ಆಧುನಿಕ ಕನ್ನಡ ಕಾವ್ಯದಲ್ಲಿ ಮನುಷ್ಯನ ಹುಡುಕಾಟ
ಕನ್ನಡ ಕಾವ್ಯ ಹರಿವಿನಲ್ಲಿ ನೆಲೆನಿಂತ ಮಾನವತ್ವದ ಪರಿಕಲ್ಪನೆಯ ಓದು ಮತ್ತು ರಸಾನುಭವ ತುಂಬಾ ಆಪ್ತವಾದ ನೆಲೆಯಲ್ಲಿ ಹರವಿಕೊಳ್ಳುತ್ತದೆ. ಮಾನವೀಯತೆಯ ಮೂಲ ಸಂಸ್ಕರಣದಲ್ಲಿ ಉದಿಸಿದ ಯಾವುದೇ ಕಾವ್ಯ ಜನಮುಖಿ ಆಶಯಗಳನ್ನು ಪ್ರಕಟಿಸುತ್ತ ತನ್ನ ಇರುವಿಕೆಯ ಜೀವಸಾರವನ್ನು ಸದಾ ಉಳಿಸಿಕೊಳ್ಳುತ್ತದೆ. ಕನ್ನಡ ನವೋದಯ ಕಾವ್ಯ ಸಂದರ್ಭದ ತಾಕಲಾಟಗಳ ಪರಿ ಹಲವು ಬಗೆಯ ರಚನೆಗಳಿಗೆ ಕಾರಣವಾಗಿದೆ. ಕನ್ನಡ ನವೋದಯ ಕಾವ್ಯ ರೂಪುಗೊಳ್ಳುವ ಹೊತ್ತಿಗಿದ್ದ ರಾಷ್ಟ್ರೀಯತೆಯ ಒಟ್ಟು ಹೋರಾಟದ ತುಮುಲಗಳು ಮತ್ತು ಅನ್ಯರ ಆಕ್ರಮಿತ ಮನೋಭೂಮಿಕೆಯನ್ನು ಒಡೆದು ಹೊಸ ಬದುಕು ಕಟ್ಟುವ ತೀವ್ರತರವಾದ ಹಂಬಲಗಳು ಕಾವ್ಯದ ವಸ್ತು ಹೋರಾಟ ಪ್ರಜ್ಞೆಗೆ ಒಳಗುಮಾಡಿಕೊಂಡಿದ್ದರೂ ಅದರೊಳಗಿನ ನಿಸರ್ಗ ಪ್ರೀತಿ ಮಾನವತೆಯ ಪರ್ಯಾಯ ಸೃಷ್ಟಿಯಾಗಿದೆ.
ವಸಾಹತುಶಾಹಿ ಪ್ರಭುತ್ವದ ಪರಕೀಯ ಹಾಗೂ ಹೇರಿಕೆಯ ಒತ್ತಡಗಳ ವಿರೋಧಿ ನೆಲೆಯನ್ನು ಗಟ್ಟಿಗೊಳಿಸುತ್ತ ಆಧುನಿಕ ಕನ್ನಡ ಕಾವ್ಯ ‘ಮನುಷ್ಯ’ನ ಹುಡುಕಾಟ ನಡೆಸಿದ್ದು ಅದರ ವ್ಯಾಪಕತೆಯ ಹರವನ್ನು ಸೂಚಿಸುತ್ತದೆ. ಬಹು ಸಂಸ್ಕೃತಿಯ ಭಾರತೀಯ ಸಮುದಾಯದಲ್ಲಿ ಮನುಷ್ಯನ ಹುಡುಕಾಟ ನಡೆಸಿದ ಕಾವ್ಯ ಮಾನವೀಯತೆಯ ಅಗತ್ಯಗಳನ್ನು ಮನನ ಮಾಡಿಸುತ್ತ ಸಾಗಿದ್ದು ಕಾವ್ಯ ಶಿಲ್ಪದ ಹೆಚ್ಚುಗಾರಿಕೆಯಾಗಿದೆ.
ಆಧುನಿಕ ಕನ್ನಡ ಕಾವ್ಯದಲ್ಲಿ ನವೋದಯ ಕಾಣಿಸಿಕೊಂಡಾಗ ಅದು ಒಳಗೊಳ್ಳುವ ವಸ್ತುವು ವಿಸ್ತಾರ ಹಾಗೂ ವ್ಯಾಪಕವಾಯಿತು. ಈ ವಿಸ್ತಾರ ಮತ್ತು ವ್ಯಾಪಕತೆಯು ಮಾನವೀಯ ನೆಲೆಗಟ್ಟಿನಲ್ಲಿ ರೂಪಿತವಾಯಿತು. ನಿಸರ್ಗಮುಖಿಯಾದ ನವೋದಯ ಕಾವ್ಯ ನಿಸರ್ಗದಲ್ಲಿ ದೇವರು ಮತ್ತು ಮಾನವತ್ವದ ಪರಿಕಲ್ಪನೆಯನ್ನು ಒಡಮೂಡಿಸಿತು. ನಿಸರ್ಗ ಮತ್ತು ಮಾನವತ್ವದ ಬೆಸುಗೆ ಅನನ್ಯವಾದುದು. ಈ ಅನನ್ಯತೆಯನ್ನು ಗಟ್ಟಿಗೊಳಿಸಿದ್ದು ನವೋದಯ ಕಾವ್ಯ. ಕವಿ ವಿಮರ್ಶಕ ಜಿ. ಎಸ್. ಶಿವರುದ್ರಪ್ಪನವರು ಗುರುತಿಸುವಂತೆ, ‘ನವೋದಯ ಕಾವ್ಯ ವಸ್ತುವನ್ನು ಪ್ರಾಚೀನ ಇತಿಹಾಸದಿಂದ ಪುರಾಣಾದಿಗಳಿಂದ ನಿಸರ್ಗಕ್ಕೆ ಸ್ಥಳಾಂತರಿಸಿತು. ಹಾಗೆಯೇ ಹಿಂದೆ ಇದ್ದ ಮತ ಧರ್ಮದ ಸ್ಥಾನವನ್ನು ಈ ಕಾಲದಲ್ಲಿ ಸೌಂದರ್ಯ ಧರ್ಮ ಆಕ್ರಮಿಸಿಕೊಂಡಿತು’ ಈ ಸೌಂದರ್ಯ ಧರ್ಮ ರೂಪಿಸಿದ ಮನುಷ್ಯಾಭಿಲಾಷೆಗಳು ಕಾವ್ಯದ ಅಭಿವ್ಯಕ್ತಿಯ ರೂಪ ಪಡೆದವು.
