Tuesday, 8 October 2013

ಕನ್ನಡ ಪರಿಸರ ಕಾವ್ಯ



                                    ಕನ್ನಡ ಪರಿಸರ ಕಾವ್ಯ


                                                            * ಡಾ. ಪ್ರಕಾಶ ಗ. ಖಾಡೆ
                  ನಾವು ಆಧುನಿಕ ಯಂತ್ರ ನಾಗರಿಕತೆಯ ಈ ಕಾಲದಲ್ಲಿ ನಾವು ಅಪಾಯಗಳನ್ನು ಆಹ್ವಾನಿಸಿಕೊಂಡು ಬದುಕುತ್ತಿದ್ದೇವೆ.ನಾಳಿಗಾಗಿ ಒಂದು ಸುಂದರ ಪರಿಸರ ಉಳಿಸುವ ನಮ್ಮ ಕನಸುಗಳಗೆ ಕಪ್ಪು ಮೆತ್ತಿಕೊಳ್ಳುತ್ತಿದೆ.ಇಂಥ ಅಪಾಯದ ಹೊತ್ತಿನಲ್ಲಿ ನಮ್ಮ ಕಾಲದ ಯುವ ಕವಿಗಳು ತಮ್ಮ ಕವಿತೆಗಳ ಮೂಲಕ ಗೆಳೆಯ ಪರಿಸರ ಪ್ರೇಮಿ ಪಿ.ಡಿ.ವಾಲೀಕಾರ ಅವರ ಸಂಪಾದನೆಯ ‘ಪರಿಸರ ಕಾವ್ಯ’ ಸಂಕಲನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಾಡಿನ ಹಿರಿಯ ಮತ್ತು ಉದಯೋನ್ಮುಖ ಕವಿಗಳು ರಚಿಸಿಕೊಟ್ಟ ಪರಿಸರ ಪರಿಸರ ಮಾಲಿನ್ಯ ಮತ್ತು ಜಲಸಂಬಂಧಿಯ ಕವಿತೆಗಳಿವೆ. ಪರಿಸರವನ್ನು ವ್ಯಾಪಕವಾಗಿ ಮಲೀನಗೊಳಿಸಿ ಅನಾರೋಗ್ಯಕ್ಕೆ ಪ್ರಾಣಿ,ಪಕ್ಷಿ, ಕೀಟಗಳನ್ನು ದೂಡಿ ಜಾಗತೀಕರಣದ ಆಧ್ವಾನಗಳು ರಾಕ್ಷಸರೂಪ ತಾಳಿ ಮಾನವನ ಆಮೂಲಕ ಭಾರತೀಯ ಪಾರಂಪರಿಕ ಮನಸ್ಸುಗಳನ್ನು ಘಾಸಿಗೊಳಿಸಿವೆ. ಪರಿಸರವಿಲ್ಲದೆ ಬದುಕಿಲ್ಲ. ಹಸಿರುವನ, ಪಕ್ಷಿ, ಪ್ರಾಣಿಗಳ ಒಡನಾಟ ಅದೊಂದು ನೆಮ್ಮದಿಯ ಸಂಕೇತ. ಅದೆಲ್ಲಾ ಇಂದು ಕಾಣದಾಗಿ ಅನೇಕ ಅಮೂಲ್ಯ ಸಸ್ಯ ಸಂಪತ್ತು, ಪ್ರಾಣಿ ಪಕ್ಷಿ ಸಂಪತ್ತು ಅಳಿದು ಹೋಗಿವೆ,  ಮತ್ತು ಅಳಿಗಾಲದ ಅಂಚಿನಲ್ಲಿವೆ.
