `ಕೃತಜ್ಞತೆ' ಹೇಳುವಂತಾಗಲಿ, ಪರಿಸರ ಮಲೀನತೆಯಿಂದ ದೂರಾಗಿ ಸ್ವಚ್ಛಂದದ ‘ಭೂಗೋಲ’ ನಮ್ಮ ಆಶಯವಾಗಲಿ.*
ವಿಳಾಸ :
ಡಾ.ಪ್ರಕಾಶ ಗ.ಖಾಡೆ, ‘ಶ್ರೀಗುರು’,
ಸರಸ್ವತಿ ಬಡಾವಣೆ,ಸೆಕ್ಟರ್ ನಂ. 63 ,
ನವನಗರ,ಬಾಗಲಕೋಟ. ಮೊ.9845500890.


Monday, 30 September 2013

ಸಂಶೋಧನೆಯ ಸೋಪಾನಗಳು ಕೃತಿ ಬಿಡುಗಡೆ.

‘ಸಂಶೋಧನೆಯ ಸೋಪಾನಗಳು’

October 1, 2013
by Avadhikanna



ಕೃಪೆ : ಅವಧಿ

ಕೂಡಲಸಂಗಮದಲ್ಲಿ ಡಾ.ಖಾಡೆ ಸಂಪಾದಿತ ‘ಸಂಶೋಧನೆಯ ಸೋಪಾನಗಳು’ ಬಿಡುಗಡೆ

ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯು ಹಮ್ಮಿಕೊಂಡಿದ್ದ ‘ಸಂಶೋಧನಾ ಕಮ್ಮಟ’ದಲ್ಲಿ ಮಂಡಿಸಲಾದ ಉಪನ್ಯಾಸಗಳನ್ನು ಒಳಗೊಂಡ ‘ಸಂಶೋಧನಾ ಸೋಪಾನ’ ಕೃತಿಯ ಬಿಡುಗಡೆ ಸಮಾರಂಭವು ಕೂಡಲ ಸಂಗಮದ ಅತಿಥಿ ಗೃಹದಲ್ಲಿ ರವಿವಾರ 29 ರಂದು ಜರುಗಿತು. ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಜಿ.ಕೋಟಿ,ಗೌರವ ಕಾರ್ಯದರ್ಶಿಗಳಾಗಿರುವ ಡಾ.ಪ್ರಕಾಶ ಖಾಡೆ,ಡಾ.ಅಶೋಕ ನರೋಡೆ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಕೃತಿಯನ್ನು ಕಸಬಾ ಜಂಬಗಿಯ ನಿರ್ಮಲ ಪ್ರಕಾಶನ ಪ್ರಕಟಿಸಿದ್ದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುಂಡಲೀಕ ಹಾಲಂಬಿ ಬಿಡುಗಡೆ ಮಾಡಿದರು.
ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಕಾರ್ಯಕ್ರದಲ್ಲಿ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ,ಶ್ರೀಮತಿ ಹಾಲಂಬಿ,ಬಾಗಲಕೋಟ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕಟಗಿಹಳ್ಳಿಮಠ ,ಸಹಕಾರಿ ಧುರೀಣ ಎಲ್.ಎಂ.ಪಾಟೀಲ,ನ್ಯಾಯವಾದಿ ತಾತಾಸಾಹೇಬ ಬಾಂಗಿ ,ಬಿ.ಪಿ.ಹಿರೇಸೋಮಣ್ಣವರ ,ಕೃಷ್ಣಗೌಡರ,ಶರಣು ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.ಜಮಖಂಡಿಯ ಚಿಂತನ ವೇದಿಕೆ ಮತ್ತು ನಿರ್ಮಲ ಪ್ರಕಾಶನ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅರ್ಜುನ ಕೋರಟಕರ ಮತ್ತು ಪ್ರಕಾಶಕ ಸದಾಶಿವ ಮಾಳಿ ಸ್ವಾಗತ ಕೋರಿ ವಂದಿಸಿದರು.

