Thursday, 28 March 2013



 ವಿಶೇಷ ಲೇಖನ :
    ‘ಬಾಗಲಕೋಟೆ ಹೋಳಿ ಹಬ್ಬಕ್ಕೆ ಜಯವೆನ್ನಿ’
                   -ಡಾ.ಪ್ರಕಾಶ ಗ.ಖಾಡೆ
  ಬಾಗಲಕೋಟೆ ಊರು ಮುಳುಗಡೆ ಮತ್ತು ಸ್ಥಳಾಂತರದ ಕಾರಣವಾಗಿ ಇಡೀ ಏಶಿಯಾ ಖಂಡದಲ್ಲಿಯೇ ಬಹು ದೊಡ್ಡ ನಗರವೊಂದು ತಲ್ಲಣಕ್ಕೊಳಗಾಗಿ ಈಗ ಸುಂದರವಾಗಿ ರೂಪಿತವಾಗುತ್ತಿರುವುದು ಒಂದು ದಾಖಲೆಯೆ ಸರಿ. ಘಟಪ್ರಭಾ ನದಿಯ ದಡದಲ್ಲಿರುವ ಈ ನಗರವು ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಿಂದ ಕೃಷ್ಣೆವು ಸೇರಿಕೊಂಡು ಕೋಟೆಯ ಬಾಗಿಲಿಗೆ ಬಾಗಿನ ಅರ್ಪಿಸಿದಂತಾಗಿದೆ.ಬಾಗಲಕೋಟೆಯು  ರಾಮಾಯಣ ಕಾಲದಿಂದಲೂ ಚಾಲ್ತಿಯಲ್ಲಿದ್ದ ಊರು.ಲಂಕಾಧಿಪತಿ ರಾವಣಾಸುರನು ಭಜಂತ್ರಿ ವಾದ್ಯಗಾರರಿಗೆ ದಾನವಾಗಿ ನೀಡಿದ ಊರು.ಅಂತೆಯೇ ಇಲ್ಲಿನ ಭಜಂತ್ರಿಯವರು ಶಹನಾಯಿ ವಾದನಕ್ಕೆ ಸವಣೂರು ನವಾಬನಿಂದ ಬೆಳ್ಳಿಯ ಶಹನಾಯಿಯನ್ನು ಬಹುಮಾನವಾಗಿ ಪಡೆದುಕೊಂಡಿದ್ದರು. 1664 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ಬೀಂಜಿ ಕೋಟೆಗೆ ಹೋಗುವಾಗ ಈ ನಗರಕ್ಕೆ ಭೇಟಿ ಕೊಟ್ಟಿದ್ದರೆಂದು ಇತಿಹಾಸ ಹೇಳುತ್ತದೆ.ವಿಜಾಪುರದ ಆದಿಲಶಾಹಿ ಅರಸರು ಈ ಊರನ್ನು ತಮ್ಮ ಮಗಳಿಗೆ ಬಳೆ ತೊಡಿಸುತ್ತಿದ್ದ ಬಳೆಗಾರನಿಗೆ ಉಂಬಳಿಯಾಗಿ ಕೊಟ್ಟಿದ್ದರಂತೆ,ಅದಕ್ಕಾಗಿ ಈ ಊರಿಗೆ ಬಾಂಗಡಿ ಕೋಟೆ ಎಂದೂ ಮುಂದೆ ಬಾಗಲಕೋಟೆಯೆಂದು ಹೆಸರಾಯಿತು ಎಂಬ ಪ್ರತೀತಿ ಇದೆ.ಬಾಗಲಕೋಟೆಯ ಇತಿಹಾಸ ಮತ್ತು ಸಂಸ್ಕøತಿ ಅಭ್ಯಸಿಸಿದಾಗ ಇಲ್ಲಿ ಸರ್ವಧರ್ಮಿಯರು ಕೂಡಿ ಬಾಳಿ ದೇಶಕ್ಕೆ ಭಾವೈಕ್ಯತೆಯ ಸಂದೇಶ ಸಾರಿದ ಕೀರ್ತಿ ಈ ನಗರಕ್ಕಿದೆ.ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ‘ಅಸಹಕಾರ ಚಳವಳಿ’ ಬಗ್ಗೆ ಜನಾಭಿಪ್ರಾಯ ಮೂಡಿಸುವ ಸಲುವಾಗಿ ಗಾಂಧೀಜಿಯವರು ಬಾಗಲಕೋಟೆಗೆ ಬಂದಿದ್ದರು.1921 ಮೇ 28 ರಂದು ಗಾಂಧೀಜಿಯವರು ಬಾಗಲಕೋಟೆಗೆ ಬಂದಾಗ ಆ ಕಾಲಕ್ಕೆ ಒಂದು ಸಾವಿರ ರೂ.ಗಳ ನಿಧಿಯನ್ನು ಅರ್ಪಿಸಲಾಗಿತ್ತು.1931 ರಲ್ಲಿ ಪಂಡಿತ ಜವಾಹರಲಾಲ ನೆಹರೂ ಬಾಗಲಕೋಟೆಯ ಹಿಂದೂಸ್ಥಾನ ಸೇವಾದಳಕ್ಕೆ ಭೇಟಿಕೊಟ್ಟಿದ್ದರು.ಐತಿಹಾಸಿಕ ಸೇವಾದಳ ಕಟ್ಟಡ ಮುಳುಗಡೆಯಾಗಿ ಅದರ ಪ್ರತಿರೂಪ ನವನಗರದಲ್ಲಿ ನಿರ್ಮಿಸಲಾಗಿದೆ.ಸರ್ದಾರ್ ವಲ್ಲಭ ಬಾಯಿ ಪಟೇಲರು ಭಾಷಣ ಮಾಡಿದ ಜಾಗದಲ್ಲಿ ವಲ್ಲಭ ಬಾಯಿ ಚೌಕ ಕಟ್ಟಲಾಗಿದೆ,ಇದೂ ಎರಡನೆಯ ಹಂತದಲ್ಲಿ ಕೃಷ್ಣಾರ್ಪಣವಾಗಲಿದೆ.ಇವತ್ತು ಹಳೆಬಾಗಲಕೋಟ-ವಿದ್ಯಾಗಿರಿ-ನವನಗರವನ್ನು ಒಂದುಗೂಡಿಸುವ ಬೃಹತ್ತ ಸೇತುವೆ ಮತ್ತು  ರಸ್ತೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಸುಂದರಗೊಳಿಸಲಾಗಿದೆ.ಮರಾಠ ದೊರೆಗಳ ಕಾಲದಲ್ಲಿ ಕಟ್ಟಲಾಗಿದ್ದ ಶಿರೂರು ಅಗಸಿಯು ಮುಳುಗಡೆಯಾಗಲಿದ್ದು ,ಅದನ್ನು ಸಂಗಮ ಕ್ರಾಸ್ ಬಳಿ ಬೃಹತ್ತಾಗಿ ಕಟ್ಟಲಾಗುತ್ತಿದೆ.ಮುಳುಗಡೆ ಊರಿನ ಹಿಂದಿನ ಸಂಸ್ಕøತಿಯನ್ನು ಮರು ಸ್ಥಾಪಿಸಲು ಊರ ಜಾತ್ರೆ,ಹಬ್ಬ ಹರಿದಿನ,ಉರುಸು ,ಓಕಳಿ ಮೊದಲಾದವನ್ನು ನಗರದ ಯುವ ಜನಾಂಗ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ.ಇಂಥ ಆಚರಣೆಗಳಲ್ಲಿ ಬಾಗಲಕೋಟೆಯ ಹೋಳಿ ಹಬ್ಬವೂ ಒಂದು.
ಹಾದಿಗೆ ಜಯವೆನ್ನಿ ಬೀದಿಗೆ ಜಯವೆನ್ನಿ
ಬಾಗಲಕೋಟೆಯ ಹೋಳಿ ಹಬ್ಬಕ್ಕೆ ಜಯವೆನ್ನಿ
ಇಡೀ ದೇಶದಲ್ಲಿಯೇ ಬಾಗಲಕೋಟೆಯ ಹೋಳಿ ಆಚರಣೆಗೆ ಒಂದು ವಿಶಿಷ್ಟತೆ ಇದೆ.ಹತ್ತು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಕಲ್ಕತ್ತಾ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದರೆ,ಐದು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಬಾಗಲಕೋಟ ಎರಡನೆಯ ಸ್ಥಾನದಲ್ಲಿದೆ.ಬಾಗಲಕೋಟೆಯಲ್ಲಿಮೊದಲಿನಿಂದಲೂ ಮುಖ್ಯವಾಗಿ 5 ಪೇಟೆಗಳಿವೆ.ಕಿಲ್ಲಾ,ಹಳಪೇಟ,ಹೊಸಪೇಟ,ಜೈನಪೇಟ ಮತ್ತು ವೆಂಕಟಪೇಟ.ಮುಳುಗಡೆಯಿಂದ ಇವೆಲ್ಲ ಮೂಲ ಸ್ವರೂಪದಲ್ಲಿ ಉಳಿದಿಲ್ಲ.ಈ ಐದು ಓಣಿಗಳಿಗೆ ತುರಾಯಿ ಹಲಗೆ ಹಾಗೂ ಹಿಂದಿನ ಕಾಲದಿಂದ ಬಂದ ನಿಶಾನೆಗಳು ಇರುವವು.ಪ್ರತಿಯೊಂದು ಓಣಿಗಳಲ್ಲಿ ಹೋಳಿಹಬ್ಬದ ಬಾಬಿನ ಮನೆತನಗಳಿವೆ.ಮುಳುಗಡೆಯಿಂದ ಮಾಘ ಅಮವಾಸ್ಯೆಯ ಮರುದಿನದಿಂದಲೇ ಅಖಂಡ ಬಾಗಲಕೋಟೆಯ ಓಣಿ ಓಣಿಗಳಲ್ಲಿ ಹಲಗೆಯ ಸಪ್ಪಳ ಕೇಳಿ ಬರುತ್ತದೆ.ಬಾಗಲಕೋಟ ಹೋಳಿ ಹಬ್ಬದ ಅತಿ ಮುಖ್ಯ ಆಕರ್ಷಣೆ ಎಂದರೆ ‘ಸಂಪ್ರದಾಯ ತುರಾಯಿ ಹಲಗೆ ವಾದನ’ವಾಗಿದೆ.ತುರಾಯಿ ಹಲಗೆ ಎಂದರೆ ಸುಮಾರು ಹತ್ತು ಚಿಟ್ಟಲಿಗೆಗಳ ಒಂದು ಬೃಹತ್ ಆಕಾರದ ಹಲಗೆ.ಈ ಹಲಗೆಯ ಮೇಲೆ ಬಿರುದಾಗಿ ಚಿನ್ನದ ಇಲ್ಲವೇ ಬೆಳ್ಳಿಯ ಕಳಸ ಇರುತ್ತದೆ.ಇದಕ್ಕೆ ತುರಾಯಿ ಎನ್ನುತ್ತಾರೆ.