ತೀರಾ ಹತ್ತಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳ ಕೊಳ್ಳ, ಕೆರೆ, ಬಾವಿಗಳು ಮಳೆಗಾಲದಲ್ಲಿ ಮಾತ್ರ ಅಲ್ಲ ಬೇಸಿಗೆಯಲ್ಲೂ ಸದಾ ತುಂಬಿರುತ್ತಿದ್ದ ಸಂದರ್ಭಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಮ್ಮ ನೀರು ಯಾರೊಬ್ಬರ ಆಸ್ತಿಯಾಗಿರಲಿಲ್ಲ. ಆದರಿಂದು ಆಧುನಿಕತೆಯ ಯಂತ್ರ ನಾಗರಿಕತೆ ಪ್ರಾಕೃತಿಕ ಸಂಪತ್ತನ್ನೂ ಕೇಂದ್ರೀಕರಿಸಿಕೊಂಡು ಸಾರ್ವತ್ರಿಕತೆಯ ಹಕ್ಕನ್ನೂ ಮೊಟಕುಗೊಳಿಸಿ ಭೋಗ ಸಂಸ್ಕøತಿಯ ವಸ್ತುವಾಗಿ ಸಂಪತ್ತನ್ನು ಬಾಚಿಕೊಳ್ಳುವ ದುರುಳ ಕ್ರಿಯೆ ಅವ್ಯಾಹತವಾಗಿ ನಡೆದಿದೆ. ಹೀಗಾಗಿ ತನ್ನ ಪಾಡಿಗೆ ತಾನು ಹಳ್ಳ ಬಾವಿ ಕೆರೆ ಕಟ್ಟೆಗಳಿಗೆ ಹೋಗಿ ನಿರ್ಮಲವಾದ ತಿಳಿನೀರು ತುಂಬಿಕೊಂಡು ಬರುತ್ತಿದ್ದ ನಮ್ಮ ಗ್ರಾಮೀಣರು ಇವತ್ತು ಬೋರವೆಲ್ಲು ಹೊಂದಿದ ಧನಿಕರ ಮುಂದೆ ಒಂದು ಕೊಡ ನೀರಿಗಾಗಿ ಭಿಕ್ಷೆಗೆ ನಿಲ್ಲಬೇಕಾದ ಸ್ಥಿತಿ ಬಹುಭಾಗದ ಹಳ್ಳಿಗಳಲ್ಲಿ ಕಾಣುತ್ತೇವೆ.
ಬೋರವೆಲ್ಲುಗಳು ಒಂದು ಕೃಷಿ ಉತ್ಪನ್ನಗಳನ್ನು ಹೆಚ್ಚಿಸುತ್ತಿರುವ ಸಂಗತಿ ಒಂದೆಡೆಯಾದರೂ, ಅಗತ್ಯಕ್ಕಿಂತ ಹೆಚ್ಚಿನ ನೀರಿನ ಬಳಕೆಯಾಗಿ ಅನೇಕ ಜಲಮೂಲಗಳು ಇಂದು ಹೇಳ ಹೆಸರಿಲ್ಲದಂತೆ ನಾಶವಾಗಿ ಹೋಗಿವೆ. ನಾನು ಕಳೆದ 20  ವರ್ಷಗಳ ಹಿಂದೆ  ಮುಧೋಳ ತಾಲೂಕು ಲೋಕಾಪುರದಲ್ಲಿ ನೆಲೆಸಿದ್ದಾಗ ಅಲ್ಲಿನ ಊರ ಬದಿಯ ಹಳ್ಳದ ಸೊಗಸು ನೋಡಬೇಕಿತ್ತು. ಸುಂದರ ಪ್ರಾಕೃತಿಕ ವೈಭವದಿಂದ ಮೆರೆಯುತ್ತಿದ್ದ ಹಳ್ಳ ಸದಾ ಪ್ರವಹಿಸುತ್ತಿತ್ತು. ಮಗ್ಗುಲಲ್ಲಿ ಹಸಿರು ತುಂಬಿದ ಗಿಡ ಮರಗಳು, ಬಾಳೆ, ತೆಂಗು, ಪೇರಲ, ಚಿಕ್ಕು, ದಾಳಿಂಬೆ ಗಿಡಗಳು, ಈ ಹಣ್ಣಸವಿ ಹುಡುಕಿ ಬರುತ್ತಿದ್ದ ಪಕ್ಷಿ ಸಂಕುಲ ಅದೊಂದು ಧರೆಯ ಸ್ವರ್ಗವಾಗಿತ್ತು. ‘ಆ ಹಳ್ಳ ಎಂದಿಗೂ ಬತ್ತಿದ್ದು ನಾವು ಕೇಳಿಯೇ ಇಲ್ಲ’ ಎಂದು ಹಿರಿಯರು ಹೇಳುತ್ತಿದ್ದರು. ಇದಕ್ಕೆ ಕಾರಣ ಅಲ್ಲಿರುವ `ಗುಪ್ತಗಂಗೆ' .