ಆದಿಮಾನವ ಆಧುನಿಕ ನಾಗಕರಿಕನಾದಂತೆ ಅವನ ಆಚಾರ ವಿಚಾರ ರೀತಿ ನೀತಿ ನಡವಳಿಕೆ ಸಂಸ್ಕೃತಿಗಳಲ್ಲಿ ಬದಲಾಗತ್ತಾ ಬಂದು ಮಾನವತ್ವದ ಪರಿಧಿಯನ್ನು ಮೀರುವಂತಾಯಿತು. ಈ ಅತ್ಯಾಧುನಿಕ ಮನುಷ್ಯನ ಹುಡುಕಾಟಕ್ಕೆ ಆಧುನಿಕ ಕನ್ನಡ ಕಾವ್ಯ ಸಜ್ಜುಗೊಂಡು ಅವನ ಅಂತರ್ಗತ ವಿಮುಖತೆಗಳನ್ನು ಬಯಲು ಮಾಡಿ ನಿಜ ಮಾನವನ ದರ್ಶನ ಮಾಡಿಸಿತು. ಕವಿ ಸಿದ್ಧಯ್ಯ ಪುರಾಣಿಕರು ಸಾರಿದ ‘ಮೊದಲು ಮಾನವನಾಗು’ ಕವಿತೆ ಮನುಷ್ಯನ ಆದಿ ಅಂತ್ಯದ ಸಾರ್ಥಕತೆಯನ್ನು ಸಾರುತ್ತದೆ.
ರಾಜಕಾರಣಿಯಾಗು ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು
ಏನಾದರೂ ಆಗು ನೀ ಬಯಸಿದಂತಾಗು
ಏನಾದರೂ ಸರಿಯೇ ಮೊದಲು ಮಾನವನಾಗು.
ಮನುಷ್ಯ ಜೀವನ ಹಲವು ಹತ್ತು ಮಜಲುಗಳಲ್ಲಿ ಗುರುತಿಸಿಕೊಳ್ಳುತ್ತ ಪೊರೆ ಕಳಚಿಕೊಳ್ಳುತ್ತ ಸಾಗುತ್ತದೆ. ಈ ಸಾಗುವ ದಾರಿಯ ಏರಿಳಿತಗಳಲ್ಲಿ ತಾನು ತನ್ನ ಗ್ಪಟ್ಟಿತನವನ್ನು ಸಾರಬೇಕಾದುದು ‘ಮೊದಲು ಮಾನವನಾಗಿ’ ಎಂಬ ಕವಿಯ ಮಂತ್ರ ಹೆಚ್ಚು ಸಾಧುವು ಮತ್ತು ಸಾರ್ಥಕವೂ ಆಗಿದೆ. ಅವರದೇ ಇನ್ನೊಂದು ಕವಿತೆಯಲ್ಲಿ ‘ಕಾವ್ಯಾನಂದ’ ಸಿದ್ಧಯ್ಯ ಪುರಾಣಿಕರು ಹೇಳುವುದು ಹೀಗೆ.
ಹಸಿರಿಲ್ಲದಲ್ಲಿ ಹಸಿರು ಹುಟ್ಟಿಸುವುದು ಮಾನವ ಗುಣ
ಹಸಿರಿದ್ದಲ್ಲಿ ಮೆದ್ದು ಮಲಗುವುದು ಪಶು ಗುಣವಯ್ಯ
ತುಂಬಾ ಸರಳವಾದ ತಾತ್ವಿಕತೆಯಲ್ಲಿ ಕವಿ ಪುರಾಣಿಕರು ಮಾನವ ದಾನವರ ವ್ಯತ್ಯಾಸ ಸ್ಪಷ್ಟಪಡಿಸುತ್ತ ಮಾನವತ್ವದ ಗುಣಗಳನ್ನು ಸಾರುತ್ತಾರೆ.