ತುರಾಯಿ ಮೇಲುಗಡೆ ರಂಗು ರಂಗಿನ ಗುಚ್ಛವಿದ್ದು ರಾತ್ರಿ ಸಮಯದಲ್ಲಿ ವಿದ್ಯುದ್ದೀಪಗಳಿಂದ ಅಲಂಕರಿಸಿರುತ್ತಾರೆ.ಇದರ ಜೊತೆಗೆ ಅದರದೇ ಆದ ,ಹಿಂದಿನ ಕಾಲದಿಂದ ಬಂದ ರಂಗು ರಂಗಿನ ರೇಶ್ಮೆ ಬಟ್ಟೆಗಳ ಮೂವತ್ತು ಅಡಿ ಎತ್ತರದ ನಿಶಾನೆಗಳು ಇರುವವು.ಈ ನಿಶಾನೆಗಳು ಕೆಲವು ಹಿರಿಯರು ಪೇಶ್ವೆ ಮಹಾರಾಜರಿಂದಲೂ,ಇನ್ನೂ ಕೆಲ ಹಿರಿಯರು ವಿಜಾಪುರದ ಆದಿಲ್ ಶಾಹಿ ಸುಲ್ತಾನರಿಂದ ಬಂದವುಗಳಾಗಿವೆ.ಹೋಳಿ ಹಬ್ಬದ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಹಲಗೆ ವಾದನ ಕೇಳುವುದೇ ಒಂದು ಸಂಭ್ರಮ.ಹಿರಿಕಿರಿಯರೆನ್ನದೇ ಎಲ್ಲ ವಯೋಮಾನದವರು  ಇಲ್ಲಿ ಹಲಗೆ ನುಡಿಸುತ್ತಾರೆ.ಹಲಗೆವಾದನ ಪ್ರಾರಂಭವಾಗುವದು ಶಹನಾಯಿ ನುಡಿಸುವದರೊಂದಿಗೆ ಮುಖ್ಯ ಕಲಾವಿದನೊಬ್ಬ ದೊಡ್ಡ ಹಲಗೆಯನ್ನು ಹಿಡಿದು ನೃತ್ಯಕ್ಕೆ ಚಾಲನೆ ನೀಡುತ್ತಾನೆ.ಡಪ್ಪಿಗೆ ಸರಿಯಾಗಿ ಚಿಕ್ಕ ಹಲಗೆಯವರು ಪೆಟ್ಟು ಹಾಕುತ್ತಾರೆ.ಜತೆಗೆ ಡಗ್ಗಾ,ಝಮರಿ ಚಳ್ಳಮ,ಕಣಿಯ ವಾದಕರು ಕ್ರಮಬದ್ದ ಹೆಜ್ಜೆ ಹಾಕುತ್ತ ‘ಇನ್ನೂ ಯಾಕ ಬರಲಿಲ್ಲಾವ.. ಹುಬ್ಬಳ್ಳಿಯಾವ..’,’ಚೆನ್ನಪ್ಪ ಚೆನಗೌಡಾ’ ಎಂಬ ಸನಾದಿ ಸೂರಿನೊಡನೆ ತನ್ಮಯವಾಗಿ ಹರ್ಷದಿಂದ ಕುಣಿದು ಕುಪ್ಪಳಿಸುವರು.
ಕಾಮ ದಹನ :