ಹೌದು, ಲೋಕಾಪುರದ ಹಳ್ಳದ ಗುಡ್ಡದಲ್ಲಿ  ಸದಾ ಜಿನುಗುತ್ತಿದ್ದ ದೊಡ್ಡದಾದ ಸೆಲೆ ಒಂದು ಇತ್ತು. ಇದಕ್ಕೆ `ಗುಪ್ತಗಂಗೆ' ಎಂದು ಕರೆಯುತ್ತಿದ್ದರು. ಆ ಗುಪ್ತ ಗಂಗೆಯ ತಿಳಿನೀರ ಝರಿ ಕಣ್ಣಾರೆ ಕಂಡು ಆ ಕಾಲಕ್ಕೆ ಎಷ್ಟೊಂದು ಖುಷಿಗೊಂಡಿದ್ದೆವು ಎಂದು ನೆನೆದಾಗ ಈ ದಿನವೂ ರೋಮಾಂಚನವಾಗುತ್ತದೆ. ಆದರಿಂದು  ಲೋಕಾಪುರದ ಹಳ್ಳಕ್ಕೆ ಸ್ಮಶಾನಮೌನ ಆವರಿಸಿದೆ. ಆ ಕಾಲದ ಗಿಡಮರಗಳು ಗುರುತಿಗೂ ಸಿಕ್ಕದಂತೆ ಯಾರು ಯಾರದೊ ಒಲೆ ಸೇರಿ ಸುಟ್ಟು ಬೂದಿಯಾಗಿವೆ. ಅಲ್ಲೀಗ ಹಕ್ಕಿ ಪಕ್ಕಿಗಳ ಕಲರವ ಇಲ್ಲ. ಗುಪ್ತಗಂಗೆ ಒಂದು ಹನಿ ನೀರನ್ನೂ ತೊಟ್ಟಿಕ್ಕದ ಸ್ಥಿತಿಯಲ್ಲಿ ಬತ್ತಿ ಬಾಡಿ ನಿಸ್ತೇಜಗೊಂಡಿದ್ದಾಳೆ. ಹಳ್ಳದ ವೈಭವ ಈಗ ಇತಿಹಾಸ ಮಾತ್ರ. ಭೂಗೋಲವಂತೂ ಭಣಭಣ. ಈ ಹಳ್ಳಕ್ಕೆ ಬ್ರಿಟಿಷರ ಕಾಲಕ್ಕೆ ಗಟ್ಟಿಮುಟ್ಟಾಗಿ ಕಟ್ಟಿದ ದೊಡ್ಡದೊಂದು ಸೇತುವೆ ಇತ್ತು. ಅದು ತೀರಾ ಇತ್ತೀಚಿಗೆ ರಸ್ತೆ ಅಗಲೀಕರಣಮಾಡಿ ಹೊಸ ಸೇತುವೆ ನಿರ್ಮಾಣ ಮಾಡುವ ನೆಪದಲ್ಲಿ ನಿರ್ನಾಮಮಾಡಿ ಒಗೆದರು. ಇಂಥ ಸಂದರ್ಭಗಳು ನಿಮ್ಮ ಊರಲ್ಲೂ ಕಂಡಿದ್ದೀರಿ. ಇದೆಲ್ಲಾ ಆಧುನಿಕತೆಯ ಅವಾಂತರಗಳು. ಆಧುನಿಕತೆಯ ಅವಾಂತರಗಳು ಸೃಷ್ಟಿಸುತ್ತಿರುವ ಇಂಥ ಅಪಾಯಕಾರಿ ಅವಘಡಗಳಿಗೆ ಕೊನೆ ಎಂಬುದಿಲ್ಲ. ಜಾಗತೀಕರಣ ಹಾಗೂ ಯಂತ್ರ ನಾಗರಿಕತೆಯ ರಾಕ್ಷಸಿ ಬಾಹುಗಳ ಅಪ್ಪುಗೆಯಲ್ಲಿ ನಮ್ಮ ನೀರು, ನೆಲ, ಗಿಡ, ಮರ, ಪ್ರಾಣಿ, ಪಕ್ಷಿ ಸಂಕುಲ, ಪ್ರಕೃತಿ ಸಂಪತ್ತು ದೀಪಕ್ಕೆ ಸಿಕ್ಕ ಹುಳಗಳಂತೆ ಪಟಪಟನೆ ಮುರಿದು ಬೀಳುವ ಮುನ್ನ ಜಾಗೃತರಾಗಬೇಕಿದೆ.
