ವಿಜಯ ಕರ್ನಾಟಕ-ವಿಜಯ next ದಲ್ಲಿ ಪ್ರಕಟವಾದ ಕಥೆ ..
ಭೂಮಿ ತಲ್ಲಣಿಸ್ಯಾವ…
- ಡಾ. ಪ್ರಕಾಶ. ಗ. ಖಾಡೆ,ಬಾಗಲಕೋಟ
"ಅನ್ನೇ ಇದ್ದರ ಮುಳಗತದ ಪುಣ್ಣೇ ಇದ್ದರ ತೇಲತದ" ಅನಕೊಂತ ಸಿದ್ದಪ್ಪಜ್ಜ ತನ್ನ ತೆಲಿಮ್ಯಾಗಿನ ಪಟಗಾ ಕೈಗಿ ತುಗೊಂಡು ಬೀಸಿ ಹೇಳಿ ಹ್ವಾದ. ಇವ ಹೀಂಗ ಅನಕೊಂತ ಹ್ವಾದ ಮ್ಯಾಲ ಕೂಡಿದ ಮಂದಿ ಏನೇನೋ ಗೊಣಗಿಕೊಂತ ಒಬ್ಬಬ್ಬರ ಎದ್ದಹ್ವಾದ್ರು. ಆದ್ರ ಕಡೀಕ ಕಟ್ಟಿಮ್ಯಾಲ ಉಳಿದ ಒಬ್ಬನ ಸತ್ಪುರುಷ ಸ್ವಾಮಿ ಏಳಲಾರದ ಅಲ್ಲೇ ಕುಂತು ಸಿದ್ದಪ್ಪಜ್ಜನ ಮಾತು ಮತ್ತ ಮತ್ತ ಮೆಲಕ ಹಾಕಾಕ ಹತ್ತಿದಾ.
ಹೌದಲ್ಲ ನಾನೂ ನೋಡ್ತ ಇಷ್ಟ ವರ್ಷ ಕಳಿದೆ, ಈ ಊರ ಅನ್ನೋದು ಮೊದಲ ಹ್ಯಾಂಗಿತ್ತು. ಈಗ ನೋಡಿದರ ಕಾಣುದೆಲ್ಲಾ ಬರೀ ಕಲ್ಲು ಕಲ್ಲು. ನಾ ಊರಿಗಿ ಬಂದಾಗ ಎಷ್ಟು ಹಸಿರಿತ್ತು, ಎಷ್ಟ ನೀರಿತ್ತು, ಏನ ಸೊಗಸಿತ್ತು. ಗುಬ್ಬಿ ಗ್ವಾಳೆ ಆಗಿ ಓಣಿ ತುಂಬ ಚೆಲ್ಲಿದ ಕಾಳು ತಿಂದು ಕುಣಕೊಂತ ಹಾರಾಡತ್ತಿದ್ದವು ಊರತನಾ ನವಿಲಗೋಳ ಬಂದು ಕುಣಿಕುಣಿದ ಹೋಗತಿದ್ವು. ಊರ ಬಾಜೂ ಒಟ್ಟಿದ ಬಣವಿಗಳ ಮ್ಯಾಲ ಅವುಗಳ ನರ್ತನ ನೋಡೋದ ಬಂದ ಛಂದ. ಛೇ ಈಗ ಎಲ್ಲಾ ಎಲ್ಲೇತಿ? ಸೇದು ಬಾವ್ಯಾಗ ತಳದಾಗ ನೀರ ಎಷ್ಟ ಸ್ವಚ್ಛ ಇರತಿದ್ದವು. ಕೆಳಗಿನ ಮೀನು, ಆಮಿ ಹ್ಯಾಂಗ ಹೊಳಪಿಂದ ಕಾಣತಿದ್ದವು. ಈಗ ಏನ ಆಗೇತಿ, ಸೇದು ಭಾವಿ ಕಲ್ಲು, ಮಣ್ಣು, ಕಸಕಡ್ಡಿ ತುಂಬಿ ಹಾವು ಚೇಳಿನ ಗೂಡ ಆಗೇತಿ. ಸೇದು ಗುಂಡದಾಗ ಎಷ್ಟ ಚೆಂದ ಸೆಲಿ ಉಕ್ಕಿ ಬರತಿತ್ತು. ಎಂಥಾ ತಿಳಿನೀರ. ತೆಂಗಿನ ತಿಳಿನೀರಕ್ಕಿಂತ ಗುಡ್ಡದಾನ ಸೆಲಿಯಿಂದ ಬರೋ ನೀರ ಎಷ್ಟ ಸವಿ. ಈಗ ಸೇದುಗುಂಡ ಎಲ್ಲೈತಿ ಅಂತಾ ಹುಡುಕಬೇಕಾಗೇತಿ. ವರ್ಷಾ ತುಂಬಿ ಹರೀತಿದ್ದ ಹಳ್ಳ, ಗಂಗಾಮಾತಾ ಗುಡಿ ಹಿಂದಿನ ದಬದಬಿ, ಸೋಪಾನ ಕಟ್ಟಿ ಮುಂದಿನ ಆಳವಾದ ನೀರಿನ ಹೊಂಡ, ಸುತ್ತ ಹಬ್ಬಿದ ಹಸಿರ ಸೊಬಗ ಈಗ ಎಲ್ಲಾ ಎಲ್ಲಿ ಹ್ವಾದವೋ..... ಹೀಂಗ ಅನಕೊಂತ ಸತ್ಪುರುಷ ಸ್ವಾಮಿ ಮುಗಿಲ ನೋಡಕೊಂತ ಕುಂತ. ಮತ್ತ ಮತ್ತ ಅವನ ಮನಸ್ಸಿನ್ಯಾಗ ಸಿದ್ದಪ್ಪಜ್ಜ ಹೇಳಿ ಹೋದ ಮಾತ ಕಟಿಯಾಕ ಚಾಲೂ ಮಾಡಿತು. "ಅನ್ನೇ ಇದ್ದರ......"
ಈ ಮಣ್ಣು ಈ ಗಾಳಿ ಈ ನೀರು ಹಿರಿಯಾರ ತಲೆಮಾರಿನಿಂದ ಮುಕ್ತವಾಗಿತ್ತು .ಈಗ ಏನಾಗೇತಿ ನೀರು ಗಾಳಿ ಮಾರೋದು ಬಂದೈತಿ.ಊರ ಹಳ್ಳದಾಗ ತಿಳಿನೀರ ತೆರಿ ಒಡದ ನೀರ ತರೋ ಖುಷಿ ಈಗ ಎಲ್ಲೈತಿ.ನಳಕ್ಕ ಪಾಳಿ ಹಚ್ಚಿ ಬೆಳತಾನ ನಿಂದ್ರು ಬದಲಿ ರೂಪಾಯಿ ಹಾಕಿ ನೀರ ತುಂಬಿಕೊಳ್ಳುದು ಬಂದೈತಿ.ಎಲ್ಲಾ ದುಡ್ಡಿನ ಮ್ಯಾಲ ನಿಂತೈತಿ. ಮನಿ ಮನಿಗಿ ಮಜ್ಜಿಗಿ ಹಂಚಿ ಉಣ್ಣೋ ಕಾಲ ಹೋಗಿ ಮಜ್ಜಿಗಿ ಮಾರೋದು ಬಂದ ಮ್ಯಾಲ ಈಗ ನೀರ ಕೊಳ್ಳೋ ಗತಿ ಬಂದೈತಿ .ಎಂಥಾ ಕಾಲ ಬಂತು. ಈ ಭೂಮಿ ಮ್ಯಾಗ ಎಷ್ಟ ಅನ್ನೇ ಆಗಿಲ್ಲ, ನ್ಯಾಯ ಅನ್ನೋದು ಜಗದಾಗ ಬೆಂಕಿಯಾಗಿ ಉರದ ಹೋಗಿರೊ ಬೂದಿ ಆಗೇತಿ. ಬೂದಿನ ಫ್ಯಾಕ್ಟರಿಗೆ ಕಳಿಸಿ ಮತ್ತ ಮೊದಲಿನಂಗ ಮಾಡ್ರಿ ನೋಡೋಣಂತ ಯುನಿವರ್‍ಸಿಟಿ ಆಧ್ವಾನ ಪ್ರೊಫೆಸರ್‍ಗಳಿಗೆ ಬುಲಾವ ಹೋಗಿದ್ದ ಸಂಗತಿ ಟಿ.