‘ಸಂಶೋಧನೆಯ ಸೋಪಾನಗಳು’ « ಅವಧಿ / avadhi

‘ಸಂಶೋಧನೆಯ ಸೋಪಾನಗಳು’ « ಅವಧಿ / avadhi

Wednesday, 25 September 2013

ಕನ್ನಡ ನವೋದಯ ಸಾಹಿತ್ಯ -ಡಾ.ಪ್ರಕಾಶ ಖಾಡೆ

ಕನ್ನಡ ನವೋದಯ : ಶಿಷ್ಟತೆಯ ಕೋಟೆ ; ದೇಸಿಯತೆಯ ಬಯಲು

ಡಾ ಪ್ರಕಾಶ ಗ ಖಾಡೆ

ರಾಜಭಕ್ತಿ ಭದ್ರಕೋಟೆ ಕೊತ್ತಳದಾಚೆ ಸುತ್ತಲೂ
ನಿತ್ಯ ಮೊರೆಯುತ್ತಿದ್ದ ಸ್ವಾತಂತ್ರ್ಯ ಘೂಷ
ಮರೆಯೆ, ಮರಸಲು ನಿರಂತರವಾದ ಮಾತೇಸರಿ
ಎಂದು ಸುತ್ತಿದಿರಿ ಊರೂರು
ಮಾತಲ್ಲಿ ಸ್ವಾವಲಂಬನೆಯನರಸಿ
ವಾದ ಪರದೇಶೀ, ಅನುವಾದ ಶುದ್ದ ಸ್ವದೇಶೀ
ಇಂಗ್ಲಿಷ್ ಗೀತೆಗಳಿಗೆ ಹೊಸ ಹುಟ್ಟು
………..
ಅಪ್ಪಣೆ ಕೊಡಿಸಬೇಕು ಗುರುಗಳೆ ನಮಗೆ
ಇದು ನವೋದಯವೆ? ಅಥವಾ ಅದರ ಒಳಗುದಿಯೇ?
- ಗೋಪಾಲಕೃಷ್ಣ ಅಡಿಗ
(ಬಿ.ಎಂ.ಶ್ರೀ ಅವರಿಗೆ)
ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿಯೇ ಕನ್ನಡ ಕಾವ್ಯದ ಜನಮುಖಿಮಾರ್ಗದ ವಿರುದ್ಧ ಪಯಣ ಕೆಲವು ಚಿಂತನೆಗಳಿಗೆ ಗ್ರಾಸವಾಯಿತು. ಸಂಸ್ಕೃತ, ಇಂಗ್ಲಿಷ್ ಹಾಗೂ ಪ್ರಾಂತೀಯ ಭಾಷಾ ಸಾಹಿತ್ಯದ ಪ್ರಭಾವ ಹಾಗೂ ಸ್ಥಳೀಯವಾದ ಕವಿಗಳ ಕಾಣ್ಕೆಗಳು ಕನ್ನಡ ಕಾವ್ಯರಚನಾ ಸಂದರ್ಭವನ್ನು ಗೊಂದಲಕ್ಕೆ ದೂಡಿದ್ದವು. ಕನ್ನಡದ ಸಾಂಸ್ಕೃತಿಕ ನೆಲಗಟ್ಟು ಹೊಸ ಕಾವ್ಯ ಪ್ರಕಾರಕ್ಕೆ ಸಜ್ಜುಗೊಳ್ಳುವ ಮುಂಚಿನ ದಿನಗಳು ಒಂದು ಬಗೆಯ ಅಸಾರತೆಯನ್ನು ಉಂಟುಮಾಡಿದ ವಿಷಾದ ಪ್ರಕಟವಾಯಿತು. ಇದನ್ನು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ 1911ರಲ್ಲಿ ಬಿ.ಎಂ.ಶ್ರೀ ಅವರು ನೀಡಿದ ಉಪನ್ಯಾಸದಲ್ಲಿ ತೋಡಿಕೊಂಡಿದ್ದಾರೆ.
‘ಮೇಲೆ ತೋಟ ಶೃಂಗಾರ. ಒಳಗೆ ಗೋಣಿಸೊಪ್ಪು ಯಾವ ಕವಿಯ ಕವನವೇ ತೆಗೆಯಿರಿ ಲೋಕ ಶ್ರೇಷವಿವಾದ ನೀತಿಗಳಾಗಲಿ, ದಿವ್ಯ ಜೀವನಕ್ಕೆ ಮೇಲುಪಂಕ್ತಿಯಾದ ಚರಿತ್ರೆಗಳಾಗಲಿ ಯಾವುದಾದರೂ ಒಂದು ನಮ್ಮ ಹೃದಯವನ್ನು ಆನಂದ ಪ್ರವಾಹದಲ್ಲಿ ತೊಳೆದು ದುಃಖಮಯವಾದ ಈ ಸಂಸಾರದಲ್ಲೇ ಸ್ವರ್ಗಸುಖವನ್ನು ತಂದುಕೊಡುವಂತಹದು ಇದೆಯೆ? ಹಿತವಾದ, ಸಾರ್ಥಕವಾಗಿ ಹೊತ್ತು ಕಳೆಯಬಹುದಾದ ವಚನ ಕಾವ್ಯಗಳುಂಟೇ’
ಶ್ರೀಯವರ ಈ ವಿಷಾದವು ಆ ಕಾಲದ ಕಾವ್ಯದ ರಾಚನಿಕ ಸಂದರ್ಭವನ್ನು ‘ವಸಾಹತುಶಾಹಿ’ ದೃಷ್ಟಿಕೋನ ಮನೋಭಾವವಿಟ್ಟುಕೊಂಡು ಕನಲಿದಂತಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ. ಶ್ರೀಯವರು ಹೊಸತನವಿಲ್ಲದೆ ಹಳೆಯದನ್ನೇ ಮತ್ತೆ ಮತ್ತೆ ಹೊಸದಾಗಿ ಬರೆವ ಕವಿಗಳನ್ನು ‘ಸೂತ್ರಕ್ಕೆ ಮಾರಿಕೊಂಡ ಕವಿಗಳು’ ಎಂದು ಜರಿಯುತ್ತಾರೆ. ‘ಹಳೆಯ ಕಥೆಗಳೆ ಚವರ್ಿತ ಚರ್ವಣವಾಗಿ ಬರುತ್ತಿವೆ. ಕಾವ್ಯ ರೀತಿಯೂ ಒಂದೇ ಸೂತ್ರಕ್ಕೆ ಸ್ವತಂತ್ರವಾಗಿ ಮಾರಿಕೊಂಡ ಕವಿಗಳಿಗೆ ಒಂದರ ಪಡಿಯಚ್ಚು ಮತ್ತೊಂದು. ಹದಿನೆಂಟು ವರ್ಣನೆಗಳು! ಅದೂ ಒಬ್ಬನಂತೆಯೇ ಮತ್ತೊಬ್ಬನಲ್ಲಿಯೂ ಹೀಗೆ ಒಂದು ಕವಿತೆಯನ್ನೋದಿದ ಮೇಲೆ ಮತ್ತೆ ಬೇರೆಯದನ್ನು ಓದುವ ಅಗತ್ಯವಾದರೂ ಏನು? ಹೊಸ ಭಾವಗಳಂತೂ ಇಲ್ಲವೇ ಇಲ್ಲ. ಒಂದು ಭಾವವನ್ನೇ ಬೇರೆ ಮಾತಿನಲ್ಲಿ ಜೋಡಿಸಿದರಾಯಿತು’ ಎಂಬುದೂ ಶ್ರೀ ಅವರ ಆ ಕಾಲದ ಕಾವ್ಯವನ್ನು ಕಂಡ ಪರಿ ಆದರೆ ಇದು ಅಂದಿನ ಸಂಸ್ಕೃತದ ಅಂಧಾನುಕರಣೆಯಿಂದ ನಮ್ಮ ಕವಿಗಳು ಬರೆಯುತ್ತಿದ್ದ ಈ ಬಗೆಯ ಕಾವ್ಯದ ಸೆಳೆತ ಇಂಥ ರಚನೆಗಳಿಗೆ ದಾರಿಮಾಡಿಕೊಟ್ಟಿತು ಎಂಬುದು ಸರ್ವವಿದಿತ. ಮೈಸೂರು ಅರಸರ ಆಶ್ರಯದ ಬಿಗಿತನ ಇಂಥ ರಚನೆಗಳಿಗೆ ಕಾರಣವಾದ ಸಂದರ್ಭವನ್ನು ಗಮನಿಸಬೇಕು.
‘ಮೈಸೂರಿನ ಅರಮನೆಯ ಸಂಪ್ರದಾಯದ ಕೋಟೆಯಾಗಿ ಅಲ್ಲಿ ನವೋದಯ ಬರಲು ನಿಧಾನವಾಯಿತು’ ಎನ್ನುತ್ತಾರೆ ಎಸ್. ಅನಂತನಾರಾಯಣ ಅವರು. ಮೈಸೂರಿನಲ್ಲಿ ರಾಜಾಶ್ರಯದ ಸುಭದ್ರತೆಯಿಂದ ಆಸ್ಥಾನದ ಗಾಂಬಿರ್ಯ, ಘನತೆ, ಗೌರವ ಇವುಗಳ ಕಟ್ಟಿಗೆ ಸಿಕ್ಕಿ ಹಳೆಯದನ್ನೇ ಅನುಸರಿಸುವ ರೀತಿಯೆ ಹೆಚ್ಚು ಪಾಲು ಉಳಿದುಕೊಂಡು ಬಂದಿತು. ಹೀಗಾಗಿ ಮೈಸೂರು ಕನರ್ಾಟಕ ಭಾಗದಲ್ಲಿ ಈ ರೀತಿಯ ಏಕತಾನತೆಗೆ ಕಾರಣವಾದ ಸಂದರ್ಭದಲ್ಲಿ ಕನ್ನಡ ಕಾವ್ಯಕ್ಕೆ ಹೊಸತನ ತುಂಬಲು ಶ್ರೀ ಅವರು ಆರಿಸಿಕೊಂಡಿದ್ದು ಅನ್ಯ ಭಾಷಿಕ ಸೊಗಡನ್ನೇ ಎಂಬುದು ಗಮನಿಸಬೇಕು. ಶ್ರೀ ಅವರು ಆ ಕಾಲದ ಇಂಡಿಯಾದ ಒಗ್ಗಟ್ಟು ಮುಂದುಮಾಡಿ ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳ ಮಹತ್ತು ಸಾರಿದರು. ಮೈಸೂರು ಭಾಗದ ಆಳರಸರ ಪ್ರೋತ್ಸಾಹ, ವಸಾಹತುಶಾಹಿಯ ಹೇರಿಕೆ ಹಾಗೂ ಇಂಗ್ಲಿಷ್ ಶಿಕ್ಷಣ ಕ್ರಮದಿಂದಾಗಿ 1911ರ ಹೊತ್ತಿನಲ್ಲಿ ಜಾನಪದವೇ ಉಸಿರಾಡುತ್ತಿದ್ದ ಧಾರವಾಡ ನೆಲೆಯಲ್ಲಿ ಅವರು ನಿಂತು ಮಾತನಾಡಿದ್ದನ್ನು ಇಲ್ಲಿ ನಾವು ಕಾವ್ಯ ಸಂದರ್ಭದಲ್ಲಿ ಗಮನಿಸಬೇಕು:
‘… ಇವೆಲ್ಲಕ್ಕೂ ಮೊದಲು ಭಾಷೆ ಒಂದಾಗಬೇಕು. ಇಂಗ್ಲಿಷ್ ಇಲ್ಲವೆ ಹಿಂದಿ ಯಾವುದು ಒಂದು ಸಾಧ್ಯವಾದದ್ದು. ಮಿಕ್ಕ ಭಾಷೆಗಳು ಸತ್ತು ಹೋಗಲಿ, ಈಗ ತಾವಾಗಿಯೇ ಸಾಯುತ್ತಾ ಬಿದ್ದಿರುವವು; ಎರಡು ದಿನ ನಾವು ತಟಸ್ಥರಾಗಿದ್ದರೆ ಹೋಗಿ ಹಳ್ಳಿಗಳಲ್ಲಿ ಅಡಗಿಕೊಳ್ಳುವವು. ಆಗ ರಾಜಭಾಷೆಯೊಂದು ಹಿಮಾಲಯದಿಂದ ರಾಮೇಶ್ವರದವರೆಗೂ ಸ್ವೇಚ್ಫೆಯಾಗಿ ಓಡಾಡುವುದು. ಇದು ಬಿಟ್ಟು ನರಳುತ್ತಿರುವ ದೇಶ ಭಾಷೆಗಳನ್ನು ಗುಣಮಾಡಿ ತಲೆಯೆತ್ತಿಸಬೇಕು ಎನ್ನುವುದು ಇಂಡಿಯಾದ ಒಗ್ಗಟ್ಟಿಗೆ ಅಡ್ಡ ಬಂದು ನಿಲ್ಲುವುದು; ಅವು ರಾಜ್ಯದ ಹಿತಚಿಂತನೆಗೆ ಮೃತ್ಯುಗಳು
ಹೀಗೆ ಒಂದೆಡೆ ನರಳುತ್ತಿರುವ ದೇಶೀ ಭಾಷೆಗಳನ್ನು ರಾಜಭಾಷೆಯೊಂದು ದಾಪುಗಾಲನ್ನಿಟ್ಟು ನಡೆದಾಡಿ ಹಳ್ಳಿಯ ಮೂಲೆಯಲ್ಲಿ ಮುದುಡಿ ಬಿದ್ದುಕೊಂಡಿರಬೇಕಾದರೆ ಹೊಸ ಭಾಷೆಗೆ ರತ್ನಗಂಬಳಿಯ ಹಾಸಿ ಸ್ವಾಗತಿಸುವ ರೀತಿಯನ್ನು ಧ್ವನಿಸುವ ಸಂದರ್ಭವನ್ನು ಗಮನಿಸಬೇಕು. ‘ಈಚೀಚೆಗಂತೂ ಯಕ್ಷಗಾನ, ದೊಂಬಿದಾಸರ ಪದ, ಶುಕಸಪ್ತತಿ, ಹಲ್ಲಿಯ ಶಕುನ ಇವೇ ಜನಗಳಿಗೆ ಮಹಾಕಾವ್ಯಗಳು. ‘ಏನು ಇಕ್ಕಟ್ಟಿನಲ್ಲಿ ಸಿಕ್ಕಿದೆವು’ ಹಿಂದಿನ ಸಂಸ್ಕೃತ ಪ್ರಾಬಲ್ಯವು ಅವರ ಕಾವ್ಯ ಮಾರ್ಗವು ಕುಗ್ಗಿ ಹೋದವು. ಮುಂದೆ ಇಂಗ್ಲಿಷಿನ ಪ್ರಾಬಲ್ಯವೂ ಅದರ ಕಾವ್ಯ ಮಾರ್ಗವೂ ಹೆಚ್ಚುವಂತೆ ತೋರುತ್ತದೆ. ಆದರೆ ಇದು ಇನ್ನು ದೃಢವಾಗಿ ಎಲ್ಲರ ಮನಸ್ಸಿಗೂ ಹತ್ತಿಲ್ಲ. ನಮಗೇನೋ ಇದು … ಕಾಣುತ್ತದೆ. ಇಂಗ್ಲಿಷ್ ಸಾಹಿತ್ಯವೇ ಜೀರ್ಣವಾದ ನಮ್ಮ ಕಾವ್ಯಮಾಲೆಯನ್ನು ಕೈಕೊಟ್ಟು ಎತ್ತಬೇಕು. ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ ಕಾವ್ಯಮಾಲೆಗೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು.
ಹೀಗೆ ಶ್ರೀಯವರು ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್ ಸಾಹಿತ್ಯದ ಯಜಮಾನಿಕೆಯನ್ನು ಆರೋಪಿಸಿದರು. ಅಲ್ಲದೆ ಸಾಹಿತ್ಯಕ್ಕೆ ಬಳಸುವ ಭಾಷೆಯಲ್ಲೂ ಅವರ ದೃಷ್ಟಿ ಗ್ರಾಂಥಿಕವಾದುದು, ಗ್ರಾಮ್ಯವನ್ನು ನಿರ್ಲಕ್ಷಿಸಿರುವದು ಅವರ ಮಾತುಗಳಲ್ಲಿಯೇ ಸ್ಪಷ್ಟವಾಗಿದೆ. ‘ಗ್ರಾಮ್ಯವನ್ನು ಬಿಟ್ಟು ವಿದ್ಯಾವಂತರು, ಉತ್ತಮ ಜಾತಿಯವರೂ ಆಡತಕ್ಕ ಸ್ಪುಟವಾದ ಕನ್ನಡವನ್ನು ಗ್ರಂಥ ಭಾಷೆಯಾಗಿ ತಿರುಗಿಸಿ ಬಿಟ್ಟರೆ ಅಚ್ಚು ಹಾಕುವುದರಿಂದಲೂ, ಮಕ್ಕಳಿಗೆ ಕಲಿಸುವುದರಿಂದಲೂ ಇದೆ ನೆಲೆಯಾಗಿ ನಿಂತು ಎತ್ತಲೂ ಹರಡುತ್ತದೆ. ಜನಗಳು ರೂಡಿಗೆ ತಂದ ಮಾತುಗಳನ್ನು ಕಲ್ಪನೆ ಮಾಡಬಾರದು. ಹಾಗೆ ಮಾಡಿದರೂ ಕನ್ನಡ ಮಾತುಗಳನ್ನೇ ಬಳಸುತ್ತಿರುವ ಸಂಸ್ಕೃತ ಪದಗಳನ್ನೇ ರೂಡಿಸುವುದು ಅನುಕೂಲ ಎಂದರು. ಹೀಗೆ ಕನ್ನಡ ಪ್ರಾಂತೀಯ ಆಡುಮಾತಿಗೆ ಸಾಹಿತ್ಯಿಕ ಮಣೆ ಹಾಕದೆ, ಗ್ರಂಥಸ್ಥ ಭಾಷೆಗೆ ಒತ್ತುಕೊಟ್ಟ ಕಾರಣವಾಗಿ ಜನಸಾಮಾನ್ಯರ ನಿತ್ಯ ಬದುಕಿನೊಂದಿಗೆ ಜನಪದರು, ವಚನಕಾರರು, ದಾಸರು, ತತ್ವಪದಕಾರರು ಕಾದುಕೊಂಡು ಬಂದ ದೇಸೀಯತೆಯ ನಿರ್ಲಕ್ಷ ವ್ಯಕ್ತವಾಯಿತು. ಹೇಗೆ ಆದಿಯಿಂದಲೂ ಸಂಸ್ಕೃತ ಶಿಕ್ಷಣದಿಂದಲೂ, ಸಂಸ್ಕೃತ ಪೋಷಣೆಯಲ್ಲೂ ಕಾವ್ಯಮಾಲೆಯನ್ನು ಬೆಳೆಸಿದೆವೋ ಹಾಗೆ ದೈವಯತ್ನದಿಂದ ಲಬಿಸಿರುವ ಇಂಗ್ಲಿಷಿನ ಶಿಕ್ಷಣದಲ್ಲೂ, ಇಂಗ್ಲಿಷಿನ ಪೋಷಣೆಯಲ್ಲೂ ಅದನ್ನು ಬೆಳೆಸಬೇಕು ಎಂದೂ ಕರೆಕೊಟ್ಟರು. ಇಲ್ಲಿ ಒಂದು ಬಿಡುಗಡೆ ಮತ್ತೊಂದರ ಬಿಗಿತನ ಕಾಣಬಹುದು. ಕುತರ್ುಕೋಟಿ ಅವರು ಹೇಳುವ ಹಾಗೆ ‘ಸಂಸ್ಕೃತ ಭಾರದಿಂದ ಬಿಡುಗಡೆಯನ್ನು ಪಡೆದು ಈಗ ಇಂಗ್ಲಿಷ್ ಭಾಷೆಯಿಂದ ಚೇತನವನ್ನು ಪಡೆಯಬೇಕು ಎಂದು ಅವರ ನಿರೀಕ್ಷೆಯಾಗಿತ್ತು’44 ಎಂಬುದು ಕನ್ನಡ ಚೇತನಕ್ಕೆ ನಡೆದ ಹುಡುಕಾಟ ದೇಸೀ ಮೂಲವಾಗಿರದೆ ಅನ್ಯ ನೆಲೆಗಳನ್ನು ಅರಸಿದ್ದು ಸ್ಪಷ್ಟವಾಗುತ್ತದೆ. ಒಟ್ಟಾರೆ ನವೋದಯ ಕಾವ್ಯದ ಆರಂಭವನ್ನು ಮೈಸೂರು ಕೇಂದ್ರಕ್ಕೆ ಆರೋಹಣಗೊಳಿಸುವ ಸಂದರ್ಭದಲ್ಲಿ ‘ಅನ್ಯ ಮತ್ತು ದೇಸಿ ತಾಕಲಾಟವನ್ನು ಅಳಿಸಿಹಾಕಬೇಕಾಗಿದೆ. ಈ ಮಾತಿಗೆ ಪೂರಕವಾಗಿ ಇಲ್ಲಿ ಕೆಲವು ಅಂಶಗಳನ್ನೂ ಗಮನಿಸಲಾಗಿದೆ.
‘ಮೈಸೂರು ಕೇಂದ್ರ ಭಾಗದಲ್ಲಿ ವಸಾಹತುಶಾಹಿ ಹಾಗೂ ಅರಸೊತ್ತಿಗೆ ಈ ಇಬ್ಬಗೆಯ ದಾಸ್ಯದ ನೆರಳಿನಲ್ಲೇ ಇಂಗ್ಲಿಷ್ ಶಿಕ್ಷಣ ಹಾಗೂ ಆಧುನಿಕ ವಿಚಾರಗಳ ಪ್ರವೇಶದಿಂದ ಹೊಸ ಮಧ್ಯಮ ವರ್ಗವೂ ಶಿಷ್ಟವಾದ ಒಂದು ಭಾಷಾ ಪ್ರಭೇದವೂ ಇಲ್ಲಿ ರೂಪುಗೊಂಡಿತು. ಅರಮನೆ ಹಾಗೂ ಹೊಸಕಾಲದ ಗುರುಮನೆಯ ನಡುವಿನ ಅಂಗಳದಲ್ಲಿ ಮಧ್ಯಮ ವರ್ಗದ ತಾತ್ವಿಕತೆ ಹಾಗೂ ಶಿಷ್ಟ ಭಾಷಾ ಪ್ರಭೇದವನ್ನೂ ಬಳಸಿಕೊಂಡು ಅನುವಾದ ಅನುಕರಣಗಳ ಹಂತವನ್ನು ದಾಟಿ ಸ್ವತಂತ್ರವಾಗಿ ನೆಲೆನಿಂತ ಕಾವ್ಯದಲ್ಲೂ ಒಂದು ಬಗೆಯ ಶಿಷ್ಟತೆ ಹಾಗೂ ಗಾಂಬಿರ್ಯ ಉಳಿದುಕೊಂಡಿತು. ಅದನ್ನು ಹಗುರಗೊಳಿಸಬಹುದಾಗಿದ್ದ ಜನಪದ ಸ್ಪರ್ಶವೂ ಅದಕ್ಕಾಗಲಿಲ್ಲ.’ ಹೀಗೆ ಕಾವ್ಯದಲ್ಲಿ ಶಿಷ್ಟತೆ, ಬಿಗಿತನ, ಅನುವಾದ, ಅನುಕರಣೆಗಳು ಸ್ಥಳೀಯತೆಯನ್ನು ಬಿಟ್ಟು ರಚನೆಯಾದಂತೆಲ್ಲಾ ಇಂಥ ರಚನೆಗಳೇ ಸಾರ್ವತ್ರಿಕ ಮನ್ನಣೆಗೆ ನಿಲ್ಲಬೇಕಾಯಿತು. ಶ್ರೀಯವರ ‘ಪುನರುಜ್ಜೀವನ’ ಪರಿಕಲ್ಪನೆಯಲ್ಲಿ ದೊರೆತ ಮನ್ನಣೆಯೇ ಇದಕ್ಕೆ ಕಾರಣವಾಯಿತು.
‘ಹೊಸ ಕಾವ್ಯದ ಹುಟ್ಟಿನ ಸಂದರ್ಭದಲ್ಲಿ ಶ್ರೀಯವರ ಬರಹಗಳಲ್ಲಿ ‘ಗ್ರಾಮ್ಯ’ ಭಾಷಾ ಪ್ರಭೇದಗಳ ಕುರಿತಾದ ಅನಾದರ ಸ್ಪಷ್ಟವಾಗಿದೆ. ಅವರು ಅರ್ಥವಾಗದ ಹಳಗನ್ನಡವನ್ನಾಗಲಿ, ಕನ್ನಡಕ್ಕೆ ಒಗ್ಗದ ರೂಡಿಯಲ್ಲಿಲ್ಲದ ಶಬ್ದಗಳನ್ನಾಗಲಿ ಬಳಸಬಾರದು ಎಂಬುದು ಶ್ರೀಯವರ ನಿಲುವಾಗಿತ್ತು. ಇವು ಶ್ರೀಯವರ ವೈಯಕ್ತಿಕ ಅಬಿಪ್ರಾಯಗಳು ಮಾತ್ರವಾಗಿರದೆ ಒಟ್ಟು ಮೈಸೂರು ಪ್ರಾಂತದ ಸುಶಿಕ್ಷಿತವರ್ಗದ ನಿಲುವು ಎಂದು ಗ್ರಹಿಸಬಹುದು. ಏಕೆಂದರೆ ಭಾಷೆಯ ಕುರಿತಾದ ಶ್ರೀಯವರ ವಿಚಾರಗಳು ಅವರು ಪ್ರತಿಪಾದಿಸಿದ ಪುನರುಜ್ಜೀವನದ ಪರಿಕಲ್ಪನೆಯ ಅಂಗವಾಗಿ ಬಂದಿದೆ. ಪುನರುಜ್ಜೀವನ ಪರಿಕಲ್ಪನೆಯನ್ನು ಶ್ರೀಯವರು ತಮ್ಮ ಕಾಲದ ಸಾಹಿತ್ಯ ಸಾಂಸ್ಕೃತಿಕ ವಿಚಾರಗಳನ್ನು ವ್ಯವಸ್ಥೀಕರಿಸಲು, ಅರ್ಥಮಾಡಿಕೊಳ್ಳಲು ಹಾಗೂ ಆನುಷಂಗಿಕವಾಗಿ ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನೂ ನಿದರ್ೆಶಿಸಲು ಬಳಸುತ್ತಾರೆ. ಹಾಗೆ ವ್ಯವಸ್ಥೀಕರಿಸಲು ಹಾಗೂ ನಿದರ್ೆಶಿಸಲು ಬೇಕಾದ ಶೈಕ್ಷಣಿಕ ಸಿದ್ಧತೆ ಹಾಗೂ ಅದಿಕಾರ ಎರಡೂ ಅವರಿಗಿತ್ತು. ಈ ಭಾಗದ ಆ ಕಾಲದ ಲೇಖಕರೆಲ್ಲ ಹೆಚ್ಚಾಗಿ ಅವರ ಶಿಷ್ಯರೇ ಆಗಿದ್ದರೆಂಬುದನ್ನು ನೆನೆದಾಗ ಶ್ರೀ ಫ್ಯಾಕ್ಟರ್ನ ಮಹತ್ವ ಅರಿವಾಗುತ್ತದೆ. ಒಟ್ಟಿನಲ್ಲಿ ಇಲ್ಲಿಯ ಕಾವ್ಯಭಾಷೆ ದಕ್ಷಿಣ ಕನ್ನಡದ ಹಾಗೂ ಉತ್ತರ ಕನರ್ಾಟಕದ ಸಾಹಿತ್ಯ ಭಾಷೆಗಿಂದ ಬಿನ್ನವಾಯಿತಲ್ಲದೆ ‘ನವಮಾರ್ಗ ಸಂಪ್ರದಾಯ’ವೊಂದು ಇಲ್ಲಿ ಹುಟ್ಟಿಕೊಂಡಿತು.
ಹೀಗೆ ವಸಾಹತುಶಾಹಿ ಸಂದರ್ಭ, ಇಂಗ್ಲಿಷ್ ಶಿಕ್ಷಣ ಕ್ರಮ, ಸಂಸ್ಕೃತ ಪ್ರಭಾವ, ಶಿಷ್ಟತೆಯ ಅನಿವಾರ್ಯತೆ ಕಾರಣವಾಗಿ ‘ಇಂಗ್ಲಿಷ್ ಮಾತ್ರ ಕನ್ನಡ ಕಾವ್ಯಕ್ಕೆ ಹೊಸತನ ತರಬಲ್ಲದೆಂದು’ ನಂಬಿದ್ದ ಶ್ರೀಯವರು ಅದನ್ನೇ ನಂಬಿಸಿದರು. ಹೀಗಾಗಿ 19ನೆಯ ಶತಮಾನದ ಉತ್ತರಾರ್ಧದಿಂದ ಪ್ರಾರಂಭವಾದ ಆಧುನಿಕ ಕನ್ನಡ ಸಾಹಿತ್ಯ ಒಂದು ನೆಲೆಯಲ್ಲಿ ವಸಾಹತುಶಾಹಿ ಅನುಭವದಿಂದ ರೂಪಿಸಲ್ಪಟ್ಟಿರುವುದು ಕಾಣುತ್ತೇವೆ. ಇಂದು ಸರ್ವವೇದ್ಯವಾಗಿರುವಂತೆ ತನ್ನ ಪ್ರಭುತ್ವವನ್ನು ಉಳಿಸಿ ಬೆಳೆಸಲು ಬ್ರಿಟಿಷ್ ವಸಾಹತುಶಾಹಿಯು ತನ್ನದೇ ಆದ ಸಾಂಸ್ಕೃತಿಕ ಯಾಜಮಾನ್ಯವನ್ನು ಕನರ್ಾಟಕದ ಆ ಮೂಲಕ ಭಾರತದ ಮೇಲೆ ಹೇರುವುದರಲ್ಲಿ ಯಶಸ್ವಿಯಾಯಿತು. ಎಂದರೆ ವಸಾಹತುಶಾಹಿ ವೈಚಾರಿಕತೆ, ಇಂಗ್ಲಿಷ್ ಶಿಕ್ಷಣ ಪ್ರಗತಿ ಎಂಬ ಸರಳ ಸಮೀಕರಣವನ್ನು ಭಾರತೀಯರೆ ಒಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಬ್ರಿಟಿಷ್ ಸಾಂಸ್ಕೃತಿಕ ವೈಚಾರಿಕ ಯಾಜಮಾನ್ಯವನ್ನು ಆಧುನಿಕ ಕನ್ನಡ ಸಾಹಿತಿಗಳು ಹಾಗೂ ಚಿಂತಕರು ಪ್ರಜ್ಞಾಪೂರ್ವಕವಾಗಿ ಮಾನ್ಯ ಮಾಡಿದ್ದರು ಎಂಬುದಕ್ಕೆ ಸಮರ್ಥನೆಯಾಗಿ ಈ ಪ್ರಾತಿನಿದಿಕ ಸಾಲುಗಳನ್ನು ಉದಾಹರಿಸಬಹುದು. ತಮ್ಮ ‘ಭರತಮಾತೆಯ ವಾಕ್ಯ’ ಕವನದಲ್ಲಿ ಬ್ರಿಟನ್ನಿನ ರಾಣಿಯನ್ನುದ್ದೇಶಿಸಿ ಬಿ.ಎಂ.ಶ್ರೀ ಅವರು ಹೀಗೆ ಹೇಳುತ್ತಾರೆ.
ಸಕಲ ಧರ್ಮದ ತಿರುಳ ಹೊರೆದಳು
ಸಕಲ ಜ್ಞಾನವ ತೆರೆದಳು;
ಸಕಲ ಸೀಮೆಯ ಬಯಕೆಗಳೆದಳು
ಸಕಲ ಕುಶಲವನೊರೆದಳು
ಎಂದು ಶ್ರೀಯವರು ಹೀಗೆ ಸಾರಿದರೆ, ಕುವೆಂಪುರವರು
ಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸಗಾಳಿ
ಭಾರತದ ಒಣಗು ಬಾಳ್ಮರವನಲುಗಾಡಿ
ಎಂದು ಘೂಷಿಸಿದರು. ಈ ರೀತಿ ಬ್ರಿಟಿಷ್ ಸಾಂಸ್ಕೃತಿಕ ಯಾಜಮಾನ್ಯವನ್ನು ಇತರ ಭಾರತೀಯರಂತೆ ಕನ್ನಡ ಲೇಖಕರು ಹಾಗೂ ಚಿಂತಕರು ಸಂಪೂರ್ಣವಾಗಿ ಮಾನ್ಯ ಮಾಡಿದುದಕ್ಕೆ ಕೇವಲ ಬ್ರಿಟಿಷರ ರಾಜಕೀಯ ಸತ್ತೆ ಮತ್ತು ಪಾಶ್ಚಿಮಾತ್ಯರ ವೈಜ್ಞಾನಿಕ ತಾಂತ್ರಿಕ ಪ್ರಗತಿಗಳೇ ಕಾರಣವಲ್ಲ. 250 ವರ್ಷಗಳ ಬ್ರಿಟಿಷ್ ಪ್ರಭುತ್ವದೊಡನೆಯೇ ಸಾವಿರ ವರ್ಷಗಳ ದೇಶೀ ಪ್ರಭುತ್ವವೂ ಭಾರತದಲ್ಲಿ ಅಸ್ತಿತ್ವದಲ್ಲಿತ್ತು.
ಹೀಗೆ ಮೇಲಸ್ತರದ ಪಂಡಿತರು ಕನ್ನಡ ಪುನರುಜ್ಜೀವನ ಬಯಸಿದ ವಿದ್ವಾಂಸರು ಇಂತಹ ಪರಿಚಲನೆಯ ಮುಂಚೂಣಿಯಲ್ಲಿದ್ದದರಿಂದ ಅವರು ತರಬಯಸಿದ ಬದಲಾವಣೆಗಳು ಸುಧಾರಣಾತ್ಮಕವಾಗಿದ್ದವೇ ಹೊರತು ಸಮಗ್ರ ಪರಿವರ್ತನೆಯ ಕಡೆಗೆ ಒಲವನ್ನು ಹೊಂದಿರಲಿಲ್ಲ ಎಂಬುದು ವಿದಿತವಾಗುತ್ತದೆ. ಈ ಪರಿವರ್ತನೆಯ ಗರ್ಭದೊಳಗೆ ಕನ್ನಡ ಸಂದರ್ಭದಲ್ಲಿ ಅಡಗಿ ಕುಳಿತಿದ್ದ ದೇಸೀಯ ಮೌಖಿಕ ಕಾವ್ಯ ಪರಂಪರೆಗಳು ಉತ್ತರ ಕನರ್ಾಟಕದ ‘ಹಲಸಂಗಿ ಗೆಳೆಯರು’ ಮೊಳಗಿಸಿದ ಜಾನಪದ ಕಹಳೆಯಿಂದ ಕನ್ನಡ ಕಾವ್ಯಲೋಕ ಸೂರ್ಯ ಉದಯಿಸುವ ಮೊದಲು ಮೂಡುವ ಬೆಳ್ಳಿಚುಕ್ಕಿಯಂತೆ ಮೊಳಗಿ ನಾಡವರ ಕಣ್ಣನ್ನು ತನ್ನಡೆಗೆ ಆಕಷರ್ಿಸಿತು. ಈ ಆಕರ್ಷಣೆಗೆ ಶ್ರೀಯವರೂ ಹೊರತಾಗಲಿಲ್ಲ. ಮುಂದೆ ಅವರೇ ಸಾರಿದರು ‘ಜನವಾಣಿ ಬೇರು ಕವಿವಾಣಿ ಹೂವು’ ಎಂದು .