ಮನುಕುಲವೆಲ್ಲ ಬೀದಿ ಶವವಾದೀತು.....
‘ಪರಿಸರ ಕಾವ್ಯ’ದ ಕವಿಗಳು ನಾವು ನಮ್ಮ ಪರಿಸರವನ್ನು ಪ್ರಾಕೃತಿಕ, ಜೀವ ವೈವಿಧ್ಯದ ಸಂಪತ್ತಿನೊಂದಿಗೆ ಉಳಿಸಿಕೊಳ್ಳದಿದ್ದರೆ ಆಗುವ ಅಪಾಯದ ಮುನ್ನೆಚ್ಚರಿಕೆ ನೀಡಿದ್ದಾರೆ. ಮನುಷ್ಯನ ಸ್ವಾರ್ಥ ಲಾಲಸೆಯ ಕಾರಣವಾಗಿ ಆಧುನಿಕ ಜಗತ್ತು ತನ್ನ ಅವಸಾನವನ್ನು ತಾನೇ ಕಂಡುಕೊಳ್ಳುವ ಕಾಲ ದೂರವಿಲ್ಲ ಎನ್ನುತ್ತಾರೆ. ಜಗದ, ಜನರ ನೆಮ್ಮದಿಗಾಗಿ ಕಾಡು ಉಳಿಯಬೇಕು. `ಕಾಡು ಅಳಿದರೆ ನಾಡು ಮುಳುಗೀತು' , ನೀರು ಬರೀ ನೀರಲ್ಲ ಜೀವ ಕೋಟಿಗದು ಅಮೃತ  ಎಂಬ ಸತ್ಯವನ್ನು ಸಾರಿದ್ದಾರೆ.
ಹಿರಿಯ ಕವಿ ಬಿ. ಆರ್. ನಾಡಗೌಡ ಅವರು ಹೇಳುವ ಹಾಗೆ-
ಕಾಡಿನಿಂದ ಇಳೆಗೆ ಮಳೆಯು
ಸೃಷ್ಟಿ ಸೊಬಗು ಚೇತನ
ಹಸಿರು ನಮ್ಮ ಜೀವದುಸಿರು
ನಿತ್ಯ ಬದುಕು ನೂತನ
ದಿನವೂ ಬದುಕು ಹೊಸತನದಿಂದ ಕೂಡಿರಬೇಕಾದರೆ ಪ್ರಕೃತಿಯ ಸೊಬಗು ಒಂದು ಕಾರಣ. ಈ ಪ್ರಕೃತಿಯನ್ನು ಕಾಯ್ದುಕೊಳ್ಳೆಬೇಕಾಗಿದೆ. ಪ್ರಕೃತಿ ಎಲ್ಲರ ನೆಮ್ಮದಿಯ ಸಂಕೇತ. ಮಾನವ ಬದುಕಿನ ಪ್ರಾಣಗಂಗೆ. ಜೀವದುಸಿರು, ಅದೇ ಇಲ್ಲದಿದ್ದರೆ ಈ ಜಗಕೆ ಏನು ಅರ್ಥ? ಕವಿ ವೀರೇಶ ಎಂ. ರುದ್ರಸ್ವಾಮಿ ಸಾರುತ್ತಾರೆ-
ಮದುಮಗಳಂತೆ ಕಂಗೊಳಿಸುವ
ಹಚ್ಚಹಸುರಿನಿಂದ ನಿನ್ನ ಮೈ ತೋರು
ನೀ ಸ್ವಾರ್ಥವನು ಬಯಸಿದರೆ
ಮನುಕುಲವೆಲ್ಲ ಬೀದಿ ಶವವಾಗಿ
ಜಗವೆಲ್ಲ ಮೌನ ಆವರಿಸುವುದು