ವ್ಹಿ.ಯವರು ಲೈವ್ ಇಟ್ಟು ಒಂದ ಸವನ ಬಿತ್ತರಿಸಲಾಕ ಹತ್ಯಾರ. ನೋಡವರ ಸಹಿತ ಫೋನ್ ಮಾಡಿ ಭಾಗವಹಿಸಬೇಕಂತ ಹೇಳಿದಮ್ಯಾಲ, ಇದಕ್ಕಾಗಿನ ಖಾಲಿ ಕುಂತ ಮಂದಿ ತಮ್ಮದೂ ಅನಿಸಿಕಿ ಹಂಚಗೊಂಡ, ಬಂತ ನೋಡ್ರಿ ನಂದೂ ಮಾತ ಅಂತ ಸಂಜೀಮುಂದ ಕೂಡಿದ ಗೆಳೆಯರಿಗಿ ಬಾರಿಗಿ ಕರಕೊಂಡ ಹೋಗಿ ಪಾರ್ಟಿ ಕೊಟ್ಟಾರ.
ಪಾರ್ಟಿಯೊಳಗ ಕಂಠಮಟ ಕುಡದ ಗೆಳೆಯಾರು ದೇಶದ ಕಥಿ, ದೇಶದಾಗ ಇರೋ ರಾಜಾನ ಕಥಿ, ರಾಜಾನ ಮಂದಿ ಮಕ್ಕಳು ಹಳ್ಳಿಮಂದಿಯ ಕೌದಿ ತುಡುಗಮಾಡಿ ಬಗಲಾಗ ಸುತಗೊಂಡ ಹೋದ ಕಥಿ, ಕೌದ್ಯಾಗ ನೂರ ತೂತು ಬಿದ್ದು ತುಂಬಿಕೊಂಡಿದೆಲ್ಲಾ ಸೋರಿ ಹೋಗಿ ಯಾರೇರ ಬಳಕೋಳ್ರಿ ಅನ್ನೋ ಕಥಿ, ಬಳಕೊಂಡವರು ಬಡವರಲ್ಲಾ ಸಾವ್ಕಾರ ಅನ್ನೋ ಕಥಿ, ಸಾವ್ಕಾರ ಮತ್ತ ಸಾವ್ಕಾರ ಆಗೋದು ಬಡವರು ಬಡವರಾಗೇ ಸಾಯೋ ಕಥಿ, ಸಾವ್ಕಾರು ಯುದ್ಧ ಸಾರತಾರ ಬಡವರು ಬಡಿದಾಡಿ ಸಾಯ್ತಾರ ಅನ್ನೋ ಕಥಿ ,ಒಂಟಿ ಹೆಣಮಕ್ಕಳ ಮ್ಯಾಲ ನೀಚ ಮಂದಿ ಕಣ್ಣ ಹಾಕಿದ ಕಥಿ,ನೋಡ ನೋಡತ ದೊಡ್ಡ ಮಠಾ ಕಟ್ಟಿದ ಸ್ವಾಮಿಗೋಳ ಕಾಮದ ಕಥಿ, ದೊಡ್ಡ ಮಂದಿ ಅನಿಸಿಕೊಂಡವರು ಜೇಲಿಗಿ ಹೋಗಿ ಬಂದು ಲಜ್ಜಿಗೆಟ್ಟು ತಿರುಗೋ ಕಥಿ ಹೀಂಗ ಎಲ್ಲ ಹೇಳಿ, ಕೊನಿಗೆ ಬಿಲ್ಲ ಕೊಡುವಾಗ ಕಿಸೆದಾಗ ಉಳಿದ ಎಲ್ಲಾರದು ದುಡ್ಡ ಗ್ವಾಳೆ ಮಾಡಿ ಮಾಲಕಗ ಕೊಟ್ಟ ಹೊರಗ ಬಂದು ನಿಂದ್ರುದಾಗ ಜಗತ್ತ ಕತ್ತಲಾಗಿ, ಚಿಕ್ಕಿ ಉದುರಿ ಬಿದ್ದು ಬೆಂಕಿಯಾಗಿ ಅಲ್ಲಲ್ಲಿ ಹೊತಗೊಂಡ ಉರಿಯೋ ಕಬ್ಬಿನ ಪಡಾ, ಸುಟ್ಟ ಬಣವಿ, ಸುಟ್ಟ ಬದಕ ಹೀಂಗ ತೆಲಿ ಒಂದ ಸವನ ಗಿರಿಮಿಟ್ಲಿಗತೆ ತಿರುಗಿ ತಿರುಗಿ ಸ್ವಲ್ಪ ಎಚ್ಚರಾದಾಂಗ ಆಗಿ ಸೀದಾ ನಿಂತರು. ಯಾರು ಯಾವ ಕಡೆ ಹೋಗಬೇಕಂತ ನಿಶೇದಾಗ ಇದ್ರೂ ಗೊತ್ತಾಗಿ ತಮ್ಮ ತಮ್ಮ ಗಾಡಿ ಚಾಲೂ ಮಾಡಿದರು. ನೋಡ ನೋಡತ ಗಪ್ಪ ಆದ್ರು. ಆವತ್ತಿಂದ ಮುಗೀತ ಅನ್ನೋದ್ರಾಗ ಸವಿರಾತ್ರಿ ಯಾವನೋ ಹಾಡಕೊಂತ ಹೊಂಟಿದ್ದ.....
ಸೊಕ್ಕು ಜವ್ವನೆಯರ ಕೂಡಿ ನೀನು
ಅಕ್ಕ ಅವ್ವನೆಂದು ಸವಿ ಮಾತನಾಡಿ
ಅಕ್ಕರದಲಿ ಒಡಗೂಡಿಯೇಕಲೋ ನರ
ಕಕ್ಕೆ ನೀ ಬಿದ್ದು ಕೆಡಬೇಡ.
ಸಟ್ಟಸರಿರಾತ್ರಿ ಈ ಹಾಡ ಯಾಂವಪಾ ಹಾಡಾಂವ ಅಂತ ಸೆಳಿಮಂಚಿ ಏರಿದ ಊರಗೌಡ ಬಿದ್ದನೋ ಎದ್ದನೋ ಅಂತಾ ಧೋತರಾ ಸರಿಮಾಡಿಕೊಂಡ ಕೇರ್ಯಾನ ಮಲಕೊಂಡ ಹಂದಿಗೊಳ ತುಳಕೊಂತ, ಕತ್ತಲದಾಗ ಓಟಾ ಕಿತ್ತು ತನ್ನ ವಾಡೇದ ಬಾಗಿಲಾ ಬಡದ. ಬಾಗಿಲಾ ತಗದಂಗ ಇತ್ತು. ಮಿಣುಕು ಬೆಳಕಿನ್ಯಾಗ ದಡ್ಡೀ ಬಾಗಿಲಾಗಿಂದ ಯಾರೋ ಜಿಗಿದ ಹೋದಾಂಗ ಆತು. ಕಮ್ಮನ್ನ ಹೊನ್ನ ಹೂವಿನ ಸೆಲ್ಲೆ ತೋಯ್ದು ತೊಪ್ಪಿ ಆಗಿತ್ತು. ಇನ್ನಾ ಹಸಿ ಆರೀರಲಿಲ್ಲ. ಗೌಡತಿಗೂ ಗೌಡಗೂ ಬಾಯಿ ಆಗಿ ಯಾರ ಯಾರ ಮ್ಯಾಲ ಏರಿ ಹ್ವಾದ್ರೂ ಕತ್ತಲದಾಗ ಗೊತ್ತ ಆಗಲಿಲ್ಲ. ಹ್ಯಾಂಗೂ ಇಬ್ರೂ ಉಂಡಿದ್ರು, ಸುಮ್ಮನ ಮಲಗಿ ಬಿಟ್ಟರು.