Monday, 9 September 2013

ಗಣೇಶ ಎಲ್ಲ ದೇವತೆಗಳಿಗೂ ಒಡೆಯ..-ಡಾ.ಖಾಡೆ


ಗಣೇಶ ಹಬ್ಬ (9.9.2013) ಲೇಖನ..
                         ಗಣೇಶ ಎಲ್ಲ ದೇವತೆಗಳಿಗೂ ಒಡೆಯ 

                                                              -  ಡಾ.ಪ್ರಕಾಶ ಗ.ಖಾಡೆ
     ಗಣಪತಿಯು ವಿದ್ಯೆ, ಬುದ್ಧಿ ಮತ್ತು ವಿವೇಕಗಳ ದೇವತೆ. ಭಾರತದ ತುಂಬೆಲ್ಲ ಗಣಪತಿಯನ್ನು ಪೂಜಿಸುತ್ತಾರೆ. ಗಣೇಶನ ಆರಾಧನೆ ಕಾಲಾತೀತ, ದೇಶಾತೀತ. ವಸಾಹತುಶಾಹಿಯ ವಿರುದ್ಧ ಸಾಂಸ್ಕøತಿಕ ಜಾಗೃತಿ ಮೂಡಿಸುವ ಆಚರಣೆಯ ಮೂಲಕ ಗಣೇಶ ಉತ್ಸವವು ಸಾರ್ವಜನಿಕ ಹಬ್ಬವಾಗಿ ಚಾಲನೆಯಲ್ಲಿ ಬಂದಿತು. . ನೆರೆಯ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಸಾರ್ವಜನಿಕವಾಗಿ ಆರಂಭವಾಯಿತು. ಗಣೇಶ ಇಂದು ವಿಶ್ವ ಮಾನ್ಯ ದೇವತೆ.ನಮ್ಮ ದೇಶದಲ್ಲಷ್ಟೇ ಅಲ್ಲದೆ ಚೀನಾ, ಜಪಾನ್, ಮಲೇಶೀಯಾ, ಜಾವಾ, ಟಿಬೇಟ್ ಮೊದಲಾದ ರಾಷ್ಟ್ರಗಳಲ್ಲಿಯೂ ಗಣೇಶನಿಗೆ ಅಗ್ರ ಸ್ಥಾನಿತ್ತೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಬೌದ್ಧ ಧರ್ಮದ ಚಾರಿತ್ರಿಕ ಸ್ಥೂಪಗಳಲ್ಲಿ ವಿನಾಯಕನ ಚಿಹ್ನೆಗಳಿರುವ ನಿದರ್ಶನಗಳಿರುವುದು ಬಾಂಗ್ಲಾದಲ್ಲಿವೆ. ಗಾಂಧಾರ, ಮಧುರ, ಅಮರಾವತಿ, ಸಾರಾನಾಥ, ಟಿಬೆಟ್ ಮೊದಲಾದೆಡೆಗಳಲ್ಲಿಯೂ ಈ ದೇವತೆಯ ಕಲಾಕೃತಿಗಳನ್ನು ಕಾಣುತ್ತೇವೆ. ಬಾದಾಮಿಯ ಚಾಲುಕ್ಯರ ಕಾಲದ ವಾತಾಪಿ ಭಜೆ ಉಕ್ತಿ ಕರ್ನಾಟಕ ಸಂಗೀತದ ಆದ್ಯವೆನಿಸಿದೆ. 11ನೇ ಶತಮಾನದಲ್ಲಿ ಗುಜರಾತ್‍ನಲ್ಲಿದ್ದ ಗಣೇಶ ವಿಗ್ರಹ ಈಗ ಲಂಡನ್ನಿನ ವಿಕ್ಟೋರಿಯಾ ಆಂಡ್ ಅಲ್ಬರ್ಟ್ ವಸ್ತು ಸಂಗ್ರಹಾಲಯದಲ್ಲಿದೆ. ಭರ್ಮಾ, ಥೈಲ್ಯಾಂಡ, ಮಲೇಶಿಯಾ, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯಾ ಮೊದಲಾದ ಆಗ್ನೇಯ ಏಷಿಯಾಗಳಲ್ಲಿಯೂ ಗಣೇಶನ ಆರಾಧನೆಯ ಸಂಕೇತಗಳಾಗಿ ಕೆಲವು ಕಲಾಕೃತಿಗಳನ್ನು ಕಾಣುತ್ತೇವೆ. ಜಪಾನಿನಲ್ಲಿ ಸಾಹಿತ್ಯ, ಚಿತ್ರ, ಶಿಲ್ಪಕಲಾಕ್ಷೇತ್ರಗಳಲ್ಲಿಯೂ ಭಾರತೀಯ ಶೈಲಿಯ ಗಣೇಶನ ಬಿಂಬಗಳಿವೆ. ಒಟ್ಟಾರೆ ವಿಶ್ವ ಸಂಸ್ಕøತಿಯೊಳಗೆ ಗಣೇಶನ ಆರಾಧನೆ ಹಾಸುಹೊಕ್ಕಾಗಿರುವುದು ಹಿರಿಮೆಯ ಸಂಕೇತವಾಗಿದೆ. ವೇದಗಳಲ್ಲಿಯೂ ಗಣಪತಿ ಪೂಜೆಯ ನಿರೂಪಣೆ ಇದೆ. ಉಪನಿಷತ್ತುಗಳ ಕಾಲದಲ್ಲಿಯೂ ಗಣಪತಿ ಪೂಜೆ ಹೆಚ್ಚು ಮಹತ್ವ ಪಡೆಯಿತು. ಈಚೆಗೆ ತಿಲಕರ ಕಾಲದಲ್ಲಿ ಈ ಪೂಜೆಗೆ ರಾಷ್ಟ್ರೀಯ ಸ್ವರೂಪ ಬಂದಿತು. ಜನಪದರಂತೂ ತಮ್ಮ ಕಾವ್ಯ, ಆಟ, ಬಯಲಾಟಗಳಲ್ಲಿ ಮೊದಲಿಗೆ ಗಣಪತಿಯನ್ನು ನೆನೆಯುತ್ತಾರೆ.

  ಗಣೇಶ ಎಲ್ಲ ದೇವತೆಗಳಿಗೂ ಒಡೆಯ. ಅಗ್ರ ದೇವತೆ. ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ದೇವತಾಕಾರ್ಯ ಮೊದಲಾದ ಜೀವನದ ಪ್ರತಿಯೊಂದು ಶುಭ ಕಾರ್ಯಗಳಲ್ಲಿಯೂ ನಿರ್ವಿಘ್ನತೆಯ ಸಿದ್ಧಿಗಾಗಿ ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಗಣಪತಿಗಿರುವ ಒಂದೊಂದು ಹೆಸರೂ ಒಂದೊಂದು ಗುಣಲಕ್ಷಣ ಸೂಚಿಸುತ್ತದೆ. ಸುಮುಖ, ಪಂಚಾಸ್ಯ, ಗಜಾಸ್ಯ, ಧೀರ, ವೀರ, ಕಂದರ್ಪ, ಶಕ್ತಿ, ಆಮೋದ, ಪ್ರಮಥ, ರುದ್ರ, ವಿದ್ಯಾ, ವಿಘ್ನಹರ, ದುರಿತಹರ, ಭಕ್ತವತ್ಸಲ, ಕಾವಿತಾರ್ಥ, ಸಮೋಹನ ಹೀಗೆ ನಾನಾ ದೇವತೆಯ ಅವತಾರ ಕಲ್ಪನೆಗಳು, ಮಂತ್ರಗಳು, ಮಂತ್ರ ಶಾಸ್ತ್ರದಲ್ಲಿ ಹಾಗೂ ಗಣೇಶ ಪುರಾಣಗಳಲ್ಲಿ ವಿಫುಲವಾಗಿ ಸಿಕ್ಕುತ್ತವೆ.
   ಆರ್ಯರು ತಮ್ಮ ವೈದಿಕ ದೇವತೆಗಳ ಗುಣಗಳನ್ನು ,ದ್ರಾವಿಡರು ಶಿವಾಚಾರದ ಸೂಚನೆಗಳನ್ನು ಈ ಮಾಸನ ಪುತ್ರನಲ್ಲಿ ಸೇರಿಸಿ ಓಂಕಾರ ಸ್ವರೂಪಿಯನ್ನಾಗಿ ಮಾಡಿ ಎಲ್ಲ ಮಂಗಲ ಕಾರ್ಯಗಳ ಆರಂಭ ಪೂಜೆಯನ್ನು ಸಲ್ಲಿಸುವ ಗೌರವವನ್ನು ಗಣಪತಿಗೆ ಕೊಟ್ಟರು. ಮುಂದೆ ಆರ್ಯ ದ್ರಾವಿಡರ ಸಂಯೋಗವಾಗಲು ಅವರ ಸಂಸ್ಕøತಿಯು ಒಂದಾಗಿ ಈ ಭಾರತದ ಸಂಸ್ಕøತಿಯೆಂದು ಉಳಿದಿದೆ.
            ವಿದ್ಯಾಲಾಭ, ಧನಲಾಭ, ಸಕಲ ಇಷ್ಟಾರ್ಥ ಲಾಭಗಳು ಗಣಪತಿಯನ್ನು ಪೂಜಿಸುವುದರಿಂದ ದೊರೆಯುತ್ತವೆ ಎಂಬ ನಂಬುಗೆ ಜನಪದರಲ್ಲಿದೆ. ನಿರ್ವಿಘ್ನತೆಗೆ ಸಂಕೇತವಾಗಿ ಜನಪದರು ರೂಪಿಸಿಕೊಂಡ ದೈವ ಗಣೇಶ. ಹಿಡಿಗಾತ್ರದ ತೊಪ್ಪೆ ಸಗಣೆ ಉಂಡಿ ಮಾಡಿ ಅದರ ನೆತ್ತಿಯ ಮೇಲೆ ನಾಲ್ಕಾರು ಗರಿಕೆಗಳನ್ನು ಸಿಕ್ಕಿಸುತ್ತಾರೆ. ಅದೇ ಗಣೇಶ. ಅದನ್ನು ಜನಪದರು ಪಿಳ್ಳಪ್ಪ ಗೊಂಬೇವರು, ಬೆನಕ ಮುಂತಾದ ಹೆಸರುಗಳಿಂದ ಸಂಭೋಧಿಸುತ್ತಾರೆ. ಪ್ರತಿಯೊಂದು ಶುಭ ಕಾರ್ಯದ ಪ್ರಾರಂಭದಲ್ಲಿಯೂ ಈ ಪಿಳ್ಳಪ್ಪನನ್ನು ಮಾಡಿ ಮೊದಲು ಪೂಜೆ ಸಲ್ಲಿಸಿ ಮುಂದಿನ ಕಾರ್ಯಗಳಲ್ಲಿ ತೊಡಗುತ್ತಾರೆ. ಬೇಸಾಯದ ಸಂದರ್ಭಗಳಲ್ಲಿಯೂ ಇದರ ಬಳಕೆಯಿದೆ. ಕಣದ ನಡುವೆ ನೆಟ್ಟ ಮೇಟಿಯ ನೆತ್ತಿಯ ಮೇಲೆ ಇಟ್ಟ ಪಿಳ್ಳಪ್ಪ ಕಣದ ಕೆಲಸಗಳೆಲ್ಲ ಮುಗಿಯುವವರೆಗೂ ಇರುತ್ತದೆ.
          ಗಣೇಶನ ಮೂರ್ತಿ ಕಲ್ಪನೆಯು ಬಹಳ ವಿಶಿಷ್ಟ ಮತ್ತು ವಿಶೇಷವಾದುದಾಗಿದೆ.ಮಾನವ ದೇಹ ಆನೆಯ ಗಾತ್ರ ,ಆನೆಯ ಮುಖ ,ಸೊಂಡಿಲು,ಒಂದು ಮುರಿದ ಕೋರೆ,ಡೊಳ್ಲು ಹೊಟ್ಟೆ,ಹೊಟ್ಟೆಗೆ ಬಿಗಿದು ಕಟ್ಟಿದ ಹಾವು,ಓರೆ ನೋಟ, ಚಿಕ್ಕ ಚಿಕ್ಕ ಕಾಲುಗಳು,ನಾಲ್ಕು ಕೈಗಳು,ಮೂಷಿಕ ವಾಹನ ಇದು ಗಣೇಶನ ಮೂರ್ತಯ ಕಲ್ಪನೆ.ವಿಘ್ನ ವಿನಾಶಕ ಮಂಗಲ ಮೂರ್ತಿ ,ವಿದ್ಯಾ ದೇವತೆ ,ಸಾಹಿತ್ಯ ಸಂಗೀತ, ನೃತ್ಯ,ಭಾಷಣಗಳ ಪ್ರೇಮಿ ಎಂಬ ನಂಬಿಕೆ ಈ ದೇವತೆ ಮೇಲಿದೆ. ನವರಸಗಳಲ್ಲೊಂದಾದ ಹಾಸ್ಯಕ್ಕೆ ಗಣಪತಿಯು ಅಧಿಪತಿ. ಹಾಸ್ಯವನ್ನು ಬಿಳಿಬಣ್ಣಕ್ಕೆ ಹೋಲಿಸಲಾಗಿದೆ. ಕಟಕಿಯಿಲ್ಲದೆ ನಗೆ ಶುಭ್ರವಾಗಿ ಹಸನಾಗಿರುತ್ತದೆ. ಗಣೇಶನಿಗೆ ಪ್ರಿಯವಾದ ಬಣ್ಣ ಶ್ವೇತ. ಹಾಸ್ಯದ ಆತ್ಮಸ್ಥ, ಪರಸ್ಥ ಎಂಬ ಎರಡು ಬೇಧಗಳಲ್ಲಿ ಆತ್ಮಸ್ಥ ಹಾಸ್ಯವು ಗಣಪತಿಯದು ಎಂದರೆ ತನ್ನನ್ನೇ ನಗುವಿನ ವಸ್ತುವನ್ನಾಗಿಸಿಕೊಳ್ಳುವ ಔದಾರ್ಯ ಹೊಂದಿದ ವಿಶಾಲದೃಷ್ಟಿಯ ಸರಸ ಹಾಸ್ಯ ಈ ದೇವತೆಯದು.
   ಜನಪದ ಕಾವ್ಯ ಮತ್ತು ಪುರಾಣ ಕಥೆಗಳಲ್ಲಿ ಗಣಪತಿಗೆ ಸಂಬಂಧ ಪಟ್ಟ ಅನೇಕ ಕಥೆಗಳು, ದಂತಕಥೆಗಳಿವೆ. ಗಣೇಶನ ಜನನ, ತುಂಟತನ, ಬುದ್ಧಿಚಾತುರ್ಯ ಇತ್ಯಾದಿ ಕುರಿತ ಕಥೆಗಳು ಪ್ರಚಲಿತದಲ್ಲಿವೆ.
ಗಜವದನ:
   ಒಮ್ಮೆ ಪಾರ್ವತಿ ಸ್ನಾನದ ಮನೆಗೆ ಹೋದಾಗ ಯಾರಾದರೂ ಒಳನುಗ್ಗಿದರೆ ಗತಿಯೇನೆಂದು ಒಳನುಗ್ಗದಂತೆ ತನ್ನ ಮೈ ತಿಕ್ಕಿ ಅದರಿಂದ ಉಂಟಾದ ಮಣ್ಣಿನ ಕೊಳೆಯಿಂದ ಬಾಲಕನ ಮೂರ್ತಿ ಮಾಡಿ ಅದಕ್ಕೆ ಜೀವ ತುಂಬಿ ಕವಲು ನಿಲ್ಲಿಸಿದಳು. ಯಾರನ್ನೂ ಒಳಗೆ ಬಿಡಕೂಡದೆಂದು ಆ ಹುಡುಗನಿಗೆ ಕಟ್ಟಪ್ಪನೆ ಮಾಡಿ ಸ್ನಾನಕ್ಕೆ ಹೋದಳು. ಇತ್ತ ದೇಶ ಸಂಚಾರಕ್ಕೆ ಹೋದ ಶಿವ ಆ ಹುಡುಗನ ತಲೆಯನ್ನೇ ಕತ್ತರಿಸಿದ. ತನ್ನ ಮಗನಿಗಾದ ಗತಿಗೆ ಪಾರ್ವತಿ ಸಂಕಟಪಟ್ಟಳು. ಅತ್ತಳು, ಕರೆದಳು ಶಿವನಿಗೆ ಕರುಣೆ ಬಂದು ಅವಳನ್ನು ಸಮಾಧಾನಪಡಿಸಲು ಹುಡುಗನ ತಲೆ ಬರಿಸುವುದಾಗಿ ಭರವಸೆ ಕೊಡುತ್ತಾನೆ. ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದವರ ತಲೆ ಕತ್ತರಿಸಿ ತನ್ನಿ ಎಂದು ತನ್ನ ಸೇವಕರಿಗೆ ಶಿವ ಆಜ್ಞಾಪಿಸುತ್ತಾನೆ. ಆನೆಯ ಮರಿಯ ತಲೆಯನ್ನೇ ಕಡಿದು ತಂದು ಸೇವಕರು ಶಿವನಿಗೆ ಒಪ್ಪಿಸಿದರು. ಶಿವ ಹುಡುಗನ ಮುಂಡಕ್ಕೆ ರುಂಡವನ್ನು ಕಸಿ ಮಾಡಿ ಜೀವ ತುಂಬಿದ. ಆನೆಯ ತಲೆಯನ್ನು ಧರಿಸಿದ ದೇವತೆಯೇ ಗಜವದನಾದ.
ಏಕದಂತ:
ಭೋಜನ ಪ್ರಿಯನಾದ ಗಣೇಶ ಒಂದು ದಿನ ಭಕ್ತರ ಮನೆ ಮನೆಗೆ ತಿರುಗಾಡಿ ರುಚಿರುಚಿಯಾದ ಕಡಬು, ಕರಿಗಡಬು, ಕಾಯಿಗಡಬು, ಉದ್ದಿನಕಡಬು ಮೊದಲಾದವನ್ನು ಹೊಟ್ಟೆಬಿಗಿಯುವವರೆಗೆ ಸೇವಿಸಿ, ಇಲಿಯ ಮೇಲೆ ಹತ್ತಿ ನಡೆದಿದ್ದನಂತೆ. ಈತನ ಭಾರ ತಾಳದೆ ಮೂಷಿಕ ಕಲ್ಲಿಗೆ ಎಡವಿ ಬಿದ್ದಿತು. ಗಣೇಶ ಕೆಳಗೆ ಬಿದ್ದ ಹೊಟ್ಟೆ ಹರಿದು ತಿಂದ ತಿಂಡಿಯೆಲ್ಲ ನದಿಯ ಪಾಲಾಯಿತು. ಯಾರಾದರೂ ನೋಡಿಯಾರೆಂದು ಅತ್ತ ಇತ್ತ ನೋಡುತ್ತ, ಬಿದ್ದುದನ್ನು ಮತ್ತೆ ಹೊಟ್ಟೆಯಲ್ಲಿ ಹಾಕಿಕೊಂಡು, ಅಲ್ಲಿಯೇ ಹರಿದು ಹೋಗುತ್ತಿದ್ದ ಹಾವನ್ನು ಹೊಟ್ಟೆಗೆ ಗಟ್ಟಿಯಾಗಿ ಕಟ್ಟಿಕೊಂಡನಂತೆ. ಇವನ ಈ ನಗೆಪಾಟಲು ದೃಶ್ಯವನ್ನು ಕಂಡು ಆಕಾಶದಲ್ಲಿ ಚಂದ್ರ ಗಹಗಹಿಸಿ ನಕ್ಕ. ಬಿದ್ದವನ ಬಗ್ಗೆ ಕನಿಕರ ಪಡದೇ ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು. ಗಣೇಶನಿಗೆ ಅಸಹ್ಯವೆನಿಸಿ, ಕೋಪವುಂಟಾಗಿ ಪ್ರತಿ ಭಾದ್ರಪದ ಚೌತಿಯ ದಿನ ನನ್ನನ್ನು ನೋಡದೆ ಯಾರೂ ನಿನ್ನನ್ನು ನೋಡಬಾರದು ಹಾಗೇನಾದರೂ ತಪ್ಪಿ ನಿನ್ನನ್ನು ಮೊದಲು ನೋಡಿದರೆ ಅವರ ಮೇಲೆ ಆಪಾದನೆ ಬರಲಿ ಎಂದು ಚಂದ್ರನಿಗೆ ಶಾಪವನ್ನಿತ್ತ. ತನ್ನನ್ನು ನೋಡಿ ನೋಯಿಸಿ ಗೇಲಿ ಮಾಡಿದ ಚಂದ್ರನಿಗೆ ತನ್ನ ಒಂದು ದಂತವನ್ನು ಸಿಟ್ಟಿನ ಭರದಲ್ಲಿ ಎಸೆದನಂತೆ. ಆಗಿನಿಂದ ಏಕದಂತನಾದ.
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಮನೆ ನಂ. ಎಸ್.135, ಸೆಕ್ಟರ್ ನಂ.63,ನವನಗರ,ಬಾಗಲಕೋಟ.-587103.ಮೊ.9845500890