ಪೃಕೃತಿಯ ತರುಲತೆಗಳ ದಟ್ಟೈಸಿರಿಯ ಬದಲಿಗೆ ಇಂದು ಬೃಹತ್ ಕಾರ್ಖಾನೆಗಳು ಉಗುಳುವ, ಸೃಷ್ಟಿಸುವ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಮನುಕುಲದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮತ್ತದೇ ನೆನಪು ಇಳಕಲ್ಲಿಗೆ ಜಾರುತ್ತಿದೆ. 1980 ರಿಂದ 1988 ರ ವರೆಗೆ ನಾನು  ಬಾಗಲಕೋಟೆ ಜಿಲ್ಲೆಯ ಇಳಕಲ್ಲದಲ್ಲಿ ನೆಲೆಸಿದ್ದೆ. ಅಲ್ಲಿಯ ಸದಾ ಝಳು ಝಳು ಹರಿಯುತ್ತಿದ್ದ ಹಳ್ಳ. ಹಳ್ಳದ ಬದಿಗೆ ಎದ್ದು ನಿಂತಿದ್ದ ಎತ್ತರದ ತೆಂಗಿನ ಮರಗಳು, ಶ್ರೀ ವಿಜಯ ಮಹಾಂತ ಶ್ರೀಗಳ ಗದ್ದುಗೆ, ಗದ್ದುಗೆ ಕಾಣದ ಹಾಗೆ ತಣ್ಣೆಳಲು ನೀಡಿದ್ದ ಎತ್ತರದ ಮರಗಳು... ಇವೆಲ್ಲಾ ಈಗ ನೆನಪಿಸಿಕೊಳ್ಳಲು ಮಾತ್ರ. ಈಗ ಹಳ್ಳದಲ್ಲಿ ತಿಳಿನೀರಿಲ್ಲ. ಕೊಳಚೆ ನೀರು ಹಳ್ಳಕ್ಕೆ ತಂದು ಕಲ್ಲಿನ ಪಾಲೀಶುಮಾಡುವ ಫ್ಯಾಕ್ಟರಿಗಳ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಭೂಮಿಯ ಫಲವತ್ತತೆ ಎಂಬುದು ಬಂಜೆಯಾಗಿ ಈಗ ಅಲ್ಲಿಯ ಭೂಗೋಲವು ರಣರಣವೆನಿಸುತ್ತಿದೆ. ಇಂಥದೇ ಪರಿಸರ ಈಗ ಎಲ್ಲೆಲ್ಲೂ. ಅದಕ್ಕಾಗಿ ಈ ಸಂಕಲನದ ಕವಿ ಲಕ್ಕಸಕೊಪ್ಪದ ಹುಲ್ಯಾಳ ಮಲ್ಲು ಹೇಳುತ್ತಾರೆ-
ಎಲ್ಲೆಂದರಲ್ಲಿ ಕಾಣುತ್ತಿವೆ ಪ್ಲಾಸ್ಟಿಕ್ ಯುಗದ ವಸ್ತುಗಳು
ತಯಾರಾಗುತ್ತಿವೆ ಇದರಿಂದ ವಿಷಪೂರಿತ ಪ್ರದೇಶಗಳು
ಬಾವಿ ಕೆರೆಗಳಲ್ಲಿ ತುಂಬಿಕೊಂಡಿವೆ ವಿಷಪೂರಿತ  ಕಲ್ಮಶಗಳು
ಪರಿಣಾಮದಿಂದ ಸಾಯುತ್ತಿವೆ ಮೀನಿನಂತಹ ಜಲಚರಗಳು