ಕವಿ ಕುವೆಂಪು ಅವರು ಮನುಷ್ಯನನ್ನು ಮನಸ್ಸುಳ್ಳ ಜೀವಿ ಎಂದು ಸಾರಿ ಮಾನವತೆಯಲ್ಲೂ ವಿಶ್ವಮಾನ್ಯಗೊಳಿಸುವಲ್ಲಿ ಕಾವ್ಯವನ್ನು ದುಡಿಸಿಕೊಳ್ಳುತ್ತಾರೆ. ‘ನಾವು ನಮ್ಮನ್ನು ಹೆಸರಿಸಿಕೊಳ್ಳುವಾಗ ಆನೆಯೆಂದು ಕರೆದುಕೊಂಡಿಲ್ಲ, ಕುದುರೆ ಎಂದು ಕರೆದುಕೊಂಡಿಲ್ಲ, ಮನುಷ್ಯ ಎಂದು ಕರೆದುಕೊಂಡಿದ್ದೇವೆ. ಬಹುಶಃ ಉಳಿದವುಗಳಿಗಿಂತ ಹೆಚ್ಚಾಗಿ ಮನಸ್ಸುಳ್ಳ ಜೀವಿ ಎಂದು ನಮ್ಮನ್ನು ನಾವೇ ಗುರುತಿಸಿಕೊಂಡಿದ್ದೇವೆ’ ಎಂಬ ಕುವೆಂಪು ಅವರ ಮಾತುಗಳು ಪ್ರಾಣಿಗಳಿಗಿಂತ ಭಿನ್ನವಾದ ಮನುಷ್ಯನನ್ನು ಗುರುತಿಸಲು ಅಲ್ಲಿ ನೆಲೆ ನಿಂತ ಮನಸ್ಸು’ ಆಗಿದೆ. ಈ ಮನಸ್ಸು ವಿಶಾಲವಾಗಬೇಕು. ವಿಶ್ವಮಾನ್ಯವಾಗಬೇಕೆಂದು ಕುವೆಂಪು ಅವರ ಆಶಯ.
ಭಾರತೀಯ ಮನಸ್ಸುಗಳು ಅನಾದಿಕಾಲದಿಂದಲೂ ವಿಶ್ವಮೈತ್ರಿಗಾಗಿ ದುಡಿಯುತ್ತ ಬಂದಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿಕೊಂಡು ಬಂದ ಹಾಗೆ ನಮ್ಮವರು ‘ಲೋಕಾಸಮಸ್ತಾಃ ಸುಖಿನೋ ಭವಂತು’ ಎಂಬ ಶಾಂತಿ ಮಂತ್ರವನ್ನು ಘೋಷಿಸಿ ತಮ್ಮ ಆದರ್ಶವನ್ನೂ ಸಾರಿದ್ದಾರೆ. ಈ ಮೈತ್ರಿಯ ವಾತಾವರಣವಿಲ್ಲದಿದ್ದರೆ ಇಂದು ನಮ್ಮ ಹಿಮಾಲಯವೂ ಕೂಡ ‘ಭಗ್’ ಎಂದು ಹೊತ್ತಿಕೊಳ್ಳುತ್ತಿತ್ತು. ಆದರೆ ಈ ಮೈತ್ರಿಯ ಭಾವನೆ ಜಗತ್ತನ್ನು ವ್ಯಾಪಿಸಿರುವುದರಿಂದ ಹಿಮಾಲಯ ಇನ್ನೂ ತಣ್ಣಗೆ ಉಳಿದುಕೊಂಡಿದೆ. ನಮ್ಮ ಜನ ವಿಶ್ವಪ್ರಜ್ಞೆಯನ್ನು ಪಡೆದವರಾಗಿದ್ದರೂ ಆ ವಿಶ್ವಮೈತ್ರಿ ಮತ್ತು ವಿಶ್ವಮಾನವತೆ ನಮ್ಮೆಲ್ಲರ ಹೃದಯದಲ್ಲೂ ಇರಬೇಕು- ಎಂಬ ಆಶಯ ಸಾರುವ ಕುವೆಂಪು ಅವರು ತಮ್ಮ ವಿಶ್ವಮಾನವ ಸಂದೇಶದಲ್ಲಿ ಮನುಜಮತದ ಮಂತ್ರವನ್ನೂ ವ್ಯಾಪಕಗೊಳಿಸಿದ್ದಾರೆ.
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ
ಬಡತನವ ಬುಡಮುಟ್ಟಿ ಕೀಳಬನ್ನಿ
ಮೌಢ್ಯತೆಯ ಮಾರಿಯನ್ನು ಹಿಡಿಯ ಬನ್ನಿ
ಓ ಬನ್ನಿ ಸೋದರರೆ ಬೇಗಬನ್ನಿ
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯರೈ ಲೋಕಹಿತಕೆ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಓ ಬನ್ನಿ ಸೋದರರೆ ವಿಶ್ವಪಥಕೆ.