Sunday, 1 September 2013

ಕವಿತೆ : ವಯಸ್ಸು ಮತ್ತು ಏಕಾಂತ-ಡಾ.ಖಾಡೆ



                                     ವಯಸ್ಸು ಮತ್ತು ಏಕಾಂತ
                                                           ಡಾ.ಪ್ರಕಾಶ  ಗ.ಖಾಡೆ
ಅವಳಿಗೆ ಒಂದೇ ಕಡೆ
ನಿಲ್ಲಲಾಗಲಿಲ್ಲ
ಹಾಗೆ ನಿಂತುಕೊಳ್ಳುವುದು ಅಂದರೆ
ಅವಳಿಗೆ ನಿಜವಾಗಿಯೂ ನಿಂತಂತೆ
ಅನಿಸಲಿಲ್ಲ.

ಕುಡಿತದ ಅಪ್ಪ ಆಸ್ಪತ್ರೆ ಸೇರಿದ್ದು
ನೋಡಿಕೊಳ್ಳಲು ಅವ್ವ 
ಅಲ್ಲೇ ಉಳಿದದ್ದು 
ಮನೆಯಲ್ಲಿ ಅವಳೊಬ್ಬಳೆ
ಗಾಳಿಯಲ್ಲಿ ತೇಲಿಹೋದ
ಅನುಭವದಂತಾಗಿತ್ತು.

ಸುಮ್ಮನೆ ಕೂಡಲಾಗಲಿಲ್ಲ
ಒಂದೆರಡು ಬಾರಿ ಕನ್ನಡಿಯ ಬಳಿ
ಹೋಗಿ ಬಂದಳು
ತನ್ನ ಕಣ್ಣ ಮೂಗಿನ ಸೊಗಸಿಗೆ
ತಾನೇ ಮೋಹಿತಳಾದಳು

ಕನ್ನಡಿಯ ಬಳಿ
ಹೋಗಿ ಬರುವುದು  
ಮಾಡುವುದಕ್ಕಿಂತ ಕನ್ನಡಿಯನ್ನೇ
ಕಿತ್ತು ತಂದಳು 

ಬಹಳ ಹೊತ್ತಿನವರೆಗೆ
ಮುಖದ ಮುಂದೆ ಹಿಡಿದಳು
ನೋಡ ನೋಡುತ್ತ 
ಅರಮನೆ ಕಟ್ಟಿದಳು
ಯುವರಾಜನೊಂದಿಗೆ ರಾಣಿಯಾದಳು
ಮಲಗಿದಳು ,ಮಕ್ಕಳಾದವು
ಬಣ್ಣದ ಕಾರು ತರಿಸಿದಳು
ಗಂಡ ಮಕ್ಕಳೊಂದಿಗೆ
ಕುಳಿತು ಹೊರಟಳು

ಹೀಗೆ ದೇಶ ದೇಶ ಸುತ್ತಿ
ಬರುತ್ತಿರಬೇಕಾದರೆ
ಕುಡಿದು ತೂರಾಡುತ್ತ ಅಪ್ಪ
ಎದುರಿಗೆ ಬಂದ.

ಗಕ್ಕನೆ ಗಾಡಿ ನಿಲ್ಲಿಸಿದಳು
ಕನಸುಗಳ ಮುರಿದು.

===================================================================
ವಿಳಾಸ ;ಡಾ.ಪ್ರಕಾಶ ಗ.ಖಾಡೆ,ಮನೆ ನಂ.ಎಸ್.135,ಸೆಕ್ಟರ್ ನಂ.63,ನವನಗರ,ಬಾಗಲಕೋಟ. ಮೊ.9845500890

Sunday, 25 August 2013

ಕವಿತೆ : ಈ ದಿನ -ಡಾ.ಪ್ರಕಾಸ ಗ.ಖಾಡೆ

ಈ ದಿನ

















- ಡಾ. ಪ್ರಕಾಶ ಗ. ಖಾಡೆ

 ಈ ದಿನ ಆರಂಭವಾಗುವ
ಹೊತ್ತಿಗೆ ಮಬ್ಬು ಕತ್ತಲಲ್ಲಿ
ಅಷ್ಟಿಷ್ಟು ಬೆಳಕ ಹೊತ್ತಿಸಿದ್ದ ಚುಕ್ಕೆಗಳು
ವಾಕಿಂಗಿನ ದಾರಿಯಲ್ಲಿ
ನಡೆವ ಹೆಜ್ಜೆಗಳಿಗೆ ನೆರವಾಗಿದ್ದು
ನಿರಾಳ ನಡೆಗೆ ಸಾಕ್ಷಿಯಾಗಿತ್ತು

ಒಬ್ಬಂಟಿ ಹೀಗೆ ಸುತ್ತಾಡಿ ಬರೋಣವೆಂದು
ಹೊರಟವನ ದಾರಿಗೆ ಜೊತೆಯಾದ ಮುದುಕ
ಬದುಕಿನ ಜೀವನ ಗತಿಯಲ್ಲಿ
ಕಳಕೊಂಡ ಅನುಭವಗಳ ಸುಮ್ಮಸುಮ್ಮನೆ ಹೇರಿ
ಏಕಾಂತದ ಯೋಚನೆಗಳಿಗೆ
ಕೀಲಿ ಜಡಿದದ್ದು ಖಂಡಿತ ಈ ಬೆಳಗು
ಈ ತಂಪು ನನ್ನದೆನ್ನಿಸಲಿಲ್ಲ

ಸಾಗಿದ್ದು ಸವೆದದ್ದು
ಗಳಿಗೆಯಾದರೂ ಅನುಭವಿಸಿದ
ನೋವು ತಲ್ಲಣ ಹಿತ ಸ್ವಗತ
ಎಲ್ಲಕ್ಕೂ ಒಂದೊಂದೆ ಮುಖಗಳು
ಮುಖವಾಡಗಳು; ಇರುವ ಹೊತ್ತೂ
ಗತ್ತಿನಲ್ಲೇ ಮೆರೆದು ಮರೆಯಾಗುವ
ಹೊತ್ತಿಗೆ ಉಳಿದದ್ದು ಮತ್ತದೇ ನಾಳೆ
ಹಾಗೂ ಮತ್ತದೇ ಬೆಳಗು
==========================
 - ಡಾ. ಪ್ರಕಾಶ ಗ. ಖಾಡೆ ,ಬಾಗಲಕೋಟ 9845500890

ಕವಿತೆ :ಡಾ.ಪ್ರಕಾಶ ಗ.ಖಾಡೆ

                                                              ಅದಕಂದರ ಬದುಕ

 - ಡಾ. ಪ್ರಕಾಶ ಗ. ಖಾಡೆ

 ಮೊಗ್ಗಿನ ಮೊದಲ ಸಣ್ಣ ಬೀಜದ ನೆವಕ
ಒಡಮೂಡಿತೊಂದ ಅಸ್ತಿತ್ವದ ಇರುವ
ಅದ ಬೆಳೆಬೆಳೆದು ದಿನಾ ಆಟೀಟ ಅನುತ
ಹೂವಾಗಿ ಬಂತ ಜಗಕ; ಅದಕಂದರ ಬದುಕ

ಹೊಸಾ ಚೆಲುವಿಕಿ ಕಂಡವರ ಒಲವಿಕಿ
ಸೇರಿ ಬೆಳೆಸಿತ ಸಂಬಂಧ
ಇರುತನಾ ಎಂಥ ಆನಂದ
ಹೂವಾಗಿ ಅರಳಿದ ವ್ಯಾಳೇಕ ಏಸೋಂದು ದುಂಬಿ ಸಾಲ

ಉಂಡವರು ಕೊಟ್ಟಿದ್ದು ಬಿಟ್ಟಿದ್ದು ಏನಿರಲಿ
ಹಂಚಿದ್ದು ಮಾತ್ರ ಜೇನು ಹಾಲಾ
ಉಳಿದೀತ ಏನ ದಿನದಿನಕ ಕೂಡಿಡಲು
ಹೆಸರ ಹೇಳಲಿಕ್ಕ ಯಾರಿಲ್ಲ ಒಂದ ಖೂನಾ

ಬಿದ್ದ ಬೀಜದ ಮೊಳಕಿ
ಮತ್ತು ಹೊಸಾ ಹಾದಿ ಹುಡುಕಿ
ಗಾಳಿದಾಳಿಗಿ ಹಾರಿ ಹಾರ್ಯಾಡಿ
ಉಳಿದ್ಹಾಂಗ ಆತ ಸುಮ್ಮಕ
ಯಾಕ ಬೇಕ ನೂಕ
ನೊಂದವರ ಹಾಡಿರಲಿ ಬೆಳಕ ಹರಿವತನಕ


                                         - ಡಾ. ಪ್ರಕಾಶ ಗ. ಖಾಡೆ

Friday, 23 August 2013

ಕನ್ನಡ ಸಾಹಿತ್ಯದ ಮೇಲೆ ಅನ್ಯ ಪ್ರಭುತ್ವ


ವಸಾಹತುಶಾಹಿಯ ಸಾಂಸ್ಕೃತಿಕ ಯಾಜಮಾನ್ಯ ಮತ್ತು ಕನ್ನಡ ಸಾಹಿತ್ಯ


                                                                     -ಡಾ.ಪ್ರಕಾಶ ಗ.ಖಾಡೆ
   
        ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿಯೇ ಕನ್ನಡ ಕಾವ್ಯದ ಜನಮುಖಿಮಾರ್ಗದ ವಿರುದ್ಧ ಪಯಣ ಕೆಲವು ಚಿಂತನೆಗಳಿಗೆ ಗ್ರಾಸವಾಯಿತು. ಸಂಸ್ಕøತ, ಇಂಗ್ಲಿಷ್ ಹಾಗೂ ಪ್ರಾಂತೀಯ ಭಾಷಾ ಸಾಹಿತ್ಯದ ಪ್ರಭಾವ ಹಾಗೂ ಸ್ಥಳೀಯವಾದ ಕವಿಗಳ ಕಾಣ್ಕೆಗಳು ಕನ್ನಡ ಕಾವ್ಯರಚನಾ ಸಂದರ್ಭವನ್ನು ಗೊಂದಲಕ್ಕೆ ದೂಡಿದ್ದವು. ಕನ್ನಡದ ಸಾಂಸ್ಕøತಿಕ ನೆಲಗಟ್ಟು ಹೊಸ ಕಾವ್ಯ ಪ್ರಕಾರಕ್ಕೆ ಸಜ್ಜುಗೊಳ್ಳುವ ಮುಂಚಿನ ದಿನಗಳು ಒಂದು ಬಗೆಯ ಅಸಾರತೆಯನ್ನು ಉಂಟುಮಾಡಿದ ವಿಷಾದ ಪ್ರಕಟವಾಯಿತು. ಇದನ್ನು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ 1911ರಲ್ಲಿ ಬಿ.ಎಂ.ಶ್ರೀ ಅವರು ನೀಡಿದ ಉಪನ್ಯಾಸದಲ್ಲಿ ತೋಡಿಕೊಂಡಿದ್ದಾರೆ. ‘ಮೇಲೆ ತೋಟ ಶೃಂಗಾರ. ಒಳಗೆ ಗೋಣಿಸೊಪುŒ ಯಾವ ಕವಿಯ ಕವನವೇ ತೆಗೆಯಿರಿ ಲೋಕ ಶ್ರೇಷ್ಟವಾದ ನೀತಿಗಳಾಗಲಿ, ದಿವ್ಯ ಜೀವನಕ್ಕೆ ಮೇಲುಪಂಕ್ತಿಯಾದ ಚರಿತ್ರೆಗಳಾಗಲಿ ಯಾವುದಾದರೂ ಒಂದು ನಮ್ಮ ಹೃದಯವನ್ನು ಆನಂದ ಪ್ರವಾಹದಲ್ಲಿ ತೊಳೆದು ದುಃಖಮಯವಾದ ಈ ಸಂಸಾರದಲ್ಲೇ ಸ್ವರ್ಗಸುಖವನ್ನು ತಂದುಕೊಡುವಂತಹದು ಇದೆಯೆ? ಹಿತವಾದ, ಸಾರ್ಥಕವಾಗಿ ಹೊತ್ತು ಕಳೆಯಬಹುದಾದ ವಚನ ಕಾವ್ಯಗಳುಂಟೇ’ ಶ್ರೀಯವರ ಈ ವಿಷಾದವು ಆ ಕಾಲದ ಕಾವ್ಯದ ರಾಚನಿಕ ಸಂದರ್ಭವನ್ನು ‘ವಸಾಹತುಶಾಹಿ’ ದೃಷ್ಟಿಕೋನ ಮನೋಭಾವವಿಟ್ಟುಕೊಂಡು ಕನಲಿದಂತಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.
     ಶ್ರೀಯವರು ಹೊಸತನವಿಲ್ಲದೆ ಹಳೆಯದನ್ನೇ ಮತ್ತೆ ಮತ್ತೆ ಹೊಸದಾಗಿ ಬರೆವ ಕವಿಗಳನ್ನು ‘ಸೂತ್ರಕ್ಕೆ ಮಾರಿಕೊಂಡ ಕವಿಗಳು’ ಎಂದು ಜರಿಯುತ್ತಾರೆ. ‘ಹಳೆಯ ಕಥೆಗಳೆ ಚರ್ವಿತ ಚರ್ವಣವಾಗಿ ಬರುತ್ತಿವೆ. ಕಾವ್ಯ ರೀತಿಯೂ ಒಂದೇ ಸೂತ್ರಕ್ಕೆ ಸ್ವತಂತ್ರವಾಗಿ ಮಾರಿಕೊಂಡ ಕವಿಗಳಿಗೆ ಒಂದರ ಪಡಿಯಚ್ಚು ಮತ್ತೊಂದು. ಹದಿನೆಂಟು ವರ್ಣನೆಗಳು! ಅದೂ ಒಬ್ಬನಂತೆಯೇ ಮತ್ತೊಬ್ಬನಲ್ಲಿಯೂ ಹೀಗೆ ಒಂದು ಕವಿತೆಯನ್ನೋದಿದ ಮೇಲೆ ಮತ್ತೆ ಬೇರೆಯದನ್ನು ಓದುವ ಅಗತ್ಯವಾದರೂ ಏನು? ಹೊಸ ಭಾವಗಳಂತೂ ಇಲ್ಲವೇ ಇಲ್ಲ. ಒಂದು ಭಾವವನ್ನೇ ಬೇರೆ ಮಾತಿನಲ್ಲಿ ಜೋಡಿಸಿದರಾಯಿತು’ ಎಂಬುದೂ ಶ್ರೀ ಅವರ ಆ ಕಾಲದ ಕಾವ್ಯವನ್ನು ಕಂಡ ಪರಿ ಆದರೆ ಇದು ಅಂದಿನ ಸಂಸ್ಕತ ಅಂಧಾನುಕರಣೆಯಿಂದ ನಮ್ಮ ಕವಿಗಳು ಬರೆಯುತ್ತಿದ್ದ ಈ ಬಗೆಯ ಕಾವ್ಯದ ಸೆಳೆತ ಇಂಥ ರಚನೆಗಳಿಗೆ ದಾರಿಮಾಡಿಕೊಟ್ಟಿತು ಎಂಬುದು ಸರ್ವವಿದಿತ. ಮೈಸೂರು ಅರಸರ ಆಶ್ರಯದ ಬಿಗಿತನ ಇಂಥ ರಚನೆಗಳಿಗೆ ಕಾರಣವಾದ ಸಂದರ್ಭವನ್ನು ಗಮನಿಸಬೇಕು. ‘ಮೈಸೂರಿನ ಅರಮನೆಯ ಸಂಪ್ರದಾಯದ ಕೋಟೆಯಾಗಿ ಅಲ್ಲಿ ನವೋದಯ ಬರಲು ನಿಧಾನವಾಯಿತು’ ಎನ್ನುತ್ತಾರೆ ಎಸ್. ಅನಂತನಾರಾಯಣ ಅವರು. ಮೈಸೂರಿನಲ್ಲಿ ರಾಜಾಶ್ರಯದ ಸುಭದ್ರತೆಯಿಂದ ಆಸ್ಥಾನದ ಗಾಂಬಿsೀರ್ಯ, ಘನತೆ, ಗೌರವ ಇವುಗಳ ಕಟ್ಟಿಗೆ ಸಿಕ್ಕಿ ಹಳೆಯದನ್ನೇ ಅನುಸರಿಸುವ ರೀತಿಯೆ ಹೆಚ್ಚು ಪಾಲು ಉಳಿದುಕೊಂಡು ಬಂದಿತು. ಹೀಗಾಗಿ ಮೈಸೂರು ಕರ್ನಾಟಕ ಭಾಗದಲ್ಲಿ ಈ ರೀತಿಯ ಏಕತಾನತೆಗೆ ಕಾರಣವಾದ ಸಂದರ್ಭದಲ್ಲಿ ಕನ್ನಡ ಕಾವ್ಯಕ್ಕೆ ಹೊಸತನ ತುಂಬಲು ಶ್ರೀ ಅವರು ಆರಿಸಿಕೊಂಡಿದ್ದು ಅನ್ಯ ಭಾಷಿಕ ಸೊಗಡನ್ನೇ ಎಂಬುದು ಗಮನಿಸಬೇಕು. ಶ್ರೀ ಅವರು ಆ ಕಾಲದ ಇಂಡಿಯಾದ ಒಗ್ಗಟ್ಟು ಮುಂದುಮಾಡಿ ಸಂಸ್ಕøತ, ಇಂಗ್ಲಿಷ್, ಹಿಂದಿ ಭಾಷೆಗಳ ಮಹತ್ತು ಸಾರಿದರು. ಮೈಸೂರು ಭಾಗದ ಆಳರಸರ ಪ್ರೋತ್ಸಾಹ, ವಸಾಹತುಶಾಹಿಯ ಹೇರಿಕೆ ಹಾಗೂ ಇಂಗ್ಲಿಷ್ ಶಿಕ್ಷಣ ಕ್ರಮದಿಂದಾಗಿ 1911ರ ಹೊತ್ತಿನಲ್ಲಿ ಜಾನಪದವೇ ಉಸಿರಾಡುತ್ತಿದ್ದ ಧಾರವಾಡ ನೆಲೆಯಲ್ಲಿ ಅವರು ನಿಂತು ಮಾತನಾಡಿದ್ದನ್ನು ಇಲ್ಲಿ ನಾವು ಕಾವ್ಯ ಸಂದರ್ಭದಲ್ಲಿ ಗಮನಿಸಬೇಕು:
‘... ಇವೆಲ್ಲಕ್ಕೂ ಮೊದಲು ಭಾಷೆ ಒಂದಾಗಬೇಕು. ಇಂಗ್ಲಿಷ್ ಇಲ್ಲವೆ ಹಿಂದಿ ಯಾವುದು ಒಂದು ಸಾಧ್ಯವಾದದ್ದು. ಮಿಕ್ಕ ಭಾಷೆಗಳು ಸತ್ತು ಹೋಗಲಿ, ಈಗ ತಾವಾಗಿಯೇ ಸಾಯುತ್ತಾ ಬಿದ್ದಿರುವವು; ಎರಡು ದಿನ ನಾವು ತಟಸ್ಥರಾಗಿದ್ದರೆ ಹೋಗಿ ಹಳ್ಳಿಗಳಲ್ಲಿ ಅಡಗಿಕೊಳ್ಳುವವು. ಆಗ ರಾಜಭಾಷೆಯೊಂದು ಹಿಮಾಲಯದಿಂದ ರಾಮೇಶ್ವರದವರೆಗೂ ಸ್ವೇಚ್ಫೆಯಾಗಿ ಓಡಾಡುವುದು. ಇದು ಬಿಟ್ಟು ನರಳುತ್ತಿರುವ ದೇಶ ಭಾಷೆಗಳನ್ನು ಗುಣಮಾಡಿ ತಲೆಯೆತ್ತಿಸಬೇಕು ಎನ್ನುವುದು ಇಂಡಿಯಾದ ಒಗ್ಗಟ್ಟಿಗೆ ಅಡ್ಡ ಬಂದು ನಿಲ್ಲುವುದು; ಅವು ರಾಜ್ಯದ ಹಿತಚಿಂತನೆಗೆ ಮೃತ್ಯುಗಳು”
     ಹೀಗೆ ಒಂದೆಡೆ ನರಳುತ್ತಿರುವ ದೇಶೀ ಭಾಷೆಗಳನ್ನು ರಾಜಭಾಷೆಯೊಂದು ದಾಪುಗಾಲನ್ನಿಟ್ಟು ನಡೆದಾಡಿ ಹಳ್ಳಿಯ ಮೂಲೆಯಲ್ಲಿ ಮುದುಡಿ ಬಿದ್ದುಕೊಂಡಿರಬೇಕಾದರೆ ಹೊಸ ಭಾಷೆಗೆ ರತ್ನಗಂಬಳಿಯ ಹಾಸಿ ಸ್ವಾಗತಿಸುವ ರೀತಿಯನ್ನು ಧ್ವನಿಸುವ ಸಂದರ್ಭವನ್ನು ಗಮನಿಸಬೇಕು. ‘ಈಚೀಚೆಗಂತೂ ಯಕ್ಷಗಾನ, ದೊಂಬಿದಾಸರ ಪದ, ಶುಕಸಪ್ತತಿ, ಹಲ್ಲಿಯ ಶಕುನ ಇವೇ ಜನಗಳಿಗೆ ಮಹಾಕಾವ್ಯಗಳು. ‘ಏನು ಇಕ್ಕಟ್ಟಿನಲ್ಲಿ ಸಿಕ್ಕಿದೆವು’ ಹಿಂದಿನ ಸಂಸ್ಕೃತ ಪ್ರಾಬಲ್ಯವು ಅವರ ಕಾವ್ಯ ಮಾರ್ಗವು ಕುಗ್ಗಿ ಹೋದವು. ಮುಂದೆ ಇಂಗ್ಲಿಷಿನ ಪ್ರಾಬಲ್ಯವೂ ಅದರ ಕಾವ್ಯ ಮಾರ್ಗವೂ ಹೆಚ್ಚುವಂತೆ ತೋರುತ್ತದೆ. ಇಂಗ್ಲಿಷ್ ಸಾಹಿತ್ಯವೇ ಜೀರ್ಣವಾದ ನಮ್ಮ ಕಾವ್ಯಮಾಲೆಯನ್ನು ಕೈಕೊಟ್ಟು ಎತ್ತಬೇಕು. ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ ಕಾವ್ಯಮಾಲೆಗೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು.ಹೀಗೆ ಶ್ರೀಯವರು ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್ ಸಾಹಿತ್ಯದ ಯಜಮಾನಿಕೆಯನ್ನು ಆರೋಪಿಸಿದರು. ಅಲ್ಲದೆ ಸಾಹಿತ್ಯಕ್ಕೆ ಬಳಸುವ ಭಾಷೆಯಲ್ಲೂ ಅವರ ದೃಷ್ಟಿ ಗ್ರಾಂಥಿಕವಾದುದು, ಗ್ರಾಮ್ಯವನ್ನು ನಿರ್ಲಕ್ಷಿಸಿರುವದು ಅವರ ಮಾತುಗಳಲ್ಲಿಯೇ ಸ್ಪಷ್ಟವಾಗಿದೆ. ‘ಗ್ರಾಮ್ಯವನ್ನು ಬಿಟ್ಟು ವಿದ್ಯಾವಂತರು, ಉತ್ತಮ ಜಾತಿಯವರೂ ಆಡತಕ್ಕ ಸ್ಪುಟವಾದ ಕನ್ನಡವನ್ನು ಗ್ರಂಥ ಭಾಷೆಯಾಗಿ ತಿರುಗಿಸಿ ಬಿಟ್ಟರೆ ಅಚ್ಚು ಹಾಕುವುದರಿಂದಲೂ, ಮಕ್ಕಳಿಗೆ ಕಲಿಸುವುದರಿಂದಲೂ ಇದೆ ನೆಲೆಯಾಗಿ  ನಿಂತು ಎತ್ತಲೂ ಹರಡುತ್ತದೆ. ಜನಗಳು ರೂಡಿsಗೆ ತಂದ ಮಾತುಗಳನ್ನು ಕಲ್ಪನೆ ಮಾಡಬಾರದು. ಹಾಗೆ ಮಾಡಿದರೂ ಕನ್ನಡ ಮಾತುಗಳನ್ನೇ ಬಳಸುತ್ತಿರುವ ಸಂಸ್ಕøತ ಪದಗಳನ್ನೇ ರೂಡಿsಸುವುದು ಅನುಕೂಲ ಎಂದರು. ಹೀಗೆ ಕನ್ನಡ ಪ್ರಾಂತೀಯ ಆಡುಮಾತಿಗೆ ಸಾಹಿತ್ಯಿಕ ಮಣೆ ಹಾಕದೆ, ಗ್ರಂಥಸ್ಥ ಭಾಷೆಗೆ ಒತ್ತುಕೊಟ್ಟ ಕಾರಣವಾಗಿ ಜನಸಾಮಾನ್ಯರ ನಿತ್ಯ ಬದುಕಿನೊಂದಿಗೆ ಜನಪದರು, ವಚನಕಾರರು, ದಾಸರು, ತತ್ವಪದಕಾರರು ಕಾದುಕೊಂಡು ಬಂದ ದೇಸೀಯತೆಯ ನಿರ್ಲಕ್ಷ ವ್ಯಕ್ತವಾಯಿತು. ಹೇಗೆ ಆದಿಯಿಂದಲೂ ಸಂಸ್ಕøತ ಶಿಕ್ಷಣದಿಂದಲೂ, ಸಂಸ್ಕøತ ಪೆÇೀಷಣೆಯಲ್ಲೂ ಕಾವ್ಯಮಾಲೆಯನ್ನು ಬೆಳೆಸಿದೆವೋ ಹಾಗೆ ದೈವಯತ್ನದಿಂದ ಲಬಿsಸಿರುವ ಇಂಗ್ಲಿಷಿನ ಶಿಕ್ಷಣದಲ್ಲೂ, ಇಂಗ್ಲಿಷಿನ ಪೆÇೀಷಣೆಯಲ್ಲೂ ಅದನ್ನು ಬೆಳೆಸಬೇಕು ಎಂದೂ ಕರೆಕೊಟ್ಟರು. ಇಲ್ಲಿ ಒಂದು ಬಿಡುಗಡೆ ಮತ್ತೊಂದರ ಬಿಗಿತನ ಕಾಣಬಹುದು. ಕುರ್ತುಕೋಟಿ ಅವರು ಹೇಳುವ ಹಾಗೆ ‘ಸಂಸ್ಕೃತ ಭಾರದಿಂದ ಬಿಡುಗಡೆಯನ್ನು ಪಡೆದು ಈಗ ಇಂಗ್ಲಿಷ್ ಭಾಷೆಯಿಂದ ಚೇತನವನ್ನು ಪಡೆಯಬೇಕು ಎಂದು ಅವರ ನಿರೀಕ್ಷೆಯಾಗಿತ್ತು’ ಎಂಬುದು ಕನ್ನಡ ಚೇತನಕ್ಕೆ ನಡೆದ ಹುಡುಕಾಟ ದೇಸೀ ಮೂಲವಾಗಿರದೆ ಅನ್ಯ ನೆಲೆಗಳನ್ನು ಅರಸಿದ್ದು ಸ್ಪಷ್ಟವಾಗುತ್ತದೆ.
       ‘ಮೈಸೂರು ಕೇಂದ್ರ ಭಾಗದಲ್ಲಿ ವಸಾಹತುಶಾಹಿ ಹಾಗೂ ಅರಸೊತ್ತಿಗೆ ಈ ಇಬ್ಬಗೆಯ ದಾಸ್ಯದ ನೆರಳಿನಲ್ಲೇ ಇಂಗ್ಲಿಷ್ ಶಿಕ್ಷಣ ಹಾಗೂ ಆಧುನಿಕ ವಿಚಾರಗಳ ಪ್ರವೇಶದಿಂದ ಹೊಸ ಮಧ್ಯಮ ವರ್ಗವೂ ಶಿಷ್ಟವಾದ ಒಂದು ಭಾಷಾ ಪ್ರಭೇದವೂ ಇಲ್ಲಿ ರೂಪುಗೊಂಡಿತು. ಅರಮನೆ ಹಾಗೂ ಹೊಸಕಾಲದ ಗುರುಮನೆಯ ನಡುವಿನ ಅಂಗಳದಲ್ಲಿ ಮಧ್ಯಮ ವರ್ಗದ ತಾತ್ತಿñ್ವಕತೆ ಹಾಗೂ ಶಿಷ್ಟ ಭಾಷಾ ಪ್ರಭೇದವನ್ನೂ ಬಳಸಿಕೊಂಡು ಅನುವಾದ ಅನುಕರಣಗಳ ಹಂತವನ್ನು ದಾಟಿ ಸ್ವತಂತ್ರವಾಗಿ ನೆಲೆನಿಂತ ಕಾವ್ಯದಲ್ಲೂ ಒಂದು ಬಗೆಯ ಶಿಷ್ಟತೆ ಹಾಗೂ ಗಾಂಬಿsರ್ಯ ಉಳಿದುಕೊಂಡಿತು. ಅದನ್ನು ಹಗುರಗೊಳಿಸಬಹುದಾಗಿದ್ದ ಜನಪದ ಸ್ಪರ್ಶವೂ ಅದಕ್ಕಾಗಲಿಲ್ಲ.’ ಎನ್ನುತ್ತಾರೆ ಎಂ.ಜಿ. ಹೆಗಡೆ ಅವರು. ಹೀಗೆ ಕಾವ್ಯದಲ್ಲಿ ಶಿಷ್ಟತೆ, ಬಿಗಿತನ, ಅನುವಾದ, ಅನುಕರಣೆಗಳು ಸ್ಥಳೀಯತೆಯನ್ನು ಬಿಟ್ಟು ರಚನೆಯಾದಂತೆಲ್ಲಾ ಇಂಥ ರಚನೆಗಳೇ ಸಾರ್ವತ್ರಿಕ ಮನ್ನಣೆಗೆ ನಿಲ್ಲಬೇಕಾಯಿತು. ಶ್ರೀಯವರ ‘ಪುನರುಜ್ಜೀವನ’ ಪರಿಕಲ್ಪನೆಯಲ್ಲಿ ದೊರೆತ ಮನ್ನಣೆಯೇ ಇದಕ್ಕೆ ಕಾರಣವಾಯಿತು.

