Wednesday, 1 January 2014

ಹೊಸ ವರ್ಷಕ್ಕೆ ಕವಿತೆ.

ಕಾಲವತಿಯ ಹೆರಿಗೆ

************














- ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ

ಇರುವ ಇಳೆಯ ಮೇಲೆ
ಮತ್ತೆ ಮತ್ತೆ ಕಾಲವತಿಯ ಹೆರಿಗೆ
ವರುಷವೆಂಬುದು ಗುರುತಿಗೊಂದು ಗೆರೆ

ಸುರುಳಿಸುತ್ತಿ ಮೂಲೆಗಿಟ್ಟರೂ
ಬಿಚ್ಚಿಕೊಳ್ಳುವ ಚರಿತ್ರೆ
ಹುಡುಕಾಟದ ನೆಲೆಯಲ್ಲೂ
ಬರಿದಾಗುವ ಒರತೆ

ಬಂಡಿಗಾಲಿ ಉರುಳಿ ತಂತು
ತಾರು ಮಾರು ಕಾರು
ಯಾರಿಗುಂಟು ಯಾರಿಗಿಲ್ಲ
ನಾಯಿ ಮೊಲೆ ಹಾಲು

ಶಿಲಾಯುಗದ ಪಳಿಯುಳಿಕೆ
ಬಿಚ್ಚದಿರಿ ತದುಕಿ
ಕಂಪ್ಯೂಟರಕೆ ತುರುಕಿ ಬಿಡಿ
ನಾಳೆಗಳನ್ನೂ ಹುಡುಕಿ

ಹೊಸತಾಗಿರುವ ಬಿಳಿಯ ಗೋಡೆಗೆ
ಚಿತ್ತಾರದ ಬಯಕೆ
ಹುಚ್ಚುಗುದುರೆ ಏರಿ ಬಂದು
ಚೆಲ್ಲದಿರು ರಕ್ತಸಿಕ್ತ ಹೊದಿಕೆ

ಮತ್ತೆ ಮತ್ತೆ ಕಾಲವತಿಯ ಹೆರಿಗೆ
ವರುಷವೆಂಬುದು ಗುರುತಿಗೊಂದು ಗೆರೆ.
**********************

No comments:

Post a Comment