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣ ದೃಷ್ಟಿ- ಈ ಪದಗಳು ಮಂತ್ರಗಳಾಗಿ ಮನುಷ್ಯರನ್ನು ಜಾತಿ ಮತಗಳಿಂದಲೂ ಭೇದಭಾವಗಳಿಂದಲೂ ಪಾರುಮಾಡಿ ಮನುಜರಿಂದ ನಿಜವಾದ ಪ್ರಜಾಸತ್ತೆ ಮತ್ತು ಸಮಾಜವಾದ ಸ್ಥಾಪನೆಯಾಗಲಿ ಎಂಬ ಹಾರೈಕೆಯಲ್ಲಿ ಕುವೆಂಪು ಅವರು ತಮ್ಮ ಕಾವ್ಯಗಳಲ್ಲಿ ಮನುಷ್ಯತ್ವದ ಹುಡುಕಾಟ ನಡೆಸಿದ್ದಾರೆ. ಕನ್ನಡ ನವೋದಯ ಕಾಲದ ಹಸರಾಂತ ಕವಿ ಡಿ. ವಿ. ಗುಂಡಪ್ಪನವರು ‘ಎಲ್ಲರೊಳಗೆ ಒಂದಾಗುವುದೇ’ ಮನುಷ್ಯನ ನಿಜ ಸಾರ್ಥಕತೆ ಎಂದಿದ್ದಾರೆ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ
ಮಾನವೀಯತೆಯ ಬೇರುಗಳು ಸಡಿಲಗೊಳ್ಳುತ್ತಿದ್ದ ಕಾಲದಲ್ಲಿ ಡಿ. ವಿ. ಜಿ. ಅವರು ಸಾರಿದ ಮಾನವಮುಖಿ ನೀತಿ ಸರಳವಾಗಿದ್ದರೂ ತುಂಬಾ ಮೌಲಿಕವಾಗಿದೆ. ಮನುಷ್ಯ ಕಷ್ಟಸುಖಗಳ ಸಮಭಾಜನದಲ್ಲಿ ಮನುಷ್ಯತ್ವವನ್ನು ಬಿಡಬಾರದೆಂಬ ಅವರ ಮೌಲಿಕ ಚಿಂತನೆ ಮಾನವ ಸಮಾನತೆಯ ಅಗತ್ಯವನ್ನು ಸಾರಿದೆ.
ಕಾವ್ಯಗಾರುಡಿಗ ದ.ರಾ.ಬೇಂದ್ರೆಯವರು ಕಟ್ಟಿಕೊಟ್ಟ ಕಗ್ಗದಲ್ಲಿ ಮನುಷ್ಯನ ಹುಡುಕಾಟ ತುಂಬಾ ಆಪ್ತವಾಗಿಯೇ ಬಂದಿದೆ. ಜನಪದರ ಗೀಗೀ ಪದವನ್ನು ಹೋಲುವ ಬೇಂದ್ರೆಯವರ- ದುಡ್ಡು ದುಡಿತ ಕವಿತೆಯಲ್ಲಿ ಮನುಷ್ಯನ ಬದಲಾಗುತ್ತಿರುವ ಮನಸ್ಥಿತಿಯ ಆತಂಕ ಕಾಣುತ್ತೇವೆ.
ಅಜ್ಜಾ ಆರುತಲಿ ಮುತ್ತ್ಯಾ ಮೂರುತೆಲಿ
ಕಚ್ಚ್ಯಾಡಿ ಗಳಿಸಿದ್ದು ಕಳಿದಾರೋ
ನನ್ನೀನ ಮಂದಿ ಇಂದನ ಇಲ್ಲಾ
ಇಂದಿನವರು ಮುಂದ ಹ್ಯಾಂಗ ಉಳಿದಾರೋ.
ಹೊಲಾ ಮಾಡುವವ್ಗ ನೆಲಾನ ಇಲ್ದಿದ್ದರ
ಬಲಾ ಹ್ಯಾಂಗಾರೆ ಅವಗ ಉಳಿದೀತು
ಹಲಾ ಹಲಾ ಅಂತ ಎತ್ತಿನ್ನ ಗುದ್ದಿದ್ದರೆ
ಬಿತ್ತದ ಹೊಲಾ ಹ್ಯಾಂಗ ಬೆಳದೀತು…
ನಿನ್ನೆಯ ಜನ ಇಂದು ಇಲ್ಲ, ಇಂದಿನವರು ಮುಂದೆ ಹ್ಯಾಗೆ ಉಳಿದಾರು ಎನ್ನುವ ಆತಂಕದೊಂದಿಗೆ ಕವಿ ಮನುಷ್ಯ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ತುರ್ತನ್ನು ಸಾರಿದ್ದಾರೆ. ಬೇಂದ್ರೆಯವರಲ್ಲಿ ಬದುಕು ಹುಡುಕಿಕೊಂಡು ಹೊರಟ ಮನುಷ್ಯನ ದಾರಿಯನ್ನು ಎಚ್ಚರಿಸುವ ಪರಿ ‘ಮನುಷ್ಯ’ನ ಭಾಷ್ಯ ಬರೆದಂತಿದೆ.
ಕಣ್ಣಾಗ ಕಣ್ಣಿದ್ದವರು ಬರೀತಾರ ಕ್ಷೀರಸಾಗರದಾ ನಕಾಶಾ
ಕಾಲಾಗ ಕಣ್ಣಿದ್ದವರು ಕಾಲ ಹಾದೀ ಮಾಡತಾರ ಆಕಾಶಾ
ನತ್ತೀ ಮ್ಯಾಲೆ ಕಣ್ಣಿದ್ದವರಿಗೆ ಗ್ವಾಡಿ ಆಗತದ ಪ್ರಕಾಶ
ಮನುಷ್ಯನ ಸಾಧನೆ ಸಾಧ್ಯತೆಗಳಿಗೆ ಕವಿ ಕೊಡುವ ಪ್ರತಿಮೆ ಪ್ರತೀಕಗಳು ಮಾನವೀಯತೆಯ ನೆಲೆಯನ್ನೇ ಧ್ವನಿಸುತ್ತವೆ.