ಬಾಗಲಕೋಟೆಯ ಹೋಳಿ ಆಚರಣೆಯ ಕಾಮದಹನ ಪ್ರಕ್ರಿಯೆಯು ಸಕಲ ಸಮುದಾಯದವರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾಗುತ್ತದೆ.ಹೋಳಿಯ ದಿನ ಕಾಮನನ್ನು ಸುಡುವುದಕ್ಕಾಗಿ ಹುಡುಗರು ಓಣಿಯ ಮನೆಮನೆಯಲ್ಲೂ ಕಣ್ಣು ತಪ್ಪಿಸಿ ಕುಳ್ಳು,ಕಟ್ಟಿಗೆ,ನಿಚ್ಚಣಿಕೆ ಕದ್ದು ತಂದು ಒಂದೆಡೆ ಕೂಡಿಹಾಕುವ ಸಂಪ್ರದಾಯವಿದೆ.ಬಹುತೇಕ ಈ ಸಂಪ್ರದಾಯ ಮರೆಯಾಗಿದೆ.ಕೇಳಿ ಮತ್ತು ಕೊಂಡು ತಂದ ಕಟ್ಟಿಗೆ,ಕುಳ್ಳು ಮತ್ತು ಬಿದಿರುಗಳನ್ನು ರಾಶಿಗಟ್ಟಲೇ ಹೇರಿ ಅದರ ನಡುವೆ ಕಾಮನ ಚಿತ್ರ ಬರೆದು ಚಿತ್ರವನ್ನು ಕೋಲಿಗೆ ಅಂಟಿಸಿ ಕಾಮನಿಗೆ ಪೂಜೆ ಸಲ್ಲಿಸಿ ದಹಿಸಲು ಸಿದ್ದರಾಗುತ್ತಾರೆ.ನಂತರ ಹಲಗೆ ಮೇಳದೊಂದಿಗೆ ನಿಶಾನೆ ಹಾಗೂ ಚಲುವಾದಿ ಬಟ್ಟಲುದೊಂದಿಗೆ ಓಣಿಯ ಶೆಟ್ಟರನ್ನು ಕರೆದುಕೊಂಡು ದಲಿತರ ಓಣಿಗೆ ಹೋಗಿಅಲ್ಲಿ ಖಾತೆದಾರರ ಮನೆಯಲ್ಲಿ ವೀಳ್ಯದೆಲೆ,ಅಡಿಕೆಯನ್ನು ಕೊಟ್ಟು ಅವರನ್ನು ಆಮಂತ್ರಿಸುವ ಸಂಪ್ರದಾವಿದೆ.ಆಚರಣೆಯ ಬಾಬುದಾರರಾದ ಖಾತೆದಾರರ ಮನೆಯಿಂದಲೇ ಬೆಂಕಿ ತಂದು ಕಾಮದಹನ ಮಾಡಲಾಗುತ್ತದೆ.ನಸುಕಿನ ಜಾವದಿಂದ ಆರಂಭವಾದ ಕಾಮದಹನವು ರಾತ್ರಿಯವರೆಗೂ ನಗರದ ವಿವಿಧ ಓಣಿ ಮತ್ತು ಬಡಾವಣೆಗಳಲ್ಲಿ ಪ್ರಮುಖ ಕಾಮಣ್ಣರ ದಹನ ನಡೆಯುತ್ತದೆ.ಮೊದಲು ಹೊತ್ತಿಸಿದ ಬೆಂಕಿಯನ್ನೇ ಎಲ್ಲರೂ ತಂದು ಕಾಮದಹನ ಮಾಡುವುದು ವಿಶೇಷ.ಕಾಮನನ್ನು ಸುಟ್ಟ ದಿವಸ ಅದೇ ಬೂದಿಯಿಂದಲೇ ದೊಡ್ಡವರು ಸಣ್ಣವರೆನ್ನದೇ ಬೂದಿ ಆಟವಾಡುತ್ತಾರೆ.
ಬಣ್ಣದ ಬಂಡಿಗಳು :