ಮಾನವನ ಜಾಣ್ಮೆ, ಕುಶಲತೆ, ಬುದ್ಧಿಶಕ್ತಿ ಈಗ ಮುಗಿಲು ಮುಟ್ಟಿದೆ. ಆದರೆ ಇದರ ಸದ್ಬಳಕೆಯಾಗಬೇಕಾದುದು ಈಗ ಜಲಮೂಲ ಗಳನ್ನು ಉಳಿಸಿಕೊಳ್ಳುವಲ್ಲಿ. ವಿಪರ್ಯಾಸವೆಂದರೆ ಈ ಬಗೆಯ ಚಿಂತನೆ ಗೌಣವಾಗಿ ಪರಿಸರದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಸರೋಜ ಎನ್. ಪಾಟೀಲ ಅವರ ಸಾಲುಗಳು ಹೇಳುವಂತೆ-
ನಾಗರಿಕ ಮಾನವನ ಪಯಣ
ಮುಟ್ಟಿದೆ ಚಂದ್ರನವರೆಗೂ ಯಾನ
ಎಲ್ಲೆಂದರಲ್ಲಿ ನೀರಿನ ಆಹಾಕಾರ
ತಿಳಿಯದೆ ಮಾನವನಿಗೆ ಇದರ ಸಾರ
ವೈಜ್ಞಾನಿಕವಾಗಿರುವ ಜಾಣ್ಮೆಯನ್ನು ಬಳಸಿ ನೀರಿನ ಈ ಕಾಲದ ಆಹಾಕಾರವನ್ನು ತೊಲಗಿಸಬೇಕೆಂಬುದು ಅವರ ಕಳಕಳಿ. ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಭೂತಾಯಿಯ ಒಡಲು ಸದಾ ಹಸಿರಾಗಿರಲಿ ಎಂಬುದೇ ಎಲ್ಲರ ಹಾರೈಕೆ. ಆದರೆ ಭೂತಾಯಿಯ ಒಡಲು ಬರಿದುಮಾಡುವ ರಾಕ್ಷಸಿ ಕಾರ್ಯಕ್ಕೆ ಭೂಮಿಯೇ ಪ್ರತಿರೋಧ ಒಡ್ಡಿದರೆ ಹೇಗಾದೀತು? ಅದರ ಒಂದು ರುದ್ರನರ್ತನ  ಡಿಸೆಂಬರ್ 2004 ರಲ್ಲಿ ನಡೆದ `ಸುನಾಮಿ' ಯೇ ಸಾಕ್ಷಿ. ಪೂರ್ಣಿಮಾ ಮ. ಪತ್ತಾರ ಅವರ ಕವಿತೆಯಲ್ಲಿ ಭೂತಾಯಿಯು ತನ್ನ ಕರುಳ ಕುಡಿಗಳಿಗೆ ಹೀಗೆ ಹೇಳುತ್ತಾಳೆ-
ನಾನು ನಿಮ್ಮ ತಾಯಿ ಪೃಥ್ವಿ
ಹೆತ್ತವಳನ್ನೆ ಹಿಂಸಿಸುವ
ಹೀನ ಮನುಜರು ನೀವು
ನನ್ನನ್ನೂ ಬಿಡಲಿಲ್ಲವಲ್ಲ
ನನ್ನ ಸಹನೆ ಕಂಡು ನನ್ನನ್ನೂ
ಶಕ್ತಿ ಇಲ್ಲದವಳೆಂದು ಭಾವಿಸಿದಿರಿ
ನಾನು ಮುನಿದರೆ ಸುನಾಮಿ
ಭೂತಾಯಿಯು ಮತ್ತೆ ಮತ್ತೆ ಮುನಿಸಿಕೊಳ್ಳುವ ಮೊದಲು, ಪ್ರಕೃತಿಯ ಮೇಲಿನ ದೌರ್ಜನ್ಯ ನಿಲ್ಲಬೇಕು. ಈ ಆಶಯವೇ ಇಲ್ಲಿನ ಬಹುತೇಕ ಕವಿತೆಗಳಲ್ಲಿದೆ.