ತಲೆ ಬಾಗುವವರು ಬಾಳತಾರ
ಹುಲ್ಲು ಬಿದ್ದಾಂಗ
ನೆಲಾ ಅಪ್ಪಿದವರು ತಾಳತಾರ
ಕರಕಿ ಇದ್ದಾಂಗ.
ಬೇಂದ್ರೆಯವರ ಈ ಸಾಲುಗಳು ಭೂಮಿಯೊಂದಿಗೆ ಒಂದಾದ ಮನುಷ್ಯನ ಅವಿನಾಭಾವ ಸಂಬಂಧವನ್ನು ಸೂಚಿಸುತ್ತದೆ. ಮನುಷ್ಯನೊಳಗಿನ ಅಹಂಗಾರಿಕೆಯು ತೊಲಗಿ ಮನುಷ್ಯತ್ವದ ಆಶಯಗಳನ್ನು ನೆಲೆಗೊಳಿಸಿಕೊಳ್ಳಬೇಕೆಂಬ ಬೇಂದ್ರೆಯವರ ಈ ಹಾರೈಕೆಯ ಸಾಲುಗಳು ಮಾನವೀಯತೆಯ ಪ್ರತೀಕಗಳಾಗಿವೆ. ಮನುಷ್ಯ ಮನುಷ್ಯನಿಗೆ ಪ್ರತಿಸ್ಪರ್ಧಿ ಎಂಬ ಭಾವ ಸೂಚಿಸಿ ವೈರತ್ವದ ಸಾಧನೆಯಿಂದ ಮನುಷ್ಯತ್ವ ಕಳೆದುಕೊಳ್ಳುವ ಪರಿಯನ್ನು ಬೇಂದ್ರೆ ಅವರು ಬಹಳ ಸ್ಪಷ್ಟವಾಗಿ ಸೂಚಿಸುತ್ತಾರೆ.
ನೀವೆ ನಿಮ್ಮ ವೈರಿ, ಮನೆಯೊಳಗಿರ್ರಿ,
ಇಲ್ಲಾ ಮಸಣಕ್ಕ ವೈರಿ.
ಅರ್ಥಗರ್ಭಿತವಾದ ಈ ಸಾಲುಗಳು ಮನುಷ್ಯನೊಳಗಿನ ದ್ವೇಷಾಸೂಯೆಗಳನ್ನು ಸುಟ್ಟುಬಿಡಬೇಕೆಂಬ ಸಂದೇಶವಿದೆ. ಈ ಕಾರಣವಾಗಿ ಬೇಂದ್ರೆಯವರು ಮತ್ತೆ ಮತ್ತೆ ಸಾರುತ್ತಾರೆ, ‘ಭೂಮಿ ಎಂಬುದು ಮಣ್ಣು, ಪ್ರಜೆ ಎಂಬುದು ಮಣ್ಣು, ಸುಡಗಾಡು ನಾಗರಿಕತೆ’.
ಕನ್ನಡ ನವೋದಯ ಕಾವ್ಯದ ಅನುಭಾವಿ ಕವಿ ಮಧುರಚೆನ್ನ ಅವರು ಮನುಷ್ಯನ ಅಸ್ತಿತ್ವವನ್ನು ಪ್ರೀತಿಯ ಸೆಳೆತದಲ್ಲಿ ಕಾಣುತ್ತಾರೆ. ಮಧುರಚೆನ್ನರು ಜಾನಪದವನ್ನೂ ಮೈಗೂಡಿಸಿಕೊಂಡ ಕವಿ. ಹೀಗಾಗಿ ಅವರ ಕಾವ್ಯದಲ್ಲಿ ಜಾನಪದೀಯ ಮನುಷ್ಯನನ್ನು ಹುಡುಕುತ್ತೇವೆ. ಮಧುರಚೆನ್ನರ ಅನುಭಾವ ಮಾರ್ಗ ಸೃಷ್ಟಿ ರೂಪಿತವಾದುದು ಜನಪದರ ನೆಲೆಯಲ್ಲಿ. ತತ್ತ್ವಪದಕಾರರು, ಲಾವಣಿಕಾರರು, ಗರತಿಯರ ಹಾಡುಗಳಲ್ಲಿರುವ ದೈವಪರಗೀತೆಗಳು ಈ ಅನುಭಾವವನ್ನೇರಿ ಸ್ಪುರಿಸಿವೆ. ಶರೀಫ್, ಕಡಕೋಳ ಮಡಿವಾಳೇಶ್ವರರಾಗಲಿ, ಹದಿದಾಸರು, ವಚನಕಾರರಾಗಲಿ ಈ ಅನುಭಾವವನ್ನೂ ತಮ್ಮದಾಗಿಸಿಕೊಂಡಿದ್ದು ಜನಪದದಿಂದಲೇ, ಹೀಗಾಗಿ ಮಧುರಚೆನ್ನರ ಕಾವ್ಯದ ಮನುಷ್ಯನ ಹುಡುಕಾಟ ಅದು ಜಾನಪದೀಯ ನೆಲೆಯ ಪೌಷ್ಠಿಕತೆಯನ್ನು ಸಮೃದ್ಧಗೊಳಿಸಿಕೊಂಡಿದೆ.