ಬಿ.ಎಂ.ಶ್ರೀ
       ‘ಹೊಸ ಕಾವ್ಯದ ಹುಟ್ಟಿನ ಸಂದರ್ಭದಲ್ಲಿ ಶ್ರೀಯವರ ಬರಹಗಳಲ್ಲಿ ‘ಗ್ರಾಮ್ಯ’ ಭಾಷಾ ಪ್ರಭೇದಗಳ ಕುರಿತಾದ ಅನಾದರ ಸ್ಪಷ್ಟವಾಗಿದೆ. ಅವರು ಅರ್ಥವಾಗದ ಹಳಗನ್ನಡವನ್ನಾಗಲಿ, ಕನ್ನಡಕ್ಕೆ ಒಗ್ಗದ ರೂಡಿsಯಲ್ಲಿಲ್ಲದ ಶಬ್ದಗಳನ್ನಾಗಲಿ ಬಳಸಬಾರದು ಎಂಬುದು ಅವರ ನಿಲುವಾಗಿತ್ತು. ಇವು ಶ್ರೀಯವರ ವೈಯಕ್ತಿಕ ಅಬಿsಪ್ರಾಯಗಳು ಮಾತ್ರವಾಗಿರದೆ ಒಟ್ಟು ಮೈಸೂರು ಪ್ರಾಂತದ ಸುಶಿಕ್ಷಿತವರ್ಗದ ನಿಲುವು ಎಂದು ಗ್ರಹಿಸಬಹುದು. ಏಕೆಂದರೆ ಭಾಷೆಯ ಕುರಿತಾದ ಶ್ರೀಯವರ ವಿಚಾರಗಳು ಅವರು ಪ್ರತಿಪಾದಿಸಿದ ಪುನರುಜ್ಜೀವನದ ಪರಿಕಲ್ಪನೆಯ ಅಂಗವಾಗಿ ಬಂದಿದೆ. ಪುನರುಜ್ಜೀವನ ಪರಿಕಲ್ಪನೆಯನ್ನು ಶ್ರೀಯವರು ತಮ್ಮ ಕಾಲದ ಸಾಹಿತ್ಯ ಸಾಂಸ್ಕೃತಿಕ ವಿಚಾರಗಳನ್ನು ವ್ಯವಸ್ಥೀಕರಿಸಲು, ಅರ್ಥಮಾಡಿಕೊಳ್ಳಲು ಹಾಗೂ ಆನುಷಂಗಿಕವಾಗಿ ಮುಂದೆ ಯಾವ ದಿಕ್ಕಿನಲ್ಲಿ ಸಾಗಬೇಕೆಂಬುದನ್ನೂ ನಿರ್ದೇಶಿಸಲು ಬಳಸುತ್ತಾರೆ. ಹಾಗೆ ವ್ಯವಸ್ಥೀಕರಿಸಲು ಹಾಗೂ ನಿರ್ದೇಶಿಸಲು ಬೇಕಾದ ಶೈಕ್ಷಣಿಕ ಸಿದ್ಧತೆ ಹಾಗೂ ಅದಿsಕಾರ ಎರಡೂ ಅವರಿಗಿತ್ತು. ಈ ಭಾಗದ ಆ ಕಾಲದ ಲೇಖಕರೆಲ್ಲ ಹೆಚ್ಚಾಗಿ ಅವರ ಶಿಷ್ಯರೇ ಆಗಿದ್ದರೆಂಬುದನ್ನು ನೆನೆದಾಗ ಶ್ರೀ ಫ್ಯಾಕ್ಟರ್‍ನ ಮಹತ್ವ ಅರಿವಾಗುತ್ತದೆ. ಒಟ್ಟಿನಲ್ಲಿ ಇಲ್ಲಿಯ ಕಾವ್ಯಭಾಷೆ ದಕ್ಷಿಣ ಕನ್ನಡದ ಹಾಗೂ ಉತ್ತರ ಕರ್ನಾಟಕದ ಸಾಹಿತ್ಯ ಭಾಷೆಗಿಂತ ಬಿsನ್ನವಾಯಿತಲ್ಲದೆ ‘ನವಮಾರ್ಗ ಸಂಪ್ರದಾಯ’ವೊಂದು ಇಲ್ಲಿ ಹುಟ್ಟಿಕೊಂಡಿತು ಎಂಬುದೂ ಹೆಗಡೆ ಅವರ ಅಭಿಪ್ರಾಯವಾಗಿದೆ.
   ಹೀಗೆ ವಸಾಹತುಶಾಹಿ ಸಂದರ್ಭ, ಇಂಗ್ಲಿಷ್ ಶಿಕ್ಷಣ ಕ್ರಮ, ಸಂಸ್ಕೃತ ಪ್ರಭಾವ, ಶಿಷ್ಟತೆಯ ಅನಿವಾರ್ಯತೆ ಕಾರಣವಾಗಿ ‘ಇಂಗ್ಲಿಷ್ ಮಾತ್ರ ಕನ್ನಡ ಕಾವ್ಯಕ್ಕೆ ಹೊಸತನ ತರಬಲ್ಲದೆಂದು’ ನಂಬಿದ್ದ ಶ್ರೀಯವರು ಅದನ್ನೇ ನಂಬಿಸಿದರು. ಹೀಗಾಗಿ 19ನೆಯ ಶತಮಾನದ ಉತ್ತರಾರ್ಧದಿಂದ ಪ್ರಾರಂಭವಾದ ಆಧುನಿಕ ಕನ್ನಡ ಸಾಹಿತ್ಯ ಒಂದು ನೆಲೆಯಲ್ಲಿ ವಸಾಹತುಶಾಹಿ ಅನುಭವದಿಂದ ರೂಪಿಸಲ್ಪಟ್ಟಿರುವುದು ಕಾಣುತ್ತೇವೆ. ಇಂದು ಸರ್ವವೇದ್ಯವಾಗಿರುವಂತೆ ತನ್ನ ಪ್ರಭುತ್ವವನ್ನು ಉಳಿಸಿ ಬೆಳೆಸಲು ಬ್ರಿಟಿಷ್ ವಸಾಹತುಶಾಹಿಯು ತನ್ನದೇ ಆದ ಸಾಂಸ್ಕøತಿಕ ಯಾಜಮಾನ್ಯವನ್ನು ಕರ್ನಾಟಕದ ಆ ಮೂಲಕ ಭಾರತದ ಮೇಲೆ ಹೇರುವುದರಲ್ಲಿ ಯಶಸ್ವಿಯಾಯಿತು. ಎಂದರೆ ವಸಾಹತುಶಾಹಿ ವೈಚಾರಿಕತೆ, ಇಂಗ್ಲಿಷ್ ಶಿಕ್ಷಣ ಪ್ರಗತಿ ಎಂಬ ಸರಳ ಸಮೀಕರಣವನ್ನು ಭಾರತೀಯರೆ ಒಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಬ್ರಿಟಿಷ್ ಸಾಂಸ್ಕøತಿಕ ವೈಚಾರಿಕ ಯಾಜಮಾನ್ಯವನ್ನು ಆಧುನಿಕ ಕನ್ನಡ ಸಾಹಿತಿಗಳು ಹಾಗೂ ಚಿಂತಕರು ಪ್ರಜ್ಞಾಪೂರ್ವಕವಾಗಿ  ಮಾನ್ಯ ಮಾಡಿದ್ದರು ಎಂಬುದಕ್ಕೆ ಸಮರ್ಥನೆಯಾಗಿ ಈ ಪ್ರಾತಿನಿದಿsಕ ಸಾಲುಗಳನ್ನು ಉದಾಹರಿಸಬಹುದು. ತಮ್ಮ ‘ಭರತಮಾತೆಯ ವಾಕ್ಯ’ ಕವನದಲ್ಲಿ ಬ್ರಿಟನ್ನಿನ ರಾಣಿಯನ್ನುದ್ದೇಶಿಸಿ ಬಿ.ಎಂ.ಶ್ರೀ ಅವರು ಹೀಗೆ ಹೇಳುತ್ತಾರೆ.

ಸಕಲ ಧರ್ಮದ ತಿರುಳ ಹೊರೆದಳು
ಸಕಲ ಜ್ಞಾನವ ತೆರೆದಳು;
ಸಕಲ ಸೀಮೆಯ ಬಯಕೆಗಳೆದಳು
ಸಕಲ ಕುಶಲವನೊರೆದಳು.
ಎಂದು ಶ್ರೀಯವರು ಹೀಗೆ ಸಾರಿದರೆ, ಕುವೆಂಪುರವರು
ಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸಗಾಳಿ
ಭಾರತದ ಒಣಗು ಬಾಳ್ಮರವನಲುಗಾಡಿ
ಎಂದು ಘೂೀಷಿಸಿದರು. ಈ ರೀತಿ ಬ್ರಿಟಿಷ್ ಸಾಂಸ್ಕೃತಿಕ ಯಾಜಮಾನ್ಯವನ್ನು ಇತರ ಭಾರತೀಯರಂತೆ ಕನ್ನಡ ಲೇಖಕರು ಹಾಗೂ ಚಿಂತಕರು ಸಂಪೂರ್ಣವಾಗಿ ಮಾನ್ಯ ಮಾಡಿದುದಕ್ಕೆ ಕೇವಲ ಬ್ರಿಟಿಷರ ರಾಜಕೀಯ ಸತ್ತೆ ಮತ್ತು ಪಾಶ್ಚಿಮಾತ್ಯರ ವೈಜ್ಞಾನಿಕ ತಾಂತ್ರಿಕ ಪ್ರಗತಿಗಳೇ ಕಾರಣವಲ್ಲ. 250 ವರ್ಷಗಳ ಬ್ರಿಟಿಷ್ ಪ್ರಭುತ್ವದೊಡನೆಯೇ ಸಾವಿರ ವರ್ಷಗಳ ದೇಶೀ ಪ್ರಭುತ್ವವೂ ಭಾರತದಲ್ಲಿ ಅಸ್ತಿತ್ವದಲ್ಲಿತ್ತು.
                                                                    ಕುವೆಂಪು -ಮಾಸ್ತಿ
  ಹೀಗೆ ಮೇಲಸ್ತರದ ಪಂಡಿತರು ಕನ್ನಡ ಪುನರುಜ್ಜೀವನ ಬಯಸಿದ ವಿದ್ವಾಂಸರು ಇಂತಹ ಪರಿಚಲನೆಯ ಮುಂಚೂಣಿಯಲ್ಲಿದ್ದದರಿಂದ ಅವರು ತರಬಯಸಿದ ಬದಲಾವಣೆಗಳು ಸುಧಾರಣಾತ್ಮಕವಾಗಿದ್ದವೇ ಹೊರತು ಸಮಗ್ರ ಪರಿವರ್ತನೆಯ ಕಡೆಗೆ ಒಲವನ್ನು ಹೊಂದಿರಲಿಲ್ಲ ಎಂಬುದು ವಿದಿತವಾಗುತ್ತದೆ. ಈ ಪರಿವರ್ತನೆಯ ಗರ್ಭದೊಳಗೆ ಕನ್ನಡ ಸಂದರ್ಭದಲ್ಲಿ ಅಡಗಿ ಕುಳಿತಿದ್ದ ದೇಸೀಯ ಮೌಖಿಕ ಕಾವ್ಯ ಪರಂಪರೆಗಳು ಉತ್ತರ ಕರ್ನಾಟಕದ ‘ಹಲಸಂಗಿ ಗೆಳೆಯರು’ ಮೊಳಗಿಸಿದ ಜಾನಪದ ಕಹಳೆಯಿಂದ ಕನ್ನಡ ಕಾವ್ಯಲೋಕ ಸೂರ್ಯ ಉದಯಿಸುವ ಮೊದಲು ಮೂಡುವ ಬೆಳ್ಳಿಚುಕ್ಕಿಯಂತೆ ಮೊಳಗಿ ನಾಡವರ ಕಣ್ಣನ್ನು ತನ್ನಡೆಗೆ ಆಕರ್ಷಿಸಿತು. ಈ ಆಕರ್ಷಣೆಗೆ ಶ್ರೀಯವರೂ ಹೊರತಾಗಲಿಲ್ಲ. ಮುಂದೆ ಅವರೇ ಸಾರಿದರು ‘ಜನವಾಣಿ ಬೇರು ಕವಿವಾಣಿ ಹೂವು’ ಎಂದು .
=================================================================
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಮನೆ ನಂ. ಎಸ್.135,ಸೆಕ್ಟರ್ ನಂ.63,
ನವನಗರ,ಬಾಗಲಕೋಟ-587103. ಮೊ.-9845500890

Monday, 29 July 2013

ಹನಿಗವಿತೆಗಳು : ಡಾ.ಪ್ರಕಾಶ ಗ.ಖಾಡೆ

                                                       ಹನಿಗವಿತೆಗಳು :

                                                                        ಡಾ.ಪ್ರಕಾಶ ಗ.ಖಾಡೆ

ಬಯಲಾದ ಭಾವಕೆ
ಕಣ್ಣ ಹನಿ
ಬಯಲಾದ ಜೀವಕೆ
ಕಣ್ವ ಮುನಿ.


***

ಮಾತು
ಕೃತಿ
ಮೌನ
ಆಕೃತಿ.


***

ಬೆಳ್ಳಗಿರುವುದೆಲ್ಲ ಹಾಲಲ್ಲ
ಎನ್ನುತ್ತಾರೆ ; ಅದು ಖರೇ
ಕಪ್ಪಗಿರುವುದೂ ಕತ್ತಲಲ್ಲ
ಬೆಳಕಿನ ಬಸಿರು.


***


ಕವಿತೆ 
------
ಭಾವನೆಗಳ
ಮೊಟ್ಟೆಗೆ
ಕಾವು ಕೊಟ್ಟ
ಮೌನ.

***

ಬೀದಿಯಲ್ಲಿ ಬಿದ್ದ ಮರ
ಬದಿಯಲ್ಲಿ ಎದ್ದ ಸಸಿ
ಎರಡಕ್ಕೂ ಒಂದೇ ಹೆಸರು
ಸಾರ್ಥಕತೆ.


***


ಹರಿವ ಮನಸ್ಸು 
ಕಟ್ಟಿಡಲು ಒಂದು ಸಣ್ಣ
ಎಳೆ ಸಾಕು.
ಈ ಎಳೆ ದಕ್ಕುವುದು
ಒಂದು ಏಕಾಂತದ
ಧ್ಯಾನದಲ್ಲಿ.


***
ಭಾವನೆಗಳು
ಬರೀ ಆಡಲು ಅಲ್ಲ ;
ಹಂಚಿಕೊಳ್ಳಲು ಮತ್ತು 
ಒಂದಿಷ್ಟು ಬೆಚ್ಚಗೆ
ಪುಟ್ಟ ಹೃದಯದಲ್ಲಿ
ಬಚ್ಚಿಟ್ಟುಕೊಳ್ಲಲು.


***


ಹೋರಾಟ
ಪ್ರತಿಭಟಣೆಗೆ ಒಂದು
ಸಣ್ಣ ಉದಾಹರಣೆ ;
ಕಾಗೆ ಗೂಡಲಿ ಬೆಳೆವ
ಮರಿ ಕೋಗಿಲೆಯ
ಬೆಳವಣಿಗೆ.


***ಕೊರಡಲ್ಲಿ
ಜೀವ ಪಡೆದ ಶಿಲ್ಪ
ಅದರ ಹುಟ್ಟಿನ
ಚಿಗುರ ಮರೆಸುತ್ತದೆ.

***

ಈ ಮುಂಜಾವು
ತೆರೆದುಕೊಳ್ಳುತ್ತದೆ.

ನಡು ಹಗಲು
ದೂರ ನಡೆಸುತ್ತದೆ.

ರಾತ್ರಿ ಬೆಚ್ಚಗೆ
ಅಪ್ಪಿಕೊಳ್ಳುತ್ತದೆ.

***


ನೆನಪುಗಳು
ಆಗೀಗ ಮರುಜನ್ಮ ಪಡೆದು
ಮತ್ತೆ ಮತ್ತೆ ಹುಟ್ಟುತ್ತವೆ
ಸಾವನ್ನು ಮರೆಸುತ್ತ
ಬದುಕನ್ನು ಬಯಲುಗೊಳಿಸುತ್ತ
ಇದ್ದಂತೆ ಇದ್ದು
ಇಲ್ಲದಾಗುತ್ತವೆ
- ಡಾ.ಪ್ರಕಾಶ ಗ. ಖಾಡೆ




ಕವಿತೆ : ಪ್ರಕಾಶ ಗ.ಖಾಡೆ

ನನ್ನೊಳಗೆ ಎಲ್ಲರೂ
==========
ಇವರು ಬದುಕಿನ ಬೀದಿಯಲ್ಲಿ
ನನ್ನೊಳಗೆ ದೀಪವಾಗಿ ಬೆಳಕ ಹರಿಸುತ್ತಾರೆ.
ಮತ್ತೆ ಅದೇಕೋ ಕತ್ತಲಾಗಿ
ಕಣ್ಣುಗಳಿಗೆ ಕಪ್ಪ ಬಳಿಯುತ್ತಾರೆ.

ಕೆಲವರು ಆಡಿಕೊಳ್ಳುತ್ತಾರೆ 
ಹೃದಯಕೆ ಕಾಯ್ದ ಕಬ್ಬಿಣದ ಬರೆ ಎಳೆದು
ಬೇಕಂತಲೆ ಕಾಲು ಕೆದರುತ್ತಾರೆ 
ಜೀರ್ಣವಾಗದ ಅನ್ನ ತಿಂದು.

ಬೆಳೆದ ಪೈರನು ದಕ್ಕಿಸಿಕೊಳ್ಳಲು
ಆಸೆಗಳ ಬಿತ್ತುತ್ತಾರೆ
ಹರಿವ ತೊರೆಗೆ ಗೋಡೆ ಕಟ್ಟಿ
ಹೃದಯವನ್ನು ಬರಡಾಗಿಸುತ್ತಾರೆ.

ಕೆಲವರು ಕನಸಾಗುತ್ತಾರೆ
ಹೃದಯದಲ್ಲಿ ರಂಗೋಲಿ ಬಿಡಿಸಿ ;
ಮತ್ತವರೆ ನೋವಾಗುತ್ತಾರೆ
ಕನಸುಗಳ ಚೆಲ್ಲಾಪಿಲ್ಲಿಗೊಳಿಸಿ.

ಕೆಲವರು ಮನದ ತಿಳಿನೀರಿನಲ್ಲಿ
ಗಾಳ ಹಾಕುತ್ತಾರೆ
ಬಲಿ ಬೀಳದಿದ್ದರೆ
ರಾಡಿ ಮಾಡುತ್ತಾರೆ

ಕೆಲವರು ಮನಸ್ತಾಪದಲ್ಲಿ
ಮಾತುಗಳಿಗೆ ಕೀಲಿ ಜಡಿಯುತ್ತಾರೆ
ಅವರದೇ ಗುಂಗು ಹಿಡಿಸಿ
ಹತ್ತಿರವಿದ್ದೂ ದೂರವಾಗುತ್ತಾರೆ.
(1997)
-ಡಾ.ಪ್ರಕಾಶ ಗ.ಖಾಡೆ

Thursday, 18 July 2013

ವಿಶೇಷ ಲೇಖನ :
 
                     ಆನಂದಕಂದರ ಕಾವ್ಯ :
                    ಜನಪದ ಗೀತೆಗಳ ಪುನರುಜ್ಜೀವನ

                                                              -ಡಾ.ಪ್ರಕಾಶ ಗ.ಖಾಡೆ

           (ಆನಂದ ಕಂದ ಕಾವ್ಯನಾಮದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯದ ಅಧ್ಯಯನ)

ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲ ಒಬ್ಬರಾಗಿರುವ ಆನಂದಕಂದ ಅವರದು ಶುದ್ಧ ಜನಪದ ಶೈಲಿ. ಇದ್ದುದನ್ನು ಇದ್ದ ಹಾಗೆ, ಸಹಜತೆಗೆ ಕೆಡಕು ತಾಗದಂತೆ ಮೂಲರೂಪಕ್ಕೆ ಮತ್ತಷ್ಟು ಜೀವ ತುಂಬಿ ಚಿತ್ರಿತವಾಗಿರುವ ಅವರ ಜಾನಪದ ಪ್ರಭಾವಿತ ಕವಿತೆಗಳು ನಾಡವರ ನಾಲಿಗೆಯ ಮೇಲೆ ನಲಿದು ಜನಪ್ರಿಯವಾದವು. ಆನಂದಕಂದರ  ಜನಪದ ರೀತಿಯ ಕವಿತೆಗಳು ಜಾನಪದವೇ ಎನ್ನುವಷ್ಟು ಜನಾನುರಾಗಿಯಾಗಿವೆ. ಈ ಜನಪ್ರಿಯತೆಗೆ ಮುಖ್ಯಕಾರಣ ಜಾನಪದದ ಧಾಟಿ ಆದರೂ ಆ ಕಾಲಕ್ಕೆ ಆನಂದ ಕಂದರ ಗೀತೆಗಳನ್ನು ಹಾಡಿ ಖ್ಯಾತಿ ಪಡೆದ ‘ಸಾವಿರ ಹಾಡಿನ ಸರದಾರ’ರೆನಿಸಿದ ಹುಕ್ಕೇರಿ ಬಾಳಪ್ಪನವರೂ ಒಂದು   ಕಾರಣ. ಜನಪದ ಹಾಡುಗಾರ ಹುಕ್ಕೇರಿ ಬಾಳಪ್ಪನವರು ಆನಂದಕಂದರ ಹಲವಾರು ಕವನಗಳನ್ನು ಅವಿಸ್ಮರಣೀಯವೆಂಬಂತೆ ರಸಪೂರ್ಣವಾಗಿ ಹಾಡಿ ತೋರಿಸಿದ್ದಾರೆ.
    ‘ಆನಂದಕಂದ’ ಕಾವ್ಯನಾಮದ ಬೆಟಗೇರಿ ಕೃಷ್ಣಶರ್ಮ ಅವರ ಜಾನಪದ ಆಸಕ್ತಿಗೆ ಮೂಲಕಾರಣ ಅವರು ಬೆಳೆದ ಪರಿಸರ ಮತ್ತು ತಾಯಿಯ ಪ್ರಭಾವ. 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದ ಬೆಟಗೇರಿ ಕೃಷ್ಣಶರ್ಮರು. ಮನೆಯಲ್ಲಿಯ ಹಬ್ಬ-ಹÀರಿದಿನಗಳ ಆಚರಣೆ, ಪುರಾಣ ಪುಣ್ಯ ಕಥೆಗಳ ಶ್ರವಣ. ಜಾನಪದದ ನಿಕಟ ಸಂಪರ್ಕ ಅವರಿಗೆ ದಕ್ಕಿತು. ಈ ಪ್ರಭಾವದ ಕುರಿತು ಆನಂದಕಂದರು ‘ನನ್ನ ಸಾಹಿತ್ಯ ಕೃಷಿಯ ಸಾರ ಸತ್ತ್ವ’ (1960) ಎಂಬ ಲೇಖನದಲ್ಲಿ ಹೀಗೆ ಹೇಳುತ್ತಾರೆ.
“ನಮ್ಮ ಹಳ್ಳಿಯ ರೈತರು ನಮ್ಮ ತಾಯಿಯ  ಗುಣಗಳನ್ನು ಮನವರಿಕೆ ಮಾಡಿಕೊಂಡಿದ್ದರು. ಮಹತ್ವದ ಕಾರ್ಯಗಳಿಗೆ  ಪಯಣ ಹೊರಟಾಗ, ನಮ್ಮ ತಾಯಿಯಿಂದ ಹರಕೆ ಪಡೆಯಲು ಬರುತ್ತಿದ್ದರು. ಹೊಲಗಳಿಗೆ ಕೂರಿಗೆ ಸಾಗಿಸುವಾಗ, ಬೀಜಗಳಿಗೆ ಆಕೆಯ ಕೈಯನ್ನು ಮುಟ್ಟಿಸಿಕೊಂಡು ಹೋಗುತ್ತಿದ್ದರು. ಬೆಳಗಿನ ಐದು ಗಂಟೆಗೆ ಎದ್ದು ಮನೆಗೆಲಸ ಮಾಡುತ್ತ ಮೆಲುದನಿಯಲ್ಲಿಯೇ ಹಾಡುಗಳನ್ನು ಗುಣಗುಣಿಸುತ್ತಿದ್ದಳು. ಶ್ರೀಕೃಷ್ಣನ ಬಾಲಲೀಲೆಗೆ ಸಂಬಂದಿsಸಿದ ಕೆಲವು ಸಾಂಗತ್ಯಗೀತ, ಲಾವಣಿಗಳನ್ನು ಆಕೆ ಹೇಳುತ್ತಿದ್ದಳು. ತುಂಬ ಸೊಗಸಾದ ಹಾಡುಗಳವು ಆಕೆಯೊಂದಿಗೆ ಅವೂ ಹೋಗಿ ಬಿಟ್ಟವು.” ಎಂದು ನೊಂದಿದ್ದಾರೆ.
“ಮನೆಯಲ್ಲಿ ತುಂಬಿದ ಬಳಗ, ಮದುವೆ, ಮುಂಜಿ, ಶೋಭನ, ಸೀಮಂತ, ಬಸಿರು, ಬಾಣಂತಿತನ, ಹುಟ್ಟಿದ ಹಬ್ಬ, ನಾಮಕರಣ, ಜವುಳ ಇವೆಲ್ಲ ಆಗಾಗ ನಡದೇ ಇರುವವು. ಈ ಸಂಪ್ರದಾಯಗಳೂ ನನ್ನ ಮನಸಂಸ್ಕಾರಕ್ಕೆ ಕಾರಣವಾದವು” ಎಂಬುದನ್ನು ಬೆಟಗೇರಿ ಅವರು ಜ್ಞಾಪಿಸಿಕೊಳ್ಳುತ್ತಾರೆ. ಜತೆಗೆ ಅವರು ಹುಟ್ಟಿ ಬೆಳೆದ ಪರಿಸರವಂತೂ ಜಾನಪದದ ರಸಘಟ್ಟಿಯಾದುದು. ಆ ಕಾಲದ ಲಾವಣಿ, ಬಯಲಾಟಗಳು ಅವರನ್ನು ತೀವ್ರವಾಗಿ ಸೆಳೆದುಕೊಂಡಿವೆ. “ಹಳ್ಳಿಯ ಏಕನಾದದಂತಹ ಬಾಳಿನಲ್ಲಿ ವೈವಿಧ್ಯ ತಂದುಕೊಳ್ಳುವು ದಕ್ಕಾಗಿ ಹಳ್ಳಿಯ ರೈತರು ಸಾರ್ವಜನಿಕವಾಗಿ ಗೊಂದಲಿಗರಿಂದಲೂ, ಎಲ್ಲಮ್ಮನ ಜೋಗಿಯವರಿಂದಲೂ ಕಥೆಗಳನ್ನು ಹೇಳಿಸುವರು. ಕಿಳ್ಳಿಕೇತರ ಗೊಂಬೆಯ ನೆರಳಾಟಗಳನ್ನಾಡಿಸುವರು. ಹಲಿಗೆ, ಕರಡಿ ಮಜಲುಗಳನ್ನು ಮಾಡಿಸಿ, ಲಾವಣಿಕಾರರಿಂದ ಲಾವಣಿ ಪದಗಳನ್ನು ಹೇಳಿಸುವರು. ಕೃಷ್ಣಪಾರಿಜಾತ, ರಾಧಾನಾಟ, ರೂಪಸಿಂಗ ಸಂಗ್ಯಾಬಾಳ್ಯಾ ಮೊದಲಾದ ಬಯಲಾಟಗಳನ್ನು ಆಡಿಸುವರು. ನನ್ನ ಚಿಕ್ಕತನದಲ್ಲಿ ನನಗೆ ದೊರೆತ ಇಂತಹ ಸಂದರ್ಭಗಳನ್ನು ಒಮ್ಮೆಯೂ ಕಳೆದುಕೊಂಡಂತೆ ನನಗೆ ಜ್ಞಾಪಕವಿಲ್ಲ” ಎನ್ನುವಲ್ಲಿ ಆನಂದಕಂದರು ತಮ್ಮ ಕಾಲದ ಜಾನಪದ ಪರಿಸರವನ್ನು ತುಂಬಾ  ಗಾಢವಾಗಿ ಪ್ರಭಾವಿಸಿಕೊಂಡ ಹಿನ್ನೆಲೆ ಸ್ಪಷ್ಟವಾಗುತ್ತದೆ.
ಆನಂದಕಂದರು ಕಳೆದ ಶತಮಾನದ ಇಪ್ಪತ್ತನೆಯ ದಶಕವು ಭಾರತವು ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಕಾಲದಲ್ಲಿ ರಾಷ್ಟ್ರೀಯತೆಗೆ ಆಕರ್ಷಿತರಾದರು. ರಾಷ್ಟ್ರೀಯತೆಯ ಜಾಗ್ರತೆಗೆ ಪೋಷಕವಾಗುವ ಅನೇಕ ಹಾಡುಗಳನ್ನು ಈ ಅವದಿsಯಲ್ಲಿ ರಚಿಸಿದರು. ರಾಷ್ಟ್ರೀಯ ಪದ್ಯಾವಲಿ(1921), ಗಾಂಧಿ ಗೀತ ಸಪ್ತಕ (1921) ರಾಷ್ಟ್ರೀಯ ಪದ್ಯಮಾಲೆ(1921)ಯ ಹಾಡುಗಳು ಭಾವ ತೀವ್ರತೆ ಮತ್ತು ಗೇಯತೆಯಿಂದೊಡಗೂಡಿ ಜನತೆಯಲ್ಲಿ ದೇಶಾಬಿsಮಾನದ ಪ್ರಜ್ವಲಿಸುವಂತೆ ಮಾಡಿದವು. ಮುಖ್ಯವಾಗಿ ಈ ಹಾಡುಗಳು ಹೆಜ್ಜೆ ಹಾಕುತ್ತ ತಾಳಮೇಳದೊಂದಿಗೆ ಹಾಡುತ್ತ ಪಥ ಸಂಚಲನ ಮಾಡಲು ತುಂಬಾ ಹೊಂದುತ್ತಿದ್ದವು. ಈ ಕಾರಣವಾಗಿ ಈ ಹಾಡುಗಳನ್ನು “ಹೆಜ್ಜೆಯ ಹಾಡು”ಗಳೆಂದು ಕರೆಯುತ್ತಿದ್ದರು.
1938ರಲ್ಲಿ ಆರಂಬಿsಸಿದ ‘ಜಯಂತಿ’ಯಲ್ಲಿ ಮೊದಲ ಪುಟದಲ್ಲಿ ಪ್ರಕಟವಾಗುತ್ತಿದ್ದ ಆನಂದಕಂದರ ಕವಿತೆಗಳು ಜಾನಪದವನ್ನೇ ಹೆಚ್ಚಾಗಿ ಪ್ರಭಾವಿಸಿಕೊಂಡಿವೆ. ನವೋದಯ ಕಾವ್ಯದ ಆರಂಭದಿಂದಲೂ ಕಾವ್ಯ ಕೃಷಿಗೆ ತೊಡಗಿದ ಅವರ ರಚನೆಗಳು ಜನಪದರ ಬದುಕನ್ನೇ ಚಿತ್ರಿಸಿವೆ. ಜಯಂತಿಯ ಮೊದಲ ಸಂಚಿಕೆ (ಮೇ 1938)ಯಲ್ಲಿ ‘ನಡೆಸಾಗು ಜೊತೆಗೂಡಿ’, ಜುಲೈ 1938ರ ಸಂಚಿಕೆ 3ರ ‘ನೋಡು, ಬರುವ ಸುಗ್ಗಿಯಾಟ’, ಆಗಸ್ಟ್ 1938 ರ ಸಂಚಿಕೆ 4 ರ ‘ನಾಗರ ಪಂಚಮಿ’ ಗೀತೆಗಳು ಹಳ್ಳಿಗರ ಬದುಕಿನ ಸಂದರ್ಭ ವನ್ನು ಚಿತ್ರಿಸಿವೆ.