ಭುಗಿಲೆದ್ದು ಉರಿಯುತಿದೆ
ಆಂತರಿಕ ದ್ವೇಷಾಸೂಯೆಯ ಜ್ವಾಲೆ
ನಶಿಸಬೇಕು ಬೀಸುತ್ತಿರುವ
ನರಪಾತಕಿ ದುಷ್ಟಶಕ್ತಿಗಳ ಬಲೆ
(ವಾಯ್. ಎಂ. ಜೋಶಿ)
ಗಾಳಿ ಇರಲಿ ಶುಚಿಯಾಗಿ
ನೀರು ಹರಿಯಲಿ ತಿಳಿಯಾಗಿ
(ಶ್ರೀದೇವಿ ಸಿಂಗಾಡಿ)
ನೀರಿಗಾಗಿ ಸಾಲು ಸಾಲು ಪಾಳಿ
ಹರುಕು ಮುರುಕು ಕೊಡಪಾನಗಳು
(ಪಿ.ಡಿ.ವಾಲೀಕಾರ)
ಹರಿದು ಕಡಲ ಸೇರದಂಗೆ
ಜಲಕೊಯಿಲು ಮಾಡುವೆ ಬಾರೇ....
(ಮಂಜುನಾಥ ಹೊಂಬುಜ)
ಎಂಥ ಪಾಪವೇ ಇರಲಿ ಕಪಟವೆ ತೊಳೆದು
ಮತ್ತೆ ಮಡಿಲಿಗೆ ಕರೆವಳು ಈ ತಾಯಿಯು
(ಕಾವೇರಿ ವಿವೇಕಾನಂದ ಗರಸಂಗಿ)
ನಾಕ ಹೋಗಿ ನರಕವಾಯ್ತು
ಪರಿಸರಕೆ ಗಲ್ಲು
(ಕಲ್ಯಾಣರಾವ ದೇಶಪಾಂಡೆ)
ಹೀಗೆ ಇಲ್ಲಿನ ಕವಿತೆಗಳು ಒಂದೊಂದು ಬಗೆಯಲ್ಲಿ ನಮ್ಮ ಪರಿಸರದ ಕಾಳಜಿಯನ್ನು ವ್ಯಕ್ತಪಡಿಸುವುದರ ಜೊತೆಗೆ ಎಚ್ಚರಿಕೆಯನ್ನೂ ಮೂಡಿಸುತ್ತವೆ..  ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ ನಾನು ಹುಟ್ಟಿ ಬೆಳೆದ ನನ್ನೂರು ಜಮಖಂಡಿ ತಾಲೂಕಿನ ತೊದಲಬಾಗಿ. ಇಲ್ಲಿ 1965 ರಿಂದ 1975 ರ ವರೆಗೆ ನೆಲೆಸಿದ್ದೆ. ಇಲ್ಲಿನ ಹಳ್ಳ, ಹಳ್ಳದ ಬದಿಯ ಹಸಿರು, ಮಳೆಗಾಲದಲ್ಲಿ ತುಂಬಿ ಧುಮುಕುತ್ತಿದ್ದ ದಬೆ ದಬೆ ಈಗ ನೋಡಲೂ ಸಿಗುತ್ತಿಲ್ಲ. ಸಮಾಧಾನವೆಂದರೆ ಈ ಹೊತ್ತಿಗೆ ನಮ್ಮೂರ ಹಳ್ಳಕ್ಕೆ ಜೀವ ಬಂದಿದೆ. ಆಲಮಟ್ಟಿ ಆಣೆಕಟ್ಟೆಯ ಹಿನ್ನೀರಿನ ಕೃಷ್ಣಾ ನದಿ ತಟಾಕದಲ್ಲಿ ಪಡಸಲಗಿ ಬಳಿ ನಿರ್ಮಾಣಮಾಡಿದ ಏತ ನೀರಾವರಿಯಿಂದ ಹೊಲಗಳಿಗೆ ನೀರು ಬಿಡುವ ಮೂಲಕ ನನ್ನೂರ ಹಳ್ಳದಿಂದ ಹಾಯ್ದು ಕೆರೆಗೆ ನೀರು ಬಿಡುತ್ತಿದ್ದಾರೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ವೈಭವ ಕಳೆದುಕೊಂಡಿದ್ದ ಹಳ್ಳ ಈಗಷ್ಟೇ ಚಿಗುರಾಗುತ್ತ್ತಿದೆ. ನೈಸರ್ಗಿಕ ಮಳೆಯಿಂದ ಹಸಿರಾಗಿದ್ದ ನನ್ನೂರ ಹಳ್ಳ ಇಂದು ಯಾಂತ್ರಿಕ ಉಪಭೋಗದಿಂದ ಮೈದಡವಿಕೊಂಡು ಏಳುತ್ತಿದೆ. ಈ ಮಾತು ನಾನಿಲ್ಲಿ ಹೇಳುವ ಕಾರಣ ಪ್ರತಿ ಊರಿನ ಕೆರೆಗಳನ್ನು ತುಂಬಿಸಬೇಕಾಗಿದೆ. ಇದಕ್ಕಾಗಿ ವಿಜಾಪುರ,ಬಾಗಲಕೋಟೆ,ದಾವಣಗೆರೆ ಮೊದಲಾದ ಕಡೆಗಳಲ್ಲಿ ಕೆರೆ ತುಂಬಿಸುವ ಕಲಸಗಳು ನಡೆಯುತ್ತಿವೆ .ಇದೊಂದು ಸಮಾಧಾನಕರ ಸಂಗತಿ. ಹೌದು ವ್ಯರ್ಥವಾಗಿ ಹರಿದು ಹೋಗುವ ನದಿಯ ನೀರನ್ನು ಬೃಹತ್ ಆಣೆಕಟ್ಟುಗಳ ಮೂಲಕ ತಡೆದು ನಿಲ್ಲಿಸಿದರಷ್ಟೇ ಸಾಲದು. ಪ್ರತಿ ಹಳ್ಳಿಯ ಕೆರೆಯನ್ನು ತುಂಬಿಸಬೇಕು. ಜೊತೆಗೆ ಅಳಿದು ಹೋಗಿರುವ ಅದೆಷ್ಟೊ ಕೆರೆಗಳಿಗೆ ಮರು ಜೀವ ನೀಡಬೇಕು. ಮತ್ತೆ ನಮ್ಮ ಭೂತಾಯಿ ಹಸಿರ ಉಡುಗೆಯಲ್ಲಿ ನಳ ನಳಿಸುವಂತಾಗಲಿ, ಅವಳ ಒಡಲಲ್ಲಿ ಹಾಡಿ ನಲಿಯುವ ಪ್ರಾಣಿ ಪಕ್ಷಿಗಳು ಒಕ್ಕೊರಲಿನಿಂದ ಪರಿಸರ ಪ್ರೀತಿ ಹೊಂದಿದ ಮಾನವರಿಗೆ `ಕೃತಜ್ಞತೆ' ಹೇಳುವಂತಾಗಲಿ, ಪರಿಸರ ಮಲೀನತೆಯಿಂದ ದೂರಾಗಿ ಸ್ವಚ್ಛಂದದ ‘ಭೂಗೋಲ’ ನಮ್ಮ ಆಶಯವಾಗಲಿ.*
ವಿಳಾಸ :
ಡಾ.ಪ್ರಕಾಶ ಗ.ಖಾಡೆ, ‘ಶ್ರೀಗುರು’,
ಸರಸ್ವತಿ ಬಡಾವಣೆ,ಸೆಕ್ಟರ್ ನಂ. 63 ,
ನವನಗರ,ಬಾಗಲಕೋಟ. ಮೊ.9845500890.


No comments:

Post a Comment