ಮನುಷ್ಯನಿಗೆ ‘ಸುಖವು ಬೀದಿಯ ನೆರಳ ದುಃಖವು ದೂಡುವ ಬಿಸಿಲ’ ಎಂದು ಸಾರುವ ಮಧುರ ಚೆನ್ನ ಅವರು
ನಮ್ಮಂಗೆ ಅತ್ತವರು ನಮ್ಮಂಗೆ ಕರೆದವರು
ನಮ್ಮಂಗೆ ಬಾಡಿ ಬೆಂದವರು – ತಂಗೆಮ್ಮ
ಕಡಿಗೊಮ್ಮೆ ಗಟ್ಟಿಗೊಂಡವರು.
ಮನುಷ್ಯ ಬದುಕಿನ ಸುಖ ಸಾಂತ್ವನವನ್ನು ಅರಸುವಲ್ಲಿ ಪಡಬಾರದ ಕಷ್ಟವನ್ನು ತಾಳಿ ಧೃತಿಗೆಡದೆ ಸಾರ್ಥಕ್ಯವನ್ನು ಕಂಡುಕೊಳ್ಳುವ ಪರಿಯನ್ನು ಮಧುರಚೆನ್ನ ಅವರು ಸಾರುತ್ತಾರೆ. ದೇವನಿಗಾಗಿ ಹಂಬಲಿಸುವ ಪರಿಯಲ್ಲಿ ವಿರಹದ ಯಾತನೆ ಇದೆ. ಮನುಷ್ಯರು ಕಾಡುವ ಪರಿ ಅವರ ಸ್ವಭಾವಗಳ ಚಿತ್ರಣ ಮಧುರಚೆನ್ನರ ‘ನನ್ನನಲ್ಲ’ ಕವಿತೆಯಲ್ಲಿದೆ.
ಗಲ್ಲ ಹಿಡಿಯುವ ಕೆಲರು ಗಲ್ಲ ಹಿಂಡುವ ಕೆಲರು
ಬೆಸನಿಸುವ ಕೆಲರು ಬೆದರಿಸುವ ಕೆಲರು
ಕಲ್ಲುಗಳ್ಳುವ ಕೆಲರು ಹಲ್ಲು ಕಿಸಿಯುವ ಕೆಲರು
ಬಲ್ಲವರು ಬಲ್ಲಂತೆ ಬಣಗುತಿಹರು.
ಜನರ ಮನಸ್ಸುಗಳು ಮತ್ತು ಕವಿಯ ಹುಡುಕಾಟದಲ್ಲಿ ಪ್ರಕಟವಾಗುವ ಮಧುರಚೆನ್ನರ ಕಾವ್ಯ ಧ್ವನಿಯನ್ನು ಇಲ್ಲಿ ಗಮನಿಸಿದಾಗ ಮನುಷ್ಯರ ಬಹುಮುಖಿ ಸ್ವಭಾವಗಳ ಚಿತ್ರಣ ಅನುಭವ ವೇದ್ಯವಾಗುತ್ತದೆ. ಜನಸಾಮಾನ್ಯರ ಭಾಷೆ ಮತ್ತು ಅವರ ಬದುಕಿನ ಎಲ್ಲ ಕಷ್ಟ ಸುಖಗಳಿಗೂ ನಾಲಗೆಯಾಗಲೂ ಹೊರಟ ನವೋದಯ ಕಾವ್ಯ ಭಾವ ಭಾಷೆಗಳಲ್ಲಿ ಆವೇಶವಿಲ್ಲದೆ, ಸಾಂಪ್ರದಾಯಿಕ ಮೌಲ್ಯಗಳ ಪ್ರಜ್ಞೆಯ ಅರಿವಿನಲ್ಲಿ ಮನುಷ್ಯನ ಹುಡುಕಾಟ ನಡೆಸಿದೆ. ‘ಸಿರಿವಂತರು ಯುದ್ಧ ಸಾರುತ್ತಾರೆ. ಬಡವರು ಹೋರಾಡಿ ಸಾಯುತ್ತಾರೆ’ ಎಂಬಲ್ಲಿ ಕೆಳಸ್ತರದ ಮಾನವನ ತುಳಿತಕ್ಕೆ ಪ್ರತಿಭಟನೆಯ ಧ್ವನಿಯಾಗುತ್ತಾರೆ. ‘ಪಶ್ಚಿಮದ ಹ್ಯೂಮನಿಸಂ’ ನವೋದಯ ಕಾವ್ಯಕ್ಕೆ ನೀಡಿದ ಮಾನವೀಯ ಸ್ಪರ್ಶ ಮನುಷ್ಯರೊಳಗಿನ ಗುಣಾವಗುಣಗಳನ್ನು ತೋರಗೊಡಲು ಸಾಧ್ಯವಾಯಿತು. ಅನ್ಯಧರ್ಮಿಯ ನೆಲೆಯಿಂದ ತನ್ನ ಅಸ್ತಿತ್ವಕ್ಕೆ ಪರಕೀಯ ಭಾವದಿಂದ ಸ್ಪಂದಿಸುವ ಮನುಷ್ಯನ ಒಳತೋಟಿಯನ್ನು ಕವಿ ಕೆ. ಎಸ್. ನಿಸಾರ್ ಅಹಮದ್ ತುಂಬಾ ವಿಷಣ್ಣವಾಗಿ ನಮ್ಮೆದಿರು ತೆರೆದಿಡುತ್ತಾರೆ.
ನಿಮ್ಮೊಡನಿದ್ದೂ ನಿಮ್ಮಂತಾಗದೆ
ಒಳಗೊಳಗೆ ಬೇರು ಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದೆ ನಿಮ್ಮೊಡನೆ ಕಾಫಿ ಹೀರಿ
ಪೇಪರೋದಿ ಹರಟಿ ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ
ಮಾನವ ಕುಲ ಒಂದೇ ಎಂದು ಸಾರಿದ ಪಂಪನ ಆಶಯಗಳಿಗೆ ವಿಮುಖವಾದ ಜನಮಾನಸದ ನೀತಿಗೆ ಕವಿಯ ವಿಷಾದವಿದೆ. ಒಳಗೊಂದು ಹೊರಗೊಂದು ತೋರುವ ಮನಸ್ಥಿತಿಯ ಮನುಜರ ನಡುವೆ ಬಾಳು ತಳ್ಳುವ ಕಷ್ಟದ ಕಾಯಕವನ್ನು ಕವಿ ಕನವರಿಸುವಲ್ಲಿ ‘ಮನುಷ್ಯ’ರೊಳಗಿನ ಸಂಕುಚಿತತೆ ಅರಿವಾಗುತ್ತದೆ.
ನಾನು ಹುಟ್ಟಿದ್ದು ಸಾಯಲಿಕ್ಕೆ ಅಲ್ಲ
ಸೂರ್ಯ ಚಂದ್ರರ ಕೂಡ ಬದುಕಲಿಕ್ಕೆ
ಎಂಬ ಸಾಲುಗಳ ಮೂಲಕ ತಮ್ಮ ‘ಚಕ್ರವರ್ತಿಯಾಗುತ್ತೇನೆ’ ಕವಿತೆ ಆರಂಭಿಸುವ ಡಾ.ಎಂ.ಎಂ.ಕಲಬುರ್ಗಿ ಅವರು
ಹಿಮದಂತೆ ಹೆಪ್ಪುಗಟ್ಟದೆ
ಇಳಿಯುತ್ತೇನೆ, ದುರ್ಜನರ ಎದೆಯಲ್ಲಿ
ದೊಡ್ಡದಾಳಿಯಾಗಿ,
ಸುಳಿಯುತ್ತೇನೆ ಸಜ್ಜನರ ಪ್ರಾಣದಲಿ
ಪ್ರಾಣವಾಯುವಾಗಿ.
ಎಂಬಲ್ಲಿ ಕಲಬುರ್ಗಿಯವರು ಮನುಷ್ಯನ ಹೋರಾಟ ಪ್ರಜ್ಞೆಯನ್ನು ಜಾಗೃತಗೊಳಿಸುತ್ತ ಮನುಷ್ಯನ ಸಾರ್ಥಕತೆಯನ್ನು ಪ್ರಕಟಪಡಿಸಿದ್ದಾರೆ. ಕಮಲಾ ಹಂಪನಾ ಅವರು ಸ್ತ್ರೀ ಸಂವೇದನೆಯ ತಮ್ಮ ಕವಿತೆಯಲ್ಲಿ ಪುರುಷ ವಿರೋಧಿ ನೆಲೆಯಿಂದ ಬಿಡಿಸಿಕೊಂಡು ಸ್ವತಂತ್ರರಾಗಿ ಯೋಚಿಸುವ ಗಟ್ಟಿತನ ಕಾಣುತ್ತೇವೆ.
ನಾನು ಸೀತೆಯೂ ಅಲ್ಲ
ಅವನೊಡ್ಡಿದ ಅಗ್ನಿಕುಂಡ ಹಾಯಲು
ಕೆಳಗೆ ಬಿದ್ದ ಅವನ ಮೇಲೆತ್ತಲು
ನನ್ನಂತೆಯೆ ನೀನು ಎಂದು
ಅವನು ನನ್ನನ್ನೂ ಕಂಡಾಗ
ನಾನೊಬ್ಬ ಮಾನವಳು
ನಾನು ನಾನಾಗಿಯೇ ಉಳಿಯುವೆ ಕಮಲಾಪ್ರಿಯ
‘ನಾನೊಬ್ಬ ಮಾನವಳು’ ಎಂಬಲ್ಲಿ ಡಾ.ಕಮಲಾ ಹಂಪನಾ ಅವರು ವಿಶಾಲಾರ್ಥದಲ್ಲಿ ಸ್ತ್ರೀ ಸಮುದಾಯವನ್ನು ಕಂಡಿದ್ದಾರೆ. ಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಗಳು ಮನುಷ್ಯನ ಹುಡುಕಾಟದಲ್ಲಿ ಒಲುಮೆಯ ನೆಲೆಯನ್ನು ಕಂಡು ಕೊಂಡಿವೆ. ಕವಿ ತುಂಬಾ ಆಶಾವಾದಿಯೂ ಮನುಷ್ಯರೊಳಗೆ ಬಯಕೆಗಳಿಗೆ ರೆಕ್ಕೆಪುಕ್ಕ ನೀಡಿದ್ದಾರೆ. ಮನುಷ್ಯನನ್ನು ರೂಪಿಸಿದ ಶಕ್ತಿಗೆ ಕವಿ ಮೊರೆ ಹೋಗುತ್ತಾರೆ.