ಆನಂದಕಂದ ಅವರ ಹದಿಮೂರು ಕವನ ಸಂಕಲನಗಳಲ್ಲಿ ಮುಖ್ಯವಾಗಿ ‘ನಲ್ವಾಡುಗಳು’ ಸಂಕಲನ ಜಾನಪದದ ಪರಿಪೂರ್ಣ ಸೊಗಡಿನಿಂದ ಕೂಡಿದೆ. ಉಳಿದ ಮುದ್ದನಮಾತು(1926), ಅರುಣೋದಯ (1926), ಕಾರ ಹುಣ್ಣಿಮೆ(1956) ವಿರಹಿಣಿ(1956). ಒಡನಾಡಿ(1956) ಮೊದಲಾದ ಸಂಕಲನಗಳಲ್ಲಿ ಜಾನಪದ ರೂಪ, ಶೈಲಿ, ವಸ್ತು ಒಳಗೊಂಡಿವೆ.
ಹಳ್ಳಿಗರ ಹಾಡುಗಳು :
   ಬೆಟಗೇರಿ ಕೃಷ್ಣಶರ್ಮ ಅವರು ಜಾನಪದ ಕಾರ್ಯವನ್ನು 1929 ರಲ್ಲಿ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ತ್ರಿಪದಿಗಳನ್ನು ಹಾಡುವುದರೊಂದಿಗೆ ಆರಂಭ ಮಾಡಿದರು. ಅವುಗಳ ಸೊಬಗು ಸೌಂದರ್ಯದ ಜೊತೆಗೆ ಜಾನಪದದ ಶಕ್ತಿ ಸಾಮಥ್ರ್ಯವನ್ನು ಎತ್ತಿ ತೋರಿದರು.  ‘ಹಳ್ಳಿಯ ಹಾಡುಗಳು’ ಜಾನಪದವನ್ನು ಹೆಚ್ಚು ಪ್ರಸಿದ್ಧಿಗೆ ತರಲು ಸಹಾಯಕಾರಿಯಾಯಿತು. 1922ರಲ್ಲಿ ಬೆಟಗೇರಿಯವರು ಸಂಗ್ರಹಿಸಿದ ‘ಕೆರೆಗೆ ಹಾರ’ ಜನಪದ ಗೀತೆಯು ಅವರಿಗೆ ಹೆಸರು ಹಾಗೂ ಕೀರ್ತಿ ತಂದಿತು.
‘ಕೆರೆಗೆ ಹಾರ’ ವನ್ನು 1925 ರಿಂದ ತಮ್ಮ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ವಿವರಿಸಿ, ಧಾಟಿ ಹಾಗೂ ಭಾವಪೂರ್ಣವಾಗಿ ಹಾಡಿ ತೋರಿಸುತ್ತಿದ್ದರು. ಈ ಹಾಡು ಕೋಲು ಪದದಲ್ಲಿ ಹೆಣೆದುಕೊಂಡಿದೆ. “ಸವದತ್ತಿ ತಾಲ್ಲೂಕಿನ ಊರಾಗಿರುವ ಯರಗಟ್ಟಿಯ ಹೂಗಾರ ಮನೆತನದ ಹೆಣ್ಣು ಮಗಳನ್ನು ಶ್ರೀ ಕೃಷ್ಣಶರ್ಮರ ಹುಟ್ಟೂರಾದ ಬೆಟಗೇರಿಯಲ್ಲಿರುವ ಹೂಗಾರ ಮನೆತನದ ಕಲ್ಲಯ್ಯ ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದರು. ಹಬ್ಬ ಹುಣ್ಣಿವೆಗಳ ರಾತ್ರಿಗಳಲ್ಲಿ ಹೆಣ್ಣು ಮಕ್ಕಳ ಹಾಡುಗಳು ನಡೆಯುತ್ತಿದ್ದವು. ಕೃಷ್ಣಶರ್ಮರು ಗುಂಪಿನಲ್ಲಿ ಕುಳಿತು ಕೇಳಿ ಕಂಠಪಾಠ ಮಾಡಿ ಬರೆದು ಬಳಿಕ ತಮ್ಮ ಮನೆಗೆ ಕರೆಯಿಸಿ ಮತ್ತೆ  ಹಾಡಿಸಿ, ಸರಿಯಾಗಿ ನೋಡಿ, ಸಂಗ್ರಹಿಸಿದರು. ಈ ಹಾಡು ಬೆಟಗೇರಿ ಅವರಿಗೆ ಜಾನಪದ ಶೈಲಿಯನ್ನೇ ಕಲಿಸಿತು.” ಎನ್ನುತ್ತಾರೆ ಡಾ.ನಿಂಗಣ್ಣ ಸಣ್ಣಕ್ಕಿಯವರು.
ನಲ್ವಾಡುಗಳು :
ಆನಂದಕಂದರ ‘ನಲ್ವಾಡುಗಳು’ ಆಡುನುಡಿಯ ಸಹಜ ರೂಪಕತೆಯಿಂದ ಕಾವ್ಯವನ್ನು ಸರಳಗೊಳಿಸುತ್ತ ಜನಸಾಮಾನ್ಯರ ನಾಲುಗೆಯ ಮೇಲೂ ನಲಿಯುವಂತೆ ಮಾಡಿವೆ. ‘ನಲ್ವಾಡುಗಳು’ ಸಂಕಲನವು ಇಪ್ಪತ್ತೇರಡು ಪ್ರೀತಿ ಗೀತೆಗಳನ್ನುಜಾನಪದದಲ್ಲಿ ರೂಪಿಸಿದ ಸಂಕಲನ. ಇಲ್ಲಿ ಬೆಟಗೇರಿ ಅವರು ಅಪ್ಪಟ ಜನಪದ ಕವಿಯಂತೆ ಕಾಣುತ್ತಾರೆ. ಶುದ್ದ ಜಾನಪದಕ್ಕೆ ಇವರ ಕವಿತೆಗಳು ಪ್ರಧಾನವಾಗಿ ತೋರುತ್ತವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದದ ವಿವಿಧ ಲಯಗಳೆಲ್ಲವನ್ನೂ ಯಶಸ್ವಿಯಾಗಿ ‘ನಲ್ವಾಡುಗಳು’ ಸಂಕಲನ ಕವಿತೆಗಳಲ್ಲಿ ತಂದಿದ್ದಾರೆ.
ಗೋದಿ ಬೀಜಕ್ಕಂತ ಗೋಕಾಂವಿಗ್ಹೋಗಿದ್ದೆ
ಸಾದಗಪ್ಪಿನ ಸವಿಹೆಣ್ಣ
ಸಾದಗಪ್ಪಿನ  ಸವಿಹೆಣ್ಣ ನೋಡುತಲೆ
ಗೋದಿ ಬಿತ್ತಿಗಿಯ ಮರತೆನೊ
ಜನಪದ ತ್ರಿಪದಿಗಳಲ್ಲಿ ಕಂಡು ಬರುವ  ಶೈಲಿ, ರೂಪ, ವಸ್ತು ಬೆಟಗೇರಿ ಅವರ ಕವಿತೆಗಳಲ್ಲಿ ಸ್ಥಾನ ಪಡೆದಿವೆ. ‘ನಲ್ವಾಡುಗಳು’ ಸಂಕಲನದ’ ನಮ್ಮೂರ ಜಾತ್ರಿ ಬಲು  ಜೋರಾ, ಬೆಣ್ಣಿಯಾಕಿ, ಬುತ್ತಿ ತೂಗೊಂಡು ಹೋಗ್ತಿನಿ ಹೊಲಕ, ಯಾರೋ ಏನೋ ಬರತಾರಂತ, ಹಿಂಗ್ಯಾಕ ನೋಡತಾನ, ಚಿನ್ನತ್ತಿಯ ಮಗ, ಬಡವರ  ಮಗಳು, ಗೌಡರ ಮನೆ ಸೊಸಿ, ಗೆಣತಿ, ಏನ ಮಾಡ ಅಂತೀ, ಬೆಳವಲ ಒಕ್ಕಲತಿ ಮೊದಲಾದ ಕವಿತೆಗಳು ಹೆಸರೇ ಸೂಚಿಸುವಂತೆ ಜನಪದ ಸಂಸ್ಕøತಿಗೆ ಸೇರಿದ್ದು, ಅಲ್ಲಿನ ವಸ್ತು, ಲಯ, ಸೊಗಸು ಸೌಂದರ್ಯಗಳನ್ನು ಪಡೆದುಕೊಂಡಿದೆ ಎನ್ನುವುದಕ್ಕಿಂತ ಜಾನಪದವೇ ಆಗಿದೆ ಎಂದು ಗುರುತಿಸಲು ಸಾಧ್ಯ.
      ಗರಡಿಯ ಹುಡುಗರ ಹುರುಪು ಅದೇನ
      ಕರಡಿ - ಹಲಿಗಿ ಮಜಲಿನ ಮೋಜೇನ
      ಬಯಲಾಟದ ಸುಖಕಿಲ್ಲ ಸಮಾನ
ಕೇಳಿಲ್ಲೇನು ಲಾವಣಿ ಗೀಗೀ ಹಾಡು
ಯಾತಕವ್ವಾ ಹುಬ್ಬಳ್ಳಿ ಧಾರ್ವಾಡs!
ಹೀಗೆ ಜನಪದರಿಂದ ಪಡೆದುಕೊಂಡು ಬಂದ ಲಾವಣಿ, ಗೀಗಿ ಹಾಡುಗಳ ಸವಿ ಇರಲು ಆಧುನಿಕ ಕಾವ್ಯದ ಬಿಗುತನ ಏಕೆ ಎಂಬ ಸಹಜ, ಸರಳ ಮತ್ತು ಕಲ್ಮಶವಿಲ್ಲದ ಭಾವನೆಗಳ ಸಮೃದ್ಧತೆದೆಡೆಗೆ ಕವಿಯ ಕಾವ್ಯ ಹರಿದಿದೆ. ‘ನಮ್ಮ ಹಳ್ಳಿಯೂರs ನಮಗ ಪಾಡs ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ’ ಎಂಬ ಆನಂದಕಂದ ಜನಪ್ರಿಯ ಈ ಗೀತೆ ಅವರ ಒಟ್ಟು ಕಾವ್ಯ ಧೋರಣೆಯನ್ನು ಪ್ರಕಟಿಸುತ್ತದೆ.
ಊರ ಮುಂದ ತಿಳಿನೀರಿನ ಹಳ್ಳ
ಬೇವು ಮಾವು ಹುಲಗಲ ಮರಚೆಳ್ಳ
ದಂಡಿಗುಂಟ ನೋಡು ನೆಳ್ಳs ನೆಳ್ಳs
             ನೀರ ತರುವಾಗ ಗೆಣತ್ಯಾರ ಜೋಡs
             ಯಾತಕವ್ವಾ ಹುಬ್ಬಳ್ಳಿ - ಧಾರ್ವಾಡs
ಆಧುನಿಕತೆಯ ಸೋಗಿನಲ್ಲಿ ವಾಸ್ತವದ ಬದುಕು ಅನುಭವಿಸುವ  ವಂಚಿತ ಸಮುದಾಯದ ನೋವು ನಿರಾಸೆಗಳನ್ನು ಈ ಮೂಲಕ ಅಬಿsವ್ಯಕ್ತಪಡಿಸುವ ಕವಿ ಗ್ರಾಮ  ಸಂಸ್ಕøತಿಯ ತಾಜಾತನ, ಅದರ ಸಹಜತೆಗೆ ಮಾರುಹೋಗಿ ಅದರಲ್ಲಿ ಬದುಕಿನ ಅಂತಿಮ ಸಾರ್ಥಕತೆಯನ್ನು ಪ್ರಕಟಿಸಿದ್ದಾರೆ. ಬೇಂದ್ರೆ, ಕುವೆಂಪು ಅವರಂತೆ ಭಾಷೆಯನ್ನು ಹೇಗೆ ಬೇಕೊ ಹಾಗೆ ಹಿಂಜುವುದಕ್ಕೆ, ಹಿಂಡುವುದಕ್ಕೆ ಬೆಟಗೇರಿಯವರು ಹೋಗಿಲ್ಲ. ಭಾವವನ್ನು ಸ್ಪಷ್ಟಪಡಿಸುವ ಶಕ್ತಿಯನ್ನು ಬೆಟಗೇರಿಯವರ ಭಾಷೆ ಜಾನಪದದಿಂದ ಪಡೆದಿದೆ. ಸಂಭಾಷಣೆಯ ರೀತಿಯೂ ಜನಪದರ ಮಾತಿನ ಯಥಾವತ್ತ ರೂಪವಾಗಿದೆ. ಚೆಲುವೆ ಹೆಣ್ಣನ್ನು ಒಲಿದು ತಂದ ಅಣ್ಣನಿಗೆ ತಂಗಿ ಕೇಳುವ  ಮಾತು ಗಮನಿಸಿ,
         “ಹೇಳು ಹ್ಯಾಂಗಿವಳು ನಿನ್ನ ಮೆಚ್ಚಿದಳು
ಮಾಟ ಮಾಡಿದೇನೋ”
        ‘ಎಲ್ಲಿಂದೀಕೀನ ಕರೆತಂದೆಣ್ಣಾ ಯಾರು ಹೇಳು ಈಕಿ’ ಎಂಬ ಮಾತಿನಲ್ಲಿ ಸಹಜತೆ ಇದೆ. ಜನಪದರ ಆಡುನುಡಿಯಲ್ಲಿ ಬಳಕೆಯಾಗುವ ಪಡೆನುಡಿ, ಗಾದೆ, ನಾಣ್ನುಡಿಗಳ ರೂಪಗಳು ಆನಂದಕಂದರ ಕಾವ್ಯದಲ್ಲಿಯೂ ಬೇಂದ್ರೆಯವರ ಕಾವ್ಯದಂತೆ ತುಂಬಿಕೊಂಡಿವೆ.
ಉಟ್ಟಾಳು ಹಸಿರು ಪತ್ತಲಾ
ಪತ್ತಲಲ್ಲ ಹೂವಿನ್ಹಿತ್ತಲಾ
( ನಾಜೂಕದ ನಾರಿ)
‘ಕೊರದ್ಹಾಂಗ ಕರಿಯ ಕುಡಿಹುಬ್ಬಾ’
(ನಾಜೂಕದ ನಾರಿ)
‘ಮುಂಗುರುಳು ಹಾರ್ಯಾಡುವ ಹಣಿ
ಚೆಲ್ವಿಕೆಯ ಖಣೀ’
(ಬೆಣ್ಣಿಯಾಕಿ)
‘ಕಲ್ಲಿನೊಳಗ ಮಲ್ಲಿಗಿ ಅರಳೀತ? ಹೇಳು ಎಲ್ಲಿ ಯಾಕಿ’
(ಯಾರು ಹೇಳು ಈಕಿ?)
‘ಹುಣ್ಣಿವಿ ಗೌರಿಯ ಚಲುವಿಗೆ ಈಕಿಯ ಎದುರು ಸೋಲೆ ಸೋಲ’
(ಯಾರು ಹೇಳು ಈಕಿ?)
‘ಚಂದೂ ಮಾಮನ ಮಗಳಿವಳೇನೋ ಹಾಂಗ ನಗಿಯ ರೀತಿ’
(ಯಾರು ಹೇಳು ಈಕಿ)
 ‘ಅನ್ನ ಕುಮಾರನ ಬಸುರಿಯದಾಳೌ ನಮ್ಮ ಭೂಮಿದೇವಿ
ಬಯಕಿಯ ಊಟಾ ಉಣಿಸಬೇಕs ಬಂದೈತಿ ಸೀಗಿ ಹುಣ್ಣಿವಿ!’
(ಸೀಗಿ ಹುಣ್ಣಿವಿ)
‘ತಿಳಿಯಿದ್ದ ಒರತಿಯs ನೀರು ಕಲಿಕ್ಯಾವs’
(ನಲ್-ವಾಡುಗಳು)
ಹೀಗೆ ಅನೇಕ ರೂಪಗಳು ಮಾತಿನ ಮೋಡಿಯಿಂದ ಜಾನಪದರ ಶಕ್ತಿ ಸೌಂದರ್ಯ, ಮಾತಿನ ಶೈಲಿ ಸಿದ್ದಿ  ಬೆಟಗೇರಿಯವರ ಕಾವ್ಯದಲ್ಲಿ ಸಮೃದ್ಧಗೊಂಡಿವೆ.
‘ನಾ ಸಂತಿಗೆ ಹೋಗಿನ್ನಿ - ಆಕಿ ತಂದಿದ್ದಾಳೋ ಬೆಣ್ಣಿ;
ಹಿಂಡು ಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ
(ಬೆಣ್ಣಿಯಾಕಿ)
ಬಿಳಿ ಬಿಳಿ ಬಿಳಿ ದೋತರೇನ-
ಹೊಳಿ ಹೊಳಿಯುವ ಅಂಗಿಯೇನ,
ಜರದಂಚಿನ ಪಟಕಾ ಸುತ್ತಿ
(‘ಚಿನ್ನತ್ತಿಯ ಮಗ’ )
ತೊಂಡಿದುಟಿಯ ಮ್ಯಾಲ್ ಮಲಗಿದ್ದರು ನಗಿ ಕಾಣಲಿಲ್ಲೊ ಹಲ್ಲಾ
ಕಿರಿಗುಣಿ ಕೂಡಿಯಿತ್ತೊ ಗಲ್ಲಾ
(ಬಡವರ ಮಗಳು)
‘ಹೆಜ್ಜೆ ಹೆಜ್ಜೆಗೂ ಘಿಲಿಘಿಲಿ, ಘಿಲಿಘಿಲಿ ಗೆಜ್ಜಿಯ ಕುಣಿಸುತ ಬರುವಾಕಿ’
(ಗೌಡರ ಮನಿಸೊಸಿ),
ಹೆಂಗಸು ಜಲಮಾ ಕೊಟ್ಟನ್ಯಾಕ ಶಿವ ಅಂತ ಮನಸಿನೊಳಗ -
ಹಾಂಗs ಉರಿಯತೈತಿ ಕೊರಗ
(ಗೆಣತೀ ಏನ ಮಾಡ ಅಂತೀ ಪು. 39),
ಬುತ್ತೀ ತೊಗೊಂಡು ಹೋಗ್ತಿನಿ ಹೊಲಕ
ನಾ ಬರ್ತೀನಿ ಹೊತ್ತು ಮುಣುಗುದಕ
ಹೊಳಿ ದಂಡೀ ಮ್ಯಾಗ ನಮ್ಮ ಹೊಲಾ
ಬೆಳೆದು ನಿಂತೈತಿ ಬಿಳಿ ಜೋಳ ನಿಲಾ
(ಬೆಳವಲ ಒಕ್ಕಲತಿ)
ದೇವರದೆಂತಾ ಹೊಡ್ಡಸ್ತಿಕೆ ಬಿಡು ನನ್ನ ದೊರಿಯ ಮೇಲs
ನನ್ನ ಹೊರತು ಇನ್ನೊಂದು ಹೆಣ್ಣ ಮ್ಯಾಲಿಲ್ಲ ಅವಗ ಖ್ಯಾಲ
(ದೇವರ ದೇವರು)
ನಮ್ಮೂರ ಜಾತ್ರಿ ಬಲು ಜೋರಾ,
ಕರಿಯಾಕs ಬಂದಾರs ತವರವರಾ
(ನಮ್ಮೂರ ಜಾತ್ರಿ)
ಹೈನದೆಮ್ಮಿ ನೋಡ ಹಾಲ ಸಮುದರಾ
ಎಷ್ಟು ತಿನ್ನಾಕಿ ನೀ ಕೆನಿಕೆನಿ ಮಸರಾ
(ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ)
ಹೀಗೆ ಜನಪದ ಜೀವನದ ವೈವಿಧ್ಯಮಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಆನಂದಕಂದರು ‘ನಲ್ವಾಡುಗಳು’ ಸಂಕಲನದ ಕವಿತೆಗಳಲ್ಲಿ ಕಂಡರಿಸಿದ್ದಾರೆ. ಇಲ್ಲಿ ಉತ್ತರ ಕರ್ನಾಟಕದ ಬೆಳಗಾವಿ-ಧಾರವಾಡ-ವಿಜಾಪುರ ಭಾಗದ ಕನ್ನಡ ಭಾಷಾ ಪ್ರಭೇಧವನ್ನು ತಮ್ಮ ಕವಿತೆಗಳಲ್ಲಿ ಬಳಸಿಕೊಂಡಿದ್ದಾರೆ. ಸತ್ವಪೂರ್ಣ ಜಾನಪದೀಯ ಭಾಷೆ ಇಲ್ಲಿದೆ. ಒಟ್ಟಿನಲ್ಲಿ ‘ಆನಂದಕಂದ’ರ ಕವಿತೆಗಳು ಕನ್ನಡ ನವೋದಯ ಕಾವ್ಯ ಸಂದರ್ಭದಲ್ಲಿ ಜಾನಪದವನ್ನು ಅದರ ಮೂಲತನದಿಂದಲೇ ಎತ್ತಿಕೊಂಡಷ್ಟು ಪ್ರಭಾವಕ್ಕೆ ಒಳಗಾಗಿವೆ. ಜನಪದ ಭಾಷೆ, ಛಂಧಸ್ಸು, ನುಡಿಗಟ್ಟು ಮತ್ತು ಜನಪದರ ವಿವಿಧ ಲಯಗಳೆಲ್ಲವನ್ನು ಹಾಗೂ ಅವರ ಬದುಕಿನ ಕ್ರಮವನ್ನು ಅವರ ಕವಿತೆಗಳು ಯಶಸ್ವಿಯಾಗಿ ತನ್ನದಾಗಿಸಿಕೊಂಡಿವೆ. ಬೇಂದ್ರೆ, ಮಧುರಚೆನ್ನರಂತೆ ಜಾನಪದದ ಮಹತ್ವಪೂರ್ಣ ಸಾಧಕರಾಗಿ ಬೆಟಗೇರಿ ಕೃಷ್ಣಶರ್ಮರು ನವೋದಯ ಕಾವ್ಯದ ಸಂದರ್ಭದಲ್ಲಿ ಎದ್ದು ಕಾಣುತ್ತಾರೆ.
-----------------------------------------------------------------------------------------------------
.
ವಿಳಾಸ :
 ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,
 ನವನಗರ,ಬಾಗಲಕೋಟ-587103. ಮೊ.-9845500890