ಚುಮು ಚುಮು ನಸುಕಿನ್ಯಾಗ ಬುಡ ಬುಡಕಿಯವರು ಹಕ್ಕಿ ಪಣಾ ಕಟ್ಟಿದರು.ಚಿಂಚನ್ಹಕ್ಕಿ,ಗೂಗಿ,ಕಾಗಿ,ಹಲ್ಲಿ ಮತ್ತ ಹಾಲಕ್ಕಿ ಹೀಂಗ ಐದೂ ಪಕ್ಷಿ,ಪ್ರಾಣಿಗಳ ಕೂಗ ಕೇಳಕೊಂತ ಹೊಂಟಿದ್ರು.ಬುಡುಬುಡುಕಿ ಸಣ್ಣ ವಾದ್ಯ ನುಡಿಸಕೋತ ಕಂದೀಲ ಬೆಳಕಿನ್ಯಾಗ ಸಾರಿ ಸಾರಿ ಹೇಳಾಕ ಹತ್ತಿದ್ದರು.ಊರ ಗುರತಾ ಈಗ ಮಾಡಕೊಳ್ಳಿರಿ,ನಿಮ್ಮ ಊರ ನಿಮಗ ಸಿಗಾಕಿಲ್ಲ,ಉತ್ತರದ ನೆಲಾ ಉತ್ತಾಕ ಸಿಗಾಂಗಿಲ್ಲ,ಬಿತ್ತೆನೆಂದರ ಬದಕ ಇರಾಂಗಿಲ್ಲ,ಬಂದಿದ್ದ ಬಳಕೊಳ್ಳ್ರಿ,ತಿಂದಿದ್ದ ಖಾರಿಕೊಳ್ಳ್ರಿ..ಅಂತಾ ಶಕುನ ಸಾರಿ ಹ್ವಾದ ಮ್ಯಾಲ ಊರಾನ ಮಂದಿಗಿ ಮುಂಜಾನೆ ಸೂರ್ಯ ಪರಮಾತ್ಮ ಮೂಡೂದ ಕಠಿಣವೆನಿಸ್ತು.ಹರಕ ಕೌದಿ ಝಾಡಿಸಿ ಚಾಪಿ ಮೂಲ್ಯಾಗ ಒತ್ತಿ ಬಾಳೂಕುನ ಹೋಟೆಲಿಗಿ ಮಂದಿ ಬಂದ ಸೇರಿದ್ರು.ಎಲ್ಲಾರ ಬಾಯಾಗೂ ಹಾಲಕ್ಕಿ ಅವರ ಶಕುನದ ಮಾತ.ಒಬ್ಬಬ್ಬರೂ ಒಂದೊಂದ ನಮೂನಿ ತಮಗ ತಿಳಿದಾಂಗ ಮಾತಡಾಕ ಹತ್ತಿದರು.ಈಗ ಆರ ತಿಂಗಳ ಹಿಂದಿಂದ ಊರ ಮ್ಯಾಲ ಹೆಲಿಕ್ಯಾಪ್ಟರ್ ಸುತ್ತಿ ಊರ ಸರ್ವೇ ಮಾಡಿದ್ದು,ಬಿಳಿ ಅಂಗಿ ಮಂದಿ ಬಂದ ಭಾಷಣಾ ಮಾಡಿದ್ದು ,ಬಿಳಿ ಕರಿ ಕೆಂಪ ಜೀಪಗಳು ಊರ ಮಗ್ಗಲ ಹೊಲಾ ಸುತ್ತಿ ಹೋಗಿದ್ದು,ಒಂದೊಂದು ಕಥಿ ಮಾಡಿ ತಮಗ ತಿಳಿದಾಂಗ ಹೇಳಿದರು. ಮತ್ತ ಊರಾನ ಕಾರಭಾರ ಮಂದಿ ಈಗೀಗ ಚೈನಿ ಜೋರ ಮಾಡಿದ್ದು ,ಊರ ಹಿರ್ಯಾರ ಅನ್ನೋ ಮಂದಿ ತಮ್ಮ ಪಾಡಿಗಿ ತಾವು ಗಪ್ಪ ಚುಪ್ಪ ಕುಂತದ್ದು ಒಂದೊಂದು ಯಾರಿಗೂ ತಿಳಿಯದಾಂಗ ಆತು .