ದೀಪವೂ ನಿನ್ನದೆ ಗಾಳಿಯೂ ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ ಹಡಗೂ ನಿನ್ನದೆ
ಮುಳುಗದಿರಲಿ ಬದುಕು.
ಬದುಕು ಕಟ್ಟಿಕೊಡುವ ಅಗೋಚರ ಶಕ್ತಿಗೆ ಕವಿ ಆಶಾವಾದಿ ಕಾಣುವಲ್ಲಿ ಒಲುಮೆಯ ಸ್ಪರ್ಶವಿದೆ. ರಾಜಕಾರಣದಲ್ಲಿ ತೊಡಗಿಕೊಂಡೂ ಕವಿ ಮನಸ್ಸನ್ನೂ ಆರದ ನಾಲುಗೆಯಂತೆ ಕಾದುಕೊಂಡು ಬಂದ ಕವಿ ವೀರಪ್ಪ ಮೊಯ್ಲಿ ಅವರು ಮನುಷ್ಯನ ಹುಡುಕಾಟದಲ್ಲಿ ಸಮಾನತೆಯ ಮಂತ್ರವನ್ನು ಸಾರುತ್ತಾರೆ. ಮೊಯ್ಲಿ ಅವರ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಕೃತಿಯಲ್ಲಿ ‘ಪ್ರಜಾರೋಗ್ಯ ಕೆಡಿಸಿ ಗಳಿಸುವ ದ್ರವ್ಯವದೇಕೆ? ಒಬ್ಬರನೊಬ್ಬರು ತಿಂದು ಬದುಕುವದೆ ಮರಣ, ಒಬ್ಬರನೊಬ್ಬರು ಅರಿತು ಬಾಳುವುದೇ ಜೀವನ’ ಎಂದು ಸಾರುತ್ತಾರೆ. ದಶರಥನ ಮಾತುಗಳಲ್ಲಿ ಮಾನವ ಕುಲದ ಸಮಾನತೆ ಸಾರುತ್ತಾನೆ.
ಆರು ಕಟ್ಟಿದರು ಅಭೇದ್ಯ ಬಡತನದ ಕೋಟೆಯನು?
ತಡೆಯದೇ ಕೆಡಹಿಬಿಡಿ ಸುಟ್ಟು ಬಿಡಿ ಈ ಭೇದ
ಗುಮ್ಮಟವ.
ಋತ್ವಿಜರು ಅಂತ್ಯಜರು ರಾಜ ಪ್ರಜಾಕೋಟಿಗಳು
ಸರ್ವರೂ ಸಮರಿಲ್ಲಿ ಭೇದಭಾವವ ನೀಚ
ಪದ್ಧತಿಯ ಸಲ್ಲರೈ
ಮಾನವತೆಯ ಮೆರೆಯಬೇಕು, ಮೂಕ ಜನತೆಗೆ ಧನಿ ನೀಡಬೇಕೆಂಬ ಆಶಯದೊಂದಿಗೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ವನಿಯನ್ನು ಕವಿ ಮೊಯ್ಲಿ ಅವರು ನೀಚ ಪದ್ಧತಿ ತೊಲಗಲಿ ಎಂದು ಗುಡುಗಿದ್ದಾರೆ. ಮನುಷ್ಯ ಎಷ್ಟೇ ದೊಡ್ಡವನಾಗಿ ಕಂಡರು ತನ್ನ ವಿಶಾಲವಾದ ಮನೋಭೂಮಿಕೆಯಲ್ಲಿ ತನ್ನನ್ನು ತಾನು ಕಂಡಾಗ ತನ್ನ ನಿಲುವು ಅರಿವಾಗುತ್ತದೆ. ಕವಿ ಚೆನ್ನವೀರ ಕಣವಿ ಅವರು ತಾಯಿಯ ಮಡಿಲಲ್ಲಿ ಮನುಷ್ಯನ ಮಿತಿಯನ್ನು ಈ ಪುಟ್ಟ ಸಾಲುಗಳಲ್ಲಿ ಹೀಗೆ ಸಾರಿದ್ದಾರೆ.
ಗುಬ್ಬಿಯ ಪುಟ್ಟ ಆಕೃತಿ
ಮರೆಯಾಗಿ
ತಾಯಿಯ ವಿಶಾಲ ಹೃದಯದಲ್ಲಿ
ಕರಗಿ
ಹೋಗುತ್ತೇನೆ ನಾನು ಜೀವಂತವಾಗಿ
ಹೌದು. ಮನುಷ್ಯನ ಅಸ್ತಿತ್ವವೇ ಒಂದು ಅದ್ಭುತ. ಅದು ಬೃಹತ್ತಾಗುವ, ಮಹತ್ತಾಗುವ, ಕಿರಿದಾಗುವ, ಅಣುವಾಗುವ ಪರಿಯಲ್ಲಿ ಏನೆಲ್ಲಾ ಎಷ್ಟೆಲ್ಲ ತಿರುವುಗಳು. ಕೊನೆಗೆ ಅಳಿದಾಗ ಯಾರು ಕೇಳುತ್ತಾರೆ ಹೇಳಿರಣ್ಣ? ವಚನಕಾರರು ಸಾರಿದಂತೆ ‘ನೆಲನಾಳ್ದನ ಹೆಣವ ಒಂದಡಕೆಗೆ ಕೊಂಬವರಿಲ್ಲ’!
No comments:
Post a Comment