ಬಾಗಲಕೋಟೆ ಹೋಳಿಯ ಮುಖ್ಯ ಆಕರ್ಷಣೆ ಬಣ್ಣದ ಬಂಡಿಗಳು.ನೂರಾರು ಎತ್ತಿನ ಗಾಡಿಗಳಲ್ಲಿ ದೊಡ್ಡ ಹಂಡೆಗಳಲ್ಲಿ ಬಣ್ಣ ತುಂಬಿಕೊಂಡುಬಣ್ಣವಾಡುವುದನ್ನು ನೋಡಿ ಕಣ್ತುಂಬಿಕೊಳ್ಳುವುದೇ ಜೀವನದ ಒಂದು ಸಾರ್ಥಕ ಭಾವ.ಬಣ್ಣವಾಡಲು ಇತ್ತೀಚಿಗೆ ಎತ್ತಿನ ಬಂಡಿಗಳ ಬದಲು ಟ್ರ್ಯಾಕ್ಟರ್,ಟ್ರಕ್ಕುಗಳನ್ನು ಉಪಯೋಗಿಸುತ್ತಿದ್ದಾರೆ. ಒಂದೊಂದು ಓಣಿಯವರು ಕನಿಷ್ಟ ಐವತ್ತರಿಂದ ಅರವತ್ತು ಎತ್ತಿನ ಗಾಡಿಗಳಲ್ಲಿ ,ಒಂದೊಂದು ಗಾಡಿಗಳಲ್ಲಿ ನಾಲ್ಕಾರು ಹಂಡೆ,ಇಲ್ಲವೇ ಬ್ಯಾರಲ್ಲುಗಳನ್ನಿಟ್ಟು ಅವುಗಳ ತುಂಬ ಬಣ್ಣ ತುಂಬಿ ಕೇಕೇ ಹಾಕುತ್ತಾ ಹಾದಿ ಬೀದಿಯಲ್ಲಿ ನೆರೆದ ಜನರಮೇಲೆ ಬಣ್ಣ ಎರಚುತ್ತಾರೆ.ಒಂದೊಂದು ಓಣಿಗಳಲ್ಲಿ ಬಂಡಿಯ ಬಣ್ಣದಾಟಕ್ಕೆ ದಿನವನ್ನು ಗೊತ್ತುಮಾಡಲಾಗಿರುತ್ತದೆ.ಹಾಗಾಗಿ ಹಬ್ಬದ 5 ದಿನಗಳ ಕಾಲ ಬಾಗಲಕೋಟೆಯ ಮಾರುಕಟ್ಟೆಯು ಸ್ವಯಂಘೋಷಿತ ಬಂದ್ ಆಗುವದರಿಂದ ವ್ಯಾಪಾರಸ್ಥರು ಇದೇ ವೇಳೆಯಲ್ಲಿಯೇ ಕುಟುಂಬ ಸಮೇತರಾಗಿ ದಕ್ಷಿಣ ಇಲ್ಲವೆ ಉತ್ತರ ಭಾರತ ಪ್ರವಾಸ ಹೋಗಿಬಿಡುತ್ತಾರೆ.ನೌಕರರು ಗೋವ ಮೊದಲಾದ ಬೀಚ ಕಡೆಗೆ ಮುಖ ಮಾಡುತ್ತಾರೆ.ಹೀಗೆ ಸಂಭ್ರಮದ ಹಬ್ಬದಲ್ಲಿ ಊರುಬಿಟ್ಟು ಹೋಗುವ ಮಂದಿಗೆ ಹಾಡಿನಲ್ಲಿಯೇ ಹೀಗೆ ವಿನಂತಿಸಿಕೊಳ್ಳುತ್ತಾರೆ.ಮುತ್ತು ಮಾಣಿಕ್ಯ ಬೇಡ,ಮತ್ತೆ ಸಂಪದ ಬೇಡಹೋಳಿಹಬ್ಬದ ವೈಭವ ಬೇಡನ್ನಬೇಡ ಅಣ್ಣಯ್ಯ .ಎಂದು ಗೋಗರೆಯುತ್ತಾರೆ. ಇತ್ತೀಚಿಗೆ ಹೆಣ್ಣು ಮಕ್ಕಳೂ ಗುಂಪು ಗುಂಪಾಗಿ ಮನೆಮನೆಗಳಿಗೆ ತೆರಳಿ ಬಣ್ಣವಾಡುವ ಸಂಪ್ರದಾಯ ಬೆಳೆದು ಬಂದಿದೆ.