ಆದ್ರೂ ಹಾಲಕ್ಕಿ ಅವರ ಮಾತಿನ್ಯಾಗ ಏನೋ ಐತಿ ಅನ್ನೋ ಕರಾಳ ದಿನಮಾನ ನೆನಿಸಿಕೊಂಡು ಬಾಳೂಕು ಕೊಟ್ಟ ಚಾ ಕುಡಿದು ಉದ್ರಿ ಬರಕೊಳ್ಳಾಕ ಹೇಳಿ ಮನಿ ಕಡೆ ಮುಖಾ ಮಾಡಿದರು.ಮತ್ತೊಂದ ರಾತ್ರಿ ಹೀಂಗ ಹೋತು.
ಒಂದಿನಾ ಬೆಳಗು ಮುಂಜಾನಿ ತಮ್ಮದೆನ್ನೊದೆಲ್ಲಾ ಭೂಮಿ ತುಂಡ ತುಂಡ ಇದ್ದುದ್ದು ಒಂದ ಆಗಿ, ಒಂದ ಹತ್ತಾಗಿ, ಹತ್ತ ನೂರಾಗಿ ಕಣ್ಣ ಕಾಣೋತನಾ ಒಬ್ಬರದ ಆಗಿ, ಸುತ್ತ ಕ್ವಾಟಿಗ್ವಾಡಿ ಕಟ್ಟಿದಾಂಗ ಬೇಲಿ ಬಿಗಿದ ಬಿಳಿ ಬೋರ್ಡ್‍ನ್ಯಾಗ ಕರಿ ಅಕ್ಷರ ಬರದ ನಾಕೂ ಮೂಲಿಗಿ ನಿಲ್ಲಿಸಿದ್ದರು. ಊರಾಗ ಯಾರಿಗೂ ಓದಾಕ ಬರ್ತಿದ್ದಿಲ್ಲ. ಓದೋ ಮಕ್ಕಳಿಗಿ ಇದನೇನ ಬರದಾರ ಅಂತಾ ತಿಳಿತಿದ್ದಿಲ್ಲ. ಓದೋ ಹುಡುಗರೆಲ್ಲಾ ದೊಡ್ಡವರಾಗಿ ಪ್ಯಾಟಿ ಸೇರಿದ್ದರು. ಹೀಂಗಾಗಿ ಓದಿ ಹೇಳವರು ಬೇಕಾಗಿದ್ರು, ಓದುವರು ಯಾರರೆ ಬಂದಾರೇನು ಅಂತಾ ಬೋರ್ಡ್ ಮುಂದ ರೈತಾಪಿ ಜನ ಕುಂತ್ರು. ಬರ್ರ್ ಅಂತಾ ಜೀಪು ಬಂತು. ಪ್ಯಾಂಟಿನ ಮಂದಿ ಬಂದಾರ ಇವರ ಓದಿ ಹೇಳಲಿ ಅಂತಾ "ಸಾಹೇಬ್ರ ಈ ಬೋರ್ಡನ್ಯಾಗ ಏನ ಬರದಾರಿ ನಮಗಟ ಓದಿ ಹೇಳ್ರಿ" ಅಂದಾಗ ಅವಾಗ ಒಬ್ಬಾಂವ "ಕೇಳ್ರೆಪಾ ನಿಮ್ಮ ಊರಿಗಿ ದೊಡ್ಡ ಫ್ಯಾಕ್ಟರಿ ಬರತೈತಿ. ಎಲ್ಲಿ ಏನ ತಂತಿ ಬಿಗ್ಯಾಕ ಹತ್ಯಾರಲ್ಲ, ಅಕಾ ಅಲ್ಲಿ ನೋಡ ಒಂದ ಕಿಲೋಮೀಟರ್ ಮ್ಯಾಗ, ಇಕಾ ಇಲ್ಲಿ ನೋಡ ಒಂದ ಕಿಲೋಮೀಟರ ಮ್ಯಾಗ ಅಲ್ಲಿಂದ ಇಲ್ಲಿತನಾ ಫ್ಯಾಕ್ಟರಿ ಆಗತೈತಿ. ಇಡೀ ಜಗತ್ತಿಗೆ ಬೇಕಾದ ಎಲ್ಲಾ ಮಾಲ ಇಲ್ಲೇ ತಯಾರ ಆಗತೈತಿ. ನೀವು ಇನ್ನ ದುಡೀಬೇಕಾಗಿಲ್ಲ. ದುಃಖ ಪಡಬೇಕಾಗಿಲ್ಲ. ನಿಮ್ಮ ಜಮೀನಿಗೆ ಕೈತುಂಬ ದುಡ್ಡ ಸಿಗತಾವ. ಬದುಕಿರೋತನಾ ತಿಂದು ಉಂಡ ಚೈನಿ ಮಾಡಿ ಹೋಗ್ರಿ ತಿಳೀತೇನು" ಅಂತಾ ಬರ್ರ್ ಅಂತಾ ಜೀಪು ಮುಂದ ಹ್ವಾದ ಮ್ಯಾಲ ಹಿಂದಿಂದ ಬುಲ್ಡೋಜರು, ಕ್ರೇನು, ಹತ್ತಾರು ದೊಡ್ಡ ದೊಡ್ಡ ಮಿಶೆನ್ನು ಸದ್ದು ಮಾಡಕೊಂತ ಬಂದವು. ಜನಾ ಸರಿದ ನಿಂತ್ರು. ಕೆಂಪ ಧೂಳಿನ್ಯಾಗ ಜನಾ ಮರಿ ಆದ್ರು. ಬುಲ್ಡೋಜರ ಸಪ್ಪಳದಾಗ ದನಾಕರಾ, ಪ್ರಾಣಿ, ಪಕ್ಷಿ ಊರಬಿಟ್ಟು ಅಡವಿ ಹುಡುಕಿ ಹ್ವಾಂಟವು. ಸಿದ್ದಪ್ಪಜ್ಜ ಪಂಚಾಯ್ತಿ ಕಟ್ಟಿಮ್ಯಾಲ ಹೇಳಿ ಹ್ವಾದ ಮಾತ ಹಾಂಗ ಉಳೀತು...............
======================================================================
ವಿಳಾಸ ;ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,
ನವನಗರ,ಬಾಗಲಕೋಟ-587103, ಮೊ.9845500890