ಸೋಗಿನ ಬಂಡಿಗಳು :
ಬಾಗಲಕೋಟ ಹೋಳಿ ಆಚರಣೆಯ ಸಂದರ್ಭದ ಸೋಗಿನ ಬಂಡಿಗಳು ಭಾರತೀಯ ಪರಂಪರೆಯ ಸಂಸ್ಕøತಿಯ ಅನಾವರಣಕ್ಕೆ ಸಾಕ್ಷಿಯಾಗಿವೆ.ರಾಮಾಯಣ,ಮಹಾಭಾರತದ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ವೇಷ ತೊಟ್ಟು ಬಂಡಿಗಳಲ್ಲಿ ಬಂದು ಪ್ರದರ್ಶಿಸುವ ‘ಸೋಗಿನ ಬಂಡಿಗಳು’ ಬಾಗಲಕೋಟ ಹೋಳಿಗೆ ವಿಶೇಷ ಕಳೆ ಕಟ್ಟುತ್ತವೆ.ಓಕಳಿಯಾಟದಂತೆ ಒಂದೊಂದು ಓಣಿಯವರು ಸೋಗಿನ ಬಂಡಿಗಳ ಪ್ರದರ್ಶನ ಮಾಡುವುದು ಮೊದಲಿನಿಂದಲೂ ಬೆಳೆದು ಬಂದಿದೆ.ಪೌರಾಣಿಕ,ಐತಿಹಾಸಿಕ ,ಸಾಮಾಜಿಕ, ರಾಜಕೀಯ, ಹಾಗೂ ವಿಡಂಬನಾತ್ಮಕ ಸೋಗಿನ ಬಂಡಿಗಳು ಸ್ಥಬ್ಧ ಚಿತ್ರಗಳ ಹಾಗೆ ರಾರಾಜಿಸುತ್ತವೆ.ಬಣ್ಣದ ದಿನದ ರಾತ್ರಿ ಸೋಗಿನ ಬಂಡಿಯಿಂದ ಹಳೆ ಬಾಗಲಕೋಟೆ ಮಾರುಕಟ್ಟೆ ಪ್ರದೇಶ ವಿಜೃಂಬಿಸುತ್ತದೆ.ರಾತ್ರಿಯಾಗುತ್ತಿದ್ದಂತೆ ಜನರ ಕುತೂಹಲ ಕೆರಳುತ್ತದೆ.ಪೌರಾಣಿಕ ಸನ್ನಿವೇಶಗಳಾದ ರಾಮನ ಪಟ್ಟಾಭೀಷೇಕ,ದ್ರೌಪದಿಯ ವಸ್ರಾಪಹರಣ,ಸೀತೆ ಅಶೋಕವನದಲ್ಲಿರುವಾಗ ಮಾರುತಿ ಉಂಗುರ ಕೊಟ್ಟ ಸನ್ನಿವೇಶ ಮೊದಲಾವನ್ನು ಶ್ರೀಮಂತ ವೇಷಭೂಷಣ ತೊಟ್ಟು ,ಪಾತ್ರಗಳನ್ನು ಹಾಕಿ ಸಂಭ್ರಮಿಸುತ್ತಾರೆ.ಸೋಗಿನ ಬಂಡಿಗೆ ಸುಂದರವಾದ ಕಟೌಟುಗಳನ್ನು ಮಾಡಿ ಅವುಗಳಲ್ಲಿ ಪ್ರಮುಖ ಪಾತ್ರಗಳನ್ನು ವೇಷಭೂಷಣಗಳಿಂದ ಅಲಂಕರಿಸುತ್ತಾರೆ.ವೇಷಭೂಷಣಗಳನ್ನು ತಯಾರಿಸಿಕೊಡುವ ಇಲ್ಲವೇ ಬಾಡಿಗೆ ಕೊಡುವ ಕೆಲ ಪ್ರಸಿದ್ದ ಮನೆತನಗಳು ಇಲ್ಲಿವೆ.ಬಾಗಲಕೋಟೆಯ ಪ್ರಖ್ಯಾತ ಕಲಾವಿದರಾದ ನಾವಲಗಿ ಹಾಗೂ ಶಿವಪ್ಪ ಕರಿಗಾರ ಅವರು ಸುಂದರವಾದ ಕಟೌಟ ಮಾಡುವುದರಲ್ಲಿ ಸಿದ್ಧಹಸ್ತರು.ಶಿಂಗಣ್ಣ ರೊಳ್ಳಿ ಮನೆತನದವರು ವೇಷ ಹಾಕಿದವರ ಮುಖಕ್ಕೆ ಬಣ್ಣ ಹಚ್ಚುವ ಪ್ರಸಾಧನ ಕಲೆಯಲ್ಲಿ ಖ್ಯಾತಿ ಪಡೆದಿದ್ದಾರೆ.
ಕಾಮದಹನ,ಬಣ್ಣದ ಬಂಡಿ,ಸೋಗಿನ ಬಂಡಿ ಈ ಎಲ್ಲ ಆಚರಣೆಗಳೊಂದಿಗೆ ವಿವಿಧ ಬಡಾವಣೆಗಳಲ್ಲಿ ‘ಹಲಗೆ ಮೇಳ’ಗಳು ನಡೆಯುತ್ತವೆ.ಸ್ಪರ್ಧಾತ್ಮಕವಾಗಿ ನಡೆಯುವ ಮೇಳಗಳಿಗೆ ಬಹುಮಾನ ನೀಡಲಾಗುತ್ತದೆ.ವಿವಿಧ ವೇಷ ಭೂಷಣಗಳಿಂದ ಕೂಡಿ ತಾಳಕ್ಕೆ ತಕ್ಕಂತೆ ಕುಣಿತ,ಸಂಪ್ರದಾನಿ ವಾದ್ಯದೊಂದಿಗೆ ನೋಡುಗರಿಗೆ ಮುದ ನೀಡುತ್ತಾರೆ.ಮುಳುಗಡೆಯ ಬಾಗಲಕೋಟೆಯಲ್ಲಿ ಯಾವ ಹಬ್ಬದಾಚರಣೆಗಳೂ ಮುಳುಗಿ ಹೋಗದಂತೆ ಹಿಂದಿನ ವೈಭವವನ್ನು ಕಾಯ್ದುಕೊಂಡು ಬರುವಲ್ಲಿ ಇಲ್ಲಿನ ಹಿರಿಯರ ಮತ್ತು ಯುವ ಸಮುದಾಯದವರ ಪಾತ್ರ ದೊಡ್ಡದು.ನಗರದ ಬಾಗಲಕೋಟ ಹೋಳಿ ಆಚರಣಾ ಸಮಿತಿ,ಮಹಾತ್ಮ ಗಾಂಧಿ ರಸ್ತೆ ವರ್ತಕರ ಸಂಘ,ಜ್ಯೋತಿಪ್ರಕಾಶ ಸಾಳುಂಕೆ ಅಭಿಮಾನಿಗಳ ಗೆಳೆಯರ ಬಳಗ,ಕಿಲ್ಲಾಗಲ್ಲಿ,ವಿದ್ಯಾಗಿರಿ,ನವನಗರಗಳ ಗೆಳೆಯರ ಬಳಗ,ಸುಭಾಶಚಂದ್ರ ಭೋಸ ಯುವಕ ಸಂಘ ಹೀಗೆ ಪ್ರತಿಯೊಂದು ಬಡಾವಣೆಗಳಲ್ಲೂ ಗೆಳೆಯರ ಬಳಗ ಕಟ್ಟಿಕೊಂಡು ಬಾಗಲಕೋಟೆ ಹೋಳಿ ಆಚರಣೆಯ ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಕೀರ್ತಿ ಇಲ್ಲಿ ಮುಳುಗಡೆಯೊತ್ತರ ಬಾಗಲಕೋಟೆಯ ಸಮಸ್ತ ಜನತೆಗೆ ಸಲ್ಲುತ್ತದೆ.ಒಟ್ಟಾರೆ ಬಡವ ,ಶ್ರೀಮಂತವೆನ್ನದೇ ಜಾತಿ,ಮತ,ಪಂಥಗಳನ್ನು ಮರೆತು ಮೇಲು ಕೀಳು ಎಂಬ ಮತೀಯ ಭಾವನೆಗಳನ್ನು ತೊರೆದು ಆಚರಿಸುವ ಭಾವೈಕ್ಯದ ಸಂಕೇತವಾದ ಬಾಗಲಕೋಟೆ ಹೋಳಿ ಹಬ್ಬವು ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ.

*ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ ಮೊ.9845500890 *

No comments:

Post a Comment